ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಮುನ್ನ ತಳಮಳ

Last Updated 7 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ನಿಷ್ಠೆಯಿಂದ ಸಿನಿಮಾ ಮಾಡಿದ್ದೇನೆ. ಇದೀಗ ಗಾಂಧಿನಗರದ ಹೊಳೆಯಲ್ಲಿ ಈಜುತ್ತಿರುವೆ’.
ಹೀಗೆ, ಫಲಾಫಲವನ್ನು ಆಡಿಸುವಾತನ ಕೈಚಳಕಕ್ಕೆ ಬಿಟ್ಟು, ಸಿನಿಮಾ ತೆರೆಕಾಣುವ ಸಂದರ್ಭದಲ್ಲಿ ಮೂಡುವ ವಿರಾಗ ಭಾವದಲ್ಲಿ ಮುಳುಗಿದ್ದಾರೆ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ.

ಜನಪ್ರಿಯ ಸಿನಿಮಾಗಳನ್ನು ನೋಡುವ ಕನ್ನಡ ಪ್ರೇಕ್ಷಕರಿಗೆ ರಿಚರ್ಡ್ ಕ್ಯಾಸ್ಟಲಿನೊ ಅವರದು ಪರಿಚಿತ ಹೆಸರೇನಲ್ಲ. ಆದರೆ ಸಿನಿಮಾರಂಗಕ್ಕೆ ಅಪರಿಚಿತ ಹೆಸರು ಅವರದಲ್ಲ. ತುಳು, ಕೊಡವ, ಕೊಂಕಣಿ ಸಿನಿಮಾಗಳನ್ನು ರೂಪಿಸಿರುವ ಕ್ಯಾಸ್ಟಲಿನೊ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಮಾಡಿದ್ದಾರೆ. ಚಿತ್ರದ ಹೆಸರು ‘ಎಲ್ಲೆಲ್ಲು ನೀನೆ ನನ್ನಲ್ಲು ನೀನೆ’. ಚಿತ್ರದ ಬಗ್ಗೆ ಮಾತನಾಡುವ ಮೊದಲಿಗೆ ಅವರ ಪರಿಚಯ ಮಾಡಿಕೊಳ್ಳೋಣ.

ಕ್ಯಾಸ್ಟಲಿನೊ ಅವರ ಚೊಚ್ಚಿಲ ಚಿತ್ರ ‘ಬಂಗಾರ್ ಪಟ್ಲೇರ್’ಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿತ್ತು. ಮಂಗಳೂರಿನಲ್ಲಿ ನೂರಾ ಐದು ದಿನಗಳ ಪ್ರದರ್ಶನ ಕಂಡಿದ್ದ ಈ ತುಳುಚಿತ್ರಕ್ಕೆ ವಿವಿಧ ಏಳು ಪ್ರಶಸ್ತಿಗಳು ಸಂದಿದ್ದವು. ಈ ಸಿನಿಮಾ ನೋಡಿದ್ದ ವರನಟ ರಾಜಕುಮಾರ್-  ‘ತುಂಬಾ ಒಳ್ಳೇ ಸಿನಿಮಾ ಮಾಡಿದ್ದೀರಿ. ನಿಮ್ಮಂಥವರು ಕನ್ನಡ ಚಿತ್ರರಂಗಕ್ಕೆ ಬರಬೇಕು, ಬನ್ನಿ’ ಎಂದು ಬೆನ್ನುತಟ್ಟಿದ್ದರು. ಅದು ಕ್ಯಾಸ್ಟಲಿನೊ ಅವರಿಗೆ ಸಂದಿರುವ ದೊಡ್ಡ ಪ್ರಶಂಸೆ.

‘ಸೆಪ್ಟೆಂಬರ್ 8’ ಅವರ ನಿರ್ದೇಶನದ ಮತ್ತೊಂದು ಚಿತ್ರ. ‘ಕೇವಲ ಇಪ್ಪತ್ತನಾಲ್ಕು ತಾಸುಗಳಲ್ಲಿ ಸಿನಿಮಾ ಮಾಡಿ ತೋರಿಸಬಲ್ಲೆ’ ಎಂದು ಗೆಳೆಯರೊಂದಿಗೆ ಮಾತಿನ ಭರದಲ್ಲಿ ಹೇಳಿದುದಕ್ಕೆ ಕಟ್ಟುಬಿದ್ದು ಮಾಡಿದ ಚಿತ್ರವದು. ಒಂಬತ್ತು ಕ್ಯಾಮೆರಾ - ಒಂಬತ್ತು ಯೂನಿಟ್ ಬಳಸಿ, ಇಪ್ಪತ್ತಮೂರೂವರೆ ತಾಸುಗಳಲ್ಲಿ ಚಿತ್ರೀಕರಣ ಪೂರೈಸಲಾಗಿತ್ತು. ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ‘ಬದಿ’ ಹಾಗೂ ‘ಕಝರ್’ ಅವರ ಮತ್ತೆರಡು ಪ್ರಸಿದ್ಧ ಚಿತ್ರಗಳು.

ಕ್ಯಾಸ್ಟಲಿನೊ ಅವರ ಎಲ್ಲ ಚಿತ್ರಗಳಿಗೂ ಒಂದಲ್ಲಾ ಒಂದು ಪ್ರಶಸ್ತಿ ಸಂದಿದೆ. ಪ್ರಶಸ್ತಿಗಳ ಕಾರಣದಿಂದಾಗಿಯೇ ಅವರ ಸಿನಿಮಾಗಳು ‘ಕಲಾತ್ಮಕ’ ಎನ್ನಿಸಿಕೊಂಡಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಕೂಡ ಅವು ಯಶಸ್ಸು ಕಂಡಿವೆ. ‘ನನ್ನ ಕಲಾತ್ಮಕ ಚಿತ್ರಗಳೂ ಹಿಟ್ ಆಗಿವೆ. ನನಗೆ ಯಾವ ಹಣೆಪಟ್ಟಿಯೂ ಇಲ್ಲ’ ಎನ್ನುವ ಅವರಿಗೆ ಒಳ್ಳೆಯ ಚಿತ್ರ ಮಾಡುವುದರಲ್ಲಷ್ಟೇ ನಂಬಿಕೆ.

‘ಎಲ್ಲೆಲ್ಲು ನೀನೆ ನನ್ನಲ್ಲು ನೀನೆ’ ಚಿತ್ರದ ಮಾತಿಗೆ ಬರೋಣ. ಹಲವು ವರ್ಷಗಳ ಹಿಂದೆಯೇ ಕ್ಯಾಸ್ಟಲಿನೊ ಅವರು ಸಿದ್ಧಪಡಿಸಿದ್ದ ಈ ಚಿತ್ರದ ಚಿತ್ರಕಥೆಯನ್ನು ಗೀತರಚನೆಕಾರ ಆರ್.ಎನ್.ಜಯಗೋಪಾಲ್ ತಿದ್ದಿಕೊಟ್ಟಿದ್ದರಂತೆ. ಈಗ ಜಯಗೋಪಾಲ್ ಅವರಿಲ್ಲ. ಹಾಗಾಗಿ, ಒಂದು ರೀತಿಯ ಭಾವನಾತ್ಮಕ ಆಯಾಮವೂ ಈ ಚಿತ್ರಕ್ಕಿದೆ.

ಫ್ರಾಂಕ್ ಫರ್ನಾಂಡಿಸ್ ಎನ್ನುವ ಉದ್ಯಮಿ ಈ ಸಿನಿಮಾದ ನಿರ್ಮಾಪಕ. ಫರ್ನಾಂಡಿಸ್ ಅವರ ಪುತ್ರ ರೋಹಿತ್ ಚಿತ್ರದ ನಾಯಕ. ‘ಅಂಬಾರಿ’ ಚಿತ್ರದ ಸುಪ್ರೀತಾ, ‘ಪಿಯುಸಿ’ ಚಿತ್ರದ ಆಶಿಕಾ ಪೂಣಚ್ಚ ನಾಯಕಿಯರು. ಪ್ರತಿಭೆಯೊಂದನ್ನೇ ನೆಚ್ಚಿಕೊಂಡು ತಂಡ ಕಟ್ಟಿರುವ ನಿರ್ದೇಶಕರು- ಬೆಂಗಳೂರು, ಚಿಕ್ಕಮಗಳೂರು, ಬ್ಯಾಂಕಾಕ್, ಮಲೇಷಿಯಾ ಹಾಗೂ ಸಿಂಗಪೂರ್‌ನಲ್ಲಿ ಶೂಟಿಂಗ್ ನಡೆಸಿದ್ದಾರೆ.

‘ನನ್ನ ಚಿತ್ರದಲ್ಲಿ ಯಾವುದನ್ನೂ ಯಾರನ್ನೂ ವೈಭವೀಕರಿಸಿಲ್ಲ. ಕಥೆಗೆ ನನ್ನ ನಿಷ್ಠೆ. ಚಿತ್ರಕಥೆಯಲ್ಲಿ ತುಂಬಾ ತಿರುವುಗಳಿವೆ. ತ್ರಿಕೋನ ಪ್ರೇಮಕಥೆಯನ್ನು ಯುವಜನತೆಗೆ ಇಷ್ಟವಾಗುವಂತೆ ರೂಪಿಸಲು ಪ್ರಯತ್ನಿಸಿದ್ದೇನೆ. ಹೆತ್ತವರನ್ನು ಕಳೆದುಕೊಂಡ ಅಣ್ಣತಂಗಿಯ ಭಾವನಾತ್ಮಕ ಸಂಘರ್ಷವೂ ಚಿತ್ರದಲ್ಲಿದೆ. ಕನ್ನಡದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರಾದ ನೀನಾಸಂ ಅಶ್ವತ್ಥ್ ಅವರ ಜೀವಮಾನ ಶ್ರೇಷ್ಠ ಅಭಿನಯ ಚಿತ್ರದ ಹೈಲೈಟ್‌ಗಳಲ್ಲಿ ಒಂದು’ ಎಂದು ತಮ್ಮ ಸಿನಿಮಾವನ್ನು ನಿರ್ದೇಶಕರು ಬಣ್ಣಿಸುತ್ತಾರೆ.

ಒಳ್ಳೆಯ ಚಿತ್ರವನ್ನು ರೂಪಿಸಿರುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವ ಕ್ಯಾಸ್ಟಲಿನೊ, ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ವಿಷಯಕ್ಕೆ ಬಂದರೆ ದನಿ ತಗ್ಗಿಸುತ್ತಾರೆ.

‘ಸಿನಿಮಾವನ್ನು ತಾಂತ್ರಿಕವಾಗಿ ಉತ್ತಮವಾಗಿ ರೂಪಿಸಬಹುದು. ಆದರೆ, ಆ ತಾಂತ್ರಿಕ ಸೂಕ್ಷ್ಮಗಳನ್ನು ತೆರೆಯ ಮೇಲೆ ಕಾಣಿಸುವ ಅವಕಾಶಗಳು ನಮ್ಮಲ್ಲಿ ಎಷ್ಟಿವೆ? ಕೇರಳದಲ್ಲಿ ನೋಡಿ, ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಸಣ್ಣ ಚಿತ್ರಮಂದಿರ ಕೂಡ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುತ್ತದೆ. ಅಂಥ ಸವಲತ್ತುಗಳು ನಮ್ಮಲ್ಲೆಲ್ಲಿ?’ ಎನ್ನುವ ಅವರ ಮಾತಿನ ಹಿಂದೆ ನಮ್ಮ ‘ಪ್ರದರ್ಶನ ವ್ಯವಸ್ಥೆ’ ಉತ್ತಮಗೊಳ್ಳಬೇಕು ಎನ್ನುವ ಆಗ್ರಹ ಇಣುಕುತ್ತದೆ.

ಚಿತ್ರದ ಮುಹೂರ್ತದಿಂದ, ಬಿಡುಗಡೆಯವರೆಗಿನ ಎಲ್ಲ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿರುವ ಕ್ಯಾಸ್ಟಲಿನೊ ಅವರಿಗೆ ತಮ್ಮ ‘ಎಲ್ಲೆಲ್ಲು ನೀನೆ ನನ್ನಲ್ಲು ನೀನೆ’ ಸಿನಿಮಾವನ್ನು ಸಹೃದಯರು ಬೆಂಬಲಿಸುತ್ತಾರೆನ್ನುವ ಆಶಾಭಾವವಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ತೆರೆಕಾಣಿಸುವ ಪ್ರಯತ್ನ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT