ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಆಶಾಕಿರಣ ಇಂಗ್ಲಿಷ್ ದೇವತೆ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 25, 2006ರಂದು ಇಂಗ್ಲಿಷ್ ಭಾಷೆ ‘ದೇವಿ’ಯಾಗಿ ಅವತರಿಸಿತು. ಅದು ಚಾರಿತ್ರಿಕವಾಗಿ ಮಹತ್ವದ ದಿನ. ಯಾಕೆಂದರೆ ಅದು ಲಾರ್ಡ್ ಮೆಕಾಲೆ ಹುಟ್ಟಿದ ದಿನ. ಅಂದು, ಭಾರತದಲ್ಲಿ ಮೆಕಾಲೆಯ 206ನೇ ಹುಟ್ಟುಹಬ್ಬವನ್ನು ಆಚರಿಸಿದ್ದಲ್ಲದೆ, ಉತ್ತರಪ್ರದೇಶದ ಲಖಿಂಪುರ-ಖೇರಿ ಜಿಲ್ಲೆಯ ಬಂಕಾ ಗ್ರಾಮದಲ್ಲಿ ಇಂಗ್ಲಿಷ್ ಮಾತೆಗೆ ದೇವಸ್ಥಾನವನ್ನೂ ಕಟ್ಟಿಸಲಾಯ್ತು. ಇದರ ರೂವಾರಿ ದಲಿತ ಚಿಂತಕ ಚಂದ್ರಭಾನ್ ಪ್ರಸಾದ್.

‘ಇಂಗ್ಲಿಷ್ ದೇವಿ’ ಅವರತರಣಿಕೆಯ ಹಿಂದೆ ಕೆಲವು ಮಹತ್ವದ ಉದ್ದೇಶಗಳಿವೆ. ಅವುಗಳೆಂದರೆ:

1. ದಲಿತ/ಆದಿವಾಸಿ ಸಮುದಾಯಗಳಲ್ಲಿ ಹುಟ್ಟುವ ಪ್ರತಿಯೊಂದು ಹಸುಗೂಸು ತನ್ನ ತಾಯಿ-ತಂದೆಯ ಬಾಯಿಂದ ಮೊದಲು ಕೇಳುವ ದನಿಗಳು ಇಂಗ್ಲಿಷ್ ಶಬ್ದಗಳೇ -ಎಬಿಸಿಡಿ- ಆಗಿರಬೇಕು.

2. ಈ ಮಕ್ಕಳು ಮೊಟ್ಟಮೊದಲು ನೋಡಬೇಕಾದದ್ದು ಇಂಗ್ಲಿಷ್ ದೇವಿಯ ಪ್ರತಿಮೆಯನ್ನು.

3. ಪ್ರತಿ ವರ್ಷ ಅ.25ರಂದು ‘ಭಗವತಿ ಜಾಗರಣೆ’ ಮಾಡಬೇಕು. ಅಂದರೆ, ಆ ದಿನವನ್ನು ಧಾರ್ಮಿಕ ಆಚರಣೆಯನ್ನಾಗಿ ಕೊಂಡಾಡಬೇಕು.

4. ದಲಿತರು ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮೂಲಕ ಶಿಕ್ಷಣ ಕೊಡಿಸಬೇಕು. 
ಇವು ಮೇಲ್ನೋಟಕ್ಕೆ ಅತಿರೇಕದ ಗುರಿಗಳಾಗಿ ಕಾಣುತ್ತವೆ. ಆದರೆ, ಹಾಗೆನ್ನುವುದು ಅವಸರದ ತೀರ್ಮಾನವಾಗುತ್ತದೆ. ಇವು ರಾಜಕೀಯ ಪ್ರೇರೇಪಿತ ಉದ್ದೇಶದಂತೆ ಕಂಡರೂ ಈ ಬೆಳವಣಿಗೆಗಳನ್ನು ನಿಗಾವಹಿಸಿ ನೋಡಬೇಕಾಗಿದೆ.

ಇಂಗ್ಲಿಷ್ ಭಾಷೆಯನ್ನು ದೇವತೆಯ ಕಲ್ಪನೆಯಾಗಿ ರೂಪಿಸಿಕೊಳ್ಳುವುದರ ಹಿಂದಿನ ಗುರಿಗಳು ಎಂತಹವು? ದಲಿತ ಚಿಂತಕರು ಇಂತಹ ಗುರಿಗಳನ್ನು ಯಾಕಾಗಿ ಇಟ್ಟುಕೊಂಡಿದ್ದಾರೆ? ಇಂಗ್ಲಿಷ್ ಕಲಿಯುವುದರಿಂದ ದಲಿತರು ನಿಜವಾಗಿಯೂ ಸಾಮಾಜಿಕ-ಸಾಂಸ್ಕೃತಿಕವಾಗಿ ಅನುಭವಿಸುತ್ತಿರುವ ಬಿಕ್ಕಟ್ಟುಗಳಿಂದ ಬಿಡುಗಡೆ ಪಡೆಯಬಲ್ಲರೇ? ಅಥವಾ ಬೇರೊಂದು ಬಗೆಯ ಇಕ್ಕಟ್ಟಿಗೆ ಈ ನಡೆಯು ದಾರಿಯಾಗಬಹುದೇ? ಇಂಥ ಪ್ರಶ್ನೆಗಳು ಇಂಗ್ಲಿಷ್ ಮತ್ತು ದಲಿತರ ನಡುವಣ ನಂಟನ್ನು ಕುರಿತು ಯೋಚಿಸುವಾಗ ಹುಟ್ಟಿಕೊಳ್ಳುತ್ತವೆ. ಏಕೆಂದರೆ ಈ ಎಲ್ಲಾ ಸಂಗತಿಗಳು ಜಾತಿ, ರಾಷ್ಟ್ರೀಯತೆ ಹಾಗೂ ವಸಾಹತುಶಾಹಿ ನಿಲುವುಗಳೊಂದಿಗೆ ಹೆಣೆದುಕೊಂಡಿವೆ.

ಭಾರತದ ಭಾಷೆಗಳು ದಲಿತರನ್ನು ನಡೆಸಿಕೊಂಡ ಬಗೆಯನ್ನು ಬಿಡಿಸಿ ನೋಡಿದರೆ, ಈ ನಡವಳಿಕೆಗೆ ಇಂಗ್ಲಿಷ್ ದೇವತೆಯ ಕಲ್ಪನೆಯು ಪ್ರತಿರೋಧ ಒಡ್ಡುವ ಮಾದರಿಯಾಗಿ ಕಾಣುತ್ತದೆ. ಧಾರ್ಮಿಕ ಪರವಾನಿಗೆಯಿಂದ ಜಾತೀಯತೆ, ಸಾಮಾಜಿಕ-ಧಾರ್ಮಿಕ ಶೋಷಣೆಯಂತಹ ಅಮಾನವೀಯ ಗುಣಗಳನ್ನು ಸಮಾಜದ ಕೆಲವು ವರ್ಗಗಳು ಶತಮಾನಗಳಿಂದ ಕಾಪಾಡಿಕೊಂಡು ಬಂದಿವೆ.

ಇಂತಹ ಸಾಂಸ್ಕೃತಿಕ ಪಿಡುಗುಗಳಿಂದ ಬಿಡುಗಗಡೆ ಹೊಂದುವ ದಾರಿಯಾಗಿಯೂ ಇಂಗ್ಲಿಷ್ ದೇವತೆ ಅವತರಿಸಿದ್ದಾಳೆಂದು ಹೇಳಬಹುದು. ಯಾವ ಧಾರ್ಮಿಕ-ಸಾಂಸ್ಕೃತಿಕ ನೆಲೆಗಳು ದಲಿತರನ್ನು ಅಂಚಿಗೆ ತಳ್ಳಿದ್ದವೋ ಅವೇ ನೆಲೆಗಳನ್ನು ಬಳಸಿಕೊಂಡು ದಲಿತರು ಸಾಮಾಜಿಕ ಮುನ್ನೆಲೆಗೆ ಬರುವ ಪ್ರಯತ್ನವೂ ಇದಾಗಿದೆ. ಒಟ್ಟಿನಲ್ಲಿ ಭಾರತದ ಪ್ರತೀ ಭಾಷೆಯು ದಲಿತರನ್ನು ಹೊರಗಿಟ್ಟು ರೂಪಗೊಂಡಿವೆ. ಇಂತಹ ಬೇಡದ ನೆನಪುಗಳಿಂದ ಕಳಚಿಕೊಳ್ಳುವ ಬಗೆಯಾಗಿಯೂ ಇಂಗ್ಲಿಷ್‌ನ ಹಂಬಲ ತೀವ್ರಗೊಂಡಿದೆ ಎಂದು ಹೇಳಬಹುದು.

ಇಂಗ್ಲಿಷ್‌ಗೆ ದೇವಿ ಸ್ಥಾನ ಕೊಟ್ಟ ಕಲ್ಪನೆ ವಿಚಿತ್ರವಾಗಿ ಕಂಡರೂ ಅದು ಅಸಹಜವೇನೂ ಅಲ್ಲ. ಭಾಷೆಗಳನ್ನು ದೇವತೆ ಅಥವಾ ದೈವತ್ವಕ್ಕೆ ಹೋಲಿಸಿರುವ ಬಗೆಯೂ ಹೊಸತಲ್ಲ. ಕನ್ನಡವನ್ನು ‘ಭುವನೇಶ್ವರಿ’ಯನ್ನಾಗಿ ರೂಪಿಸಿಕೊಂಡ ಭಾವನೆಯೂ ಇಂಥ ನಡವಳಿಕೆಯೇ ಆಗಿದೆ. ಪ್ರಸ್ತುತ, ಇಂಗ್ಲಿಷ್‌ಗೆ ದೇವತೆಯ ಅಸ್ತಿತ್ವವನ್ನು ಯಾಕೆ ಕೊಟ್ಟರು ಅನ್ನುವುದಕ್ಕಿಂತಲೂ ಅದರ ಹಿಂದಿನ ಗುರಿ ಯಾವುದಾಗಿದೆ ಎನ್ನುವುದು ಮುಖ್ಯ. ದಲಿತರು ಇಂಗ್ಲಿಷ್ ಅನ್ನು ತಮ್ಮ ಸಂಸ್ಕೃತಿಯ ಸಂಕೇತವನ್ನಾಗಿ ರೂಪಿಸಿಕೊಳ್ಳುವ ತುಡಿತದಲ್ಲಿರುವ ದಿನಗಳಿವು. ಯಾವುದೇ ವ್ಯವಸ್ಥೆಯು ಸಾಂಸ್ಕೃತಿಕವಾಗಿ ನೆಲೆಯೂರದೇ ಹೋದರೆ ಅದು ಅವರ ಸಾಂಸ್ಕೃತಿಕ ನಂಬಿಕೆಯಾಗಿ ರೂಪಗೊಳ್ಳಲಾರದು ಎನ್ನುವ ಬಲವಾದ ತರ್ಕವೇ ಇಂಗ್ಲಿಷ್ ದೇವತೆಯಂತಹ ಕಲ್ಪನೆಗೆ ಕಾರಣವಾಗಿದೆ.

ದೇವರು/ದೇವತೆಗಳಂತಹ ರಚನೆಗಳು ಭಾವನಾತ್ಮಕ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನಂಟನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸುವ ಕ್ರಮಗಳಾಗಿರುತ್ತವೆ. ಇಂತಹ ತಾರ್ಕಿಕ ನಿಲುವು- ‘ದಲಿತ ಮಹಿಳೆಯು ಒಂದುಸಲ ಇಂಗ್ಲಿಷ್ ದೇವತೆಯನ್ನು ಪೂಜಿಸುವುದಕ್ಕೆ ಮೊದಲಾದರೆ, ಅವಳ ಮಕ್ಕಳು ಎಬಿಸಿಡಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವೇ ಇರುವುದಿಲ್ಲ’ ಎನ್ನುವ ದಲಿತ ಚಿಂತಕ ಚಂದ್ರಭಾನ್ ಪ್ರಸಾದ್ ಅವರ ನಂಬಿಕೆಯ ಅಭಿವ್ಯಕ್ತಿಯಂತಿದೆ.

ಚಂದ್ರಭಾನ್ ಪ್ರಸಾದ್ ಅವರ ನಂಬಿಕೆಗೆ ಪೂರಕವಾಗಿ ಸಾಕಷ್ಟು ಸಮರ್ಥನೆಗಳನ್ನು ನಮ್ಮ ಸಾಂಸ್ಕೃತಿಕ ತಿಳಿವಳಿಕೆಯಿಂದಲೇ ಪಡೆದುಕೊಳ್ಳಬಹುದು. ಆದರೆ ಇಂತಹ ನಂಬಿಕೆಗಳು ಆರಾಧನೆಯ ನೆಲೆಯನ್ನು ಪಡೆದುಕೊಳ್ಳುವ ಬಗೆಯೂ ಆಗಿರುತ್ತವೆ ಹಾಗೂ ಈ ಬಗೆಯ ಆರಾಧನೆಯು ಸಾಂಸ್ಕೃತಿಕ ಇಕ್ಕಟ್ಟುಗಳನ್ನು ಹುಟ್ಟಿಸುವುದಕ್ಕೆ ದಾರಿಯೂ ಆಗಿರುತ್ತೆಂಬುದು ಗಮನಾರ್ಹ. ಕನ್ನಡ ರಾಜ್ಯೋತ್ಸವದಂತಹ ಆಚರಣೆಗಳ ಹಿಂದಿರುವ ತರ್ಕವು ಇಂತಹದೇ ಆಗಿರುತ್ತದೆ. ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಕಾರಣಕ್ಕಾಗಿ ಹುಟ್ಟಿಕೊಂಡ ಇಂತಹ ಮಾದರಿಗಳು ಕಾಲ ಕಳೆದಂತೆ ಆಚರಣೆಗಳಾಗಿ, ಆರಾಧನಾ ಭಾವನೆಗಳನ್ನು ಮೂಡಿಸುವ ಧಾರ್ಮಿಕ ರೂಢಿ-ಸಂಪ್ರದಾಯಗಳಾಗಿ ನೆಲೆಯೂರುತ್ತವೆ. ಧಾರ್ಮಿಕ-ಸಾಂಸ್ಕೃತಿಕ ಲೇಪನದಿಂದಲೇ ಸಂಸ್ಕೃತವು ತನ್ನ ಅಧಿಕಾರ ಸಂಬಂಧಿ ನೆಲೆಗಳನ್ನು ಪಡೆದುಕೊಂಡಿದ್ದು. ಇಂಥ ಬೆಳವಣಿಗೆಗಳಿಗೆ ಪ್ರಭುತ್ವ ಹಾಗೂ ಧರ್ಮಗಳು ಒತ್ತಾಸೆಯಾಗಿ ನಿಲ್ಲುತ್ತವೆ ಹಾಗೂ ಈ ನಡೆಗಳನ್ನು ನೆಲೆಗೊಳಿಸಲು ಪ್ರಭುತ್ವ ಹಾಗೂ ಧರ್ಮಗಳ ನಡುವೆ ಯಾವಾಗಲೂ ಒಂದು ಒಳಒಪ್ಪಂದ ಇದ್ದೇ ಇರುತ್ತದೆ.

ನುಡಿಹಬ್ಬ ಅಥವಾ ಕೊಂಡಾಟಗಳು ಬೇಕೋ ಬೇಡವೋ ಎಂಬ ನೇತ್ಯಾತ್ಮಕ ನಿಲುವಿನ ಚರ್ಚೆಗಳ ಅಗತ್ಯವಿಲ್ಲ. ಇಂತಹ ಆಚರಣೆಗಳು ಯಾಕೆ ಮೊದಲಾಗುತ್ತವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚಿಸುವ ಜರೂರಿದೆ. ನುಡಿಯ ಬಗೆಗೆ ಅತೀಯಾದ ಹೆಮ್ಮೆ, ಬೀಗುವಿಕೆಯನ್ನು ಚರಿತ್ರೆಯುದ್ದಕ್ಕೂ ಕಾಣುತ್ತೇವೆ. (ರಾಜಕೀಯ ಹಾಗೂ ಧಾರ್ಮಿಕ ಶಕ್ತಿಗಳು ಇಂತಹ ನುಡಿಗರ್ವದ ಅವಕಾಶಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ದಿಟ). ಕನ್ನಡಿಗರು ಒಗ್ಗೂಡಿದ ನವೆಂಬರ್ ಒಂದನ್ನು ಕನ್ನಡನುಡಿ ಹಬ್ಬವನ್ನಾಗಿ ಕೊಂಡಾಡುತ್ತಾರೆ. ಆದರೆ ಈ ಬಗೆಯ ಕೊಂಡಾಟಗಳಿಂದ ಏನು ಪ್ರಯೋಜನ ಎಂಬ ಪ್ರಶ್ನೆ ನನ್ನನ್ನು ಬಹುದಿನಗಳಿಂದ ಕಾಡುತ್ತಿದೆ.

ಇಂತಹ ನಿಲುವಿನಿಂದ ಇಂಗ್ಲಿಷ್ ದೇವತೆಯ ಕಲ್ಪನೆ ಹೇಗೆ ಬೇರೆಯಾಗಿದೆ ಎಂಬುದನ್ನು ಬಿಡಿಸಿ ನೋಡುವುದು ಮುಖ್ಯ.
ಇಂಗ್ಲಿಷ್ ದೇವತೆಯ ಕಲ್ಪನೆ ಬೇರೊಂದು ಬಗೆಯ ಸಾಮಾಜಿಕ ಆಚರಣೆಯಾಗಿ ರೂಪುಗೊಳ್ಳುತ್ತಿರುವುದನ್ನು ಗುರುತಿಸಬಹುದು. ಇದನ್ನು ಗಟ್ಟಿಗೊಳಿಸುವ ಸೂಚನೆಗಳು ಆ ಪ್ರಕ್ರಿಯೆಯುದ್ದಕ್ಕೂ ಎದ್ದು ಕಾಣುತ್ತವೆ. ಧರ್ಮ, ಪ್ರಭುತ್ವ ಹಾಗೂ ಬಂಡವಾಳಶಾಹಿಗಳು ಹುಟ್ಟುಹಾಕಿರುವ ಸ್ವ ಮತ್ತು ಅನ್ಯದಂತಹ ವಿಭಜನೆಗಳನ್ನು ಒಡೆದು ಕಟ್ಟುವ ಮಾದರಿಯಾಗಿಯೂ ಈ ದೇವತೆ ಕಲ್ಪನೆಯು ಹುಟ್ಟಿಕೊಂಡಿದೆ. ಏಕೆಂದರೆ, ಇವತ್ತಿನ ಇಂಗ್ಲಿಷ್‌ಗೆ ಯಾವುದೇ ಜಾತಿ ಧರ್ಮದ ನಂಟನ್ನು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ದಲಿತರು ತಮ್ಮ ಏಳ್ಗೆಯನ್ನು ಕಂಡುಕೊಳ್ಳುವುದಕ್ಕೆ ಇಂಗ್ಲಿಷ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರ ಬದುಕಿನ ದಿಕ್ಕುದೆಶೆಗಳನ್ನು ರೂಪಿಸಿಕೊಳ್ಳಲು ದಾರಿಯಾಗುತ್ತದೆ ಅನ್ನುವುದೇ ಅವರ ನಂಬಿಕೆಗೆ ಕಾರಣವಾಗಿದೆ.

ಭಾರತದ ಪ್ರತಿಯೊಂದು ನುಡಿಯ ಒಡಲಲ್ಲೇ ಹಿಂಸೆ, ಕ್ರೌರ್ಯ ಹಾಗೂ ತಾರತಮ್ಯದ ನೆಲೆಗಳು ಹುದುಗಿವೆ. ಇಂತಹ ಅಸಮಾನ ನೆಲೆಗಳಿಂದ ಬಿಡುಗಡೆ ಪಡೆಯಲು ದಲಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಹಾಗೆಂದು ಇಂಗ್ಲಿಷ್‌ನಲ್ಲಿ ಅಸಮಾನ ಧೋರಣೆಗಳು ಇರಲಿಲ್ಲ ಎಂದು  ಹೇಳಲಾಗದು. ಅಲ್ಲೂ ಜನಾಂಗೀಯ ದ್ವೇಷ, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ ಕಾಣಬಹುದಾಗಿದೆ. ಆದರೆ ಇಂತಹ ಅಸಮಾನತೆಗಳಿಂದ ಬಿಡುಗಡೆ ಪಡೆಯುವ ಸಾಧನವಾಗಿಯೂ ಇಂದು ಇಂಗ್ಲಿಷ್ ರೂಪುಗೊಳ್ಳುತ್ತಿದೆ. ವಿಚಿತ್ರವೆಂದರೆ, ಇಂಗ್ಲಿಷ್ ಒಂದೇಕಾಲಕ್ಕೆ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳ ಹುನ್ನಾರವನ್ನು ಸಾಧಿಸುವ ಮಾಧ್ಯಮವಾಗಿದೆ ಹಾಗೂ ಅವುಗಳಿಗೆ ಪ್ರತಿರೋಧ ಒಡ್ಡುವ ಬಗೆಯೂ ಆಗಿದೆ!

ಇಂತಹ ವೈರುಧ್ಯಗಳನ್ನು ಒಳಗೊಂಡಿರುವ ಭಾಷೆಯನ್ನು ದಲಿತರು ಯಾಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಒಂದು ಸಾಂಸ್ಕೃತಿಕ ಸವಾಲಾಗಿಯೇ ಕಾಣುತ್ತದೆ. ಈ ನೆಲೆಯನ್ನು ಒಂದು ಚಾರಿತ್ರಿಕ ನಡೆಯನ್ನು ಆಧರಿಸಿ ಬಿಡಿಸಿ ನೋಡಬಹುದು. ಅದೇನೆಂದರೆ- ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸೇರುವುದರ ಹಿಂದಿನ ತರ್ಕ ಏನಾಗಿತ್ತೋ ಅಂತಹದೇ ಒಂದು ತರ್ಕವು ದಲಿತರು ತಮ್ಮ ಬಿಡುಗಡೆಯ ಭಾಷೆಯಾಗಿ ಇಂಗ್ಲಿಷ್ ಅನ್ನು ಆರಿಸಿಕೊಳ್ಳುವುದರ ಹಿಂದೆ ಅಡಗಿದೆ. ಇಂಗ್ಲಿಷ್ ಕೇವಲ ಭಾರತದುದ್ದಕ್ಕೂ ಹರಡಿಕೊಂಡಿರುವ ದಲಿತರನ್ನು ಒಗ್ಗೂಡಿಸಲು ರೂಪಿಸಿಕೊಂಡ ನೆಟ್‌ವರ್ಕ್ ಭಾಷೆ ಮಾತ್ರವಲ್ಲ ಎಂಬುದು ಗಮನಾರ್ಹ. ಅವರಿಗೆ ಕೇವಲ ನೆಟ್‌ವರ್ಕ್‌ವೊಂದನ್ನು ಬೆಸೆಯುವ ನುಡಿಯ ಅಗತ್ಯವಿದ್ದರೆ ಅದಕ್ಕವರು ಹಿಂದಿಯನ್ನೇ ಆರಿಸಿಕೊಳ್ಳಬಹುದಿತ್ತು. ಆದರೆ ಹಿಂದಿ ಕೂಡ ಸಂಸ್ಕೃತದಷ್ಟೇ ಅಪಾಯಕಾರಿ ಎನ್ನುವುದು ದಲಿತ ಸಮುದಾಯಕ್ಕೆ ಮನದಟ್ಟಾಗಿದೆ.

ಭಾರತದ ಯಾವುದೇ ನುಡಿಯನ್ನು ನೋಡಿದರೂ ಅವು ದಲಿತರ ಸಾಂಸ್ಕೃತಿಕ-ಚಾರಿತ್ರಿಕ ಮಹತ್ವವನ್ನು ವಿವರಿಸುವ ಬದಲಾಗಿ, ದಲಿತರು ಅನುಭವಿಸಿದ ಅವಮಾನ, ಅಸಮಾನತೆ, ದೌರ್ಜನ್ಯ, ಶೋಷಣೆಗಳನ್ನೇ ಮತ್ತೆ ಮತ್ತೆ ನೆನಪಿಸುವ ಬಗೆಗಳಾಗಿವೆ. ಇಂತಹ ಸಾಂಸ್ಕೃತಿಕ-ಚಾರಿತ್ರಿಕ ಕಹಿ ಅನುಭವವನ್ನು ಮರೆಯುವ ಇರಾದೆಯು ಅವರ ಅಂತರಾಳದಲ್ಲಿದೆ. ಅಂಥ ಹೊಸ ಅನುಭವ, ಹೊಸ ಬದುಕೊಂದನ್ನು ರೂಪಿಸಿಕೊಳ್ಳುವದರ ಆಶಾಕಿರಣವಾಗಿ ಅವರಿಗೆ ಇಂಗ್ಲಿಷ್ ಕಾಣಿಸುತ್ತಿದೆ. ವಿಚಿತ್ರವೆಂದರೆ ವಸಾಹತುಶಾಹಿ ಸಂದರ್ಭದಲ್ಲಿ ದಾಸ್ಯವನ್ನು ನೆಲೆಗೊಳಿಸಲು ಮೆಕಾಲೆ ಇಂಗ್ಲಿಷ್ ಅನ್ನು ಶಿಕ್ಷಣದ ಭಾಗವಾಗಿ ಜಾರಿಗೊಳಿಸಿದ್ದನು ಎಂಬ ವದಂತಿಯೊಂದು ರೂಢಿಯಲ್ಲಿದೆ. ಆದರೆ ಅದೇ ಇಂಗ್ಲಿಷ್, ಅಂತಹದೇ ದಾಸ್ಯತನದಿಂದ ಬಿಡುಗಡೆ ಪಡೆಯುವ ಮಾದರಿಯಾಗಿ ದಕ್ಕಿದ್ದು ಅಚ್ಚರಿ ಮೂಡಿಸುವಂತಿದೆ. ಇದು ಚರಿತ್ರೆ ಮುರಿದು ಕಟ್ಟುವ ಬಗೆ ಕೂಡ.

ಭಾಷೆಗೂ ವ್ಯಕ್ತಿ ಸ್ವಾತಂತ್ರ್ಯಕ್ಕೂ ನೇರ ನಂಟಿದೆ. ಮನುಷ್ಯನಿಗೆ ಸಹಜವಾಗಿ ದಕ್ಕಿರುವ ಸ್ವಾತಂತ್ರ್ಯವನ್ನು ಪ್ರಭುತ್ವ ಹಾಗೂ ಧಾರ್ಮಿಕ ಶಕ್ತಿಗಳು ಯಾವಾಗಲೂ ನಿಯಂತ್ರಿಸುವ ಹುನ್ನಾರ ಮಾಡುತ್ತವೆ. ಈ ಸ್ವಾತಂತ್ರ್ಯವು ಮೂರ್ತಗೊಳ್ಳುವ ಬಗೆಯೇ ಭಾಷಿಕ ನೆಲೆಯಿಂದ ಎನ್ನುವುದು ಗಮನಾರ್ಹ. ದಲಿತರಿಗೆ ತಮ್ಮ ಹಕ್ಕು-ಸ್ವಾತಂತ್ರ್ಯವನ್ನು ನಿರಾಯಾಸವಾಗಿ ಬಳಸುವಲ್ಲಿ ಭಾರತದ ಅಧಿಕಾರಸ್ಥ ಭಾಷೆಗಳು ಅಡ್ಡಿಯಾಗುತ್ತವೆ. ಏಕೆಂದರೆ ದಲಿತರು ಮಾತ್ನಾಡುವ ನುಡಿಗಳಿಗೆ ಅಸ್ತಿತ್ವವೇ ಇರೋದಿಲ್ಲ. ಇದ್ದರೂ ಅದೊಂದು ಪೊಲಿಟಿಕಲಿ ಕರೆಕ್ಟ್‌ನೆಸ್‌ಗಾಗಿ ಮಾತ್ರವಿರುತ್ತದೆ. ಅಧಿಕಾರಸ್ಥ ವರ್ಗಗಳು ಮಾತಾಡುವ ನುಡಿಗಳನ್ನು ಇಡಿಯಾಗಿ ಸೀಳಿನೋಡಿದರೂ ಅವುಗಳಲ್ಲಿರುವ ಪದ-ಅರ್ಥಗಳು ಕೇವಲ ಸಾಮಾಜಿಕ ಶ್ರೇಣೀಕರಣ, ಜಾತಿಯ ತಾರತಮ್ಯ ಹಾಗೂ ಲಿಂಗಭೇದದಿಂದ ತುಂಬಿಕೊಂಡಿವೆ. ಇಂತಹ ಸಾಂಸ್ಕೃತಿಕ ಅಸಮಾನತೆಗಳಿಂದ ಇಂಗ್ಲಿಷ್ ಎಷ್ಟರಮಟ್ಟಿಗೆ ಬೇರೆಯಾಗಿದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಇದಕ್ಕೆ ಉತ್ತರವಾಗಿ, ಜಗತ್ತಿನಾದ್ಯಂತ ಇಂಗ್ಲಿಷ್ ಬಗೆಬಗೆಯ ಒಳನುಡಿಯಾಗಿ ರೂಪುಗೊಳ್ಳುವ ವಿನ್ಯಾಸವನ್ನು ಗಮನಿಸಬಹುದು.

ದಲಿತರು ತಮ್ಮ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಮಾಧ್ಯಮವಾಗಿ ಇಂಗ್ಲಿಷ್ ಆರಿಸಿಕೊಳ್ಳುವುದರ ಹಿಂದಿನ ಗುರಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ. ಜಗತ್ತಿನಾದ್ಯಂತ ಹರಡಿಕೊಳ್ಳುತ್ತಿರುವ ಇಂಗ್ಲಿಷ್‌ನಲ್ಲಿ ದಲಿತರಿಗೆ ತಮ್ಮ ಗುರಿಗಳನ್ನು ಸಾಧಿಸಿಕೊಳ್ಳುವ ಅವಕಾಶವಿದೆ ಎಂಬ ನಂಬಿಕೆ ಮೂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇಂಗ್ಲಿಷ್ ಶಿಕ್ಷಣ ಶುರುವಾಗುವ ಮೊದಲು, ಭಾರತದಲ್ಲಿ ದೇವಸ್ಥಾನ ಹಾಗೂ ಮಸೀದಿಗಳು ಕಲಿಕಾ ಕೇಂದ್ರಗಳೂ ಆಗಿದ್ದವು. ಇಲ್ಲಿ ದಲಿತರಿಗೆ ಪ್ರವೇಶವೇ ಇರಲಿಲ್ಲ. ಸಾರ್ವಜನಿಕ ಶಿಕ್ಷಣದ ಕಲ್ಪನೆ ಶುರುವಾದದ್ದು ಭಾರತದ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ. ಮೆಕಾಲೆ ಕೇವಲ ಇಂಗ್ಲಿಷ್ ಶಿಕ್ಷಣವನ್ನು ಮಾತ್ರ ಆರಂಭಿಸಲಿಲ್ಲ. ಅದರೊಟ್ಟಿಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನೇ ಸಾರ್ವತ್ರೀಕರಣಗೊಳಿಸಿದ್ದು ಈಗ ಇತಿಹಾಸ. ಈ ಕಾರಣಕ್ಕಾಗಿಯೇ ಎಷ್ಟೋ ದಲಿತಚಿಂತಕರು ಮೆಕಾಲೆಯನ್ನು ಆಧುನಿಕ ಭಾರತದ ಪಿತಾಮಹ ಎಂದೂ ಕರೆಯುವ ಹಾಗೂ ಅ.25ರಂದು ಅವನ ಹುಟ್ಟುಹಬ್ಬವನ್ನು ಆಚರಿಸುವ ಅತಿರೇಕಕ್ಕೆ ಹೋಗಿದ್ದು.

ಜಾತಿ ಹಾಗೂ ಭಾಷೆಗಳ ನಡುವಣ ತಿಕ್ಕಾಟ ಹಾಗೂ ನಂಟು ಕುರಿತ ಅಧ್ಯಯನಗಳು ಅಷ್ಟಾಗಿ ನಡೆದಿಲ್ಲ. ಇವುಗಳನ್ನು ಸಾಮಾಜಿಕ ಹಾಗೂ ಭಾಷಾಶಾಸ್ತ್ರೀಯ ನೆಲೆಯಿಂದ ಬಿಡಿಸಿ ನೋಡಬೇಕು. ಆಗ ಭಾಷೆ, ರಾಷ್ಟ್ರೀಯತೆ, ವಸಾಹತುಶಾಹಿ ಹಾಗೂ ಜಾತಿಗಳ ಬಗೆಗಿನ ಪ್ರಶ್ನೆಗಳನ್ನು ಎತ್ತಿಕೊಂಡು ವಿವರವಾಗಿ ಚರ್ಚಿಸಬಹುದು. ಇದರಿಂದ ಇನ್ನೂ ಹೆಚ್ಚಿನ ತಿಳಿವಳಿಕೆ ಪಡೆಯಲು ಸಾಧ್ಯವಾಗುತ್ತದೆ. ದಲಿತರ ಇಂತಹ ತೀರ್ಮಾನಗಳನ್ನು ಹೆಚ್ಚು ಹೆಚ್ಚು ತಾತ್ತ್ವಿಕಗೊಳಿಸಲು ಸಾಧ್ಯವಾಗಬಹುದು. ಭಾಷಿಕ ತತ್ವಕ್ಕೂ ಬದುಕಿನ ತತ್ವಕ್ಕೂ ಇರುವ ನಿಕಟತೆಯ ಆಳವನ್ನು ಅರಿತುಕೊಂಡಷ್ಟು ಭವಿಷ್ಯದ ಬದುಕನ್ನು ಹಸನುಗೊಳಿಸಲು ಅನುವಾಗುತ್ತದೆ. ಇಂತಹ ವಾಸ್ತವಗಳನ್ನು ಅತಿಯಾಗಿ ಸರಳೀಕರಿಸುವುದು ಸಾಂಸ್ಕೃತಿಕ ಅಪಾಯವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT