ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಮಾಡಲು ಬಂದು ಸೆರೆ ಸಿಕ್ಕ ಹುಲಿ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ವ್ಯಕ್ತಿಯ ಮೇಲೆ ದಾಳಿ ಮಾಡಲು ನುಗ್ಗಿದ ಹುಲಿಯೊಂದು ತಂತಿ ಬೇಲಿಗೆ ಸಿಕ್ಕಿಕೊಂಡು ನರಳಾಡಿದ ಘಟನೆ ಸಮೀಪದ ಕಾನೂರು ನಿಡುಗುಂಬದಲ್ಲಿ ಮಂಗಳವಾರ ನಡೆದಿದೆ. ಸಕಾಲಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾದರು.

ನಿಡುಗುಂಬದ ಸುಳ್ಳಿಮಾಡ ದಿನು ಚಿಣ್ಣಪ್ಪ ಅವರ ತಾಳೆ ತೋಟದ ಬಳಿ ಇರುವ ಬತ್ತದ ಗದ್ದೆಯಲ್ಲಿ ಕಾರ್ಮಿಕ ಪಂಜಿರಿ ಅವರ ಕಾವಲ ಎಂಬಾತ ಬೆಳಿಗ್ಗೆ 8.30ರ ವೇಳೆಗೆ ಎತ್ತು ಕಟ್ಟಲು ಹೋಗ್ದ್ದಿದ. ಈ ವೇಳೆ ಪೊದೆಯಲ್ಲಿದ್ದ ಹುಲಿ ಕಾವಲನ ಮೇಲೆ ಎರಗಲು ಮುಂದಾಯಿತು. ಆದರೆ, ಪೊದೆಯಲ್ಲಿ ಹಾಕಿದ್ದ ತಂತಿ ಕಾಣಿಸದೇ ಹುಲಿ ಬೇಲಿಗೆ ಸಿಕ್ಕಿಹಾಕಿಕೊಂಡಿತು. ಹುಲಿ ಆರ್ಭಟ ಕೇಳಿದ ಕಾವಲನು ಓಡಿ ಬಂದು ತೋಟದ ಮಾಲೀಕ ದಿನು ಚಿಣ್ಣಪ್ಪ ಅವರಿಗೆ ತಿಳಿಸಿದ. ದಿನು ಚಿಣ್ಣಪ್ಪ ಅವರು ಅರಣ್ಯ ಇಲಾಖೆ ಮಾಹಿತಿ ನೀಡಿದರು.

ಕಲ್ಲಹಳ್ಳ ಆರ್‌ಎಫ್‌ಒ ಫೆಲಿಕ್ಸ್, ನಾಗರಹೊಳೆ ಆರ್‌ಎಫ್‌ಒ ಮಂದಣ್ಣ ಹಾಗೂ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಅವರು ತಕ್ಷಣ ಬೋನಿನ ಸಮೇತ ಸ್ಥಳಕ್ಕೆ ಧಾವಿಸಿದರು. ಬೇಲಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹುಲಿಗೆ ಮೂರು ಅರಿವಳಿಕೆ ಮದ್ದು ನೀಡಿದರು. ಬಳಿಕ ಪ್ರಜ್ಞೆ ಕಳೆದುಕೊಂಡ ಹುಲಿಯನ್ನು ಬೋನಿಗೆ ಸೇರಿಸಿದರು.

ಬೋನಿಗೆ ಹಾಕಿದ ನಂತರ ಹುಲಿಗೆ ಪ್ರಜ್ಞೆ ಬರಿಸುವ ಮದ್ದು ನೀಡಿ ಎಚ್ಚರಗೊಳಿಸಲಾಯಿತು. ಅಲ್ಲಿಂದ ಮೂರ್ಕಲ್ಲಿಗೆ ಸಾಗಿಸಲಾಯಿತು. ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದ ಪ್ರಭಾರ ನಿರ್ದೇಶಕ ಕುಮಾರ್ ಪುಷ್ಕರ್, ಎಸಿಎಫ್ ಬೆಳ್ಳಿಯಪ್ಪ ಹುಲಿಯನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸಿದರು.

ಅಂದಾಜು 4 ವರ್ಷ ಪ್ರಾಯದ ಈ ಹುಲಿ ತಂತಿಗೆ ಸಿಕ್ಕಿಹಾಕಿಕೊಂಡದ್ದರಿಂದ ಮುಂದಿನ ಎಡಗಾಲಿಗೆ ತೀವ್ರ ಗಾಯವಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿ ಬೆಳ್ಳಿಯಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT