ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕಾ ವಿವಿ ಅಭಿವೃದ್ಧಿಗೆ 60 ಕೋಟಿ

Last Updated 25 ಫೆಬ್ರುವರಿ 2011, 8:15 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದ ಮೊಟ್ಟ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗಿರುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಲಭಿಸಿದೆ.ಇಡೀ ರಾಜ್ಯದ ಕಾರ್ಯವ್ಯಾಪ್ತಿ ಹೊಂದಿರುವ ನೂತನ ತೋಟಗಾರಿಕೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್‌ನಲ್ಲಿ 60 ಕೋಟಿ ರೂಪಾಯಿ ಘೋಷಿಸಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾಗಿರುವ 60 ಕೋಟಿ ರೂಪಾಯಿಗಳಲ್ಲಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡ, ಹಾಸ್ಟೆಲ್‌ಗಳು, ವಿವಿಧ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ತೋಟಗಾರಿಕೆ ಪದವಿ ಕಾಲೇಜುಗಳ ಕಟ್ಟಡ ನಿರ್ಮಾಣ ಮತ್ತಿತರ ಮೂಲಸೌಕರ್ಯಕ್ಕಾಗಿ ಮೀಸಲಿಡಲಾಗಿದೆ.ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ರೈತರ ಬದುಕು ಸುಧಾರಿಸುವ ಮಹತ್ವಾಕಾಂಕ್ಷೆಯೊಂದಿಗೆ ನವೆಂಬರ್ 22, 2008ರಂದು ತೋಟಗಾರಿಕೆ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿತು.

ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ಬೇರೆ ಬೇರೆ ಇಲಾಖೆಗೆ ಸಂಬಂಧಿಸಿದ ಕಟ್ಟಗಳಲ್ಲಿ ತಾತ್ಕಾಲಿಕವಾಗಿ ಆರಂಭಗೊಂಡಿರುವ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಹೊಂದಿಕೊಂಡಂತೆ ನವನಗರದ ಅಂಚಿನಲ್ಲಿ ಮೂರು ನೂರು ಎಕರೆ ಜಾಗವನ್ನು ಬಿಟಿಡಿಎ ಒದಗಿಸಿದೆ.ನವನಗರದಲ್ಲಿ ನೀಡಲಾಗಿರುವ 300 ಎಕರೆ ಜಾಗದಲ್ಲಿ ವಿಶ್ವವಿದ್ಯಾಲಯದ ಮುಖ್ಯಕಟ್ಟಡ, ಹಾಸ್ಟೆಲ್, ಸಂಶೋಧನಾ ಕೇಂದ್ರ ಸೇರಿದಂತೆ ಸುಂದರ ಕ್ಯಾಂಪಸ್ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ 95 ಕೋಟಿ ರೂಪಾಯಿ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

‘ಬಜೆಟ್ ತೃಪ್ತಿದಾಯಕ’
ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ 60 ಕೋಟಿ ರೂಪಾಯಿ ಘೋಷಿಸಿರುವುದು ತಮಗೆ ಸಮಾಧಾನ ತಂದಿದೆ ಎಂದು ತೋವಿವಿ ಕುಲಪತಿ ಡಾ.ಎಸ್.ಬಿ. ದಂಡಿನ ‘ಪ್ರಜಾವಾಣಿ’ಗೆ ತಿಳಿಸಿದರು.ಬಜೆಟ್ ಬಳಿಕ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಬಜೆಟ್‌ನಲ್ಲಿ ಸರ್ಕಾರ ನಿಗದಿಪಡಿಸಿದ 60 ಕೋಟಿ ರೂಪಾಯಿಗಳಲ್ಲಿ ವಿವಿ ಮುಖ್ಯ ಕಟ್ಟಡ, ಹಾಸ್ಟೆಲ್ ಹಾಗೂ ವಿವಿಧ ಜಿಲ್ಲೆಗಳ ನಾಲ್ಕು ಕಾಲೇಜು ಕಟ್ಟಡಕ್ಕೆ ಬಳಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

ಸುಂದರ ಹಾಗೂ ಸುಸಜ್ಜಿತ ಮುಖ್ಯ ಕಟ್ಟಡ ನಿರ್ಮಾಣಕ್ಕೆ ಅಂದಾಜು 35 ಕೋಟಿ ರೂಪಾಯಿಗಳ ಅಗತ್ಯವಿದ್ದು, ಬಜೆಟ್‌ನಲ್ಲಿ ಹಣ ನೀಡಿರುವುದರಿಂದ ಇದಕ್ಕೆ ಅನುಕೂಲವಾಗಲಿದೆ ಎಂದರು.ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಚಿತ್ರದುರ್ಗದ ಹಿರಿಯೂರು, ಕೊಪ್ಪಳದ ಮುನಿರಾಬಾದ್ ಹಾಗೂ ಮೈಸೂರುಗಳಲ್ಲಿ ಹೊಸದಾಗಿ ಆರಂಭಿಸಲಾಗಿರುವ ತೋಟಗಾರಿಕಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಈ ಹಣವನ್ನು ಬಳಕೆ ಮಾಡಲಾಗುವುದು ಎಂದು ಡಾ.ದಂಡಿನ ಹೇಳಿದರು.

ಬಜೆಟ್‌ನಲ್ಲಿ ಘೋಷಿಸಿರುವ ಹಣ ಬಳಕೆಗೆ ಮೊದಲ ಆದ್ಯತೆ ನೀಡಲಾಗುವುದು. ಇದಾದ ಬಳಿಕ ಹೆಚ್ಚುವರಿ ಹಣ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ವಿವಿ ಮುಖ್ಯ ಕಟ್ಟಡ, ಜಮೀನು ಸ್ವಾಧೀನ, ಹೊಸ ಕಾಲೇಜುಗಳ ಕಟ್ಟಡ ನಿರ್ಮಾಣ, ಅಂತರ್‌ರಾಷ್ಟ್ರೀಯ ವಿದ್ಯಾರ್ಥಿ ನಿಲಯ, ಹೊಸ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ವಸತಿನಿಲಯ ಹಾಗೂ ತೋಟಗಾರಿಕಾ ತರಬೇತಿ ಕೇಂದ್ರಗಳ ನಿರ್ಮಾಣಕ್ಕೆ ಒಟ್ಟು 62.10 ಕೋಟಿ ರೂಪಾಯಿಗಳನ್ನು 2010-11ನೇ ಸಾಲಿನಲ್ಲಿಯೇ ಮಂಜೂರು ಮಾಡುವಂತೆ ಕೋರಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ನವೆಂಬರ್ 19, 2010ರಂದು ಮುಖ್ಯಮಂತ್ರಿ ಯಡಿಯೂರಪ್ಪ ತೋವಿವಿ ಕುಲಪತಿ ಡಾ.ಎಸ್.ಬಿ. ದಂಡಿನ ಮನವಿಪತ್ರವನ್ನೂ ನೀಡಿದ್ದರು. ಕುಲಪತಿಗಳ ಮನವಿ ಹಾಗೂ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠರ ಪ್ರಯತ್ನಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತೋಟಗಾರಿಕೆ ವಿಶ್ವವಿದ್ಯಾಲಯ ಅಭಿವೃದ್ಧಿಗೆ 2011-12ನೇ ಸಾಲಿನ ಬಜೆಟ್‌ನಲ್ಲಿ 60 ಕೋಟಿ ರೂಪಾಯಿ ಘೋಷಿಸುವ ಮೂಲಕ ತೋಟಗಾರಿಕೆ ವಿವಿ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT