ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳ ಕನಸಿಗೆ ಹಸಿರಿನ ತೋರಣ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜನಗರ, ಹುಬ್ಬಳ್ಳಿಗೆ ಹಸಿರು ತೋರಣ ಕಟ್ಟಿದ ಪ್ರದೇಶ. ನೃಪತುಂಗ ಬೆಟ್ಟ ಇದರ ಸೌಂದರ್ಯಕ್ಕೆ ಇಟ್ಟ ಕಳಸ. ಇಂಥ ಸಸ್ಯಶ್ಯಾಮಲೆಯ ಮಡಿಲಿನಲ್ಲಿ ಮೈಚಾಚಿ ಮಲಗಿದೆ, ಕೆಎಸ್‌ಸಿಎ ಕ್ರಿಕೆಟ್ ಮೈದಾನ. ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವೆ ಇದೇ 22ರಿಂದ ನಡೆಯಲಿರುವ ರಣಜಿ ಪಂದ್ಯಕ್ಕಾಗಿ ಹಸಿರು ತುಂಬಿದ ಅಂಗಣ ಅರಳಿ ನಿಂತಿದೆ.

ಹಿಂದೆ ಹುಬ್ಬಳ್ಳಿಯ ಹೆಲಿಪ್ಯಾಡ್ ಆಗಿದ್ದ, ನಂತರ ಸ್ಮಶಾನ ಮಾಡುವುದಕ್ಕಾಗಿ ತೆಗೆದಿರಿಸಲಾದ ಈ ಗುಡ್ಡಗಾಡು ಪ್ರದೇಶ ಈಗ ನವಿರಾಗಿದೆ. ಕರ್ನಾಟಕ ತಂಡಕ್ಕೆ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಹಾಗಾಗಿ ಅಮಿತ್ ಮಿಶ್ರಾ ನೇತೃತ್ವದ ಹರಿಯಾಣ ವಿರುದ್ಧದ ಕದನ ಕುತೂಹಲ ಹೆಚ್ಚಿಸಿದೆ. ಜನರ ಆಶಯಗಳಿಗೆ ತಕ್ಕಂತೆ ಮೈದಾನವೂ ಸಿದ್ಧಗೊಂಡಿದೆ. ಇದರೊಂದಿಗೆ ಉತ್ತರ ಕರ್ನಾಟಕವನ್ನು 19 ವರ್ಷಗಳ ಕಾಲ ಕಾಡಿದ ರಣಜಿ ಪಂದ್ಯದ ಬರ ನೀಗಲಿದೆ.

ಹುಬ್ಬಳ್ಳಿಯಲ್ಲಿ ಮಹತ್ವದ ಕ್ರಿಕೆಟ್ ಪಂದ್ಯಗಳಿಗೆ ಎರಡು ಬಾರಿ ಅಯೋಧ್ಯೆ ವಿವಾದ ಅಡ್ಡಿಯಾಗಿತ್ತು. 1992ರಲ್ಲಿ ಕರ್ನಾಟಕ ಹಾಗೂ ಹೈದರಾಬಾದ್ ನಡುವೆ ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಗಿತ್ತು; ದೇಶದಾದ್ಯಂತ ನಡೆದ ಗಲಭೆ ಹಿನ್ನೆಲೆಯಲ್ಲಿ ಪಂದ್ಯ ಮೊಟಕುಗೊಂಡಿತು. ಅಂದು ಎರಡೂ ತಂಡಗಳ ಒಂದೊಂದು ಇನ್ನಿಂಗ್ಸ್ ಬ್ಯಾಟಿಂಗ್ ಸವಿಯಲಷ್ಟೇ ಇಲ್ಲಿನ ಪ್ರೇಕ್ಷಕರಿಗೆ ಸಾಧ್ಯವಾಗಿತ್ತು. ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ರಣಜಿಗೆ ಪದಾರ್ಪಣೆ ಮಾಡಿದ ಆ ಪಂದ್ಯದ ನಂತರ ರಣಜಿ ಈ ಭಾಗಕ್ಕೆ ಒಲಿದಿರಲಿಲ್ಲ.

2010ರಲ್ಲಿ ಕೆಪಿಎಲ್ ಪಂದ್ಯ ರಾಜನಗರ ಮೈದಾನಕ್ಕೆ ದಕ್ಕಿತು. ಆದರೆ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ಆ ಪಂದ್ಯವನ್ನು ಕೂಡ ಕೈಬಿಡಲಾಗಿತ್ತು. ಏಳು ವರ್ಷಗಳ ಹಿಂದೆ ಕೆಎಸ್‌ಸಿಎ ಮೈದಾನದ ನಿರ್ಮಾಣ ಆರಂಭವಾದಾಗಿನಿಂದ ಇಲ್ಲಿ ಮತ್ತೆ  ಕ್ರಿಕೆಟ್‌ಗೆ ಸಂಬಂಧಿಸಿದ ಕನಸುಗಳು ಗರಿಗೆದರತೊಡಗಿದವು. ಒಂದು ಭಾಗದಲ್ಲಿ ಬೆಟ್ಟದ ತಂಪು, ಇನ್ನೊಂದು ಭಾಗದಲ್ಲಿ ಉಣಕಲ್ ಕೆರೆಯಿಂದ ಬೀಸುವ ಕುಳಿರ್ಗಾಳಿ. ಇದೆರಡರ ಮಧ್ಯದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಮೈದಾನದ ಪೆವಿಲಿಯನ್ ಸುಂದರ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ. ವಿದೇಶದ ಮೈದಾನಗಳಲ್ಲಿ ಇರುವಂತೆ ಪ್ರೇಕ್ಷಕರಿಗೆ `ಪವಡಿಸಲು' ಎರಡು ಬಂಡುಗಳನ್ನು ಕೂಡ ಸಜ್ಜುಗೊಳಿಸಲಾಗಿದೆ. 15 ಸಾವಿರ ಜನರು ಕುಳಿತುಕೊಳ್ಳಲು ಗ್ಯಾಲರಿ ಸಿದ್ಧಗೊಂಡಿದೆ. ಅಭ್ಯಾಸಕ್ಕಾಗಿ ಹತ್ತು ನೆಟ್‌ಗಳು ಸಿದ್ಧಗೊಂಡಿವೆ.

ಮಿಥುನ್ ಬದಲು ಆದಿತ್ಯ
ಬೆಂಗಳೂರು: ಹರಿಯಾಣ ವಿರುದ್ಧ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ ಅಭಿಮನ್ಯು ಮಿಥುನ್ ಬದಲು ಆದಿತ್ಯ ಸಾಗರ್ ಸ್ಥಾನ ಪಡೆದುಕೊಂಡಿದ್ದಾರೆ.

ಬಲಗೈ ವೇಗಿ ಮಿಥುನ್ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT