ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ ಅಜ್ಜಿ ತಾರಿಯ ಅಡುಗೆ

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

ಕೈಯಲ್ಲಿ ತಾಂಬೂಲದ ತಟ್ಟೆ ಹಿಡಿದುಕೊಂಡು ಬಂದ ಪಾಕತಜ್ಞೆ ತಾರಿ ಚಾರುಪಸ್ ಮೂಗಿನ ಮೇಲಿದ್ದ ಕನ್ನಡಕ ಸರಿಪಡಿಸಿಕೊಳ್ಳುತ್ತಾ, `ಊಟ ಮಾಡುವ ಮುನ್ನವೇ ಇದನ್ನು ಸವಿಯಿರಿ~ ಎಂದರು.

ಅವರು ತಂದಿಟ್ಟ ಎಲೆಯನ್ನು ಹೇಗೆ ತಿನ್ನಬೇಕು ಎಂದು ತಿಳಿಯದೇ ಕೈ ಬೆರಳಿನ ಲಟಿಕೆ ಮುರಿಯುತ್ತಾ ಸುಮ್ಮನೆ ಕುಳಿತ್ದ್ದಿದವರನ್ನು ನೋಡಿ, ಅದನ್ನು ಹೇಗೆ ತಿನ್ನಬೇಕು ಎಂಬುದನ್ನು ಅವರೇ ವಿವರಿಸುತ್ತಾ ಹೋದರು. ತಟ್ಟೆಯಲ್ಲಿದ್ದ ಲೆಟಿಸ್ ಎಲೆಯೊಂದನ್ನು ತೆಗೆದುಕೊಂಡು ಅದರ ಮೇಲೆ ಒಂದಿಷ್ಟು ಕಡಲೆಬೀಜ, ಈರುಳ್ಳಿ, ಕೇಸರಿ ಮಿಶ್ರಿತ ಕೊಬ್ಬರಿ ತುರಿ, ಕೆಂಪು ಮೆಣಸಿನ ಕಾಯಿ ಚೂರಿನ ಮೇಲೆ ಒಂಚೂರು ನಿಂಬೆ ರಸ ಹಿಂಡಿ ಎಲ್ಲವನ್ನು ಮಡಿಚಿ ಬಾಯಿಗಿಟ್ಟು ಜಗಿಯಿರಿ ಎಂದರು. ಅವರು ಹೇಳಿದಂತೆ ತಿಂದಾಗ ಒಂದು ಬಗೆಯ ವಿಚಿತ್ರ ರುಚಿ ಸಿಕ್ಕಿತು. ಆಗ ತಾರಿ, `ಎಲ್ಲರಿಗೂ ಇಷ್ಟವಾಯ್ತಾ?~ ಅನ್ನುತ್ತಲೇ `ಈ ಎಲೆಗೆ ಮೆಣಸಿನಕಾಯಿ ಬಿಟ್ಟು ಗುಲ್ಕನ್ ಸೇರಿಸಿ ತಿಂದರೆ ಬೇರೆಯದೇ ರುಚಿ ಸಿಕ್ಕುತ್ತದೆ. ಭಾರತದಲ್ಲಿ ಊಟ ಆದನಂತರ ಎಲೆ ಅಡಿಕೆ ಮೆಲ್ಲುವಂತೆ ಥಾಯ್ ರಾಜ ಮನೆತನವರು ಲೆಟಿಸ್ ಎಲೆಯನ್ನು ಮೆಲ್ಲುತ್ತಾರೆ~ ಎಂದರು.

ನಂತರ ಒಂದರ ಹಿಂದೆ ಒಂದರಂತೆ ತಾರಿ ಅಜ್ಜಿಯ ಕೈಯಲ್ಲಿ ವಿಶೇಷವಾಗಿ ಸಿದ್ದಗೊಂಡಿದ್ದ ಥಾಯ್ ತಿನಿಸುಗಳು ಅಡುಗೆಮನೆಯಿಂದ ತಟ್ಟೆಗೆ, ತಟ್ಟೆಯಿಂದ ಹೊಟ್ಟೆಗೆ ರವಾನೆ ಆಗ ತೊಡಗಿದವು. ಮೊದಲಿಗೆ ಬಂದ ಸ್ಟಾಟರ್ಸ್‌ನಲ್ಲಿದ್ದ ಟುಂಗ್ ಟಾಂಗ್ ಆಕಾರ ಹಾಗೂ ರುಚಿಯಿಂದ ಇಷ್ಟವಾಯಿತು. ಟುಂಗ್ ಟಾಂಗ್‌ನ ತುಣುಕೊಂದನ್ನು ಕೈಯಲ್ಲಿ ಹಿಡಿದುಕೊಂಡ ತಾರಿ, `ಇದನ್ನು ಮನಿ ಬ್ಯಾಗ್ ಅಂತಲೂ ಕರೆಯುತ್ತಾರೆ. ಪುಟ್ಟ ಪುಟ್ಟದಾಗಿರುವ ಟುಂಗ್ ಟಾಂಗ್ ಇಲ್ಲಿ ಜನಪ್ರಿಯವಾಗಿರುವ ಸಮೋಸಾ ನೆನಪಿಸುತ್ತದೆ. ಆದರೆ ಟುಂಗ್ ಟಾಂಗ್‌ನದ್ದು ಸಮೋಸಾಗಿಂತ ಭಿನ್ನ ರುಚಿ. ಹಿಟ್ಟನ್ನು ಹದವಾಗಿ ನಾದಿ ಅದರೊಳಕ್ಕೆ ಸಣ್ಣಗೆ ಹೆಚ್ಚಿದ ತರಕಾರಿ ಹಾಗೂ ಚೆಸ್ಟ್‌ನೆಟ್ ಹಣ್ಣನ್ನು ಸೇರಿಸಿ ಆಲಿವ್ ಎಣ್ಣೆಯಲ್ಲಿ ಕರಿಯುತ್ತೇವೆ. ಆನಂತರ ಅದನ್ನು ಚೀಲದ ರೀತಿಯಲ್ಲಿ ಮೇಲ್ಭಾಗದಲ್ಲಿ ಗರಿಕೆಯಿಂದ ಕಟ್ಟಿ ತಟ್ಟೆಯಲ್ಲಿಟ್ಟು ಕೊಡುತ್ತೇವೆ. ಇದನ್ನು ಸ್ವೀಟ್ ಚಿಲ್ಲಿ ಸಾಸ್‌ನಲ್ಲಿ ಅದ್ದಿ ತಿಂದರೇ ರುಚಿ ಇಮ್ಮಡಿಸುತ್ತದೆ~ ಎನ್ನುತ್ತಾ ಕೈಯಲ್ಲಿದ್ದ ಟುಂಗ್ ಟಾಂಗ್‌ನ್ನು ಗುಳುಂ ಮಾಡಿದರು.

ಟುಂಗ್ ಟಾಂಗ್‌ನ ನಂತರದ ಸರದಿ ಅಕ್ಕಿ ಹಿಟ್ಟಿನಿಂದ ತಯಾರಾದ ಸಣ್ಣ ಸಣ್ಣ ಕುಂಡಗಳಲ್ಲಿ ಜೋಳ, ಹಸಿರು ಬಟಾಣಿಗಳಿಂದ ಕೂಡಿದ ಗ್ರಾಥೊಂಗ್ ಥೊಂಗ್ ಜೆ, ಗೂಂಗ್ ಸರೊಂಗ್ ಮತ್ತು ಲ ಥೈಂಗ್‌ನದ್ದು.

ಸ್ಟಾಟರ್ಸ್ ಮುಗಿದು ಮುಖ್ಯ ಖಾದ್ಯಗಳು ಬಂದಾಗ, ಥಾಯ್ ಸಮುದ್ರದಲ್ಲಿ ಸಿಗುವ ಕ್ಯಾಟ್‌ಫಿಷ್ಶನ್ನು ಗರಿಗರಿಯಾಗಿ ಕರಿದು ಅದಕ್ಕೊಂದಿಷ್ಟು ಮೆಣಸು, ಉಪ್ಪು ಹಾಕಿ ಅಮೇಲೆ ಅದರ ಕಚ್ಚಾ ಮಾವಿನ ತುರಿಯನ್ನು ಉದುರಿಸಿ ಇದರ ಜತೆಗೊಂದಿಷ್ಟು ತರಕಾರಿ ಸಲಾಡ್ ಹಾಕಿ ತಯಾರಿಸುವ ಯಮ್ ಪ್ಲಾ ಡುಕ್ ಫೂ ತಂದಿಟ್ಟು `ಇದರ ರುಚಿ ನೋಡಿ~ ಅಂದರು. ಒಗರು ಒಗರಾಗಿದ್ದ ಆ ತಿನಿಸು ಅಷ್ಟೇನೂ ರುಚಿಯಾಗಿರಲಿಲ್ಲ. ಆದರೆ ಆನಂತರ ಬಂದ ಖಾವೊ ಮಾಕ್ ರುಚಿಯಾಗಿತ್ತು. ಇದು ಥಾಯ್‌ನ ಜನಪ್ರಿಯ ತಿನಿಸು. ಇದು ಇಸ್ಲಾಮಿಕ್ ಅಡುಗೆ ಮನೆಯಿಂದ ಪ್ರೇರಣೆ ಪಡೆದಿದೆಯಂತೆ.

ಸುವಾಸನೆಯುಕ್ತ ಅಕ್ಕಿಗೆ `ನಳ್ಳಿ ಮಾಂಸ~ (ಏಡಿ ಮಾಂಸ) ಸೇರಿಸಿ, ಖಾರಕ್ಕೆಂದು ಬೆಳ್ಳುಳ್ಳಿ ಮೆಣಸು ಬೆರೆಸಿ ಖಾವೊ ಮಾಕ್ ತಯಾರಿಸಲಾಗುತ್ತದೆ. ಸಿದ್ಧವಾದ ಬಿರಿಯಾನಿಯನ್ನು ತಟ್ಟೆಗೆ ಹಾಕಿ ಅದರ ಮೇಲೆ ಟೊಮೊಟೊ, ಈರುಳ್ಳಿ ಜತೆಗೆ ಆಮ್ಲೆಟ್ ಹಾಕಿ ಸಿಂಗರಿಸಿಕೊಡುತ್ತಾರೆ.

 `ಪ್ಲಾ ಫದ್ ಫ್ರಿಕ್ ಕಿಂಗ್~ ತಿನಿಸು ಮೀನಿನ ಖಾದ್ಯ. ಇದನ್ನು ಚೆನ್ನಾಗಿ ಒಗ್ಗರಣೆ ಹಾಕಿ ಬೇಯಿಸಿ ನಂತರ ಸಾಸ್‌ನಲ್ಲಿ ಅದ್ದಿ ತಯಾರಿಸಲಾಗುತ್ತದೆ. ಇದನ್ನು ತಿನ್ನುವಾಗ ಮಂಚೂರಿ ತಿಂದಂತೆ ಆಗುತ್ತದೆ. ಇದರ ಜತೆಗೆ ಅಣಬೆ, ಬಾಸಿಲ್ ಸಾಸ್‌ನಿಂದ ತಯಾರಾದ `ಹೆಡ್ ಥೊ ಫಾಡ್ ಬೈಗ್ರಾಫ್ರೊ~ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತಾರಿ ವಿವರಿಸಿದರು. 

ಥಾಯ್ಲೆಂಡ್‌ನ ಸವಿರುಚಿಯನ್ನು ಬೆಂಗಳೂರಿಗೆ ಪರಿಚಯಿಸುವ ಉದ್ದೇಶದಿಂದ `ಬೆಂಜರಂಗ್ ರೆಸ್ಟೊರಾ~ `ರಾಯಲ್ ಥಾಯ್ ಫುಡ್ ಫೆಸ್ಟಿವಲ್~ ಆಯೋಜಿಸಿದೆ. ಥಾಯ್ಲೆಂಡ್‌ನ ಪಾಕತಜ್ಞೆ ತಾರಿ ಚಾರುಪಸ್ ಬೆಂಜರಂಗ್‌ನ ಮುಖ್ಯ ಬಾಣಸಿಗ ರಾಮ್‌ಕುಮಾರ್ ಅವರ ಜತೆಗೂಡಿ ಈ ಆಹಾರ ಉತ್ಸವವನ್ನು ನಡೆಸಿಕೊಡಲಿದ್ದಾರೆ. `ಎ ಥಾಯ್ ಹಾರ್ನ್ ಚಾವೊ ವಾಂಗ್~ ಎಂದು ಪ್ರಸಿದ್ಧವಾಗಿರುವ ರಾಯಲ್ ಥಾಯ್ ಪಾಕಶಾಲೆಯಲ್ಲಿ ತಯಾರಾಗುವ ನಾನಾ ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಥಾಯ್ ವಿಶೇಷ `ಮೆನು~ವು ಸಸ್ಯಾಹಾರ ಹಾಗೂ ಮಾಂಸಹಾರ ಎರಡನ್ನೂ ಒಳಗೊಂಡಿದೆ.

ಉತ್ಸವದ ಸಲುವಾಗಿ ರೆಸ್ಟೊರಾವನ್ನು ಥಾಯ್ ರೆಸ್ಟೋರೆಂಟ್ ಮಾದರಿಯಲ್ಲೇ ಸಿಂಗರಿಸಲಾಗಿದೆ. ಸ್ವಾಗತಕಾರಿಣಿ, ಸ್ಟೀವ್‌ಆರ್ಡರ್‌ಗಳು ಎಲ್ಲರೂ ಅಲ್ಲಿಯವರೇ.

ಬೆಂಜರಾಂಗ್‌ನಲ್ಲಿ ಥಾಯ್ ರಾಜರ ಊಟದ ಸವಿ ಸವಿದು ಹೊರಬರುವಾಗ ಮುಂಭಾಗದಲ್ಲಿ ಥಾಯ್ ಹುಡುಗಿಯೊಬ್ಬಳು ಸೋಫಾ ಮೇಲೆ ಕಾಲು ಮಡಚಿ ಕುಳಿತು ಒರಿಗಾಮಿ ಕಲೆಯಲ್ಲಿ ನಿರತವಾಗಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಒಮ್ಮಮ್ಮೆ ಆಕೆ ತಲೆ ಎತ್ತಿದಾಗ ಎದುರಿಗೆ ಸಿಕ್ಕವರಿಗೆ ಕಿರುನಗು ಬೀರುತ್ತಾಳೆ. ಊಟ ಮಾಡಿ ಹೊರ ಬರುವಾಗ ಗ್ರಾಹಕರಿಗೆ ಸಿಕ್ಕುವ ಥಾಯ್ ಹುಡುಗಿಯ ನಗು ಬೋನಸ್!   

ಸ್ಥಳ: ಬೆಂಜರಂಗ್, 1/3. ಹಲಸೂರು ರಸ್ತೆ, ಮಣಿಪಾಲ್ ಸೆಂಟರ್ ಹತ್ತಿರ, ಹಲಸೂರು. ಮಾಹಿತಿ ಮತ್ತು ಟೇಬಲ್ ಕಾಯ್ದಿರಿಸಲು: 3221 7201. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT