ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸ್ಥಿತಿ : ದೆಹಲಿ ಅಂಗಳಕ್ಕೆ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿ  ಕಿರಣ್ ಕುಮಾರ್ ರೆಡ್ಡಿ ಅವರು ಶನಿವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹಾಗೂ ಗೃಹಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದಿಂದ ಉಲ್ಬಣಿಸಿರುವ ಪರಿಸ್ಥಿತಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ತೆಲಂಗಾಣ ಹೋರಾಟದಿಂದ ರಾಜ್ಯದಲ್ಲಿ ತಲೆದೋರಿರುವ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಯವರು ಕೇಂದ್ರದ ಇಬ್ಬರು ಸಚಿವರಿಗೆ ಮಾಹಿತಿ ನೀಡಿದರು. ರಕ್ಷಣಾ ಸಚಿವ ಎ.ಕೆ. ಆಂಟನಿ, ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್ ಕೂಡ ಮಾತುಕತೆ ವೇಳೆ ಉಪಸ್ಥಿತರಿದ್ದರು. ತೆಲಂಗಾಣ ಪ್ರಾಂತ್ಯದವರಾದ ಕೇಂದ್ರ ಸಚಿವರಾದ ಎಸ್. ಜೈಪಾಲ್ ರೆಡ್ಡಿ, ಪನಬಾಕ ಲಕ್ಷ್ಮೀ ಅವರೂ ಹಿರಿಯ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

`ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಉಪಮುಖ್ಯಮಂತ್ರಿ ದಾಮೋದರ್ ನರಸಿಂಹ್ ರಾಜು, ಎಲ್ಲ ಸಚಿವರು ಹಾಗೂ ಆಂಧ್ರವನ್ನು ಪ್ರತಿನಿಧಿಸುವ ಕೇಂದ್ರದ ನಾಲ್ವರು ಸಚಿವರ ಅಭಿಪ್ರಾಯವನ್ನು ಪಡೆಯಲಾಗಿದೆ~ ಎಂದು ಗುಲಾಮ್ ನಬಿ ಆಜಾದ್ ತಿಳಿಸಿದರು.

ಉಪವಾಸ ಸತ್ಯಾಗ್ರಹದ ಎಚ್ಚರಿಕೆ: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸದಿದ್ದಲ್ಲಿ ಸದ್ಯ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸುವುದಲ್ಲದೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರು ಎಚ್ಚರಿಕೆ ನೀಡಿದ್ದಾರೆ.

`ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದರೆ ಗುರಿ ಸಾಧನೆಗಾಗಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳೊಂದಿಗೆ ಸೇರಿ  ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು~ ಎಂದು ಕಾಂಗ್ರೆಸ್ ಸಂಸದ ಮಧು ಯಾಷಿಕ್ ಗೌಡ್ ತಿಳಿಸಿದ್ದಾರೆ.

ರಾಷ್ಟ್ರಪತಿ ಆಡಳಿತ ಇಲ್ಲ: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಕಳೆದ 27 ದಿನಗಳಿಂದ ನಡೆಯುತ್ತಿರುವ ಹೋರಾಟದಿಂದ ಗಂಭೀರ ಪರಿಸ್ಥಿತಿ ತಲೆದೋರಿರುವ ಆಂಧ್ರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್ ಸ್ಪಷ್ಟಪಡಿಸಿದ್ದಾರೆ. `ಈ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT