ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಕರುಗಳಿಗೆ ಹಸಿರು ಹಬ್ಬ

Last Updated 20 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಶಿರಾ: ಬರದಿಂದ ಮೇವಿಲ್ಲದೆ ತತ್ತರಿಸಿದ್ದ ಜಾನುವಾರುಗಳಿಗೀಗ ಥರಾವರಿ ಹುಲ್ಲಿನ ಹಸಿರು ಮೇವಿನ ಹಬ್ಬ ಶುರುವಾಗಿದೆ! ಹೌದು, ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಬರ ಆವರಿಸಿದ್ದರಿಂದ ರೈತರು ಮೇವು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಾನುವಾರು ರಕ್ಷಣೆಗೆ ತೀವ್ರವಾಗಿ ಪರದಾಡಬೇಕಾಯಿತು.

ಅನೇಕರು ಸಿಕ್ಕಷ್ಟು ಬೆಲೆಗೆ ಕಸಾಯಿಖಾನೆಗೆ ರಾಸುಗಳನ್ನು ಮಾರಾಟ ಮಾಡಿದ್ದರು. ಆಗ ನೆರವಿಗೆ ಬಂದ ಸರ್ಕಾರ ಗೋಶಾಲೆ ಆರಂಭಿಸಿತು. ಆದರೆ ಗೋಶಾಲೆಗಳನ್ನು ತೆರೆದಷ್ಟೇ ವೇಗದಲ್ಲಿ ಮುಚ್ಚಲಾಯಿತು.

ಮಳೆ ಬಗ್ಗೆ `ಮನುಷ್ಯರನ್ನು ನೋಡಿ ಬರಬೇಡ ಮಳೆರಾಯ; ಅಂಬಾ ಅನ್ನುವ ದನಕರುಗಳನ್ನಾದರೂ ನೋಡಿ ಬಾ...~ ಎಂಬ ಮಾತು ಇದೆ. ವರುಣ ದೇವರಿಗೆ ದನಕರುಗಳ ಕೂಗು ಮುಟ್ಟಿತು ಎಂದು ಕಾಣುತ್ತದೆ; ಎರಡು ಹದ ಉತ್ತಮ ಮಳೆ ಬಂದಿತು.

ಮೊದಲ ಹದಕ್ಕೆ ರೈತರು ಬಿತ್ತನೆ ಮಾಡಿಕೊಂಡರು. ಮತ್ತೊಂದು ಹದಕ್ಕೆ ಕಳೆ ನಿಯಂತ್ರಣಕ್ಕೆಂದು ಎಡೆಕುಂಟೆ ಹೊಡೆಯುತ್ತಿದ್ದಾರೆ. ಆದರೆ ಹೊಲದ ಕಳೆ ಹುಲ್ಲು ಜಾನುವಾರುಗಳಿಗೆ ಉತ್ಕೃಷ್ಟ ಮೇವು ಆಗಿದೆ.

ಮುಂಜಾನೆ ಎದ್ದು ಹೊಲಕ್ಕೆ ಹೋದ ರೈತರು- ರೈತ ಮಹಿಳೆಯರು ಒಂದೆರಡು ತಾಸಿನಲ್ಲೇ ಒಂದು ಹೊರೆ ಹಸಿರು ಹುಲ್ಲು ಕಿತ್ತು ಮನೆಗೆ ತರುತ್ತಾರೆ. ಇದು ಒಂದೆಡೆ ಬೆಳೆಗೆ ಕಳೆ ನಿಯಂತ್ರಣವಾದರೆ, ಮತ್ತೊಂದೆಡೆ ಜಾನುವಾರುಗಳಿಗೆ ಸಂತೃಪ್ತ ಹಸಿರು ಮೇವು ಆಗುತ್ತಿದೆ.

ನಿಜಕ್ಕೂ ಹೊಲದಲ್ಲಿ ಕಳೆಯಾಗಿ ಬೆಳೆಯುವ ಹುಲ್ಲು ಜಾನುವಾರುಗಳಿಗೆ ಪುಷ್ಟಿ ನೀಡುವ ಮೇವೇ ಆಗಿದೆ. ಜಾನುವಾರು ಪ್ರಿಯ ರೈತರಂತೂ ಪತ್ರೆಯಂಥ ಹುಲ್ಲು ಎಂದು ಬಾಯಿ ಚಪ್ಪರಿಸಿಕೊಂಡು ಹುಲ್ಲು ಕೀಳುವುದು ಕಂಡುಬರುತ್ತದೆ. ಅಂದರೆ ಉತ್ತಮ ತಳಿಯ ಹೋರಿ- ಹೋರಿ ಕರ ಕಟ್ಟಿಕೊಂಡ ರೈತರು ತಪರೆ ಹುಲ್ಲು- ಗರಿಕೆಯಂಥ ಉತ್ತಮ ಸ್ವಾದದ ಹುಲ್ಲು ಆಯ್ಕೆ ಮಾಡಿಕೊಂಡರೆ, ಎಮ್ಮೆ ಕಟ್ಟಿಕೊಂಡ ರೈತರು ಎಂಥದ್ದಾರೂ ತಿನ್ನುತ್ತವೆ ಎಂದು ಗಂಟಿನ ಹಲಬು ಸೇರಿದಂತೆ ಎಲ್ಲ ರೀತಿಯ ಹುಲ್ಲು ಕೀಳುತ್ತಾರೆ.

ಹೀಗೆ ಸ್ವಾದಿಷ್ಟ ಹುಲ್ಲು ತಿನ್ನುವ ಹೋರಿ- ಹೋರಿ ಕರಗಳು ಸೇರಿದಂತೆ ಬೇಸಾಯದ ದನಗಳು ಖಂಡಗಟ್ಟುತ್ತಿದ್ದರೆ, ಹಾಲು ಕೊಡುವ ಜಾನುವಾರುಗಳು ತುಸು ಹೆಚ್ಚು ಹಾಲು ಕರೆಯುತ್ತಿವೆ. ಆದರೆ ಹಾಲಿನ ಬೆಲೆ ಕುಸಿದಿರುವುದು ರೈತರಿಗೆ ಮತ್ತೊಂದು ಹೊಡೆತವಾಗಿದೆ.

ಈ ಮಧ್ಯೆ ಇನ್ನೂ ಕನಿಷ್ಠ ಎರಡು- ಮೂರು ಹದವಾದರೂ ಉತ್ತಮ ಮಳೆ ಬಂದರೆ ರೈತರಿಗೆ ಸಂತುಷ್ಟ ಫಸಲು ಕೈಗೆ ಸಿಗುವುದಲ್ಲದೆ ಹಸಿರು ಹುಲ್ಲು ಮೇಯ್ದ ದನಗಳು ಮುಂದಿನ ದೀವಳಿಗೆ ಹಬ್ಬದ ಹೊತ್ತಿಗೆ ಹುಡ್ರಿಕೆ ಹೊಡೆಯುವುದು ನಿಶ್ಚಿತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT