ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಸಂಪರ್ಕ ಕ್ಷೇತ್ರ-ಹೊಸ ಅವಕಾಶ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನವನ್ನು ಆಧರಿಸಿದ ಉದ್ಯಮ ಕ್ಷೇತ್ರ ಇನ್ನಷ್ಟು ಹೆಚ್ಚು ವರಮಾನ ಗಳಿಸಲು ಹಾಗೂ ವೇಗದ ಬೆಳವಣಿಗೆ ಕಾಣಲು ಈವರೆಗಿನ ರೂಢಿಗತ ಮೂಲಗಳನ್ನಷ್ಟೇ ನಂಬಿಕೊಂಡು ಕೂತರಾಗದು. ಅಂತರ್ಜಾಲ, ಮೂರು ಮತ್ತು ನಾಲ್ಕನೇ ತಲೆಮಾರಿನ ತರಂಗಗುಚ್ಛ(3ಜಿ-4ಜಿ), ಮೊಬೈಲ್ ತಂತ್ರಜ್ಞಾನ, ದೊಡ್ಡ ಪ್ರಮಾಣದ ದತ್ತಾಂಶ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಗ 2020ರ ವೇಳೆಗಾದರೂ ಒಟ್ಟು 30,000 ಕೋಟಿ ಅಮೆರಿಕನ್ ಡಾಲರ್ (ರೂ16.20 ಲಕ್ಷ ಕೋಟಿ) ಆದಾಯ ಗಳಿಕೆ ಸಾಧ್ಯವಾಗುತ್ತದೆ...

ಇದು, ಸಾಫ್ಟ್‌ವೇರ್ ಮತ್ತು ಸೇವಾ ಕಂಪೆನಿಗಳ ರಾಷ್ಟ್ರೀಯ ಸಂಘಟನೆ(ಎನ್‌ಎಎಸ್‌ಎಸ್‌ಕಾಂ) `ನಾಸ್ಕಾಂ'ನ ಮುನ್ನೋಟ.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮೊಬೈಲ್ ಅಪ್ಲಿಕೇಷನ್‌ಗಳ ಮಾರುಕಟ್ಟೆಯೂ ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಮೊಬೈಲ್‌ನಲ್ಲಿ ಅಂತರ್ಜಾಲ ಬಳಕೆ ಮತ್ತು ಅದರ ವಿವಿಧ ಸಾಧ್ಯತೆಗಳೂ ತೆರೆದುಕೊಳ್ಳುತ್ತಿವೆ. ಬಳಕೆದಾರರೂ ಮೊಬೈಲ್‌ನಲ್ಲಿಯೇ ಅಂತರ್ಜಾಲ ಸೌಕರ್ಯದ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ, `ಕ್ಲೌಡ್ ಕಂಪ್ಯೂಟಿಂಗ್' ಎಂಬ ಉದ್ಯಮ ಸ್ನೇಹಿ ತಂತ್ರಜ್ಞಾನವೂ ನಿದಾನವಾಗಿ ಗರಿಗೆದರುತ್ತಿದೆ. ಹೊಸದಾಗಿ ಮಾರುಕಟ್ಟೆಗೆ ಪರಿಚಯವಾಗುವ ಯಾವುದೇ ತಂತ್ರಜ್ಞಾನ, ಅಪ್ಲಿಕೇಷನ್‌ಗಳನ್ನು ಬಹಳ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಲೂ ಕ್ಲೌಡ್ ಕಂಪ್ಯೂಟಿಂಗ್ ಉತ್ತಮ ರೀತಿ ನೆರವಾಗುತ್ತಿದೆ.

ರೂ37 ಲಕ್ಷ ಕೋಟಿಗೆ ಕ್ಲೌಡ್
`ನಾಸ್ಕಾಂ'ನ ವರದಿ ಪ್ರಕಾರ ಜಾಗತಿಕ `ಕ್ಲೌಡ್ ಕಂಪ್ಯೂಟಿಂಗ್ ಸೇವೆ'ಗಳ ಮಾರುಕಟ್ಟೆ 2020ರ ವೇಳೆಗೆ 65,000 ಕೋಟಿಯಿಂದ 70,000 ಕೋಟಿ ಡಾಲರ್‌ಗಳ (ರೂ35.10 ಲಕ್ಷ ಕೋಟಿಯಿಂದ ರೂ37.80 ಲಕ್ಷ ಕೋಟಿ) ಪ್ರಮಾಣಕ್ಕೆ ಬೆಳೆಯುವ ನಿರೀಕ್ಷೆ ಇದೆ.

ಭಾರತದಲ್ಲಿನ `ಕ್ಲೌಡ್ ಕಂಪ್ಯೂಟಿಂಗ್ ಸೇವೆ'ಗಳ ಕ್ಷೇತ್ರವೂ 1500 ಕೋಟಿಯಿಂದ 1800 ಕೋಟಿ ಡಾಲರ್ (ರೂ 81,000 ಕೋಟಿಯಿಂದ ರೂ97200 ಕೋಟಿ)ಗೆ ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ' ಎನ್ನುತ್ತಾರೆ `ಟಾಟಾ ಡೊಕೊಮೊ'ದ ಎಂಟರ್‌ಪ್ರೈಸಸ್ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥ ಹಿಮಾಂಶು ಖನ್ನಾ.

ಪ್ರಸ್ತುತ ದೂರಸಂಪರ್ಕ ಕ್ಷೇತ್ರದ ಬಹುತೇಕ ಕಂಪೆನಿಗಳು ಬಿಡಿಬಿಡಿ ಗ್ರಾಹಕರನ್ನು ಆಧರಿಸಿದ ಮಾರುಕಟ್ಟೆಯತ್ತಲೇ ಗಮನ ಕೇಂದ್ರೀಕರಿಸಿವೆ. ದರ ಸಮರ ಕಾರಣದಿಂದಾಗಿ ಶುಲ್ಕ ಕಡಿಮೆ ಆಗಿರುವುದರಿಂದ ದ್ವನಿ ಆಧಾರಿತ ಸೇವೆಗಳ ಬಳಕೆ ಕಳೆದ ಮೂರು ವರ್ಷಗಳಿಂದ ಭಾರಿ ಪ್ರಮಾಣ ಹೆಚ್ಚಿರಬಹುದು, ಹೆಚ್ಚಿನ ವರಮಾನವನ್ನೂ ತಂದುಕೊಟ್ಟಿರಬಹುದು. ಆದರೆ ಆ ಮಾರುಕಟ್ಟೆ ಈಗ ಬಹುತೇಕ ಸ್ಥಿರವಾಗಿಬಿಟ್ಟಿದೆ. ಅಂದರೆ, ಹೆಚ್ಚಿನ ಬೆಳವಣಿಗೆಯನ್ನೇನೂ ಕಾಣುತ್ತಿಲ್ಲ. ಹಾಗಾಗಿ, ದೂರಸಂಪರ್ಕ ಸೇವೆ ಒದಗಿಸುವ ಕಂಪೆನಿಗಳು ಪರ್ಯಾಯ ಆದಾಯ ಮೂಲಗಳತ್ತ ಗಮನ ಹರಿಸಬೇಕಿದೆ. ಇಲ್ಲಿ, `ಎಂಟರ್‌ಪ್ರೈಸ್ ಪ್ರಾಡಕ್ಟ್ಸ್' ಹೆಚ್ಚು ಅವಕಾಶಗಳಿರುವ ಹಾಗೂ ಬಹಳ ಸ್ಥಿರವಾದ ಆದಾಯ ತಂದುಕೊಡುವ ಕ್ಷೇತ್ರ ಎನ್ನುವುದು ಖನ್ನಾ ವಿಶ್ಲೇಷಣೆ.

ಕಂಪೆನಿಗಳೂ ತಮ್ಮ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ನಂಟನ್ನು ಮೊಬೈಲ್ ಮೂಲಕ ಬೆಸೆಯಲು ಮುಂದಾಗಿರುವುದು ಈ ವಿಭಾಗದಲ್ಲಿನ ಹೊಸ ಬೆಳವಣಿಗೆ. ಅದರಲ್ಲೂ, ಮೊಬೈಲ್ ಅಪ್ಲಿಕೇಷನ್ ಸೇವೆಗಳನ್ನು `ಕ್ಲೌಡ್' ಮೂಲಕ ಒದಗಿಸುವ ಸಾಧ್ಯತೆಯು ಉದ್ಯಮಕ್ಕೆ ಹೊಸ ದಿಕ್ಕನ್ನೇ ತೋರಿದಂತಾಗಿದೆ. `ದೂರವಾಣಿ ಸಂಪರ್ಕ ಕ್ಷೇತ್ರದ ಕಂಪೆನಿ'(ಟಿಎಸ್‌ಪಿ)ಗಳಿಗೆ ಎಂಟರ್‌ಪ್ರೈಸ್ ಬಿಜಿನೆಸ್ ವಿಭಾಗದ ಮುಖ್ಯವಾಹಿನಿಗೆ ನೇರವಾಗಿ ಪ್ರವೇಶ ಪಡೆದಂತಾಗಲಿದೆ. ಈ ವಲಯದಲ್ಲಿನ ವಿಪುಲ ಅವಕಾಶವನ್ನು ತಮ್ಮ ಕಂಪೆನಿಯೂ ಸೂಕ್ತ ರೀತಿ ಬಳಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ದೂರಸಂಪರ್ಕ ಕ್ಷೇತ್ರದಲ್ಲಿ ಮೂರು ಬಗೆ ಸೇವೆಗಳಿವೆ. ಮೊದಲನೆಯದು ವೈರ್‌ಲೈನ್ ಡಾಟಾ ಸರ್ವಿಸಸ್. ಒಂದು ಕಚೇರಿಯಿಂದ ಇನ್ನೊಂದು ಕಚೇರಿ ನಡುವೆ ನೇರ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕ ಇದರ ಭಾಗ. ಎರಡನೆಯದು, ದ್ವನಿ ಆಧರಿಸಿದ ಸೇವೆಗಳ ಸ್ಥಿರ ದೂರವಾಣಿ. ಇದರಲ್ಲಿಯೂ ಮೌಲ್ಯವರ್ಧಿತ ಸೇವೆ(ವಿಎಎಸ್)ಗಳಿಗೆ, ಆಡಿಯೋ ಕಾನ್ಫೆರೆನ್ಸ್, ಶುಲ್ಕ ರಹಿತ ಕರೆ ಸೇವೆಗಳನ್ನು ಒದಗಿಸಲಾಗುತ್ತಿದೆ. ಮೂರನೆಯದೇ, ವಿಪುಲ ಅವಕಾಶಗಳಿರುವ `ಮೊಬಿಲಿಟಿ'. ಟಾಟಾ ಡೊಕೊಮೊ ಸಹ ಈ ಮೂರೂ ವಿಭಾಗಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಜತೆಗೆ ಎಂಟರ್‌ಪ್ರೈಸ್ ಬಿಜಿನೆಸ್ ವಿಭಾಗದಲ್ಲಿ `ಎಸ್‌ಐಪಿ ಟ್ರಂಕ್'(ಐಪಿ-ಪಿಬಿಎಕ್ಸ್), ಹೋಸ್ಟೆಡ್ ಕ್ಯಾಪೇನ್ ಮ್ಯಾನೇಜ್‌ಮೆಂಟ್ ಮತ್ತು `ಮೆಷಿನ್ ಟು ಮೆಷಿನ್ ಕಮ್ಯುನಿಕೇಷನ್'(ಎಂ2ಎಂ) ಸೇವೆಗಳನ್ನೂ ನೀಡುತ್ತಿದೆ ಎನ್ನುತ್ತಾರೆ.

`ಫ್ರಾಸ್ಟ್ ಅಂಡ್ ಸಲಿವ್ಯಾನ್' ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ 2020ರ ವೇಳೆಗೆ ಒಟ್ಟು 500 ಕೋಟಿ ಯಂತ್ರಗಳು (ಎಂ2ಎಂ) ಪರಸ್ಪರ ಸಂಪರ್ಕ ಹೆಣೆದುಕೊಂಡಿರುತ್ತವೆ. ದೂರಸಂಪರ್ಕ ಕ್ಷೇತ್ರದ ಉದ್ಯಮಗಳಿಗೆ ಇದು ದೊಡ್ಡ ಪ್ರಮಾಣದ ವರಮಾನವನ್ನೂ ತಂದುಕೊಡಲಿದೆ.

ಭಾರತದಲ್ಲಿ `ಎಂ2ಎಂ' 7 ವಿಭಾಗಗಳಲ್ಲಿ ಹೆಚ್ಚು ಬಳಕೆಯಾಗಲಿದೆ. ಆಟೊಮೇಟೆಡ್ ಮೀಟರ್ ರೀಡಿಂಗ್(ಉದಾ: ಮನೆ. ಕಚೇರಿ, ಕೈಗಾರಿಕೆಗಳ ವಿದ್ಯುತ್ ಮೀಟರನ್ನು ಆಯಾ ವ್ಯಾಪ್ತಿಯ ಎಸ್ಕಾಂ ಕಚೇರಿಗಳಿಂದಲೇ ಓದಬಹುದು), ಲಾಜಿಸ್ಟಿಕ್ (ಸರಕು ಸಾಗಣೆ ವ್ಯವಸ್ಥೆ), ಪರಿಕರ ತಯಾರಿಕೆ, ಸೇವಾ ಕ್ಷೇತ್ರ, ಇಂಧನ ಮತ್ತು ನಾಗರಿಕ ಸೇವಾ ಕ್ಷೇತ್ರ, ಸರ್ಕಾರಿ ಸಂಸ್ಥೆಗಳು, ದೂರಸಂಪರ್ಕ ವಲಯದಲ್ಲಿ `ಎ2ಎಂ' ಸೇವೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಬಳಕೆಯಾಗಲಿವೆ ಎನ್ನುವುದು ಹಿಮಾಂಶ ಅವರ ವಿವರಣೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT