ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಇಂಧನ ಕೊರತೆಯ ಆತಂಕ

Last Updated 30 ಡಿಸೆಂಬರ್ 2010, 7:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇರಾನ್‌ನಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ನೀಡಲಾಗುತ್ತಿದ್ದ ಹಣಕಾಸು ನೆರವನ್ನು ಆರ್‌ಬಿಐ ನಿಲ್ಲಿಸಿರುವುದರಿಂದ ಮುಂದಿನ ತಿಂಗಳಿಂದ ದೇಶದಲ್ಲಿ ತೈಲ ಕೊರತೆ ಉಂಟಾಗುವ ಆತಂಕ ತಲೆದೋರಿದೆ.ದೇಶದ ತೈಲ ಬೇಡಿಕೆಯ ಶೇಕಡಾ 12ರಷ್ಟನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತೈಲ ಉದ್ಯಮ ರಂಗ ಅಥವಾ ಸರ್ಕಾರದ ಜತೆ ಸಮಾಲೋಚಿಸದೆ ಆರ್‌ಬಿಐ ಇರಾನ್‌ನಿಂದ ಕಚ್ಚಾ ತೈಲ ಆಮದಿಗೆ ನೀಡುತ್ತಿದ್ದ ಹಣಕಾಸು ನೆರವನ್ನು ನಿಲ್ಲಿಸಿರುವುದರಿಂದ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು ಜನವರಿಯಲ್ಲಿ ನಿಂತುಹೋಗಲಿದೆ. ಬದಲಿ ವ್ಯವಸ್ಥೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗದೆ ಇರುವುದರಿಂದ ದೇಶವು ತೈಲ ಕೊರತೆ ಎದುರಿಸಬೇಕಾದ ಸಂದಿಗ್ದ ಸ್ಥಿತಿ ತಲೆದೋರಿದೆ.

ಕಚ್ಚಾ ತೈಲ ಆಮದಿಗೆ 1976ರಿಂದ ನೀಡಲಾಗುತ್ತಿದ್ದ ಹಣಕಾಸು ನೆರವನ್ನು ಬದಲಿ ವ್ಯವಸ್ಥೆ  ಮಾಡದೆ ಆರ್‌ಬಿಐ ಏಕಾಏಕಿ ನಿಲ್ಲಿಸಿರುವುದರಿಂದ ಭಾರಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ತೈಲ ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.ಇರಾನ್‌ನಿಂದ ಕಚ್ಚಾ ತೈಲ ಆಮದಾಗುವುದು ನಿಂತರೆ ತೈಲ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗುವುದರ ಜತೆಗೆ ತೈಲ ಬೆಲೆ ಗಗನಕ್ಕೇರುತ್ತದೆ. ಇದರ ಒಟ್ಟಾರೆ ಪರಿಣಾಮ ಭಾರಿ ಪ್ರಮಾಣದ್ದಾಗಿರುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಈಗ ಇರಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ತೈಲಕ್ಕೆ ಏಷ್ಯಾ ಕ್ಲಿಯರಿಂಗ್ ಯೂನಿಯನ್ ಮೂಲಕ ಹಣ ಪಾವತಿಯಾಗುತ್ತಿದೆ. ಆರ್‌ಬಿಐ ಆದೇಶದ ಪ್ರಕಾರ ಇನ್ನು ಮುಂದೆ ಈ ವ್ಯವಸ್ಥೆಯಿಂದ ಹಣ ಪಾವತಿಯಾಗುವಂತಿಲ್ಲ. ಈ ಯುನಿಯನ್‌ನಲ್ಲಿ ಭಾರತ, ಬಾಂಗ್ಲಾದೇಶ, ಮಾಲ್ಡಿವ್ಸ್, ಮ್ಯಾನ್ಮಾರ್, ಇರಾನ್, ಪಾಕಿಸ್ತಾನ, ಭೂತಾನ್,  ನೇಪಾಳ ಮತ್ತು ಶ್ರೀಲಂಕಾದ ಕೇಂದ್ರ ಬ್ಯಾಂಕುಗಳು ಇವೆ. 2008ರ ವರೆಗೆ ಈ ವ್ಯವಸ್ಥೆಯಲ್ಲಿ ಅಮೆರಿಕ ಡಾಲರ್ ಮೂಲಕ ಪಾವತಿಯಾಗುತ್ತಿತ್ತು. ಆದರೆ ಅಮೆರಿಕ ಇರಾನ್ ಮೇಲೆ ದಿಗ್ಭಂಧನ ಹೇರಿದ್ದರಿಂದ ನಂತರ ಯುರೋ ಕರೆನ್ಸಿಯ ಮೂಲಕ ಪಾವತಿ ಮಾಡಲಾಗುತ್ತಿದೆ.

ಇತ್ತೀಚೆಗೆ ಯುರೋಪ್ ಕೇಂದ್ರ ಬ್ಯಾಂಕ್ ಆರ್‌ಬಿಐ ಮತ್ತು ಇತರ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಪತ್ರ ಬರೆದು ಅಮೆರಿಕ ದಿಗ್ಬಂಧನ ಹೇರಿದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಜತೆಗಿನ ವ್ಯವಹಾರಕ್ಕೆ ಯುರೊ ಬಳಸಬಾರದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT