ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಹೊಟ್ಟೆ ರಂಗನಾಥಸ್ವಾಮಿ ರಥೋತ್ಸವ

ಚಿಕ್ಕಜಾಜೂರು; ಏಕನಾಥೇಶ್ವರಿ ಸಿಡಿ ಉತ್ಸವ, ಹರಕೆ ತೀರಿಸಿದ ಭಕ್ತರು
Last Updated 26 ಏಪ್ರಿಲ್ 2013, 9:19 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲಿನಲ್ಲಿ ಗುರುವಾರ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥಸ್ವಾಮಿಯ ರಥೋತ್ಸವ ವೈಭವಯುತವಾಗಿ ನಡೆಯಿತು.
ರಥೋತ್ಸವಕ್ಕೂ ಮೊದಲು ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯನ್ನು ದೇವಸ್ಥಾನದಿಂದ ಛತ್ರಿ, ಚಾಮರ, ಪಲ್ಲಕ್ಕಿಗಳೊಂದಿಗೆ ತೇರುಬೀದಿಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಡೊಳ್ಳು, ನಗಾರಿ, ಚಮಾಳ, ಬಾಣಪ್ಪ, ಸೋಮನ ಕುಣಿತ ಮತ್ತಿತರ ಕಲಾ ಪ್ರಕಾರಗಳು ಆಕರ್ಷಣೆಯಾಗಿದ್ದವು.

ಮೊದಲಿಗೆ ರಥಾರೋಹಣೋತ್ಸವ, ತೆಂಗಿನಕಾಯಿ ಸೇವೆ ಬಳಿಕ  ಮಹಾಪೂಜೆ ಮಾಡಲಾಯಿತು.ನಂತರ ಪೂರ್ವಾಭಿಮುಖವಾಗಿ ಇರುವ ರಂಗನಾಥಸ್ವಾಮಿಯ ಬೆಟ್ಟದ ಕಡೆ ರಥವನ್ನು ಭಕ್ತರು ಎಳೆದರು. ದಾರಿಯುದ್ದಕ್ಕೂ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ನಂತರ ಮಹಾಮಂಗಳಾರತಿ, ಮಣೇವು, ಉರುಳುಸೇವೆ, ಪಾನಕ ಪೂಜೆಗಳು ನಡೆದವು.

ಏಳೂರಿನ ಜಾತ್ರೆ: ರಥೋತ್ಸವ ಲೋಕದೊಳಲು ಗ್ರಾಮದಲ್ಲಿ ನಡೆದರೂ, ಸುತ್ತಲಿನ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ, ಇಡೇಹಳ್ಳಿ, ಗುಂಡೇರಿ, ಬೊಮ್ಮನಕಟ್ಟೆ ಸೇರಿದಂತೆ 7 ಹಳ್ಳಿಗಳ ಜನ ಒಗ್ಗಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಇದರಿಂದ ಇದು ಏಳೂರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಬೆಟ್ಟದ ಮೇಲಿನ ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯುವುದೂ ಸೇರಿದಂತೆ ಜಾತ್ರೆಯ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ.
ಉಚಿತ ಹಾಲು, ಎಣ್ಣೆ ವಿತರಣೆ: ಜಾತ್ರೆಗೆ ಬರುವ ಚಿಕ್ಕಮಕ್ಕಳಿಗೆ ಕುಡಿಯಲು ಹಾಲು, ತಲೆಗೆ ಹರಳೆಣ್ಣೆ ಕೊಡುವುದು, ಭಕ್ತರಿಗೆ ನೀರು ವಿತರಿಸುವುದು ಇಲ್ಲಿನ
ವಿಶೇಷ.

ಗುಡ್ಡದ ಸಾಂತೇನಹಳ್ಳಿಯ ಬಸಪ್ಪ, ಹಾಲಪ್ಪ, ಉಜ್ಜಿನಪ್ಪ ಎಂಬುವರ ಮನೆತನದಿಂದ ಈ ಕಾರ್ಯ ನಡೆಯುತ್ತದೆ.ತಿರುಮಲಾಪುರದ ಯಾದವ ಭಕ್ತರಿಂದ ಕೋಲಾಟ, ಕರಡಿಮೇಳ, ಭಜನೆ ಕಾರ್ಯಕ್ರಮಗಳು ನಡೆದವು. ರಥೋತ್ಸವದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ಇಂದು ಓಕುಳಿ ಪ್ರದರ್ಶನ ನಡೆಯಲಿದೆ.

ಸಿಡಿ ಉತ್ಸವ
ಚಿಕ್ಕಜಾಜೂರು:
ಹೊಳಲ್ಕೆರೆ ತಾಲ್ಲೂಕಿನಲ್ಲಿ ಏಕನಾಥೇಶ್ವರಿ ಅಮ್ಮನವರ ಸಿಡಿ ಉತ್ಸವ ಗುರುವಾರ ಬಿ. ದುರ್ಗ ಗ್ರಾಮದಲ್ಲಿ ನಡೆಯಿತು.ಬೆಳಿಗ್ಗೆಯಿಂದಲೇ ಏಕನಾಥೇಶ್ವರಿ ಹಾಗೂ ಚೌಡೇಶ್ವರಿಗೆ ಗಂಗಾ ಪೂಜೆ ಹಾಗೂ ಅಭಿಷೇಕ ನಡೆಸಲಾಯಿತು.

ಸಂಜೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ, ಚೌಡೇಶ್ವರಿ ಅಮ್ಮನವರ ಸಿಡಿ ರಥವನ್ನು ಹೂವು ಹಾಗೂ ತಾಮ್ರದ ಪಟ್ಟಿಕೆಗಳಿಂದ ಸುಂದರವಾಗಿ ಅಲಂಕಾರ ಮಾಡಲಾಯಿತು.

ಸಿಡಿ ರಥಕ್ಕೆ ದೊಡ್ಡೆಡೆ ಸೇವೆಯನ್ನು ಮಾಡಿ, ಆಯ್ದ ಎತ್ತುಗಳನ್ನು ಸಿಡಿ ರಥಕ್ಕೆ ಕಟ್ಟಿ, ಸಿಡಿ ಏರುವ ಭಕ್ತನನ್ನು ಸಿಡಿ ಕಂಬಕ್ಕೆ ಬಟ್ಟೆಯಿಂದ ಕಟ್ಟಲಾಯಿತು. ಎತ್ತುಗಳನ್ನು ನಿಧಾನವಾಗಿ ಸ್ವಲ್ಪ ದೂರದವರೆಗೆ ಕರೆದೊಯ್ದು ಮತ್ತೆ ಸ್ವಸ್ಥಾನಕ್ಕೆ ತರಲಾಯಿತು. ಸುಮಾರು 8 ಜನ ಭಕ್ತರು ಸಿಡಿ ಮರವನ್ನು ಏರಿ ಹರಕೆಯನ್ನು ತೀರಿಸಿದರು.ಸಿಡಿ ಉತ್ಸವ ನೋಡಲು ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT