ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಪಾಂಡೆ, ರವಿ ವಾಕ್ಸಮರ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಅವಕಾಶ ಇಲ್ಲ. ನಿಯಮ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಸೋಮವಾರ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಈ ವಿಷಯದ ಚರ್ಚೆ ಕಾಲಕ್ಕೆ ದೇಶಪಾಂಡೆ ಮತ್ತು ಬಿಜೆಪಿಯ ಸಿ.ಟಿ. ರವಿ ಮಧ್ಯೆ ಮಾತಿನ ವಾಗ್ವಾದ ನಡೆಯಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರವಿ ಅವರು, `ಹಲವು ಎಂಜಿನಿಯರಿಂಗ್ ಕಾಲೇಜುಗಳು ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ' ಎಂದು ದೂರಿದರು.

ಕಾಲೇಜುಗಳ ಶುಲ್ಕ ಪರಿಷ್ಕರಣೆ ಸಂಬಂಧ ನ್ಯಾಯಮೂರ್ತಿ ವೆಂಕಟರಾಮಯ್ಯ ಸಮಿತಿ ನೀಡಿರುವ ವರದಿ ಆಧರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ಅಧಿಕಾರಾವಧಿಯಲ್ಲೂ ಏಕರೂಪ ಶುಲ್ಕ ನೀತಿ ಜಾರಿಗೆ ತರುವ ಪ್ರಯತ್ನ ಮಾಡಲಾಗಿತ್ತು. ಆದರೆ ಈಗ ಕಾಲೇಜುಗಳ ಮನಸ್ಸಿಗೆ ತೋಚಿದಂತೆ ಶುಲ್ಕ ವಸೂಲಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಈ ಕುರಿತು ಉತ್ತರ ನೀಡಿದ ಸಚಿವರು, `ನ್ಯಾಯಮೂರ್ತಿ ವೆಂಕಟರಾಮಯ್ಯ ಸಮಿತಿ ಮೂರು ವರದಿಗಳನ್ನು ನೀಡಿದೆ. ಅವು ಪರಿಶೀಲನೆಯಲ್ಲಿವೆ. ಆಯಾ ಸಂಸ್ಥೆಗಳಲ್ಲಿ ಇರುವ ಸೌಲಭ್ಯಗಳನ್ನು ಆಧರಿಸಿ ಹೆಚ್ಚುವರಿ ಶುಲ್ಕ ನಿಗದಿ ಮಾಡುವಂತೆ ಕೆಲವು ಕಾಲೇಜುಗಳು ಮನವಿ ಮಾಡಿದ್ದವು. ಈ ಸಂಬಂಧ ರವಿ ಅವರು ಸಚಿವರಾಗಿದ್ದಾಗಲೇ ಒಂದು ಆದೇಶ ಹೊರಡಿಸಲಾಗಿತ್ತು. ಈಗ ಯಾವುದೇ ಸಂಸ್ಥೆಗಳಿಗೂ ಹೆಚ್ಚುವರಿ ಶುಲ್ಕ ವಸೂಲಿಗೆ ಅವಕಾಶ ನೀಡಿಲ್ಲ' ಎಂದರು.

`ನೀವು ಸಚಿವರಾಗಿದ್ದ ಸಂದರ್ಭದಲ್ಲೂ ಏಳು ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿವರೆಗೆ ಹೆಚ್ಚುವರಿ ಶುಲ್ಕ ಪಡೆದ ಪ್ರಕರಣಗಳು ನಡೆದಿದ್ದವು. ಆಗ ನೀವು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ' ಎಂದು ದೇಶಪಾಂಡೆ ಅವರು ರವಿ ಅವರಿಗೆ ತಿರುಗೇಟು ನೀಡಿದ್ದು ವಾಗ್ಯುದ್ಧಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT