ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಿಹೊಲ್ದಾಗ ಬೆಳದೈತಿ ಮಾಲದಂಡಿ!

Last Updated 13 ಜನವರಿ 2012, 9:55 IST
ಅಕ್ಷರ ಗಾತ್ರ

ಕುಷ್ಟಗಿ: ಮಾತೆತ್ತಿದರೆ ಈ ಬಾರಿ ತಾಲ್ಲೂಕಿನಲ್ಲಿ ಒಣ ಬರ ಹಿಂಗಾರಿ ಅವಧಿಯಲ್ಲಂತೂ ಮತ್ತಷ್ಟು ಭೀಕರ. ಕಡಿಮೆ ತೇವಾಂಶದಲ್ಲಿ ಬಿತ್ತಿದ ಬೆಳೆಗಳು ಕಮರಿ ಹೋದವು, ಹಾಗಾಗಿ ಎರೆ ಹೊಲದಲ್ಲಿ ಬೆಳೆ ಇಲ್ಲ, ಜನರಿಗೆ ಹಿಡಿಯಷ್ಟು ಜೋಳ ದನಗಳಿಗೆ ಹೊರೆ ಮೇವು ಕೇಳಲೇ ಬಾರದಂಥ ಸ್ಥಿತಿ. ಭವಿಷ್ಯದ ಬದುಕಿನ ಚಿಂತೆಯಲ್ಲಿ ತಲೆಮೇಲೆ ಕೈಹೊತ್ತು ಕುಳಿತರ ರೈತರೇ ಹೆಚ್ಚು ಕಾಣಸಿಗುತ್ತಾರೆ.

ಇಂಥ ಸಂದಿಗ್ದ ಪರಿಸ್ಥಿತಿಯಲ್ಲೂ ತಾಲ್ಲೂಕಿನ ಬಸಾಪುರ, ತೆಗ್ಗಿಹಾಳ, ಕೆ.ಹೊಸೂರು, ಗೋನಾಳ ಭಾಗದ ಕೆಲ ರೈತರ ಹೊಲಗಳು ಹಸಿರುಹೊದ್ದಿವೆ, ಅಷ್ಟೇ ಅಲ್ಲ ಮುತ್ತಿನಂಥ ಕಾಳುಹೊತ್ತು ನಿಂತಿರುವ ಮಾಲದಂಡಿ ಜೋಳದ ತೆನೆಗಳು ಗಮನಸೆಳೆಯುತ್ತಿವೆ ಎಂದರೆ ಅಚ್ಚರಿ ಪಡಬೇಕಿಲ್ಲ. ಹೊಲಗಳು ಮರಳುಗಾಡಿನಲ್ಲೂ ಓಯೆಸಿಸ್‌ನಂತೆ ಕಂಗೊಳಿಸುತ್ತಿರುವುದು ಅಪರೂಪದ ಸಂಗತಿ.

ಇದು ಪವಾಡವಲ್ಲ, ಕಾರಣ ಇಷ್ಟೆ, ಬರಗಾಲದಲ್ಲೂ ಹರಿಯುವ, ಬೇಸಿಗೆಯಲ್ಲೂ ಬತ್ತದ ಹಳ್ಳ ಈ ಗ್ರಾಮಗಳ ಪಕ್ಕದ ಕೆಲ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ಎಲ್ಲರಿಗೂ ಅಲ್ಲ, ಕೆಲ ಛಲವಂತ ರೈತರ ಜಾಣ್ಮೆ ಮತ್ತು ಪರಿಶ್ರಮದ ಫಲವಾಗಿ ಫಸಲು ಕೈಗೆ ಬರುವುದರಲ್ಲಿದೆ, ವ್ಯರ್ಥವಾಗಿ ಹರಿದುಹೋಗುವ ಹಳ್ಳದ ನೀರನ್ನೇ ಸದ್ಬಳಕೆ ಮಾಡಿಕೊಂಡಿರುವ ಈ ರೈತರ ಪಯತ್ನ ಇತರರಿಗೆ ಮಾದರಿ.

ಉದಾಹರಣೆಗೆ ಹೇಳುವುದಾದರೆ, ಕೆ.ಹೊಸೂರು ಗ್ರಾಮದ ರೈತ ಕಳಕಪ್ಪ ತೆಮ್ಮಿನಾಳ ಕೊಳವೆಬಾವಿ ತೋಡಿದರೂ ಅದರಲ್ಲಿನ ನೀರು ಹೊಲಕ್ಕೆ ಹಿಡಿಸಲಿಲ್ಲ. ಹೊಲ ಜವುಳಾಗತೊಡಗಿದಾಗ ಪಂಪ್‌ಸೆಟ್ ಮನೆಯಲ್ಲಿಟ್ಟಿದ್ದ. ಹಿಂಗಾರಿನಲ್ಲಿ ಜೋಳ ಬಿತ್ತಿದರೂ ನಾಟಿದ ಬೆಳೆ ತೇವಾಂಶ ಕೊರತೆಯಿಂದ ಮೇಲೇಳಲಿಲ್ಲ. ಆಗ ಹೊಳೆದ ಯೋಚನೆ `ಈ ಹಳ್ಳದ ನೀರನ್ನ ಯಾಕ ನಾ ಹೊಲಕ್ಕ ಹರಿಸಿಕೊಳ್ಳಬಾರದು?~ ಎಂದೆ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟ.

ಮನೆಯಲ್ಲಿದ್ದ ಪಂಪ್‌ಸೆಟ್‌ನ್ನು ಹಳ್ಳದ ದಂಡೆಯಲ್ಲಿ ಚಕ್ಕಡಿಯಲ್ಲಿಟ್ಟು ಹಳ್ಳದ ನೀರನ್ನು ಕಲ್ಲು ಒಡ್ಡಿನಿಂದಿ ಹಿಡಿದು, ಎರಡು ಮೂರು ಬಾರಿ ನೀರು ಹಾಯಿಸಿದ ಈ ರೈತನ ಎಂಟು ಎಕರೆಯಲ್ಲಿನ ಹೊಲದಲ್ಲಿ ಬಿಳಿಜೋಳ ಬಂಗಾರದ ಬೆಳೆಯಾಗಿ ನಿಂತಿದೆ. ಕನಿಷ್ಟವೆಂದರೂ ಐವತ್ತು ಕ್ವಿಂಟಲ್ ಖಾತರಿ ಎಂದರಿತ ಕಳಕಪ್ಪ ಸಖತ್ ಖುಷಿಯಾಗಿದ್ದಾನೆ.

ಕಳಕಪ್ಪ ಮಾತ್ರವಲ್ಲದೇ ಹಳ್ಳದ ದಂಡೆಯಲ್ಲಿರುವ ಇನ್ನೂ ಕೆಲ ಗ್ರಾಮಗಳ ಬೆರಳೆಣಿಕ ರೈತರು ಇದೇ ಮಾದರಿಯನ್ನೆ ಅನುಸರಿಸಿದ್ದಾರೆ. ಆಯಿಲ್ ಎಂಜಿನ್ ಪಂಪ್‌ಸೆಟ್‌ಗಳನ್ನು ಬಾಡಿಗೆಗೆ ತಂದು ಒಂದೆರಡು ಬಾರಿ ನೀರುಣಿಸಿದ್ದರಿಂದ ಹೊಲಗಳು ನಳನಳಿಸುತ್ತಿರುವುದು ಇತರೆ ರೈತರ ಬಾಯಲ್ಲಿ ನೀರೂರುವಂತೆ ಮಾಡಿದೆ. ಕಣ್ಮನ ತಣಿಸುತ್ತಿರುವ ಈ ಹೊಲಗಳನ್ನೊಮ್ಮೆ ಇತರೇ ರೈತರು ನೋಡಿ ಬರಬಹುದಲ್ಲವೇ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT