ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಸಚಿವಾಲಯಕ್ಕೆ ಸಿಎಜಿ ಛೀಮಾರಿ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಿತ `ಕೆಜಿ-ಡಿ6~ ಅನಿಲ ಘಟಕವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ಗೆ (ಆರ್‌ಐಎಲ್) ಅನುಮತಿ ನೀಡಿದ ತೈಲ ಸಚಿವಾಲಯದ ಕ್ರಮಕ್ಕೆ ಮಹಾಲೇಖಪಾಲರು ತೀವ್ರ ಛೀಮಾರಿ ಹಾಕಿದ್ದಾರೆ.

ತೈಲ ಸಚಿವಾಲಯದ ಕ್ರಮಕ್ಕೆ ಛೀಮಾರಿ ಹಾಕಿರುವ `ಸಿಎಜಿ~, ಇದೇ ಘಟಕದ ಕ್ಷೇತ್ರ ಅಭಿವೃದ್ಧಿ ವೆಚ್ಚ ಮೂರು ಪಟ್ಟು ಹೆಚ್ಚಳವಾಗಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2004ರಲ್ಲಿ 2.4 ಶತಕೋಟಿ ಡಾಲರ್ ಇದ್ದ `ಕೆಜಿ-ಡಿ6~ ಘಟಕದ ಪ್ರಸ್ತಾವಿತ ಹೂಡಿಕೆ  2006ರಲ್ಲಿ 8.8 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ. ಈ ಕುರಿತು ಸಿಎಜಿ ತನ್ನ ವರದಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

ಸುಮಾರು 7,645 ಚದರ ಕಿ.ಮೀ ವಿಸ್ತೀರ್ಣದ ಬಂಗಾಳ ಕೊಲ್ಲಿಯ `ಕೆಜಿ-ಡಿ6~ ಅನಿಲ ಉತ್ಪಾದನೆ ಪ್ರದೇಶವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು `ಆರ್‌ಐಎಲ್~ಗೆ ಅನುಮತಿ ನೀಡುವಾಗ, ತೈಲ ಸಚಿವಾಲಯ ಮತ್ತು ಅದರ ತಾಂತ್ರಿಕ ತಂಡವಾದ ಹೈಡ್ರೋಕಾರ್ಬನ್ ಮಹಾನಿರ್ದೇಶಕರು (ಡಿಜಿಎಚ್) ತಪ್ಪೆಸಗಿದ್ದಾರೆ ಎಂದು `ಸಿಎಜಿ~ ವರದಿ ಹೇಳಿದೆ.

ಉತ್ಪಾದನೆ ಪಾಲುದಾರಿಕೆ ಒಪ್ಪಂದದ (ಪಿಎಸ್‌ಸಿ) ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಪ್ರದೇಶದಲ್ಲಿ  ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಸಂಪೂರ್ಣ ಪ್ರದೇಶವನ್ನು ತಾನೇ ಪತ್ತೆ ಹಚ್ಚಿರುವುದಾಗಿ, ಹಾಗೂ ಅದರ ಸಂಪೂರ್ಣ ಒಡೆತನ ತನಗೆ ಸೇರಿರುವುದಾಗಿ `ಆರ್‌ಐಎಲ್~ 2005ರಲ್ಲಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ವಿವಾದ ತಲೆದೋರಿತ್ತು.

`ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೇ `ಕೆಜಿ-ಡಿ6~ ಘಟಕದ ಸಂಪೂರ್ಣ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದೂ  `ಸಿಎಜಿ~ ಶಿಫಾರಸು ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ಗೆ `ಕೆಜಿ-ಡಿ6~ ಘಟಕದಲ್ಲಿ ಉತ್ಪಾದನಾ ಘಟಕ ಆರಂಭಿಸಲು 1.1 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ತೈಲ ಸಚಿವಾಲಯ ಏಕ ಹರಾಜು ಪ್ರಕ್ರಿಯೆ ಮೂಲಕ ಅನುಮತಿ ನೀಡಿರುವುದನ್ನೂ `ಸಿಎಜಿ~ ಪ್ರಶ್ನಿಸಿದೆ.

ಆರ್‌ಐಎಲ್ ಪ್ರತಿಕ್ರಿಯೆ:  ಕೃಷ್ಣ-ಗೋದಾವರಿ `ಕೆಜಿ-ಡಿ6~ ಅನಿಲ ಉತ್ಪಾದನೆ ಪಾಲುದಾರಿಕೆ ಒಪ್ಪಂದದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ  ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮರ್ಥಿಸಿಕೊಂಡಿದೆ.

ಈ ಪಾಲುದಾರಿಕೆ ಒಪ್ಪಂದದ ನಿಯಮಗಳನ್ನು `ಆರ್‌ಐಎಲ್~ ಉಲ್ಲಂಘಿಸಿದ್ದು, ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು `ಸಿಎಜಿ~ ವರದಿ ಹೇಳಿದೆ.

ಉತ್ಪಾದನೆ ಪಾಲುದಾರಿಕೆ ಒಪ್ಪಂದದ  ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಅನುಮತಿ ನೀಡಲಾದ ಪ್ರದೇಶದ ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT