ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ನುಂಗುವ ಬಯೋಗ್ಯಾಸ್‌ ಸ್ಥಾವರ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಭೈರುಂಬೆ ಶಾರದಾಂಬಾ ಪ್ರೌಢಶಾಲೆಯ ಆಡಳಿತ ಮಂಡಳಿಗೆ ದೊಡ್ಡ ತಲೆಬಿಸಿ ಶುರುವಾಯಿತು. ಶಾಲೆಯಲ್ಲಿ ಬಿಸಿಯೂಟ ಮಾಡಿದ ಮಕ್ಕಳು ಕೈ ತೊಳೆಯಲು ಹೋಗಲು ಹಿಂದೇಟು ಹಾಕ­ತೊಡ­ಗಿದರು. ‘ಗೇಮ್ಸ್ ಪಿರಿಯಡ್‌’ಗೆ ಕಾಯುವ ಮಕ್ಕಳು ಮೈದಾನಕ್ಕೆ ಹೋಗಿ ಆಟ ಆಡಲು ಹಿಂಜರಿಯತೊಡಗಿದರು. ಇದಕ್ಕೆ ಒಂದೇ ಕಾರಣ, ಕೈ ತೊಳೆಯಲು ನಿಗದಿ­ಪಡಿಸಿದ ಸ್ಥಳದಿಂದ ಹರಡುವ ಗಬ್ಬುವಾಸನೆ!

ಶಿಸ್ತು, ಗುಣಮಟ್ಟದ ಶಿಕ್ಷಣದ ಮೂಲಕ ಪಟ್ಟಣದ ಮಕ್ಕಳನ್ನು ಹಳ್ಳಿಯೆಡೆಗೆ ಸೆಳೆದಿರುವ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿಗೆ ಇದೊಂದು ಕಪ್ಪು ಚುಕ್ಕೆಯನ್ನು ಉಳಿಸಿಕೊಳ್ಳಲು ಮನಸ್ಸಾಗಲಿಲ್ಲ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿ­ದಾಗ ಹೊಳೆದಿದ್ದು ಬಯೋಗ್ಯಾಸ್‌ ಸ್ಥಾವರ.

6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ (ಅನುದಾನಿತ ಹಾಗೂ ಅನುದಾನರಹಿತ ಶಾಲೆ) 350 ಮಕ್ಕಳು ಈ ಶಾಲೆಯಲ್ಲಿ ಪ್ರತಿನಿತ್ಯ ಬಿಸಿಯೂಟ ಉಣ್ಣುತ್ತಾರೆ. ಇಲ್ಲೇ ವಸತಿಗೃಹದಲ್ಲಿ ಉಳಿಯುವ 80 ಮಕ್ಕಳು ರಾತ್ರಿ ಸಹ ಊಟ ಮಾಡುತ್ತಾರೆ.

ಈ ಮಕ್ಕಳ ಅಡುಗೆಗೆ ಬಳಸುವ ತರಕಾರಿಯಿಂದ ನಿತ್ಯ ದೊರೆಯುವ ತ್ಯಾಜ್ಯ ಸುಮಾರು 15 ಕೆ.ಜಿ. ಬಾಗಿಸಿದ ಅನ್ನದಿಂದ ಲಭ್ಯವಾಗುವ ತಿಳಿ ಸುಮಾರು 20 ಲೀಟರ್‌. ಬಿಸಿಯೂಟದಿಂದ ದೊರೆಯುವ ತ್ಯಾಜ್ಯದ ಲೆಕ್ಕಾಚಾರ ಆಧರಿಸಿ ಶಾಲೆಯ ಹಿಂಭಾಗದಲ್ಲಿ 150 ಸಿಎಫ್‌ಟಿ (ಕ್ಯೂಬಿಕ್‌ ಫೀಟ್‌) ಸಾಮರ್ಥ್ಯದ ಬಯೋಗ್ಯಾಸ್‌ ಸ್ಥಾವರ ನಿರ್ಮಿಸಲಾಗಿದೆ.

ಈ ಘಟಕದ ಸಾಮರ್ಥ್ಯಕ್ಕೆ 50 ಕೆ.ಜಿ. ಸಾವಯವ ತ್ಯಾಜ್ಯ ಬೇಕಾಗುತ್ತದೆ. ಬೆಟ್ಟದಲ್ಲಿ ಸಿಗುವ ಸೊಪ್ಪನ್ನು ಹಾಕಿ ಇದನ್ನು ಸರಿದೂಗಿಸಿ­ಕೊಳ್ಳ­ಬಹುದು. ಪ್ರಸ್ತುತ ಸ್ಥಾವರದಿಂದ ದಿನಕ್ಕೆ 5 ಮೀಟರ್‌ ಕ್ಯೂಬ್ ಗ್ಯಾಸ್‌ ಉತ್ಪಾದನೆ­ಯಾಗುತ್ತಿದ್ದು, ಇದೇ ಗ್ಯಾಸ್‌ ಬಳಸಿ ಪ್ರತಿದಿನ ಅಡುಗೆ ಮಾಡುತ್ತಿದ್ದಾರೆ.

ಒಂದು ಮೀಟರ್‌ ಕ್ಯೂಬ್‌ ಬಯೋಗ್ಯಾಸ್‌ ಅರ್ಧ ಕೆ.ಜಿ. ಎಲ್‌ಪಿಜಿ ಅಡುಗೆ ಅನಿಲಕ್ಕೆ ಸಮ. 5 ಮೀಟರ್‌ ಕ್ಯೂಬ್‌ ಗ್ಯಾಸ್‌ನಿಂದ ದಿನಕ್ಕೆ 2.5 ಕೆ.ಜಿ.ಯಷ್ಟು ಎಲ್‌ಪಿಜಿ ಅನಿಲ ಉಳಿತಾಯವಾಗುತ್ತಿದೆ. ಭೈರುಂಬೆ ಶಾಲೆಯಲ್ಲಿ ಊಟ ಮಾಡುವ ಮಕ್ಕಳ ಅನುಪಾತ ಆಧರಿಸಿದರೆ ತಿಂಗಳಿಗೆ ನಾಲ್ಕು ದೊಡ್ಡ ಹಾಗೂ ಐದು ಸಣ್ಣ ಸರಾಸರಿ ಒಂಬತ್ತು ಎಲ್‌ಪಿಜಿ ಸಿಲಿಂಡರ್‌ ಬೇಕೇ ಬೇಕು.

ಇನ್ನು ‘ಕ್ಷೀರ ಭಾಗ್ಯ’ದ ಹಾಲು ಕಾಯಿಸಲು ಕನಿಷ್ಠ ಒಂದು ಸಿಲಿಂಡರ್‌ ಬೇಕು. ಉಚಿತವಾಗಿ ನೀಡುವ ಐದು ಸಿಲಿಂಡರ್‌ ಹೊರತುಪಡಿಸಿ ಉಳಿದ ಪ್ರತಿ ಸಿಲಿಂಡರ್‌ಗೆ ರೂ. 1800 ಹಣ ಕೊಟ್ಟು ಕೊಳ್ಳಬೇಕು. ಬಯೋಗ್ಯಾಸ್‌ ಸ್ಥಾವರದಿಂದ ದೊರೆಯುವ ಅನಿಲದಿಂದ ಭೈರುಂಬೆ ಶಾಲೆಯವರಿಗೆ ಈಗ ತಿಂಗಳಿಗೆ ಮೂರು ಎಲ್‌ಪಿಜಿ ಸಿಲಿಂಡರ್‌ ಉಳಿತಾಯವಾಗುತ್ತಿದೆ.

ಒಂದಕ್ಕೆ ಎರಡು ಲಾಭ
‘ಬಯೋಗ್ಯಾಸ್‌ ಸ್ಥಾವರಕ್ಕೆ ಬಳಸುವ ತ್ಯಾಜ್ಯದಿಂದ ಶೇ 70ರಷ್ಟು ಸ್ಲರಿ ಸಿಗುತ್ತಿದೆ. 40 ಕೆ.ಜಿ.ಯಷ್ಟು ದೊರೆಯುವ ಸ್ಲರಿಯನ್ನು ಶಾಲೆಯ ಆವರಣದಲ್ಲಿರುವ ಧನ್ವಂತರಿ ವನ, ತರಕಾರಿ ಹಿತ್ತಲು, ಬಾಳೆಗಿಡ, ಒಂದು ಎಕರೆ ತೆಂಗಿನ ತೋಟಕ್ಕೆ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಒಂದು ತೆಂಗಿನ ಮರಕ್ಕೆ 60 ಕೆ.ಜಿ. ದೊಡ್ಡಿ ಗೊಬ್ಬರ ಹಾಕಿದರೂ ಒಟ್ಟಾರೆ ವರ್ಷಕ್ಕೆ ನಾಲ್ಕು ಲೋಡ್‌ ಗೊಬ್ಬರಕ್ಕೆ ಕನಿಷ್ಠವೆಂದರೂ ರೂ. 15ಸಾವಿರ ಖರ್ಚಾಗುತ್ತಿತ್ತು. ಈ ಹಣವೂ ಈಗ ಉಳಿತಾಯ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಮಹಾದೇವಿ ಮಾರ್ಕಾಂಡೆ.

‘ಬಯೋಗ್ಯಾಸ್‌ ಸ್ಥಾವರಕ್ಕೆ ತರಕಾರಿ ಸಿಪ್ಪೆ ಮೂಲ ಸರಕು. ಆಮ್ಲೀಯ ಗುಣ ಹೊಂದಿರುವ ಅನ್ನದ ತಿಳಿ ಜೊತೆಗೆ ಐದು ಕೆ.ಜಿ.ಯಷ್ಟು ಜಾನುವಾರು ಸಗಣಿ ಸೇರಿಸಬೇಕು. ಅನ್ನದ ತಿಳಿ ಹಾಕದಿದ್ದರೆ ಸಗಣಿ ಹಾಕುವ ಗೋಜಿಲ್ಲ. ಮಕ್ಕಳ ಊಟದ ಬಟ್ಟಲಲ್ಲಿ ಉಳಿಯುವ ತ್ಯಾಜ್ಯ ಹಾಕಲು ಪ್ರತ್ಯೇಕ ಬುಟ್ಟಿ ಇಟ್ಟಿದ್ದೇವೆ. ಅದನ್ನು ಸಹ ಬಯೋಗ್ಯಾಸ್‌ ಸ್ಥಾವರಕ್ಕೆ ಬಳಸುತ್ತೇವೆ. ಹೀಗಾಗಿ ನಮ್ಮ ಬಿಸಿಯೂಟ ಈಗ ‘0 ವೇಸ್ಟ್‌’ ಯೋಜನೆ’ ಎಂದು ಹೆಮ್ಮೆಯಿಂದ ಅವರು ಬೀಗಿದರು.

‘ಭೈರುಂಬೆ ಶಾಲೆಯ ಬಯೋಗ್ಯಾಸ್‌ ಸ್ಥಾವರ ನಿರ್ಮಾಣಕ್ಕೆ ತಗುಲಿರುವ ಖರ್ಚು ರೂ.77,500. ಹಿಂದಿನ ಸರ್ಕಾರದಲ್ಲಿದ್ದ ಪಶ್ಚಿಮಘಟ್ಟ ಕಾರ್ಯಪಡೆ ಇದರ ಸಂಪೂರ್ಣ ಆರ್ಥಿಕ ವೆಚ್ಚ ಭರಿಸಿದೆ. ನಿರ್ಮಾಣ ಹಂತದಲ್ಲಿ ಎಟಿ1ಎಂಬ ಬ್ಯಾಕ್ಟೀರಿಯಾ ಹಾಕಬೇಕು. 150 ಸಿಎಫ್‌ಟಿ ಸಾಮರ್ಥ್ಯದ ಸ್ಥಾವರಕ್ಕೆ 50ಕೆ.ಜಿ. ಬ್ಯಾಕ್ಟೀರಿಯಾ ಒದಗಿಸಲು ರೂ. 4500 ವೆಚ್ಚವಾಗುತ್ತದೆ.

ಆದರೆ ಇದನ್ನು ಒಮ್ಮೆ ಹಾಕಿದರೆ ಸಾಕು. 200–300 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ 100 ಸಿಎಫ್‌ಟಿ ಸಾಮರ್ಥ್ಯದ ಫೈಬರ್‌ ಸ್ಥಾವರ ಅಳವಡಿಸಿದರೆ ರೂ. 60ಸಾವಿರದಲ್ಲಿ ಪೂರ್ಣಗೊಳಿಸಬಹುದು’ ಎನ್ನುತ್ತಾರೆ ಇದನ್ನು ನಿರ್ಮಾಣ ಮಾಡಿರುವ ಅರ್ಥ್‌ವಿಶನ್‌ ಸಂಸ್ಥೆಯ ಆನಂದ ಹೆಗಡೆ.

‘ಸರ್ಕಾರಗಳು ಬಿಸಿಯೂಟ ಯೋಜನೆ ಪ್ರಾರಂಭಿಸುವ ಮೊದಲಿನಿಂದಲೇ, ಅಂದರೆ 2001ರಿಂದ ಶಾಲೆಯಲ್ಲಿ ಬಿಸಿಯೂಟ ನೀಡುತ್ತಿರುವ ಹೆಗ್ಗಳಿಕೆ ಭೈರುಂಬೆ ಶಾಲೆಯದು. ಶಾಲೆಯಲ್ಲಿ ಅಡುಗೆ ಮಾಡುವ ತ್ಯಾಜ್ಯ, ಮಕ್ಕಳು ಊಟ ಮಾಡಿದ ಮೇಲೆ ಕೈ ತೊಳೆಯುವ ಜಾಗದಲ್ಲಿ ಪೈಪ್‌ ಮೂಲಕ ಹೋಗಿ ಸೇರುತ್ತಿತ್ತು. ಜೊತೆಗೆ ಮಕ್ಕಳು ಊಟದಲ್ಲಿ ಬಿಟ್ಟಿರುವ ತರಕಾರಿ ಹೋಳು ಇನ್ನಿತರ ತ್ಯಾಜ್ಯಗಳನ್ನು ಅಲ್ಲೇ ಎಸೆಯುತ್ತಿದ್ದರು. ಇದರಿಂದಾಗಿ ಹೊಲಸು ವಾಸನೆ ಸುತ್ತೆಲ್ಲ ಪಸರಿಸಿತು. ಬಯೋಗ್ಯಾಸ್‌ ಸ್ಥಾವರ ನಿರ್ಮಾಣ ಮಾಡಿದ ಮೇಲೆ ನಮ್ಮ ಶಾಲೆಯ ಆವರಣದಲ್ಲಿ ಕೊಂಚವೂ ದುರ್ನಾತವಿಲ್ಲ’ ಎನ್ನುತ್ತಾರೆ ಶಿಕ್ಷಣ ಸಂಸ್ಥೆಯ ಸಂಯೋಜಕ ನಾರಾಯಣ ಹೆಗಡೆ ಗಡೀಕೈ.

ಮಲವನ್ನು ಬಳಸಿ ಗ್ಯಾಸ್‌ ಉತ್ಪಾದಿಸುವ ಯೋಜನೆ ಮುಂದಿನ ಗುರಿ. ಇದರಿಂದ ಹಾಸ್ಟೆಲ್‌­ ಮಕ್ಕಳಿಗೆ ಸ್ನಾನಕ್ಕೆ ನೀರು ದೊರಕಿಸಿಕೊಡುವ ಉದ್ದೇಶವಿದೆ.

‘ಶಾಲೆ, ಕಾಲೇಜು, ದೇವಾಲಯ, ದೊಡ್ಡ ಹೊಟೇಲ್‌ಗಳು ಬಯೋಗ್ಯಾಸ್‌ ಸ್ಥಾವರ ನಿರ್ಮಿಸಿ ಮಾಲಿನ್ಯ ನಿಯಂತ್ರಿಸಬೇಕಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ 8–10 ಬಯೋಗ್ಯಾಸ್‌ ಸ್ಥಾವರಗಳು ಅದ್ಭುತ ಫಲಿತಾಂಶ ನೀಡಿವೆ. ಸರ್ಕಾರ ಸ್ಥಳೀಯ ಸಂಸ್ಥೆ ಮೂಲಕ ಬಯೋಗ್ಯಾಸ್‌ ಸ್ಥಾವರ ನಿರ್ಮಾಣಕ್ಕೆ ಸಹಾಯಧನ ನೀಡಿ ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT