ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ದಿನದಂದು ಪಟಾಕಿ, ಮದ್ಯ ನಿಷೇಧ

Last Updated 1 ಅಕ್ಟೋಬರ್ 2011, 9:55 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಮೆರವಣಿಗೆ ದಿನದಂದು (ಅ.6) ಪಟಾಕಿ ಹೊಡೆಯುವುದನ್ನು ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ.

ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದ ಕೋಟೆ ವಿಧಾನಸಭಾಂಗಣದಲ್ಲಿ ನಡೆದ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ದಸರಾ ಉತ್ಸವ ಸಮಿತಿ, ದಶಮಂಟಪಗಳ ಸಮಿತಿ ಸೇರಿದಂತೆ ಸಭೆಯಲ್ಲಿ ಹಾಜರಿದ್ದ ಎಲ್ಲ ಸಾರ್ವಜನಿಕರೂ ತೀರ್ಮಾನಕ್ಕೆ ಧ್ವನಿಗೂಡಿಸಿದರು.

ಸಭೆಯ ಆರಂಭದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಅವರು, ಉತ್ಸವಕ್ಕೆ ಸರ್ಕಾರ ನೀಡಿರುವ ರೂ 50 ಲಕ್ಷ ಅನುದಾನ ತಲುಪಿದೆ. ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.

ದಸರಾ ಉತ್ಸವದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಜೊತೆ ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್, ಗೃಹ ಸಚಿವ ಆರ್. ಅಶೋಕ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಇತರರು ಭಾಗವಹಿಸಲಿದ್ದಾರೆ ಎಂದರು.

ಚಿದ್ವಿಲಾಸ್ ಅವರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ಸಭೆಗೆ ವಿವರಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಮಾತನಾಡಿ, ದಸರಾ ಉತ್ಸವದ ಸಂದರ್ಭ ನಗರದ ಎಲ್ಲ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಬೇಕು ಎಂದು ಸೂಚಿಸಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪಟಾಕಿ ಹಾಗೂ ಮದ್ಯ ನಿಷೇಧಿಸಿರುವುದನ್ನು ಸಾರ್ವಜನಿಕರು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮುಂದಿನ ದಿನಗಳಲ್ಲಿ ಮೈಸೂರು ದಸರಾಗೆ ನೀಡಿದ ಪ್ರಚಾರ ಹಾಗೂ ಪ್ರಾಮುಖ್ಯತೆಯನ್ನು ಮಡಿಕೇರಿ ದಸರಾಗೂ ನೀಡಲಾಗುವುದು. ದಶಮಂಟಪಗಳ ಮೆರವಣಿಗೆ ದಿನ ವಿದ್ಯುತ್ ಕಡಿತಗೊಳಿಸದಿರಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಮಾನತಿಗೆ ಸೂಚನೆ
ನಾಡಹಬ್ಬವಾಗಿರುವ ದಸರಾ ಉತ್ಸವ ಆಚರಣೆಯ ಮಹತ್ವದ ಜವಾಬ್ದಾರಿ ಹೊಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕರು ದಸರಾ ಉತ್ಸವ ಆಚರಣೆಯ ಪೂರ್ವಭಾವಿ ಸಭೆಗೆ ಗೈರುಹಾಜರಾದುದನ್ನು ಕಂಡು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಕೆಂಡಾಮಂಡಲರಾದರು.

ಇಂತಹ ಮಹತ್ವದ ಸಭೆಗೆ ಗೈರುಹಾಜರಾದ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಅವರ ಪಕ್ಕದಲ್ಲಿ ಆಸೀನರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಅವರನ್ನು ಕೋರಿದರು.
ಈಗಾಗಲೇ ಹಲವು ಬಾರಿ ಇಂತಹ ಅಶಿಸ್ತು ಪ್ರದರ್ಶಿಸಿರುವ ಈ ಅಧಿಕಾರಿಗೆ ಷೋಕಾಸ್ ನೋಟಿಸ್ ಸಹ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ತೀರ್ಮಾನವಾದ ಅಂಶಗಳು
* ದಸರಾ ಮೆರವಣಿಗೆ ದಿನ ನಗರದಲ್ಲಿ ವಿವಿಧೆಡೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
* ರಾಜಾ ಸೀಟ್‌ನಲ್ಲಿ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಕರಣ ಮತ್ತು ಸಂಗೀತ ಕಾರಂಜಿ ಏರ್ಪಾಡವಾಗಲಿದೆ.
* ಅಬ್ಬಿಫಾಲ್ಸ್‌ನಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು.
* ಸುದರ್ಶನ ವೃತ್ತದಿಂದ ಜಿ.ಟಿ. ವೃತ್ತದವರೆಗೆ ರಸ್ತೆಯನ್ನು ಅಭಿವೃದ್ಧಿಸಲು ಕೆಆರ್‌ಡಿಸಿಎಲ್‌ಗೆ ಸೂಚಿಸಲಾಯಿತು.
* 40 ಹೆಚ್ಚುವರಿ ಬಸ್ ವ್ಯವಸ್ಥೆ.
* ಪ್ರವಾಸಿಗರ ಮಾಹಿತಿ ಕೇಂದ್ರ ಸ್ಥಾಪಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT