ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಹಿಂದಿನ ಹೀರೋ ಕಥೆ

Last Updated 2 ಜನವರಿ 2012, 5:30 IST
ಅಕ್ಷರ ಗಾತ್ರ

ತೆರೆಯ ಮೇಲೆ ಒಂದು ಸಿನಿಮಾ ವೀಕ್ಷಿಸುವಾಗ ಹೀರೋಗಳ ಸ್ಟಂಟ್‌ಗಳನ್ನು ಕಂಡು ಖುಷಿ ಪಡುತ್ತೇವೆ. ಆ ಚಿತ್ರದ ನಾಯಕ ಹೀರೋ ಆಗುತ್ತಾನೆ. ಆದರೆ, ನಿಜವಾದ ಸ್ಟಂಟ್‌ಗಳನ್ನು ತೆರೆ ಮೇಲೆ ಕಾಣುವ ನಾಯಕ ಅಥವಾ ನಾಯಕಿಗೆ ಒಬ್ಬ ಫೈಟ್ ಮಾಸ್ಟರ್ ಇರುತ್ತಾರೆ.
 
ಆ ಯಶಸ್ಸಿನ ಹಿಂದೆ ಅವರ ಪರಿಶ್ರಮವಿರುತ್ತದೆ. ಅನೇಕ ನಟರಿಗೆ ಹೊಡೆದಾಟದ ವರಸೆಗಳನ್ನು ಹೇಳಿಕೊಟ್ಟಿರುವ ಇಬ್ಬರು `ಸ್ಟಂಟ್ ಗುರು~ಗಳಿಗೆ ಇಂದು ಅವಕಾಶದ ಕೊರತೆ ಇದೆ.

ಏಳೆಂಟು ವರ್ಷಗಳಿಂದ ಎನ್.ಆರ್. ಕಾಲೋನಿಯಲ್ಲಿ `ಲಕ್ಕಿ ಸ್ಟಾರ್ ಜಿಮ್ನ್ಯಾಸ್ಟಿಕ್~ ಸ್ಟಂಟ್ಸ್ ತರಬೇತಿ ಶಾಲೆ ನಡೆಸುತ್ತಿರುವ ರಘುವೀರ್ ಮತ್ತು ಅವರ ಗೆಳೆಯ ರವಿ ಜಮಖಂಡಿ ಇದುವರೆಗೆ ಹಲವಾರು ಹೀರೋಗಳಿಗೆ ಸಾಹಸದ ವರಸೆಗಳನ್ನು ಹೇಳಿಕೊಟ್ಟಿದ್ದಾರೆ.

ಯೋಗ, ಕರಾಟೆ, ಜಿಮ್ನ್ಯಾಸ್ಟಿಕ್, ಏರೋಬಿಕ್ಸ್, ಸ್ಟಿಕ್‌ಫೈಟ್, ಲಾಂಚರ್ ಫೈಟ್, ಕಲರಿಪಯಟ್ಟು ಸೇರಿದಂತೆ ವಿಭಿನ್ನ ಸ್ಟಂಟ್ಸ್ ತರಬೇತಿ ಕಲಿಸಿಕೊಟ್ಟಿದ್ದಾರೆ.

ಚಿಕ್ಕಂದಿನಿಂದಲೇ ರಘುವೀರ್ ಸಿನಿಮಾ ವ್ಯಾಮೋಹ ಬೆಳೆಸಿಕೊಂಡವರು. ಅವರ ತಂದೆ ಮಾಸ್ಟರ್ ಸಂತೋಷ್ ಅವರ ಬಳಿ ಯೋಗ ಮತ್ತು ಕರಾಟೆ ತರಬೇತಿಗೆ ಸೇರಿಸಿದರಂತೆ. ಕೆಲವು ವರ್ಷ ತರಬೇತಿ ಪಡೆದ ನಂತರ ಚಿತ್ರರಂಗದಲ್ಲೇ ಏನಾದರೂ ಸಾಧಿಸಬೇಕೆಂಬ ಛಲ ಬೆಳೆಯಿತು; ಅದರ ಫಲವಾಗಿ ಈ ಶಾಲೆ ಆರಂಭಿಸಲಾಗಿದೆ.

ಆದಿತ್ಯಾ, ನೆನಪಿರಲಿ ಪ್ರೇಮ್, ಯೋಗೀಶ್, ರಾಜ್ (ಸಂಚಾರಿ), ಅಲೋಕ್ (ಬಾಜಿ), ರವಿಶಂಕರ್, ಧ್ರುವ ಸರ್ಜಾ ಸೇರಿದಂತೆ ಅನೇಕ ಯುವ ನಟರು ಇವರ ಬಳಿ ತರಬೇತಿ ಪಡೆದಿದ್ದಾರೆ.

ತೆರೆಯ ಹಿಂದೆ ಇಷ್ಟೆಲ್ಲಾ ಪರಿಶ್ರಮ ವಹಿಸಿ ಯುವ ನಟರಿಗೆ ಸಾಹಸ ಹೇಳಿಕೊಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಘುವೀರ್ ಅವರಿಗೆ ತರಬೇತಿಗೆ ಬರುವ ನಟರು ಆರು ತಿಂಗಳಿಗೆ ಐದರಿಂದ ಆರು ಸಾವಿರ ಕೊಡುತ್ತಾರೆ. ತರಬೇತಿ ನಡೆಸುವ ಕೊಠಡಿ ಬಾಡಿಗೆಯೇ ತಿಂಗಳಿಗೆ ಹತ್ತು ಸಾವಿರ ಇದೆ ಎನ್ನುತ್ತಾರೆ ಸ್ಟಂಟ್ಸ್ ಮಾಸ್ಟರ್ ರಘುವೀರ್.

ಇನ್ನು ಅಖಿಲ ಕರ್ನಾಟಕ ಚಲನಚಿತ್ರ ಸಾಹಸ ನಿರ್ದೇಶಕರ ಮತ್ತು ಸಾಹಸ ಕಲಾವಿದರ ಸಂಘದ ಸದಸ್ಯತ್ವ ಪಡೆದಿರುವ ರಘುವೀರ್ ನಾಲ್ಕೈದು ವರ್ಷಗಳಿಂದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಫೈಟ್ ಮಾಸ್ಟರ್ ಆಗಿ ಬಡ್ತಿ ಪಡೆಯದ ಕಾರಣ ಸಿನಿಮಾಗಳಲ್ಲಿ ಅವರಿಗೆ ಅವಕಾಶಗಳು ಕಡಿಮೆಯಾಗಿದೆಯಂತೆ.

ಸಾಹಸದ ವರಸೆಗಳನ್ನು ಕಲಿಯಬಯಸುವವರು ರಘುವೀರ್ ಅವರನ್ನು 99725 78934 ನಂಬರಿನ ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT