ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ವೇಳೆಗೆ ಚಿನ್ನ ರೂ. 30 ಸಾವಿರ?

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೀಪಾವಳಿ ವೇಳೆಗೆ ಚಿನ್ನದ ದರ 10 ಗ್ರಾಂಗಳಿಗೆ ರೂ. 29 ರಿಂದ ರೂ. 30 ಸಾವಿರಕ್ಕೆ  ತಲುಪಲಿದೆ ಎಂದು ಮುಂಬೈ ಚಿನ್ನಾಭರಣ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ. 

ಇತ್ತೀಚಿನ ದಿನಗಳಲ್ಲಿ ಚಿನ್ನದ ದರದ ಕಣ್ಣಾಮುಚ್ಚಾಲೆಯಾಟ ಮುಂದುವರೆದಿದ್ದು, ತೀವ್ರ ಏರಿಳಿತ ಕಾಣುತ್ತಿದೆ. ಆದರೆ, ದೀಪಾವಳಿ ವೇಳೆಗೆ ಸ್ಥಳೀಯ ಬೇಡಿಕೆ ಹೆಚ್ಚುವುದರಿಂದ ಚಿನ್ನ ರೂ. 30 ಸಾವಿರದ ಗಡಿ ದಾಟಲಿದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಪೃಥ್ವಿರಾಜ್ ಕೋಠಾರಿ ಅಭಿಪ್ರಾಯಪಟ್ಟಿದ್ದಾರೆ. 

ಜಾಗತಿಕ ಸಂಗತಿಗಳು ಏನೇ ಇದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ದ್ವಿಗುಣಗೊಂಡಿದೆ. ಸದ್ಯ ಸ್ಟ್ಯಾಂಡರ್ಡ್ ಚಿನ್ನ 10 ಗ್ರಾಂಗಳಿಗೆ ರೂ. 26,215 ಮತ್ತು ಶುದ್ಧ ಚಿನ್ನ ರೂ. 26,355 ರಂತೆ ವಹಿವಾಟಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಸಹಜವಾಗಿಯೇ ಚಿನ್ನದ ಬೇಡಿಕೆ ಹೆಚ್ಚುತ್ತದೆ. ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾದರೂ, ಆಭರಣಗಳ ಬೇಡಿಕೆ ಕಡಿಮೆಯಾಗಿಲ್ಲ. ಈ ಸಂಗತಿಯೇ ದರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ. 

ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನಿಂದ ಚಿನ್ನದ ದರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ 1,923 ಡಾಲರ್‌ನಿಂದ ಮತ್ತು ಕನಿಷ್ಠ 1,535 ಡಾಲರ್‌ಗಳಷ್ಟು ಏರಿಳಿತ ಕಂಡಿದೆ. ಇದೀಗ ಹಬ್ಬಗಳ ಜತೆಗೆ ಮದುವೆ ಕಾಲವೂ ಪ್ರಾರಂಭವಾಗಿರುವುದು ಹಳದಿ ಲೋಹದ ಬೇಡಿಕೆ ಹೆಚ್ಚುವಂತೆ ಮಾಡಿದೆ. 

ಭಾರತವು ಪ್ರಪಂಚದಲ್ಲಿಯೇ ಅತಿ ದೊಡ್ಡ ಚಿನ್ನದ ಗ್ರಾಹಕ  ದೇಶವಾಗಿದ್ದು, ಜನವರಿ-ಜೂನ್ ಅವಧಿಯಲ್ಲಿ ಚಿನ್ನದ ಆಮದು 553 ಟನ್‌ಗಳಿಗೆ ಏರಿಕೆಯಾಗಿದೆ. ಇದು ವರ್ಷಾಂತ್ಯಕ್ಕೆ 1000 ಟನ್‌ಗಳನ್ನು ದಾಟಲಿದೆ ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ. 

ಮೊದಲ ಎರಡು ತ್ರೈಮಾಸಿಕ ಅವಧಿಗಳ ಚಿನ್ನದ ಆಮದು ಉತ್ತಮವಾಗಿದೆ. ಮೂರನೆಯ ಅವಧಿಯಲ್ಲಿ ಇದು 180 ಟನ್‌ಗಳಷ್ಟು ಹಾಗೂ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ 250 ಟನ್‌ಗಳಷ್ಟು ಏರಿಕೆಯಾಗಲಿದೆ ಎಂದು `ಡಬ್ಲ್ಯುಜಿಸಿ~ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಮಿತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT