ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳಿಂದ ಆರ್‌ಟಿಐ ಕಾರ್ಯಕರ್ತನ ಭೀಕರ ಹತ್ಯೆ

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದುಷ್ಕರ್ಮಿಗಳಿಂದ ಅಪಹರಣಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಮತ್ತು ಕಾಂಗ್ರೆಸ್ ಮುಖಂಡ, ಉಡುಪಿ ಜಿಲ್ಲೆಯ ವಂಡಾರು ವಾಸುದೇವ ಅಡಿಗ (43) ಅವರ ಶವ ಕಡೂರು ತಾಲ್ಲೂಕಿನ ಮದಗದಕೆರೆಯಲ್ಲಿ ಶನಿವಾರ ದೊರೆತಿದೆ.

ಶುಕ್ರವಾರ ಸಂಜೆಯೇ ಅಪರಿಚಿತ ಶವವೊಂದು ನೀರಿನಲ್ಲಿ ತೇಲುತ್ತಿದ್ದ ಬಗ್ಗೆ ಸ್ಥಳೀಯರು ಕಡೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಶನಿವಾರ ಬೆಳಿಗ್ಗೆ ಪೊಲೀಸರು ಶವ ಹೊರ ತೆಗೆದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಸದ ಜಯಪ್ರಕಾಶ್ ಹೆಗ್ಡೆ ಶವದ ಗುರುತು ಪತ್ತೆ ಹಚ್ಚಿದರು.

ದುಷ್ಕರ್ಮಿಗಳು ಅಡಿಗ ಅವರನ್ನು ಕೊಲೆ ಮಾಡಿ, ಕೈ, ಕಾಲುಗಳನ್ನು ಹಗ್ಗದಿಂದ ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದು ಹೋಗಿದ್ದಾರೆ. ಮೂರ‌್ನಾಲ್ಕು ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಪಿಎಸ್‌ಐ ಸಂತೋಷ್ ಶೆಟ್ಟಿ  ತಿಳಿಸಿದ್ದಾರೆ.  

ಹೋರಾಟಗಾರ, ಸಿಂಹಸ್ವಪ್ನ
ಚಿಕ್ಕಮಗಳೂರು: ಕಡೂರು ಬಳಿ ಶವವಾಗಿ ಪತ್ತೆಯಾದ ಆರ್‌ಟಿಐ ಕಾರ್ಯಕರ್ತ ವಾಸುದೇವ  ಅಡಿಗ ಅವಿವಾಹಿತರಾಗಿದ್ದು, ಅವರಿಗೆ ತಾಯಿ ಮತ್ತು ಆರು ಮಂದಿ ಸಹೋದರರು ಇದ್ದಾರೆ. ಭ್ರಷ್ಟಾಚಾರದ ವಿರುದ್ಧ ಮಾಹಿತಿ ಹಕ್ಕು ಕಾಯ್ದೆ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿ ಉಡುಪಿ ಜಿಲ್ಲೆಯಲ್ಲಿ ಅವರು ಜನಪ್ರಿಯರಾಗಿದ್ದರು. ವರ್ಷದ ಹಿಂದೆ ಕೋಟ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಸಮಾಜ ಸೇವೆಯಲ್ಲೂ ತೊಡಗಿದ್ದರು. ಅಕ್ರಮ ಜಲ್ಲಿ ಕ್ರಷರ್ ಮತ್ತು ಕೆಂಪು ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದರು.

ಇದೇ 7ರಂದು ಕೆಲಸ ಮುಗಿಸಿಕೊಂಡು ಬ್ರಹ್ಮಾವರದಿಂದ ರಾತ್ರಿ ಮನೆಗೆ ಹೋಗುತ್ತಿದ್ದಾಗ ಮನೆಯ ಕೂಗಳತೆ ದೂರದಲ್ಲೇ ಅಡ್ಡಗಟ್ಟಿದ ದುಷ್ಕರ್ಮಿಗಳು ಬೈಕ್ ಸಮೇತ ವಾಹನದಲ್ಲಿ ಅವರನ್ನು ಅಪಹರಿಸಿಕೊಂಡು ಹೋಗಿದ್ದರು. ದುಷ್ಕರ್ಮಿಗಳು ವಿರಾಜಪೇಟೆ- ಬೈಂದೂರು ಹೆದ್ದಾರಿ ಬದಿ ಬೈಕ್ ಬಿಟ್ಟು ಹೋಗಿದ್ದರು. ಉಡುಪಿಯ ಶಂಕರನಾರಾಯಣ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

`ಅಡಿಗ ನನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಆರ್‌ಟಿಐ ಕಾರ್ಯಕರ್ತನಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಗ್ರಾನೈಟ್, ಕ್ರಷರ್ ಮಾಲೀಕರಿಗೆ, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದರು. ಆರ್‌ಟಿಐನಲ್ಲಿ ದಾಖಲೆ ಪಡೆದು, ತಪ್ಪಿತಸ್ಥರಿಂದ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರಕ್ಕೆ ಕಟ್ಟಿಸಿದ್ದರು. ಇದು ಯೋಜಿತ ಕೊಲೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ.  ತ್ವರಿತ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಬೇಕು' ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಒತ್ತಾಯಿಸಿದ್ದಾರೆ.

ಮಡುಗಟ್ಟಿದ ಶೋಕ
ಸಿದ್ದಾಪುರ ವರದಿ: ಸೋಮವಾರ ರಾತ್ರಿ ಅಡಿಗ ಅವರು ನಾಪತ್ತೆ ಆದ ಕ್ಷಣದಿಂದಲೂ ಅವರ ಮನೆ ಮಂದಿ ಕಂಗಾಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರ ತಾಯಿ ಶೃಂಗೇಶ್ವರಿ ಹಾಸಿಗೆ ಹಿಡಿದಿದ್ದರು. ಅವರ ಸಾವಿನ ಸುದ್ದಿ ಕೇಳುತ್ತಲೇ ಮನೆಯಲ್ಲಿ ಶೋಕ ಮಡುಗಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT