ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ನೀರು ವಾರದಲ್ಲಿ ಸಂಸ್ಕರಿಸಿ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೆಐಎಡಿಬಿವತಿಯಿಂದ ನಿರ್ಮಿಸಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದ್ದು, ಇದರಿಂದ ಕಾರ್ಖಾನೆಗಳಲ್ಲಿ ಉತ್ಪಾದನೆ ಕುಸಿತಗೊಂಡಿರುವ ಜೊತೆಗೆ ಜವಳಿ ಪಾರ್ಕ್ ನೆರೆ-ಹೊರೆಯ ಗ್ರಾಮಸ್ಥರಿಂದ ಬೈಗುಳಗಳನ್ನು ಕೇಳುವಂತಾಗಿದೆ ಎಂದು ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಟೆಕ್ಸ್‌ಟೈಲ್ಸ್ ಕಾರ್ಖಾನೆಗಳ ವ್ಯವಸ್ಥಾಪಕರು ಸಚಿವ ವರ್ತೂರ್ ಪ್ರಕಾಶ್ ಅವರಲ್ಲಿ ಮನವಿ ಮಾಡಿದರು.

ಬುಧವಾರ ಜವಳಿ ಪಾರ್ಕ್‌ಗೆ ಭೇಟಿ ನೀಡಿದ್ದ ರಾಜ್ಯ ಜವಳಿ ಸಚಿವರನ್ನು ಭೇಟಿಯಾದ ಕಾರ್ಖಾನೆಗಳ ವ್ಯವಸ್ಥಾಪಕರು ಶುದ್ಧೀಕರಣ ಘಟಕದ ಸಮಸ್ಯೆಯನ್ನು ವಿವರಿಸಿದರು. ಕೈಗಾರಿಕಾ ಪ್ರತಿನಿಧಿಗಳ ಮನವಿ ಅಲಿಸಿದ ಸಚಿವರು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜವಳಿ ಪಾರ್ಕ್ ಆವರಣದಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕಕ್ಕೆ ಮಾಧ್ಯಮದವರೊಂದಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಖಾನೆಗಳ ತ್ಯಾಜ್ಯನೀರು ಕಟ್ಟಡದ ಆವರಣ, ಪಾರ್ಕಿಂಗ್ ಜಾಗದಲ್ಲೆಲ್ಲಾ ನಿಂತುಕೊಂಡು ಕೆರೆ ನಿರ್ಮಾಣವಾಗಿತ್ತು. ಇದನ್ನು ಕಂಡ ಸಚಿವರು ಕೆಂಡಾಮಂಡಲವಾಗಿ, `ಇಡೀ ರಾಜ್ಯದ ಜನ ಈ ಜವಳಿ ಪಾರ್ಕ್‌ನ ಯಶಸ್ಸಿನ ಕಡೆಗೆ ನೋಡುತ್ತಿದ್ದಾರೆ. ಗಾರ್ಮೆಂಟ್ಸ್ ಉದ್ಯಮ ಇರುವ ಕಡೆ ನೀರು ಶುದ್ಧೀಕರಣ ಘಟಕ ಅವಶ್ಯವಾಗಿ ಬೇಕು. ಈ ಸ್ಥಳ ನೋಡಿದರೆ ಒಂದು ಹನಿ ತ್ಯಾಜ್ಯ ನೀರೂ ಶುದ್ಧೀಕರಣವಾದಂತೆ  ಕಾಣುತ್ತಿಲ್ಲ. ಹೀಗಾದರೆ ನಾವು ಕೈಗಾರಿಕೆಗಳವರಿಗೆ, ಇದರ ಸುತ್ತಲಿನ ಗ್ರಾಮಗಳ ಜನರಿಗೆ ಉತ್ತರ ನೀಡುವುದಾದರೂ ಹೇಗೆ ?~ ಎಂದರು.

`ಮಾಧ್ಯಮ ಪ್ರತಿನಿಧಿಗಳ ಮುಂದೆ ನಮ್ಮ ಮಾನ ಹರಾಜು ಹಾಕುವಂತ ಕೆಲಸ ಮಾಡಿದ್ದೀರಿ. ಸರ್ಕಾರ ಖರ್ಚು ಮಾಡಿರುವ 28 ಕೋಟಿ ರೂಪಾಯಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಒಂದು ವಾರದಲ್ಲಿ ಇದನ್ನು ಸರಿಪಡಿಸಬೇಕು. ಇಲ್ಲವಾದರೆ ಇಲ್ಲಿನ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದರು.

ಕಾಲುವೆ ಬಂದ್: ಜವಳಿ ಪಾರ್ಕ್‌ನಲ್ಲಿ ಹತ್ತಕ್ಕೂ ಹೆಚ್ಚು ಗಾಮೆಂಟ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಂದ ಹೊರಬರುವ ಸಾವಿರಾರು ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸಲು ಕೆಐಎಡಿಬಿ ನೀರು ಶುದ್ಧೀಕರಣ ಘಟಕ ವಿಫಲವಾಗಿದೆ. ಹಾಗಾಗಿ ಈ ಘಟಕದಿಂದ ನೀರು ಹೊರ ಹರಿಯುತ್ತಿತ್ತು. ಇದು ಬಾಶೆಟ್ಟಿಹಳ್ಳಿ ಕೆರೆಗೆ ಸೇರುತ್ತಿತ್ತು.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯವರು ಕೆಐಡಿಬಿ ನೀರು ಶುದ್ಧೀಕರಣ ಘಟಕದಿಂದ ಬರುವ ನೀರಿನ ಕಾಲುವೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಿದ್ದಾರೆ. ಹಾಗೆಯೇ ಕಾಲುವೆ ಬದಿಯಲ್ಲಿನ ಗೋಡೆ ಮೇಲೆ `ತ್ಯಾಜ್ಯ ನೀರು ಹೊರಗೆ ಬಿಟ್ಟರೆ ದಂಡ ವಿಧಿಸಲಾಗುವುದು~ ಎನ್ನುವ ಎಚ್ಚರಿಕೆ ಫಲಕವನ್ನು ಹಾಕಿದ್ದಾರೆ. ಆದರೆ ಈ  ಎಚ್ಚರಿಕೆಗೆ ಕವಡೆಕಾಸಿನ ಕಿಮ್ಮತ್ತಿಲ್ಲದೆ ನೀರು ಹರಿದು ಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT