ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಉದ್ದೇಶ ನಿಗೂಢ

ಶಾಲೆಯಲ್ಲಿ ಗುಂಡು ಹಾರಿಸಿ ಮಕ್ಕಳ ಹತ್ಯೆ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಕನೆಕ್ಟಿಕಟ್‌ನ ಶಾಲೆಯೊಂದರಲ್ಲಿ ಶುಕ್ರವಾರ ನಡೆದ ಅಮಾನುಷ ಗುಂಡಿನ ದಾಳಿಯ ಉದ್ದೇಶ ಇನ್ನೂ ನಿಗೂಢವಾಗಿದೆ. ದಾಳಿಕೋರ ಯಾವ ಕಾರಣಕ್ಕಾಗಿ ಕೃತ್ಯ ಎಸಗಿದ್ದಾನೆ ಎನ್ನುವುದನ್ನು ಪತ್ತೆ ಮಾಡಲು ಅಮೆರಿಕ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನ್ಯೂಜೆರ್ಸಿಯ ಹೊಬೊಕೆನ್ ಪ್ರದೇಶದಲ್ಲಿರುವ ದಾಳಿಕೋರ ಆಡಮ್‌ನ ಸಹೋದರ ರ‌್ಯಾನ್ ಲಾಂಜಾ ಹಾಗೂ ತಂದೆ ಪೀಟರ್ ಲಾಂಜಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಗುರುತಿಸುವಲ್ಲಿ ಗೊಂದಲ: ದಾಳಿಕೋರನ ಹೆಸರು ರ‌್ಯಾನ್ ಲಾಂಜಾ (24) ಎಂದು ಕೆಲವು ಮಾಧ್ಯಮಗಳು ಹಾಗೂ ಅಧಿಕಾರಿಗಳು ಗುರುತಿಸಿದ್ದರು. ಆದರೆ ಆತ ರ‌್ಯಾನ್ ಲಾಂಜಾ ಅಲ್ಲ, ಬದಲಾಗಿ ಆತನ ತಮ್ಮನಾದ ಆಡಮ್ ಲಾಂಜಾ (20) ಎಂದು ದೃಢಪಟ್ಟಿತು.

ಆಡಮ್ ತಾಯಿ ನ್ಯಾನ್ಸಿ, ದಾಳಿ ನಡೆದ ಸ್ಯಾಂಡಿ ಹೂಕ್ ಎಲಿಮೆಂಟರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕೊಲೆಯಾದಾಗ ಆಕೆ ಶಾಲೆಯಲ್ಲಿದ್ದರು ಎಂದು ವರದಿಗಳು ತಿಳಿಸಿವೆ.

ಆದರೆ `ನ್ಯೂಯಾರ್ಕ್ ಟೈಮ್ಸ' ವರದಿ ಪ್ರಕಾರ `ದಾಳಿಕೋರ ಆಡಮ್ ಲಾಂಜಾ, ತನ್ನ ತಾಯಿಯನ್ನು ಅಪಾರ್ಟ್‌ಮೆಂಟ್‌ನಲ್ಲೇ ಕೊಂದು ಹಾಕಿದ್ದಾನೆ. ನಂತರ ಶಾಲೆಗೆ ನುಗ್ಗಿ ಮಕ್ಕಳ ಮೇಲೆ ಮನ ಬಂದಂತೆ ಗುಂಡು ಹಾರಿಸಿದ್ದಾನೆ'.

ಘಟನೆ ನಡೆದಿದ್ದು - ಪೊಲೀಸರು ಹೇಳಿದ್ದು: ಕಪ್ಪು ಉಡುಪು ಧರಿಸಿದ್ದ ಆಡಮ್, ಅರೆ ಸ್ವಯಂಚಾಲಿತ ರಿವಾಲ್ವರ್ ಮತ್ತು ಬಂದೂಕಿನೊಂದಿಗೆ ಬಂದು ಒಂದೇ ಕಟ್ಟಡದಲ್ಲಿ ನಡೆಯುತ್ತಿದ್ದ ಎರಡು ತರಗತಿಗಳ ಮೇಲೆ ಗುಂಡಿನ ದಾಳಿ ನಡೆಸಿದ. ನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ. ಆತನ ಶವ ಶಾಲೆಯ ಕೊಠಡಿಯೊಳಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ 20 ಮಕ್ಕಳು ಮತ್ತು ಪ್ರಾಚಾರ್ಯರು ಹಾಗೂ ಇತರ 7 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಮಕ್ಕಳು 5ರಿಂದ 10 ವಯೋಮಾನದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT