ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ : ಸರ್ವಪಕ್ಷ ಸಭೆಗೆ ಚಿಂತನೆ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ: `ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆ' ಕುರಿತು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಂಗ್ರೆಸ್,  ಸರ್ವಪಕ್ಷ ಸಭೆ ಕರೆದು ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲು ಚಿಂತನೆ ನಡೆಸಿದೆ.

ಸೋನಿಯಾಗಾಂಧಿ ನೇತೃತ್ವದಲ್ಲಿ ಶುಕ್ರವಾರ ಸೇರಿದ್ದ `ಪಕ್ಷದ ಪ್ರಮುಖರ ಸಭೆ'ಯಲ್ಲಿ ತೆಲಂಗಾಣ ವಿಷಯ ಪ್ರಸ್ತಾಪವಾಗಲಿಲ್ಲ. ಆದರೆ, ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಕಾಂಗ್ರೆಸ್ ಪಕ್ಷವೊಂದೇ ದೋಷಾರೋಪಕ್ಕೆ ಒಳಗಾಗುವುದರಿಂದ ಪಾರಾಗಲು ಸರ್ವಪಕ್ಷ ಸಭೆ ಕರೆದು ಚರ್ಚಿಸಿದ ಬಳಿಕ ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ತೆಲಂಗಾಣ ಬೇಡಿಕೆ ಕುರಿತು ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯುವ ಸಾಧ್ಯತೆಯಿದೆ. ಅಲ್ಲದೆ, ರಾಜ್ಯಗಳ ಪುನರ್‌ವಿಂಗಡಣೆ ಕುರಿತು ಅಧ್ಯಯನ ನಡೆಸಲು ಎರಡನೇ ಆಯೋಗ ರಚಿಸುವ ಮಾತುಗಳು ಕೇಳಿಬರುತ್ತಿವೆ.

ಪ್ರಧಾನಿ ಮನಮೋಹನ್‌ಸಿಂಗ್ ಮತ್ತಿತರ ಪ್ರಮುಖ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ತೆಲಂಗಾಣ ವಿಷಯ ಪ್ರಸ್ತಾಪವಾಗಲಿಲ್ಲ.
ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಗುರುವಾರ ಸಾಧ್ಯವಾದಷ್ಟು ಬೇಗನೆ ತೆಲಂಗಾಣ ವಿಷಯದಲ್ಲಿ ಏನಾದರೊಂದು ತೀರ್ಮಾನ ಮಾಡಲಾಗುವುದು  ಎಂದು ಹೇಳಿದರು. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ತೀರ್ಮಾನ ಆಗುವುದೇ ಎಂಬ ಪ್ರಶ್ನೆಗೆ, ಗೃಹ ಸಚಿವರು ಉತ್ತರಿಸಿದರು.

`ಪ್ರತ್ಯೇಕ ತೆಲಂಗಾಣ ರಾಜ್ಯ' ರಚನೆ ಕುರಿತಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಈಗಾಗಲೇ ಸೋನಿಯಾ ಗಾಂಧಿಗೆ ವರದಿ ಸಲ್ಲಿಸಿದ್ದಾರೆ. ಬೇಡಿಕೆಯ ಸಾಧ್ಯಾಸಾಧ್ಯತೆ ಕುರಿತು ಯುಪಿಎ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಇದೇ ತಿಂಗಳು 12ರಂದು ಸೇರಿದ್ದ ಪ್ರಮುಖರ ಸಮಿತಿ ಸಭೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಕಾರ್ಯಕಾರಿಣಿಗೆ ಬಿಟ್ಟಿದೆ.

ತೆಲಂಗಾಣ ಬೇಡಿಕೆ ಕುರಿತು ಇನ್ನೂ ಒಂದೆರಡು ಸಭೆಗಳನ್ನು ಕರೆದು ಚರ್ಚಿಸಲಾಗುವುದು. ಅನಂತರ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದ್ದವು.

ಆದರೆ, ಕಾಂಗ್ರೆಸ್ ಕಾರ್ಯಕಾರಿಣಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ತೆಲಂಗಾಣ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಒಡಕು ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT