ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ಸೀಮೋಲ್ಲಂಘನೆ ವಿನಾಶಕ್ಕೆ ದಾರಿ

Last Updated 12 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಸಾಗರ: ಪ್ರೀತಿಯ ಮೂಲಕ ಸೀಮೋಲ್ಲಂಘನೆಗೆ ಹೊರಟರೆ ಅದು ಫಲಪ್ರದ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ದ್ವೇಷದ ಮೂಲಕ ಆಗುವ ಸೀಮೋಲ್ಲಂಘನೆ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕಥೆಗಾರ ವಸುದೇಂದ್ರ ಹೇಳಿದರು.

ಸಮೀಪದ ಹೆಗ್ಗೋಡುನಲ್ಲಿ ನಡೆಯುತ್ತಿರುವ `ನೀನಾಸಂ~ ಸಂಸ್ಕೃತಿ ಶಿಬಿರದಲ್ಲಿ ಗುರುವಾರ `ಸಾಹಿತ್ಯದ ಸೃಜನಶೀಲ ಪ್ರಕ್ರಿಯೆಗಳಲ್ಲಿ ಸೀಮೋಲ್ಲಂಘನೆ  ಎಂಬ ವಿಷಯ ಕುರಿತು ಮಾತನಾಡಿದ ಅವರು ನಿರ್ದಿಷ್ಟ `ಗುರುತುಗಳೊಂದಿಗೆ ಒಂದು ಗುಂಪು ಇದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಒಂದು ಗುಂಪು ಮತ್ತೊಂದು ಗುಂಪಿಗಿಂತ ಶ್ರೇಷ್ಠ ಅಥವಾ ಕೀಳು ಎಂಬ ಭಾವನೆ ಮೂಡಿಸಿಕೊಂಡರೆ ಸಮಸ್ಯೆ ಆರಂಭವಾಗುತ್ತದೆ ಎಂದರು.

ಸೀಮೋಲ್ಲಂಘನೆ ಆದಾಗ ಎದುರಾಗುವ ಹೊಸ ಸಂಸ್ಕೃತಿಯ ಗುಣಲಕ್ಷಣಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ಈಗಾಗಲೇ ಒಪ್ಪಿಕೊಂಡಿರುವ ನಂಬಿಕೆಗಳೆ ಸತ್ಯ ಎಂಬ ಮನೋಭಾವ ಸರಿಯಲ್ಲ. ಮತ್ತೊಬ್ಬರ ಕಷ್ಟ ಅರ್ಥ ಮಾಡಿಕೊಳ್ಳಲು ನಮ್ಮದೇ ಆದ ಸೀಮೆಯಲ್ಲಿದ್ದರೆ ಸಾಧ್ಯವಿಲ್ಲ. ಕೆಲವೊಮ್ಮೆ ನಮಗೆ ಅರಿವಿಲ್ಲದೇ ಅವಶ್ಯಕತೆ ಬಂದಾಗ ನಾವಾಗಿಯೇ ಸೀಮೋಲ್ಲಂಘನೆ ಮಾಡಿರುತ್ತೇವೆ ಎಂದು ತಿಳಿಸಿದರು.

ಮನುಷ್ಯನ ಜಾಣತನದ ಪ್ರಯೋಗಗಳು ಎಲ್ಲೆಲ್ಲಿ ಆಗಿವೆಯೋ ಅಲ್ಲೆಲ್ಲ ಸೀಮೆಗಳು ಸೃಷ್ಟಿಯಾಗುತ್ತಲೇ ಇವೆ. ಭಾಷೆ, ಜಾತಿ, ಧರ್ಮ, ವರ್ಗ ಈ ಎಲ್ಲಾ ಸೀಮೆಗಳಿಗೆ ಈ ಮಾತು ಅನ್ವಯಿಸುತ್ತದೆ. ಮನುಷ್ಯನ ಮನಸ್ಸಿನೊಳಗೆ ನಿರ್ಮಾಣವಾಗುವ ಈ ಸೀಮೆಗಳೇ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಿದರು.

ಕಥೆಗಾರ ಗೋಪಾಲಕಷ್ಣ ಪೈ ಮಾತನಾಡಿ, ಸಾಹಿತ್ಯದ ಸಜನಶೀಲ ಪ್ರಕ್ರಿಯೆಯಲ್ಲಿ ಲೇಖಕನ ಅಸ್ಮಿತೆಯ ಹುಡುಕಾಟವೇ ಪ್ರಮುಖ ಸಂಗತಿ. ಮನೆಭಾಷೆ, ಬೀದಿಯ ಭಾಷೆ, ಸಮುದಾಯದ ಭಾಷೆ ಇವೆಲ್ಲವೂ ಬೇರೆಬೇರೆಯಾದಾಗ ಯಾವ ಭಾಷೆಯ ಮೂಲಕ ಅಭಿವ್ಯಕ್ತಿಸಬೇಕು ಎಂಬುದೇ ದೊಡ್ಡ ಸಮಸ್ಯೆ. ನನ್ನ ಮಟ್ಟಿಗೆ `ಸಫಲತೆಯ ಕಾಮನೆ  `ಅಸಫಲತೆಯ ಭಯ  ಸಾಹಿತ್ಯದಲ್ಲಿ ಸೀಮೋಲ್ಲಂಘನೆಗೆ ಪ್ರೇರಣೆಯಾಯಿತು ಎಂದರು.

ಸಾಹಿತ್ಯ ರಚನೆ ಸಂದರ್ಭದಲ್ಲಿ ಶಿವರಾಮ ಕಾರಂತರ ಭಾಷೆ, ಬೇಂದ್ರೆ ಅವರ ಸಂಗೀತದ ನಾದ, ಅನಂತಮೂರ್ತಿ ಅವರ ಸ್ಪಷ್ಟತೆ, ಗೋಪಾಲಕಷ್ಣ ಅಡಿಗರ ಧ್ವನಿಪೂರ್ಣತೆ ಇರಬೇಕು ಎಂಬ ಹಂಬಲದಿಂದ ಬರೆದ ಕಾರಣ, `ಸ್ವಪ್ನ ಸಾರಸ್ವತ  ಕೃತಿ ಹುಟ್ಟಿಗೆ ಕಾರಣವಾಯಿತು ಎಂದರು.

ಪ್ರತಿಕ್ರಿಯಿಸಿದ ಡಾ.ಯು.ಆರ್. ಅನಂತಮೂರ್ತಿ ಲೇಖಕ ಸಾಹಿತ್ಯ ರಚನೆ ಸಂದರ್ಭದಲ್ಲಿ ಅಸ್ಮಿತೆಯನ್ನು ಹುಡುಕುವುದು ಎಷ್ಟು ಮುಖ್ಯವೋ, ಕಳೆದುಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ ಸಜನಶೀಲ ಪ್ರಕ್ರಿಯೆಯಲ್ಲಿ ಅಸ್ಮಿತೆಯನ್ನು ಮೀರಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಹೇಳಿದರು.

ಮಧ್ಯಾಹ್ನ ಶಿವರಾಮ ಕಾರಂತ ರಂಗಮಂದಿರದಲ್ಲಿ ಕಿನ್ನರಮೇಳ ತಂಡದ ಸುಶೀಲ ಕೆಳಮನೆ ಅವರಿಂದ `ಗಿರಿಬಾಲೆ  ಏಕವ್ಯಕ್ತಿ ಪ್ರದರ್ಶನ ಬಿ.ಆರ್. ವೆಂಕಟರಮಣ ಐತಾಳರ ನಿರ್ದೇಶನದಲ್ಲಿನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT