ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಮುಂದುವರಿದ ರೈಲು ತಡೆ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಎರಡು ದಿನಗಳ `ರೈಲು ರೋಕೋ~ ಭಾನುವಾರ ತುದಿಮುಟ್ಟಿದ್ದು ತೆಲಂಗಾಣದ ಪ್ರತಿಭಟನಾಕಾರರು ಪ್ರಾಂತ್ಯದ ಉದ್ದಗಲಕ್ಕೂ ರೈಲು ಹಳಿಗಳ ಮೇಲೆ ಮಲಗುವುದು, ಅಡುಗೆ ಮಾಡುವುದು ನಡೆಸಿದ್ದು ತೆಲಂಗಾಣಾದ ಹತ್ತು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆ ನೌಕರರು, ಶಿಕ್ಷಕರು ಮತ್ತು ರಾಜ್ಯ ಸರ್ಕಾರದ ನೌಕರರು ಪ್ರತ್ಯೇಕ ರಾಜ್ಯ ನಿರ್ಮಾಣವಾಗುವವರೆಗೆ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಶನಿವಾರ ಆರಂಭವಾದ ರೈಲು ರೋಕೋ ಪ್ರತ್ಯೇಕ ತೆಲಂಗಾಣಕ್ಕೆ ಆಗ್ರಹಿಸಿ ನಡೆಸಲಾಗುತ್ತಿರುವ  13 ದಿನದ ಸಕಲ ಜನುಲ ಸಮ್ಮೆಯ ಭಾಗವಾಗಿದೆ.

ರೈಲು ತಡೆಯಿಂದಾಗಿ ಭಾನುವಾರ ಮಧ್ಯಾಹ್ನದವರೆಗೆ  ರೈಲು ಸೇವೆಗಳನ್ನು ರದ್ದುಪಡಿಸಲಾಗಿತ್ತು. ಹೊರ ರಾಜ್ಯಗಳಿಂದ ಬರುವ ಎಲ್ಲಾ ರೈಲುಗಳು ಸಂಚಾರ ಆರಂಭಿಸಿದೆ. ಭಾನುವಾರ ಸಂಜೆ 6 ಗಂಟೆ ನಂತರ ತೆಲಂಗಾಣ ರೈಲು ನಿಲ್ದಾಣಗಳಲ್ಲಿ  ಹೊರಡಬೇಕಿರುವ ಮತ್ತು ಸಮಯ ಬದಲಾಯಿಸಿರುವ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ದಕ್ಷಿಣ ಮಧ್ಯ ರೈಲ್ವೆ ಭಾನುವಾರದಿಂದ ಕೆಳಕಂಡ ರೈಲು ಸಂಚಾರಗಳನ್ನು ಪುನರಾರಂಭಿಸಿದೆ.
ಸಿಕಂದರಾಬಾದ್- ಮಚಿಲಿಪಟ್ಟಣಂ, ಹೈದರಾಬಾದ್- ಮುಂಬೈ ಎಕ್ಸ್‌ಪ್ರೆಸ್, ಹೈದರಾಬಾದ್- ನಿಜಾಮುದ್ದೀನ್ ದಕ್ಷಿಣ್ ಎಕ್ಸ್‌ಪ್ರೆಸ್, ಹೈದರಾಬಾದ್- ಕೊಲ್ಹಾಪುರ್ ಹಾಲಿಡೇ ಸ್ಪೆಷಲ್, ಆದಿಲಾಬಾದ್- ತಿರುಪತಿ ಕೃಷ್ಣಾ ಎಕ್ಸ್‌ಪ್ರೆಸ್, ಸಾಯ್ ನಗರ್ ಶಿರಡಿ- ಕಾಕಿನಾಡ ಟೌನ್ ಎಕ್ಸ್‌ಪ್ರೆಸ್,ನಾಂಡೇಡ್- ಹೈದರಾಬಾದ್ ಪ್ಯಾಸೆಂಜರ್ ಮತ್ತು ಮನ್‌ಮಾಡ್- ಭುವನೇಶ್ವರ್.    

ಟಿಆರ್‌ಎಸ್, ಬಿಜೆಪಿ ಮತ್ತು ತೆಲಂಗಾಣ ಪರ ತಂಡಗಳು ತಮ್ಮ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆಸಿದ್ದು ತೆಲಂಗಾಣ ಜಿಲ್ಲೆಗಳಲ್ಲಿ ಮತ್ತು ಹೈದರಾಬಾದ್ ನಗರದಲ್ಲಿ ರೈಲು ಹಳಿಗಳ ಮೇಲೆ ಹಾಗೂ ರೈಲು ನಿಲ್ದಾಣಗಳಲ್ಲಿ  ಧರಣಿ ನಡೆಸಿದ್ದಾರೆ.

ತೆಲಂಗಾಣ ಬೆಂಬಲಿಗರು `ವಂಟ ವರ್ಪು~ (ಸಾಮೂಹಿಕ ಅಡುಗೆ) ನಡೆಸಿ ರೈಲು ಹಳಿಗಳ ಮೇಲೆ ಮತ್ತು ಪ್ಲ್ಯಾಟ್‌ಫಾರಂ ಮೇಲೆ ಊಟ ಮಾಡಿದರು.

`ರೈಲು ರೋಕೋ~ ಕಾರ್ಯಕ್ರಮ ಯಶಸ್ವಿಯಾಗಿದೆ. ಇದನ್ನು ಮುಂದುವರೆಸುವಂತೆ ಒತ್ತಾಯವಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ  ಭಾನುವಾರ ಸಂಜೆ 6 ಗಂಟೆಗೆ ಇದನ್ನು ಮುಕ್ತಾಯಗೊಳಿಸುವುದಾಗಿ  ತೆಲಂಗಾಣ ರಾಜಕೀಯ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೋಡಂಡರಾಮ್ ಪ್ರಕಟಿಸಿದರು.

`ಇನ್ನು ಒಂದೆರಡು ದಿನಗಳಲ್ಲಿ ಮುಂದಿನ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗುವುದು~ ಎಂದು ಅವರು ತಿಳಿಸಿದರು. `ಸಕಲ ಜನುಲ ಸಮ್ಮೆ~ ಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರ ಮಾಡಿರುವ ಮನವಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತ್ಯೇಕ ರಾಜ್ಯದ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ಬಂದಲ್ಲಿ ಮುಷ್ಕರ ತನಗೆತಾನೇ ನಿಲ್ಲಲಿದೆ ಎಂದು ಉತ್ತರಿಸಿದರು.

ಪ್ರತ್ಯೇಕ ತೆಲಂಗಾಣಕ್ಕೆ  ಆಗ್ರಹಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಯೋಚನೆ ತಮ್ಮ ತಂದೆಯವರಿಗಿದೆ ಎಂದು  ಟಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರ ಮಗ ಕೆ.ಟಿ. ರಾಮ ರಾವ್ ತಿಳಿಸಿದ್ದಾರೆ.

` ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ. ದಸರಾ ಮತ್ತು ದೀಪಾವಳಿ ನಡುವೆ ಉಪವಾಸ ಸತ್ಯಾಗ್ರಹ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಭಾರಿ ಪ್ರಮಾಣದಲ್ಲಿ `ಚಲೋ ಹೈದರಾಬಾದ್~ ರ‌್ಯಾಲಿ ನಡೆಸುವ ಬಗ್ಗೆಯೂ ಯೋಜನೆ ಇದೆ~ ಎಂದು ಅವರು ತಿಳಿಸಿದ್ದಾರೆ. 

 ತೆಲಂಗಾಣ ಪರ ಸಂಘಟನೆಗಳು ನಡೆಸುತ್ತಿರುವ ಮುಷ್ಕರ ಭಾನುವಾರ 13ನೇ ದಿನಕ್ಕೆ ಕಾಲಿಟ್ಟಿದ್ದು ವಾರಂಗಲ್, ಕರೀಂನಗರ ಮತ್ತು ಇತರ ತೆಲಂಗಾಣ ಜಿಲ್ಲೆಗಳಲ್ಲಿ ಪ್ರತಿಭಟನೆಗಳು, ರ‌್ಯಾಲಿಗಳು, ಮಾನವ ಸರಪಳಿಗಳನ್ನು ನಿರ್ಮಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಮುಂಜಾಗ್ರತಾ ಕ್ರಮವಾಗಿ ತೆಲಂಗಾಣ ಪ್ರಾಂತ್ಯದಲ್ಲಿ ತನ್ನ ಸೇವೆಯನ್ನು ರದ್ದು ಗೊಳಿಸಿರುವುದರಿಂದ ಪ್ರಯಾಣಿಕರಿಗೆ ತಮ್ಮ ತಾಣ ತಲುಪಲು ತೊಂದರೆ ಅನುಭವಿಸಬೇಕಾಯಿತು.
  
 
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT