ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಗೆ ಜಿ.ಮಾದೇಗೌಡ, ಪುಟ್ಟಣ್ಣಯ್ಯಗೆ ಆಹ್ವಾನ

Last Updated 15 ಅಕ್ಟೋಬರ್ 2012, 5:40 IST
ಅಕ್ಷರ ಗಾತ್ರ

ಮೈಸೂರು: `ದಸರಾ ಮಹೋತ್ಸವಕ್ಕೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಾಣ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ರೈತ ಮುಖಂಡ  ಕೆ.ಎಸ್.ಪುಟ್ಟಣ್ಣಯ್ಯ  ಅವರನ್ನು ಆಹ್ವಾನಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

`ಕಾವೇರಿ ನದಿ ನೀರು ಹಂಚಿಕೆ ವಿವಾದದ ಕರಿನೆರಳು ದಸರಾ ಮೇಲೆ ಬೀಳಲಿದೆ ಎಂಬ ಆತಂಕ ಎಲ್ಲರಲ್ಲಿ ಇತ್ತು. ಅ.20 ರಿಂದ ಸುಪ್ರೀಂ ಕೋರ್ಟ್ ಪೀಠಗಳಿಗೆ ರಜೆ ಇರುವುದರಿಂದ ಕಾವೇರಿ ತೀರ್ಪು ಮುಂದೆ ಹೋಗುವ ಸಾಧ್ಯತೆ ಇದೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ಮುಖಂಡರನ್ನು ಭೇಟಿಯಾಗಿ ದಸರೆಗೆ ಸಹಕರಿಸುವಂತೆ ಆಹ್ವಾನ ನೀಡಲಾಗುವುದು~ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಅ.15 ರಂದು ಬೆಳಿಗ್ಗೆ 9.30 ಕ್ಕೆ ಯುವರಾಜ ಮತ್ತು ಮಹಾರಾಜ ವಿಮಾನಗಳು ಹಾರಾಟ ನಡೆಸ ಲಿವೆ. ಮೈಸೂರು-ಬೆಂಗಳೂರು,  ಮೈಸೂರು- ಗೋವಾ, ಮೈಸೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರ ಆರಂಭಿಸುವ ಕುರಿತಾಗಿ ಡೆಕ್ಕನ್ ಚಾರ್ಜರ್ಸ್‌ನ ಕ್ಯಾಪ್ಟನ್ ಗೋಪಿನಾಥ್  ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಎರಡು ತಿಂಗಳಲ್ಲಿ ವಿಮಾನ ಹಾರಾಟ ಆರಂಭಿಸಲು ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ~ ಎಂದು ಹೇಳಿದರು.

`ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ನ್ನು ದೊಡ್ಡ ಪರದೆಗಳ ಮೂಲಕ ಪ್ರದರ್ಶಿಸಲಾಗುವುದು. ಸಾರ್ವಜನಿಕರು ಖಾಸಗಿ ದರ್ಬಾರ್‌ನ್ನು ಹೊರಗಡೆಯಿಂದ ಪರದೆ ಮೇಲೆ ನೋಡಲು ಅವಕಾಶ ನೀಡುವಂತೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಮನವಿ ಮಾಡಲಾಗಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ~ ಎಂದು ಹೇಳಿದರು.

`ಈ ಬಾರಿಯ ದಸರಾಕ್ಕೆ 26 ರಾಜಮನೆತನಗಳಿಗೆ ಆಹ್ವಾನ ನೀಡಲಾಗಿತ್ತು. 17 ಮನೆತನದವರು ದಸರಾಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದರು. ಆದರೆ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಹಿಂದೇಟು ಹಾಕಿದ್ದರಿಂದ ಮುಂದಿನ ವರ್ಷ ರಾಜಮನೆತನದವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ~ ಎಂದು ತಿಳಿಸಿದರು.

ಪ್ರವಾಸಿಗರಿಗೆ ಭದ್ರತೆ: `ವಿವಿಧ ದೇಶಗಳ 17 ರಾಯಭಾರಿಗಳನ್ನು ದಸರಾಗೆ ಆಹ್ವಾನಿಸಲಾಗಿದೆ. ವೆಬ್‌ಸೈಟ್ ಮೂಲಕ ವಿವರ ನೀಡಲಾಗಿದೆ. ನೆರೆ ರಾಜ್ಯಗಳು ದಸರೆ ಭದ್ರತೆಗೆ ಸಂಬಂಧಿಸಿದಂತೆ ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ. ಕಾವೇರಿ ವಿವಾದ ಇರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರಿಗೆ ರಕ್ಷಣೆ ಮತ್ತು ಭದ್ರತೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ~ ಎಂದರು.

ಸಮಾಧಿ ಅಭಿವೃದ್ಧಿ: `ನಂಜನಗೂಡು ರಸ್ತೆಯಲ್ಲಿರುವ ಮಹಾರಾಜರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ದಸರಾ ಮುಗಿದ ಬಳಿಕ ರೂ.1 ಕೋಟಿ ವೆಚ್ಚದಲ್ಲಿ ಸಮಾಧಿಯನ್ನು ಅಭಿವೃದ್ಧಿ ಮಾಡಿ ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗುವುದು~ ಎಂದು ಹೇಳಿದರು.

ದಸರಾ ಚಲನಚಿತ್ರೋತ್ಸವ: ಉಚಿತ ಪ್ರವೇಶ
ಮೈಸೂರು: ದಸರಾ ಅಂಗವಾಗಿ ಅ.16 ರಿಂದ 22ರ ವರೆಗೆ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕೆಳಕಂಡ ಸ್ಥಳಗಳಲ್ಲಿ ಉಚಿತ ಪ್ರವೇಶ ವಿರುತ್ತದೆ.

ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ವಿದೇಶಿ ಚಿತ್ರಗಳನ್ನು ಪ್ರತಿದಿನ ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆ ಹಾಗೂ ಸಂಜೆ 4-30 ಗಂಟೆ  ಪ್ರದರ್ಶಿಸಲಾಗುವುದು.

ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಪ್ರತಿದಿನ ಬೆಳಿಗ್ಗೆ 10-30 ಗಂಟೆ, ಮಧ್ಯಾಹ್ನ 2-30 ಗಂಟೆಗೆ ಹಾಗೂ ನಗರದ ವಿವಿಧ ಉದ್ಯಾನಗಳಲ್ಲಿ ಸಂಜೆ 6-30 ಗಂಟೆಗೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ.

ಬದಲಾವಣೆ: ಈ ಚಲನಚಿತ್ರೋತ್ಸವದಲ್ಲಿ ಅ.18 ರಂದು ಪಲ್ಲವಿ ಚಲನಚಿತ್ರದ ಬದಲಾಗಿ ದೇವೀರಿ ಹಾಗೂ ತಬರನ ಕಥೆ ಚಲನಚಿತ್ರದ ಬದಲಾಗಿ ನಾಯಿನೆರಳು ಚಲನಚಿತ್ರ ಪ್ರದರ್ಶಿಸಲಾಗುವುದು ಎಂದು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT