ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಭಾಷಿಕರ ವಿಶಿಷ್ಟ ಗ್ರಾಮ ಸಿದ್ದೇಶ್ವರನದುರ್ಗ

Last Updated 12 ಏಪ್ರಿಲ್ 2013, 10:20 IST
ಅಕ್ಷರ ಗಾತ್ರ

ಚಳ್ಳಕೆರೆ ತಾಲ್ಲೂಕಿನ ಹಿಂದುಳಿದ, ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡ ಪರಶುರಾಂಪುರ ಹೋಬಳಿಯ ಆಂಧ್ರಗಡಿ ಭಾಗದಲ್ಲಿ ಇರುವ ಸಿದ್ದೇಶ್ವರನದುರ್ಗ ಗ್ರಾಮವು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು ತನ್ನದೇ ಆದ ವೈಶಿಷ್ಟ್ಯ ಒಳಗೊಂಡಿದೆ.

ಸುಮಾರು 4,500 ಜನಸಂಖ್ಯೆ ಹೊಂದಿರುವ ಪಂಚಾಯ್ತಿ ಕೇಂದ್ರಸ್ಥಾಳವಾದ ಈ ಗ್ರಾಮದಲ್ಲಿ ಹೆಚ್ಚಾಗಿ ರೆಡ್ಡಿ, ನಾಯಕ, ಗೊಲ್ಲ ಹಾಗೂ ಪರಿಶಿಷ್ಟರನ್ನೊಳಗೊಂಡಂತೆ ಸಮಾಜದ ಎಲ್ಲಾ ಸಮುದಾಯದ ಜನರು ವಾಸವಾಗಿದ್ದಾರೆ. ರೆಡ್ಡಿಗಳ ಮಾತೃಭಾಷೆ ತೆಲುಗು ಆಗಿದ್ದರೂ ಮನೆಯಿಂದ ಹೊರಬಂದರೆ ಎಲ್ಲರೂ ಕನ್ನಡವನ್ನು ಬಳಸುತ್ತಾರೆ. ಸಾಮಾನ್ಯವಾಗಿ ಈ ಗ್ರಾಮದ ಪ್ರತಿಯೊಬ್ಬರೂ ದ್ವಿಭಾಷಿಗಳಾಗಿದ್ದಾರೆ.
ಕೋಟೆಯ ಸುತ್ತಲೂ ಸುತ್ತುವರಿದಿರುವ ಸಿದ್ದೇಶ್ವರನ ದುರ್ಗ ಗ್ರಾಮವು ಪುರ್ವಕ್ಕೆ ಪಾವಗಡ ತಾಲ್ಲೂಕನ್ನು, ಉತ್ತರ ಹಾಗೂ ದಕ್ಷಿಣಕ್ಕೆ ಆಂಧ್ರದ ಅನಂತಪುರ ಜಿಲ್ಲೆಯ ಗಡಿಯನ್ನು ಒಳಗೊಂಡಿದೆ. ಗ್ರಾಮದಲ್ಲಿ ಸಿದ್ದೇಶ್ವರ, ಮಾರಿಕಾಂಬಾ, ಹೊರವಲಯದ ಕಂಚೀವರದಸ್ವಾಮಿ, ಆಂಜನೇಯ, ಬಸವಣ್ಣ, ಶ್ರೀರಾಮ, ವೀರಮಾಳಮ್ಮ, ಚಿತ್ರಲಿಂಗೇಶ್ವರ, ರಂಗನಾಥ, ಬಾಲದೇವರು, ನರಸಿಂಹಸ್ವಾಮಿ, ಈರಣ್ಣ, ಚನ್ನಿಗರಾಯ, ಕನ್ನೇರಮ್ಮ, ಶ್ರಿಕೃಷ್ಣ ಇನ್ನೂ ಮುಂತಾದ 35ಕ್ಕೂ ಹೆಚ್ಚು ದೇವರುಗಳು ಇವೆ. ಹಿಂದೆ ನೂರಾಒಂದು ದೇವರುಗಳಿದ್ದವೆಂದು ಹಿರಿಯರು ಹೇಳುತ್ತಾರೆ.

ಹಿನ್ನೆಲೆ: ಸಿದ್ದೇಶ್ವರನ ದುರ್ಗ ಗ್ರಾಮವನ್ನು ಹಿಂದೆ `ಕೊಳಪಾಳ' ಎಂದು ಕರೆಯುತ್ತಿದ್ದರು. ಈಗಲೂ ಹಿರಿಯರು ಇದೆ ಹೆಸರಿನಿಂದ ಕರೆಯುವ ವಾಡಿಕೆಯಿದೆ. ಕೊಳಪಾಳ ಎಂದು ಹೆಸರು ಬರಲು `ಕೊಳ' ಎಂದರೆ ತಗ್ಗಾದ ಅಥವಾ ಕೊರಕಲಾದ `ಪಾಳು” ಎಂದರೆ ಹಾಳವಾದ ಕೊಳಗಳು ಕೋಟೆಯಲ್ಲಿ ಹೆಚ್ಚಾಗಿ ಇದ್ದುದರಿಂದ ಈ ಹೆಸರು ಬಂದಿರಬೇಕೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಅದಕ್ಕೆ ಪೂರಕವೆಂಬಂತೆ ಈಗಲೂ ಕೋಟೆಯಲ್ಲಿ ಅರ್ಧ ಮುಚ್ಚಿಹೋಗಿರುವ ಕೊಳಗಳನ್ನು ಕಾಣುತ್ತೇವೆ. ಕಾಲಾನಂತರದಲ್ಲಿ ಊರುಬಾಗಿಲಿನ ಬಳಿ `ಕುದುರೆ ಲಾಯ'ದ ನಾಯಕನು ಕುದುರೆಗಳಿಗೆ ಹುರುಳಿಯನ್ನು ಬೇಯಿಸುವಾಗ ಪಕ್ಕದಲ್ಲಿದ್ದ ಕಲ್ಲುಗುಂಡು ಬಳಸಿದಾಗ ಅವುಗಳು ಒಡೆದುಹೋಗುತ್ತಿದ್ದವಂತೆ ಇದರಿಂದ ಬೇಸತ್ತು ಅಲ್ಲಿಯೇ ಒಂದು ಕಲ್ಲುಗುಂಡನ್ನು ಪ್ರತಿಷ್ಠಾಪಿಸಿ ಪೂಜಿಸಿ ಅದಕ್ಕೆ ಸಿದ್ದೇಶ್ವರ ಎಂಬ ಹೆಸರಿನಿಂದ ಕರೆಯಲಾಗಿ ಮುಂದೆ ಈ ಹೆಸರೆ ಗ್ರಾಮಕ್ಕೆ ಬಂದಿರಬಹುದೆಂದು ಕೆಲವರ ಅನಿಸಿಕೆ. ಅದನ್ನು ಪುಷ್ಠೀಕರಿಸುವಂತೆ ಸಿದ್ದೇಶ್ವರ ದೇವಾಲಯದಲ್ಲಿ ಇರುವ ಲಿಂಗವು ಕಗ್ಗಲ್ಲಿನಿಂದ ಕೂಡಿರುವುದನ್ನು ಕಾಣಬಹುದು.

ಇತಿಹಾಸ: ಚಿತ್ರದುರ್ಗ ಹಾಗೂ ನಿಡಗಲ್ಲು ದುರ್ಗದ ಪಾಳೇಗಾರರ ಆಪ್ತನಾಗಿದ್ದ ಮಲ್ಲೂರಿನ ಮಲ್ಲಪ್ಪನ ನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಸಿದ್ದೇಶ್ವರನ ದುರ್ಗ ಗ್ರಾಮದ ಕೆರೆಯ ಪಕ್ಕದಲ್ಲಿದ್ದ ಕೆರೆಯಾಗಳಹಳ್ಳಿ ಎಂಬ ಪುರಾತನ ಗ್ರಾಮದಲ್ಲಿ ವಾಸವಾಗಿದ್ದ ದೊಡ್ಡಮಂದಪ್ಪ ನಾಯಕ ಹಾಗೂ ಚಿಕ್ಕಮಂದಪ್ಪನಾಯಕ ಎಂಬ ಸಹೋದರರು ರಾಯದುರ್ಗದ ಪಾಳೇಗಾರರ ವಶದಲ್ಲಿದ್ದ ಮಲ್ಲಪ್ಪನಾಯಕನ್ನು ಬಿಡಿಸಿದ್ದರ ಫಲವಾಗಿ ಮಲ್ಲಪ್ಪ ನಾಯಕ ತನ್ನ ಮಗಳಾದ ಮಲ್ಲಮ್ಮನನ್ನು ದೊಡ್ಡಮಂದಪ್ಪನಾಯಕನಿಗೆ ಧಾರೆ ಎರೆದು ಸಿದ್ದೇಶ್ವರನ ದುರ್ಗವನ್ನು ಉಡುಗೊರೆಯಾಗಿ ನೀಡಿದರೆಂದು ಶಿಕ್ಷಕ ತಿಪ್ಪೇಸ್ವಾಮಿ ಅವರ ಬಳಿ ಇರುವ ಹಸ್ತಪ್ರತಿಗಳಿಂದ ತಿಳಿಯುತ್ತದೆ.

ಇಲ್ಲಿನ ರೈತರು ಮುಖ್ಯ ಬೆಳೆಯಾಗಿ ಶೇಂಗಾ ಬೆಳೆಯುತ್ತಾರೆ. ಭೂರಹಿತರು ಕೃಷಿ ಕೂಲಿಯನ್ನೇ ನಂಬಿ ಜೀವನ ಸಾಗಿಸಬೇಕು, ಮೂರ‌್ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ಬೆಳೆಯೇ ಆಗಿಲ್ಲ. ಜೀವನ ನಿರ್ವಹಣೆಗಾಗಿ ಕೆಲ ಕುಟುಂಬಗಳು ಹಾಗೂ ಯುವಕರು ಬೆಂಗಳೂರಿನ ಹಾದಿಯನ್ನು ಹಿಡಿದಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ತಂದು ಜನ ಗುಳೇ ಹೋಗುವುದನ್ನು ತಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿಯಲ್ಲಿ ವಾಸಿಸುವವರೇ ಇಲ್ಲದಂತಾಗುತ್ತದೆ ಎನ್ನುತ್ತಾರೆ ಯಕ್ಷಗಾನ ಕಲಾವಿದ ಮೂಳಪ್ಪ.
ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಖಾಸಗಿ ಪಿಯು ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ವ್ಯವಸಾಯ ಸೇವಾ ಸಹಕಾರ ಸಂಘ, ಅಂಚೆ ಕಚೇರಿ, ಇದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನ ಸೌಲಭ್ಯ, ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯಗಳ ಸ್ಥಾಪನೆ,  ನಿವೇಶನವಿಲ್ಲದೇ ಕೋಟೆಯನ್ನು ಒತ್ತುವರಿ ಮಾಡುವುದನ್ನು ತಪ್ಪಿಸಲು ಹೊರವಲಯದಲ್ಲಿ ವಸತಿ ವ್ಯವಸ್ಥೆ, ಮತ್ತು ನೀರಿನ ಮೂಲಗಳ ಸಮೀಪದಲ್ಲಿಯೇ ಪ್ರತ್ಯೇಕವಾದ ದೋಬಿಘಾಟ್, ಸುಸಜ್ಜಿತ ಒಳಚರಂಡಿ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಗಳು ಮಾಡುವ ಮೂಲಕ ಗಡಿಭಾಗಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಪರಮೇಶ್ವರ ಅಭಿಪ್ರಾಯಪಡುತ್ತಾರೆ.

ಪಕ್ಕದ ಆಂಧ್ರದ ಮಾದರಿಯಲ್ಲಿ ಒಣಗಿರುವ ಕೆರೆಗಳಿಗೆ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸವಾಗಬೇಕು. ಫ್ಲೋರೈಡ್‌ರಹಿತ ಶಾಶ್ವತ ನೀರಿನ ವ್ಯವಸ್ಥೆ, ಬೇಸಗೆ ಆಗಿರುವುದರಿಂದ ಸಮರ್ಪಕ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಸಕಾಲಕ್ಕೆ ಒದಗಿಸಬೇಕು. ಗ್ರಾಮದ ಮುಖ್ಯರಸ್ತೆಯನ್ನು ಸರಿಪಡಿಸಲು ಸ್ಥಳೀಯ ಪಂಚಾಯ್ತಿ ಕ್ರಮಕೈಗೊಳ್ಳಬೇಕು. ಪ್ರಾಚೀನ ಕೋಟೆಯನ್ನು ಸಂರಕ್ಷಿಸಲು ಗ್ರಾಮದ ಯುವ ಸಂಘಟನೆಗಳು ಶ್ರಮಿಸಬೇಕು ಎನ್ನುತ್ತಾರೆ ನಿವೃತ್ತ ಪೋಸ್ಟ್ ಮಾಸ್ಟರ್ ನಿರಂಜನಮೂರ್ತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT