ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಗೊಡ್ಡು ರೋಗ: ರೈತರ ಆತಂಕ

Last Updated 5 ಡಿಸೆಂಬರ್ 2013, 6:18 IST
ಅಕ್ಷರ ಗಾತ್ರ

ಜನವಾಡ: ಬೀದರ್‌ ತಾಲ್ಲೂಕಿನ ವಿವಿಧೆಡೆ ತೊಗರಿ ಬೆಳೆಗೆ ಗೊಡ್ಡು ರೋಗ ಬಾಧೆ ಕಂಡು ಬಂದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಜನವಾಡ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳನ್ನು ಒಳಗೊಂಡ ತಂಡ ಜಿಲ್ಲೆಯಲ್ಲಿ ಮಂಗಳವಾರ ನಡೆಸಿದ ಕ್ಷೀಪ್ರ ಸಂಚಾರ ಸಮೀಕ್ಷೆಯಲ್ಲಿ ತೊಗರಿಗೆ ಕೆಲಕಡೆ ಗೊಡ್ಡು ರೋಗ ತಗುಲಿರುವುದು ಕಂಡು ಬಂದಿದೆ.

ಮೊದಲು ಬಿತ್ತನೆ ಮಾಡಿದ ತೊಗರಿ ಬೆಳೆಯ ಮಾರುತಿ ಮತ್ತು ಟಿ.ಎನ್. 3 ಆರ್ ತಳಿ ಬಸವಕಲ್ಯಾಣ, ಹುಮನಾಬಾದ್ ಹಾಗೂ ಬೀದರ್ ತಾಲ್ಲೂಕುಗಳಲ್ಲಿ ಕಾಯಿ ಕಟ್ಟುವ ಹಂತದಲ್ಲಿದೆ. ಬಿ.ಎಸ್.ಎಂ.ಆರ್. ತಳಿಯೂ ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ ಎಂದು ತಂಡ ತಿಳಿಸಿದೆ.

ಬೀದರ್ ತಾಲ್ಲೂಕಿನ ಕೆಲ ರೈತರ ಹೊಲದಲ್ಲಿ ಗೊಡ್ಡು ರೋಗ ಕಾಣಿಸಿಕೊಂಡಿದೆ. ಈ ರೋಗದಿಂದಾಗಿ ಎಲೆಗಳು ಹಳದಿ ಮತ್ತು ಹಸಿರು ವರ್ಣಕ್ಕೆ ತಿರುಗಿ ಗಿಡಗಳು ಹೂ ಮತ್ತು ಕಾಯಿಯನ್ನು ಬಿಡದೆ ಬಂಜೆಯಾಗಿರುತ್ತವೆ. ಗೊಡ್ಡು ರೋಗಕ್ಕೆ ‘ಐಸೇರಿಯಾ ಕಜಾನಿ’ ನುಶಿ ಕಾರಣವಾಗಿದ್ದು, ಕೆಲವೇ ದಿನಗಳಲ್ಲಿ ನೂರಾರು ಎಕರೆಗೆ ಹರಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಂಜಿನಿಂದಾಗಿ ತೊಗರಿಯಲ್ಲಿ ಸಸ್ಯ ಪ್ರಚೋದಕಗಳಲ್ಲಿ ಏರುಪೇರು ಆಗಿದೆ. ಸರ್ಕೊಸ್ಟೋರಾ ಎಲೆಚುಕ್ಕೆ ರೋಗ­ಬಾಧೆಯಿಂದ ಹೂವು ಮತ್ತು ಎಲೆ ಉದುರುವುದು ಕಂಡು ಬಂದಿದೆ. ಹೆಲಿಯೋಥಿಸ್ ಕಾಯಿಕೊರಕ ಕೀಟಗಳು ಆರ್ಥಿಕ ನಷ್ಟ ರೇಖೆಗಿಂತ ಕಡಿಮೆ ಇವೆ ಎಂದು ತಿಳಿಸಿದೆ.

ನಿರ್ವಹಣೆ: ಗೊಡ್ಡು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಬಾಧಿತ ಗಿಡಗಳನ್ನು ಸಾಮೂಹಿಕವಾಗಿ ಕಿತ್ತು ನಾಶಪಡಿಸಬೇಕು. ನಂತರ 2.5 ಮಿ.ಲೀ. ಡಿಕೋಫಾಲ್ ನುಶಿ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಿಡಿಸಬೇಕು. ತೊಗರಿಯಲ್ಲಿ ಸರ್ಕೊಸ್ಟೊರಾ ಎಲೆ ಚುಕ್ಕೆ ರೋಗ ಹಾಗೂ ಹೂವು ಉದುರುವುದು ಕಂಡು ಬಂದಲ್ಲಿ ನಿರ್ವಹಣೆಗಾಗಿ ಕಾರ್ಬನ್‍ಡೈಜಿಮ್ 1 ಗ್ರಾಂ. + 0.5 ಮಿ.ಲೀ ಎನ್.ಎ.ಎ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದೆ.

ಕುಸಬೆಗೆ ಹೇನುಬಾಧೆ: ಕೆಲವೆಡೆ ಕುಸುಬೆ ಬೆಳೆಯಲ್ಲಿ ಹೇನು ಬಾಧೆ ಕಂಡು ಬಂದಿದ್ದು, ನಿರ್ವಹಣೆಗಾಗಿ 1.75 ಮಿ.ಲೀ. ಡೈಮಿಥೊಯೇಟ್ ಅಥವಾ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಜೋಳದಲ್ಲಿ ಸೈನಿಕ ಹುಳು ಬಾಧೆ: ಎಲೆಯ ಸುಳಿಯಲ್ಲಿ ಕೀಟಗಳು ಇದ್ದುಕೊಂಡು ಎಲೆಯನ್ನು ತಿನ್ನುತ್ತವೆ. ಮರಿ ಹುಳುವಿನ ಹಕ್ಕೆಗಳು ಹಿಡದ ಸುಳಿಯಲ್ಲಿ ಕಂಡು ಬರುತ್ತವೆ. ನಿರ್ವಹಣೆಗಾಗಿ  ಕಾರ್ಬೊಫ್ಯೂರಾನ್ ಗುಳಿಗೆಗಳನ್ನು ಸುಳಿಗಳಲ್ಲಿ ಹಾಕಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT