ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಇಲ್ಲದೆ ಕ್ಷಮತೆ ಕುಂಠಿತ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಭವಿಷ್ಯದ ವಿದ್ಯುತ್ ಬೇಡಿಕೆಗೆ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸದೆ ಆರ್‌ಟಿಪಿಎಸ್ ಒಂದನ್ನೇ ಅವಲಂಬಿಸಿರುವುದರಿಂದ ಈ ಸ್ಥಾವರದ ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪದೇ ಪದೇ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. ಇದರ ಒಟ್ಟು ದುಷ್ಪರಿಣಾಮ ವಿದ್ಯುತ್ ಉತ್ಪಾದನೆ ಮೇಲೆ ಈಗ ಆಗುತ್ತಿದೆ.
 
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ 7 ಘಟಕಗಳಿಂದ 1,470 ಮೆಗಾವಾಟ್ ವಿದ್ಯುತ್ ಪೂರೈಕೆಯಾಗುತ್ತಿದ್ದ ದಿನಗಳು ಹಿಂದೆ ಇದ್ದವು. ಕ್ರಮೇಣ ಒಂದೊಂದೇ ಘಟಕಗಳಲ್ಲಿ ಕಾಣಿಸಿಕೊಳ್ಳತೊಡಗಿದ ಸಮಸ್ಯೆಗಳಿಂದಾಗಿ ವಿದ್ಯುತ್ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಂಠಿತಗೊಂಡಿದೆ.

ಕಳೆದ ವರ್ಷ ಬೇಸಿಗೆ ದಿನಗಳಲ್ಲಿ ಗರಿಷ್ಠ  400ರಿಂದ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿದ್ದರಿಂದ ರಾಜ್ಯದಲ್ಲಿ ಪೂರ್ತಿ ವಿದ್ಯುತ್ ಅಭಾವ ಕಂಡಿತ್ತು. ಈ ವರ್ಷ ಮಳೆಗಾಲದಲ್ಲಿಯೇ ಅದಕ್ಕಿಂತ ಕಠಿಣ ಪರಿಸ್ಥಿತಿ ಎದುರಾಗಿದೆ.

ತಲಾ 210 ಮೆಗಾವಾಟ್‌ನ 7 ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ 1,470 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬೇಕು. 250 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 8ನೇ ಘಟಕ ಹೊಸದಾಗಿ ನಿರ್ಮಾಣಗೊಂಡಿದ್ದರೂ ಪರೀಕ್ಷಾರ್ಥ ಚಾಲನೆಯಾಗಿದ್ದು ಬಿಟ್ಟರೆ ಒಂದು ಯುನಿಟ್ ವಿದ್ಯುತ್ ಕೂಡಾ ರಾಜ್ಯಕ್ಕೆ ಲಭ್ಯವಾಗಿಲ್ಲ.ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಹಳೆಯ ಏಳು ಘಟಕಗಳಲ್ಲಿ 3ನೇ ಘಟಕ ವಾರ್ಷಿಕ ದುರಸ್ತಿಗೆ ತೆಗೆದುಕೊಳ್ಳಲಾಗಿದೆ. ಉಳಿದ 6 ಘಟಕಗಳಲ್ಲಿ ಒಂದಿಲ್ಲೊಂದು  ಘಟಕದಲ್ಲಿ ತಾಂತ್ರಿಕ ಸಮಸ್ಯೆ ಉದ್ಭವಿಸುತ್ತಲೇ ಇರುತ್ತವೆ. ರಾತ್ರಿ ಶುರುವಾದ ಘಟಕ ಬೆಳಿಗ್ಗೆ ಬಂದ್ ಆಗಿರುತ್ತದೆ!

ಈ ಐದಾರು ಘಟಕಗಳೂ ಪೂರ್ಣಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಹೆಣಗಾಡಬೇಕಾದ ಸ್ಥಿತಿ ಇದೆ. 210 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬೇಕಾದ ಘಟಕಗಳು 150ರಿಂದ 180 ಮೆಗಾವಾಟ್ ಮಾತ್ರ ಉತ್ಪಾದನೆ ಮಾಡುತ್ತಿವೆ.

ಪೂರ್ಣಪ್ರಮಾಣದ (210 ಮೆಗಾವಾಟ್) ವಿದ್ಯುತ್ ಉತ್ಪಾದನೆಗೆ ಹೊರಟರೆ ಯಂತ್ರಗಳು ಕೈಕೊಟ್ಟು ಬಂದ್ ಆಗುತ್ತವೆ. ಇವುಗಳು ಮತ್ತೆ ಶುರುವಾಗಲು ಒಂದೆರಡು ದಿನಗಳಾದರೂ ಬೇಕು. 

ಹುಸಿ ಭರವಸೆ: ಈ ಘಟಕಗಳು ಎರಡೂವರೆ ದಶಕಗಳಿಂದ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಇಲಾಖೆ ತಜ್ಞರಿಂದ ಸಮಗ್ರ ವರದಿ ಪಡೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹಿಂದಿನ ಇಂಧನ ಖಾತೆ ಸಚಿವ ಈಶ್ವರಪ್ಪ ಭರವಸೆ ನೀಡಿದ್ದರು. ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಆ ಭರವಸೆಯನ್ನು ಸರ್ಕಾರ ಮರೆತೇಬಿಟ್ಟಿದೆ.

ಈಶ್ವರಪ್ಪನವರು ಸಚಿವರಾಗಿದ್ದಷ್ಟು ದಿನ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್. ಎಂ.ಜಾಮದಾರ ಅವರ ಜತೆ ಜಟಾಪಟಿ ಮುಂದುವರಿದಿತ್ತು. ಹಟ ಹಿಡಿದು ಇಂಧನ ಖಾತೆ ತೆಗೆದುಕೊಂಡ ಈಶ್ವರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಸ್.ಎಂ ಜಾಮದಾರ ಅವರನ್ನು ನೇಮಿಸಿದ್ದರೆಂಬ ಆರೋಪವೂ ಆಗ ಕೇಳಿಬಂದಿತ್ತು. ಈಶ್ವರಪ್ಪ ಸಚಿವರಾಗಿ ಇರುವವರೆಗೂ ಪರಸ್ಪರ ತಿಕ್ಕಾಟ ಮುಂದುವರಿದಿತ್ತು. ಈಶ್ವರಪ್ಪನವರ ಸಚಿವಸ್ಥಾನ ಬದಲಾಗುತ್ತಿದ್ದಂತೆಯೇ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರೂ ಬದಲಾದರು.

ಮರೆತು ಹೋದ ಘಟಕ ದುರಸ್ತಿ : ಏಕಕಾಲಕ್ಕೆ ಎಲ್ಲ ಘಟಕಗಳ ದುರಸ್ತಿ ಕೈಗೊಳ್ಳುವುದು ಸದ್ಯ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಅಭಾವ ಪರಿಸ್ಥಿತಿಯಲ್ಲಿ ಕಷ್ಟ. ಹೀಗಾಗಿ ಹಂತ ಹಂತವಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಎರಡು ವರ್ಷಗಳ ಹಿಂದೆಯೇ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದರು.

ಈ ಕಾರ್ಯ ನಡೆಯಬೇಕಾದರೆ ಆರ್‌ಟಿಪಿಎಸ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ 8ನೇ ಘಟಕ (250 ಮೆ.ವಾ ಸಾಮರ್ಥ್ಯ) ಮತ್ತು ಬಳ್ಳಾರಿಯ 550 ಮೆಗಾವಾಟ್ ಸಾಮರ್ಥ್ಯದ ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಬೇಕು. ಆಗ ಮಾತ್ರ ಆರ್‌ಟಿಪಿಎಸ್‌ನ 7 ಘಟಕಗಳಲ್ಲಿ ಪ್ರತಿ ವರ್ಷ ಒಂದೋ ಅಥವಾ ಎರಡು ಘಟಕಗಳನ್ನು ಶಾಶ್ವತ ದುರಸ್ತಿಗೆ ತೆಗೆದುಕೊಳ್ಳಲು ಸಾಧ್ಯ ಎಂಬ ತಾಂತ್ರಿಕ ಲೆಕ್ಕಾಚಾರದ ವಿವರಣೆ ನೀಡಿದ್ದರು.

ಆದರೆ, ಇವ್ಯಾವುದೂ ಆಗಲಿಲ್ಲ. ಬಳ್ಳಾರಿಯಲ್ಲಿ ಬಿಎಚ್‌ಇಎಲ್ ಕಂಪೆನಿ ರೂಪಿಸಿದ ಬಿಟಿಪಿಎಸ್, 550 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿಲ್ಲ. ಬದಲಾಗಿ 300ರಿಂದ 350 ಮೆಗಾವಾಟ್ ಉತ್ಪಾದನೆ ಮಾಡುತ್ತಿದೆ. ರಾಯಚೂರಿನ ಆರ್‌ಟಿಪಿಎಸ್‌ನ 8ನೇ ಘಟಕವನ್ನು ರೂಪಿಸಿದ್ದು ಕೂಡಾ ಅದೇ ಬಿಎಚ್‌ಇಎಲ್ ಕಂಪೆನಿ.

ಈ ಘಟಕವು ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿದ್ದು ಬಿಟ್ಟರೆ ವಿದ್ಯುತ್ ಉತ್ಪಾದನೆ ಆರಂಭಿಸಿಲ್ಲ. ಬಿಎಚ್‌ಇಎಲ್ ಕಂಪೆನಿ ತಜ್ಞರ ತಂಡ ಹಲವಾರು ತಿಂಗಳಿಂದ ಈ ಹೊಸ ಘಟಕವನ್ನು ಪ್ರಾರಂಭಿಸಲು ನಡೆಸಿರುವ ಪ್ರಯತ್ನ ಇನ್ನೂ  ಫಲ ಕಂಡಿಲ್ಲ.

ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ಹೇಳುತ್ತಾ ಬಂದ ಹಳೆಯ ಘಟಕಗಳ ದುರಸ್ತಿ ವಿಚಾರ ನೆನೆಗುದಿಗೆ ಬಿದ್ದಿದೆ. ಬೇಸಿಗೆಯಲ್ಲಿ ವಿದ್ಯುತ್ ಅಭಾವ ಎದುರಾದಾಗ ಮಾತ್ರವೇ ಆರ್‌ಟಿಪಿಎಸ್‌ನತ್ತ ಕಣ್ತೆರೆದು ನೋಡುತ್ತಿದ್ದ ಕರ್ನಾಟಕ ವಿದ್ಯುತ್ ನಿಗಮ, ಈಗ ಮಳೆಗಾಲದಲ್ಲಿಯೇ ನೋಡಬೇಕಾದ ಸ್ಥಿತಿ ತಂದುಕೊಂಡಿದೆ. ಇದಕ್ಕೆ ತೆಲಂಗಾಣ ಹೋರಾಟ ನಿಮಿತ್ತ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT