ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆಕೋರರಾದ ರಾಜಕಾರಣಿಗಳು, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಂಪಾ ವಿಷಾದ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುತ್ತಿರುವ ರಾಜಕಾರಣಿಗಳು ನಾಡು, ನುಡಿ, ಸಂಸ್ಕತಿಯನ್ನು ಕೊಳ್ಳೆ ಹೊಡೆಯುವ ದರೋಡೆಕೋರರಾಗಿ ಪರಿವರ್ತನೆಗೊಂಡಿರುವುದು ಈ ಕಾಲಘಟ್ಟದ ದುರಂತ~ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವಿಷಾದಿಸಿದರು.

ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪ್ರಸ್ತುತ ದಿನಗಳಲ್ಲಿ ಬರಹಗಾರ ಮತ್ತು ಓದುಗನ ನಡುವೆ ಇರುವ ಕಂದಕ ಅಗಾಧವಾಗಿದ್ದು, ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೂ ಅತ್ತಿಮಬ್ಬೆ ಪ್ರತಿಷ್ಠಾನವು ಪುರಸ್ಕಾರ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ~ ಎಂದು ಶ್ಲಾಘಿಸಿದರು.

`ರಾಜಕಾರಣಿಗಳು ಸಾಹಿತ್ಯದಿಂದ ತ್ಯಾಗದಂತಹ ಮಹೋನ್ನತ ಗುಣವನ್ನು ಕಲಿಯುವ ಅವಶ್ಯಕತೆಯಿಲ್ಲ. ಅವರು ಈಗಾಗಲೇ ಮಾನ, ಮರ್ಯಾದೆ, ಸಂಕೋಚದಂತಹ ಗುಣಗಳನ್ನು ತ್ಯಾಗ ಮಾಡಿ ಪರಪ್ಪನ ಅಗ್ರಹಾರಕ್ಕೆ ಹೊರಡಲು ಆರಂಭಿಸಿದ್ದಾರೆ~ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ದಾನ ಚಿಂತಾಮಣಿ ಅತ್ತಿಮಬ್ಬೆ ಅವರು ತಾಳೆ ಗರಿಯಲ್ಲಿ ಬರೆದ ಸಾಹಿತ್ಯವು ಅದ್ಭುತವಾಗಿದ್ದು, ಗ್ರಂಥಾಲಯ ಚಳವಳಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇವರ ಹೆಸರಿನಲ್ಲಿ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ~ ಎಂದರು.

`ಮಹಿಳೆಯರನ್ನು ಸಬಲರನ್ನಾಗಿ ಮಾಡುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎಂಬುದಕ್ಕೆ ಶೇ 33ರಷ್ಟು ಮೀಸಲಾತಿ ಜಾರಿಯಾಗದೇ ಇರುವುದೇ ಉತ್ತಮ ಉದಾಹರಣೆ. ಈ ನಿಟ್ಟಿನಲ್ಲಿ ನಿಜವಾದ ಪ್ರಯತ್ನ ನಡೆಯಬೇಕು~ ಎಂದರು.

ಎ.ಕೆ.ರಾಮೇಶ್ವರ ಮತ್ತು ಭಾಗ್ಯ ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೊ.ಶ್ರೀ. ವಸಂತಕುಮಾರ ಅವರ `ಭರತ ಚಕ್ರವರ್ತಿಯ ತ್ಯಾಗಪರ್ವ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಸಾ.ಶಿ.ಮರುಳಯ್ಯ, ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕಿ ಪಿ.ಮನೋಹರಿ ಪಾರ್ಥಸಾರಥಿ, ಹಿರಿಯ ಲೇಖಕಿ ಡಾ.ವರದಾ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

ಶಾಸ್ತ್ರೀಯ ಸ್ಥಾನಮಾನ: ರಾಜಶೇಖರನ್ ಶ್ರಮ
`ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವಲ್ಲಿ ನಿಜವಾಗಿ ಶ್ರಮ ವಹಿಸಿದವರು ಎಂ.ವಿ.ರಾಜಶೇಖರನ್. ಆದರೆ ಕೆಲವು ಸಾಹಿತಿಗಳು ಈ ಹೆಸರಿನಲ್ಲಿ ಉಪವಾಸ, ಹೋರಾಟದ ಮೂಲಕ ಹೆಸರು ಗಿಟ್ಟಿಸಿದರು~ ಎಂದು ಪ್ರೊ.ಚಂದ್ರಶೇಖರ ಪಾಟೀಲ  ಪರೋಕ್ಷವಾಗಿ ಟೀಕಿಸಿದರು.

`ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಯೇ ರಾಜಶೇಖರನ್ ಅವರು ಶಾಸ್ತ್ರೀಯ ಸ್ಥಾನಮಾನವನ್ನು ತಂದುಕೊಡುವ ಪ್ರಕ್ರಿಯೆಯಲ್ಲಿ ಸತತವಾಗಿ ತೊಡಗಿಸಿಕೊಂಡು ಯಶಸ್ಸು ನೀಡುವಲ್ಲಿ ಮುಂದಾಳತ್ವ ವಹಿಸಿದರು. ಇದನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿದೆ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT