ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಯ ಹೀರೊ ಕರ್ಸ್ಟನ್

Last Updated 10 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಗೆದ್ದ ಬಳಿಕ ಸಂತಸದ ಅಲೆಯಲ್ಲಿ ತೇಲುತ್ತಿದ್ದ ಭಾರತ ತಂಡದ ಆಟಗಾರರು ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನೂ ಎತ್ತಿಹಿಡಿದು ಸಂಭ್ರಮಿಸಿದ್ದರು. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರನಾಗಿದ್ದ ಕರ್ಸ್ಟನ್ ಅವರ ಜೀವನದ ಅಪೂರ್ಣ ಕ್ಷಣ ಅದಾಗಿತ್ತು.

ತೆರೆಮರೆಯಲ್ಲೇ ಇದ್ದುಕೊಂಡು ಭಾರತ ತಂಡದ ಯಶಸ್ಸಿನ ‘ಮಾಸ್ಟರ್‌ಪ್ಲಾನ್’ ರೂಪಿಸಿದ್ದ ಕರ್ಸ್ಟನ್ ಏಪ್ರಿಲ್ 2 ರಂದು ವಾಂಖೇಡೆ ಕ್ರೀಡಾಂಗಣದ ಹೊನಲುಬೆಳಕಿನಡಿ ಮಿಂಚಿದ್ದರು. ಮೊದಲು ಸುರೇಶ್ ರೈನಾ ಹಾಗೂ ಆ ಬಳಿಕ ವಿರಾಟ್ ಕೊಹ್ಲಿ ಅವರು ಕರ್ಸ್ಟನ್ ಅವರನ್ನು ಹೆಗಲ ಮೇಲೆ ಕುಳ್ಳಿರಿಸಿದ್ದರು. 33 ಸಾವಿರಕ್ಕೂ ಅಧಿಕ ಮಂದಿಯ ಅಬ್ಬರದ ನಡುವೆ ಈ ಸಂಭ್ರಮಾಚರಣೆ ನಡೆದಿತ್ತು.

ಎಲ್ಲ ವಿದೇಶಿ ಕೋಚ್‌ಗಳಿಗೆ ಇಂತಹ ಭಾಗ್ಯ ದೊರೆಯುವುದಿಲ್ಲ. ಆದರೆ ಕರ್ಸ್ಟನ್‌ಗೆ ಲಭಿಸಿದೆ. ಹಿಂದಿನ ಕೋಚ್ ಗ್ರೇಗ್ ಚಾಪೆಲ್ ಅವರು ಎಲ್ಲರ ಟೀಕೆಯನ್ನು ಕೇಳುತ್ತಾ ಹುದ್ದೆಯಿಂದ ಕೆಳಗಿಳಿದಿದ್ದರು. ಆದರೆ ಗ್ಯಾರಿ ಕೇಳಿದ್ದು ಪ್ರಶಂಸೆಯ ಮಾತುಗಳನ್ನು ಮಾತ್ರ.
ಮೂರು ವರ್ಷಗಳ ಹಿಂದೆ ಭಾರತ ತಂಡದ ಕೋಚ್ ಹುದ್ದೆ ಅಲಂಕರಿಸಿದ ದಿನದಿಂದ ವಿಶ್ವಕಪ್ ಫೈನಲ್ ಪಂದ್ಯದವರೆಗೂ ಕರ್ಸ್ಟನ್ ಪರದೆಯ ಹಿಂದೆ ಇದ್ದರು. ತೆರೆಮರೆಯ ‘ಹೀರೊ’ ಇದೀಗ ಟೀಮ್ ಇಂಡಿಯಾಕ್ಕೆ ಗುಡ್ ಬೈ ಹೇಳಿ ತವರಿಗೆ ಮರಳಿದ್ದಾರೆ. 

2008ರ ಮಾರ್ಚ್‌ನಲ್ಲಿ ಕರ್ಸ್ಟನ್ ಕೋಚ್ ಹುದ್ದೆಯನ್ನು ಅಲಂಕರಿಸಿದ ಸಂದರ್ಭ ಭಾರತ ತಂಡ ಕಠಿಣ ಪರಿಸ್ಥಿತಿಯಲ್ಲಿತ್ತು. 2007ರ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ಎದುರಾದ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿ ಆಟಗಾರರು ಇದ್ದರು. ಆತ್ಮವಿಶ್ವಾಸ ಕಳೆದುಕೊಂಡಂತಹ ಒಂದು ತಂಡಕ್ಕೆ ಗೆಲುವಿನ ಚಟ ಹತ್ತಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಕರ್ಸ್ಟನ್ ಹೆಗಲ ಮೇಲೆ ಬಿತ್ತು. ಈ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ರೀತಿ ಮಾತ್ರ ಅದ್ಭುತ.

ಕರ್ಸ್ಟನ್ ಆರಂಭದಿಂದಲೇ ಪ್ರತಿಯೊಂದು ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದಲೇ ಇಟ್ಟರು. ಅವರು ಮೊದಲು ಮಾಡಿದ ಕೆಲಸ ಸೂಕ್ತ ಸಹಾಯಕ ಸಿಬ್ಬಂದಿಯ ನೇಮಕ. ತಂಡದ ಹೆಚ್ಚಿನ ಸಹಾಯಕ ಸಿಬ್ಬಂದಿಯನ್ನು ಕರ್ಸ್ಟನ್ ಅವರೇ ನೇಮಕ ಮಾಡಿಕೊಂಡರು. ಈ ತಂಡ ನಡೆಸಿದ ಅವಿರತ ಪ್ರಯತ್ನಕ್ಕೆ ತಕ್ಕ ಫಲ ಲಭಿಸಿದೆ. ಭಾರತಕ್ಕೆ 28 ವರ್ಷಗಳ ಬಿಡುವಿನ ಬಳಿಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದೆ.

ಕರ್ಸ್ಟನ್ ಮೊದಲು ‘ಮೆಂಟಲ್ ಕಂಡೀಷನಿಂಗ್’ ಕೋಚ್ ಪ್ಯಾಡಿ ಅಪ್ಟನ್ ಅವರನ್ನು ನೇಮಿಸಿದರು. ಅಪ್ಟನ್ ಕೇಪ್‌ಟೌನ್‌ನಲ್ಲಿ ಕರ್ಸ್ಟನ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ಆಗಿದ್ದರು. ಬಳಿಕ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಎರಿಕ್ ಸಿಮೊನ್ಸ್ ಅವರ ನೇಮಕ ನಡೆಯಿತು. ಫಿಸಿಯೊ ಆಗಿ ನಿತಿನ್ ಪಟೇಲ್ ನೇಮಕಗೊಂಡರು. ‘ಕರ್ಸ್ಟನ್ ಅಂಡ್ ಕಂಪೆನಿ’ ಭಾರತದ ಆಟಗಾರರ ಮೇಲಿದ್ದ ಒತ್ತಡ ನಿಭಾಯಿಸುವಲ್ಲಿ ಯಶಸ್ವಿಯಾಯಿತು. ಇದರ ಪರಿಣಾಮ ತಂಡದಿಂದ ಒಂದೊಂದೇ ಸಾಧನೆ ಮೂಡಿಬಂತು.

ತವರು ದೇಶ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಕರ್ಸ್ಟನ್ ಅವರ ಮೊದಲ ಸವಾಲಾಗಿತ್ತು. 2008ರ ಮಾರ್ಚ್- ಏಪ್ರಿಲ್‌ನಲ್ಲಿ ನಡೆದ ಈ ಸರಣಿ 1-1 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಕರ್ಸ್ಟನ್ ಆಗಲೇ ತಂಡದ ಮೇಲೆ ತಮ್ಮ ಪ್ರಭಾವ ಬೀರತೊಡಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯನ್ನು ಭಾರತ 2-0 ರಲ್ಲಿ ಗೆದ್ದುಕೊಂಡಿತು. ಅದೇ ರೀತಿ ನ್ಯೂಜಿಲೆಂಡ್ ನೆಲದಲ್ಲಿ 40 ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಕ್ರಿಕೆಟ್ ಸರಣಿ ಗೆಲ್ಲಲು ಸಾಧ್ಯವಾಯಿತು.

2009ರ ಮಾರ್ಚ್‌ನಲ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೇರಿತು. ಕರ್ಸ್ಟನ್ ಅವರ ಮಾರ್ಗದರ್ಶನದಲ್ಲಿ ಭಾರತ ಸಾಧಿಸಿದ ಮಹತ್ವದ ಯಶಸ್ಸು ಅದಾಗಿತ್ತು. 2010 ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ 1-1 ರಲ್ಲಿ ಡ್ರಾ ಸಾಧಿಸಿತು. ಏಕದಿನ ಸರಣಿಯಲ್ಲಿ 2-3 ರಲ್ಲಿ ಸೋಲು ಅನುಭವಿಸಿದರೂ ಮಹೇಂದ್ರ ಸಿಂಗ್ ದೋನಿ ಬಳಗ ತಕ್ಕಮಟ್ಟಿನ ಪೈಪೋಟಿ ನೀಡಿತ್ತು. ಇದೀಗ ಅವರ ಮಾರ್ಗದರ್ಶನದಲ್ಲೇ ತಂಡಕ್ಕೆ ವಿಶ್ವಕಪ್ ಟ್ರೋಫಿ ಲಭಿಸಿದೆ.

ಕರ್ಸ್ಟನ್ ಅಧಿಕಾರದ ಅವಧಿಯಲ್ಲಿ ಭಾರತದ ಎಲ್ಲ ಪ್ರಮುಖ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಂಡರು. ಗಾಯದ ಸಮಸ್ಯೆಯಿಂದ ಬಳಲಿದ್ದ ಸಚಿನ್ ತೆಂಡೂಲ್ಕರ್ ಹಳೆಯ ಟಚ್ ಕಂಡುಕೊಂಡರು. ಜಹೀರ್ ಖಾನ್ ತಮ್ಮ ಎಂದಿನ ಫಾರ್ಮ್‌ಗೆ ಮರಳಿದರು. ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ವೃತ್ತಿಜೀವನದ ಅತ್ಯುತ್ತಮ ಆಟ ಪ್ರದರ್ಶಿಸಿದರು. ಯುವ ಆಟಗಾರರಾದ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ಏಕದಿನ ತಂಡದ ಅವಿಭಾಜ್ಯ ಅಂಗವಾಗಿ ಬದಲಾದರು.

ಟೀಮ್ ಇಂಡಿಯಾಕ್ಕೆ ಗುಡ್‌ಬೈ ಹೇಳಲು ಮುಂಬೈನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ಸ್ಟನ್ ಪದಗಳಿಗಾಗಿ ತಡಕಾಡಿದರು. ‘ಇದು ನನ್ನ ಜೀವನದ ಅತ್ಯಂತ ಕಠಿಣ ವಿದಾಯ’ ಎಂದಿದ್ದರು. ಬಿಸಿಸಿಐ ಜೊತೆಗಿನ ಒಪ್ಪಂದ ಮುಂದುವರಿಸುವುದಿಲ್ಲ ಎಂದು ವಿಶ್ವಕಪ್‌ಗೆ ಮೊದಲೇ ಅವರು ನಿರ್ಧರಿಸಿದ್ದರು. ಅವರಿಗೆ ಕೋಚ್ ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಯಬಹುದಿತ್ತು. ಆದರೆ ಕರ್ಸ್ಟನ್ ಹಿಂದೆ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿದ್ದರು.

ತಮ್ಮ ವಿದಾಯ ಭಾಷಣದಲ್ಲೂ ಅವರು ತಂಡದ ಧನಾತ್ಮಕ ಅಂಶಗಳನ್ನೇ ಮುಂದಿಟ್ಟರು. ನಾಯಕ ದೋನಿ ಹಾಗೂ ಸಚಿನ್ ತೆಂಡೂಲ್ಕರ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ‘ಮೂರು ವರ್ಷಗಳ ಅವಧಿಯಲ್ಲಿ ದೋನಿ ಒಮ್ಮೆಯೂ ತಾಳ್ಮೆ ಕಳೆದುಕೊಂಡದ್ದನ್ನು ನೋಡಿಲ್ಲ’ ಎಂದಿದ್ದರು. ಆಟಗಾರರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸ್ಪಷ್ಟ ಅರಿವು ಕರ್ಸ್ಟನ್‌ಗೆ ಇತ್ತು. ಇದೇ ಅವರ ಯಶಸ್ಸಿನ ಗುಟ್ಟು.

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಸಂದರ್ಭ ಮನಸ್ಸಿನಲ್ಲಿ ‘ಮಿಶ್ರ ಭಾವನೆ’ ಉಂಟಾಗುತ್ತಿತ್ತು ಎಂಬುದನ್ನು ಕರ್ಸ್ಟನ್ ಒಪ್ಪಿಕೊಂಡಿದ್ದಾರೆ. ಕರ್ಸ್ಟನ್ ತಮ್ಮ ಉತ್ತರಾಧಿಕಾರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ‘ನೂತನ ಕೋಚ್ ಹೊಸ ಐಡಿಯಾಗಳೊಂದಿಗೆ ಆಗಮಿಸಬೇಕು. ಭಾರತದ ಆಟಗಾರರಿಂದ ತಕ್ಕ ಪ್ರತಿಕ್ರಿಯೆ ಲಭಿಸುವ ರೀತಿಯಲ್ಲಿ ಈ ಐಡಿಯಾಗಳನ್ನು ಕಾರ್ಯರೂಪಕ್ಕಿಳಿಸಬೇಕು. ಆದರೆ ಹೊಸ ಕೋಚ್ ನನ್ನದೇ ಹಾದಿಯನ್ನು ಹಿಡಿಯಬಾರದು’ ಎಂದಿದ್ದಾರೆ.

ವಿಶ್ವಚಾಂಪಿಯನ್ ತಂಡದ ಹೊಸ ಕೋಚ್ ಯಾರಾಗುವರು ಎಂಬ ಪ್ರಶ್ನೆ ಎದ್ದಿದೆ. ಕರ್ಸ್ಟನ್ ಅವರಿಗೆ ಸಮರ್ಥ ಉತ್ತರಾಧಿಕಾರಿಯನ್ನು ನೇಮಿಸುವ ಜವ್ದಾಬಾರಿ ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದಿದೆ. ಜೂನ್ ತಿಂಗಳಲ್ಲಿ ಹೊಸ ಕೋಚ್ ಒಬ್ಬರ ನೇಮಕ ನಡೆಯಲಿದೆ.

ಕರ್ಸ್ಟನ್ ಮೂರು ವರ್ಷಗಳ ಅವಧಿಯಲ್ಲಿ ಭಾರತದ ಬ್ಯಾಟಿಂಗ್‌ನ ಬಲ ಹೆಚ್ಚಿಸಿದರು. ಭಾರತದ ಟೆಸ್ಟ್ ಹಾಗೂ ಏಕದಿನ  ತಂಡ ವಿಶ್ವದಲ್ಲೇ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಆದರೆ ಬೌಲಿಂಗ್‌ನಲ್ಲೂ ಅದೇ ರೀತಿಯ ಸಾಧನೆ ತೋರಲು ಆಗಿಲ್ಲ. ಈ ಕಾರಣ ಭಾರತದ ಬೌಲಿಂಗ್ ವಿಭಾಗ ಬಲಪಡಿಸುವ ಸವಾಲು ಹೊಸ ಕೋಚ್ ಮುಂದಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT