ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಡಿಕೇರಿಯಲ್ಲಿ; ಖಾನಾಪುರ ಕತ್ತಲೆಯಲ್ಲಿ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪಲು, ನಾಪೋಕ್ಲು, ಭಾಗಮಂಡಲ, ಸಂಪಾಜೆ, ಶ್ರೀಮಂಗಲ, ಅಮ್ಮತ್ತಿ, ಶಾಂತಳ್ಳಿ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿದೆ.

ಜಿಲ್ಲೆಯ ಹಲವೆಡೆ ಮನೆ ಕುಸಿದಿರುವ ಬಗ್ಗೆ ವರದಿಯಾಗಿವೆ. ಬಲ್ಲಮಾವುಟಿ ಗ್ರಾಮದ ಪೆರೂರು ಬಳಿಯ ಕಾಲುಸೇತುವೆಯು ಮುಳುಗಡೆಯಾಗಿದೆ.ಮಡಿಕೇರಿಯ ಡೇರಿ ಫಾರ್ಮ್ ರಸ್ತೆ ಬಳಿಯ ತೋಡು ತುಂಬಿ ಹರಿದ ಪರಿಣಾಮ, ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ತ್ಯಾಗರಾಜನಗರ, ಮಂಗಳಾದೇವಿ ನಗರದ ಕೆಲವು ಭಾಗಗಳಲ್ಲಿ ಮಣ್ಣುಕುಸಿತ ಉಂಟಾಗಿದೆ. ಮಾಕುಟ್ಟದ ಬಳಿ ಪೆರಂಬಾಡಿಯಲ್ಲಿ ರಸ್ತೆಯ ಮೇಲೆ ಮಣ್ಣು ಕುಸಿದಿದ್ದು, ಈ ಮೂಲಕ ಕೇರಳಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.

ಗಂಜಿ ಕೇಂದ್ರ ಸ್ಥಾಪನೆ: ಶ್ರೀಮಂಗಲದಲ್ಲಿ ಮಳೆಯ ರಭಸಕ್ಕೆ ಮಸೀದಿಯೊಂದರ ಗೋಡೆ ಜಖಂ ಆಗಿರುವ ಬಗ್ಗೆ ವರದಿಯಾಗಿದೆ. ಶ್ರೀಮಂಗಲದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 20 ಮನೆಗಳಲ್ಲಿ ವಾಸವಾಗಿದ್ದ 72 ಜನರನ್ನು ಹತ್ತಿರದ ಕೊಡವ ಸಮಾಜದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಶ್ರೀಮಂಗಲ ಹಾಗೂ ನಾಲ್ಕೇರಿ ನಡುವಿನ ರಸ್ತೆ ಸಂಚಾರವೂ ಕಡಿತಗೊಂಡಿದ್ದು, ಜಾನುವಾರುಗಳು ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಕಾವೇರಿ, ಸುಜ್ಯೋತಿ ಹಾಗೂ ಕನ್ನಿಕೆ ನದಿಗಳ ಸಂಗಮವಾಗಿರುವ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಉಕ್ಕಿ ಹರಿದಿದೆ. ಭಗಂಡೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗವು ಕಡಿತಗೊಂಡಿದೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೊಡಗಿನ ಹಾರಂಗಿ ಜಲಾಶಯ ಭಾನುವಾರ ರಾತ್ರಿ ಭರ್ತಿಯಾಗಿದ್ದು, ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.ಗರಿಷ್ಠ 2859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 6 ಕ್ಕೆ ನೀರಿನ ಮಟ್ಟ  2857.12 ಅಡಿ ದಾಖಲಾಗಿದ್ದು, 5,600 ಕ್ಯೂಸೆಕ್ ನೀರಿನ ಒಳಹರಿವು ಇತ್ತು. ಬೆಳಿಗ್ಗೆ 8 ರ ನಂತರ ಇದು 7,500 ಕ್ಯೂಸೆಕ್‌ಗೆ ಏರಿತು. ಬೆಳಿಗ್ಗೆ 8 ರ ವೇಳೆಗೆ ಜಲಾಶಯದಿಂದ ಎರಡು ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗಿತ್ತು. ನಂತರ ನೀರಿನ ಹರಿವಿನ ಪ್ರಮಾಣವನ್ನು ಏರಿಸಲಾಯಿತು.

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಲ್ಲಿ ಸೋಮವಾರ ಸುಮಾರು ಒಂದು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಏಳು ಸೇತುವೆಗಳು ಇನ್ನೂ ಮುಳುಗಿದ ಸ್ಥಿತಿಯಲ್ಲಿಯೇ ಇದ್ದು, ಸಂಚಾರಕ್ಕಾಗಿ ಜನರು ಪರದಾಡುವಂತಾಗಿದೆ.

ತಾಲ್ಲೂಕಿನ ಕಲ್ಲೋಳ-ಯಡೂರ, ಸದಲಗಾ-ಬೋರಗಾಂವ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಮತ್ತು ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು ಸುತ್ತುಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಸೋಮವಾರ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಅಲ್ಪ ಇಳಿಕೆಯಾಗಿದೆ. ಭಾನುವಾರ ರಾಜಾಪುರ ಸೇರಿದಂತೆ ವಿವಿಧ ಬ್ಯಾರೇಜ್‌ಗಳಿಂದ 93,565 ಕ್ಯೂಸೆಕ್ ಬಿಡಲಾಗಿದ್ದು, ಸೋಮವಾರ 88,366 ಕ್ಯೂಸೆಕ್‌ಗೆ ಇಳಿದಿದೆ.

ಸಂಕೇಶ್ವರ ಸಮೀಪದ ಗೋಟೂರು ಸೇತುವೆಯ ಮೇಲೆ ಸಂಚಾರ ಇನ್ನೂ ಆರಂಭವಾಗಿಲ್ಲ. ಭಾನುವಾರಕ್ಕಿಂತ  ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬರುತ್ತಿದೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಪ್ರದೇಶಗಳಿಗೆ ಸಂಚಾರ ಸ್ಥಗಿತಗೊಂಡಿದೆ.

ಹಾವೇರಿ : ಶಿವಮೊಗ್ಗ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವರದಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಅಕ್ಕಿಆಲೂರ ಸಮೀಪವಿರುವ ಕೂಸನೂರ, ಮಲಗುಂದ ಗ್ರಾಮಗಳ ಮಧ್ಯೆದಲ್ಲಿರುವ ಬಾಂದಾರದ ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.

ಈ ಭಾಗದ ಸುತ್ತಮುತ್ತಲಿರುವ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಕೂಸನೂರ, ಮಲಗುಂದ ಮಧ್ಯೆ ಇರುವ ಬಾಂದಾರವೇ ಸಂಚಾರಕ್ಕಿರುವ ಪ್ರಮುಖ ಮಾರ್ಗ. ಬಾಂದಾರದ ಮೇಲೆ ನೀರು ಹರಿಯಲಾರಂಭಿಸಿರುವುದರಿಂದ  ಸಂಚಾರ ಸ್ಥಗಿತಗೊಂಡಿದ್ದು,  ಹತ್ತಾರು ಕಿ.ಮೀ.ಗಳಷ್ಟು ದೂರ ಸುತ್ತಾಡಿಯೇ ತಲುಪಬೇಕಾಗಿದೆ.

ಮಂಗಳೂರು : ಕರಾವಳಿಯಲ್ಲಿ  ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಸೋಮವಾರ ಬಿರುಸು ಪಡೆದುಕೊಂಡಿತು. ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಸುಳ್ಯ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ತಾಲ್ಲೂಕಿನಲ್ಲೂ ಹೆಚ್ಚಿನ ಮಳೆಯಾಗಿದೆ.

ಹೆಬ್ರಿ ಪರಿಸರದ ಮುನಿಯಾಲು, ಅಜೆಕಾರು, ಮುದ್ರಾಡಿ, ಹೆಬ್ರಿ ನಾಡ್ಪಾಲು ಪರಿಸರದಲ್ಲಿ ಸೋಮವಾರ ದಿನವಿಡೀ ಭಾರಿ ಮಳೆಯಾಗಿದ್ದು, ಸೀತಾನದಿ ನದಿ ತುಂಬಿ ಹರಿಯುತ್ತಿದೆ.ಘಟ್ಟ ಪ್ರದೇಶದಲ್ಲಿ ಸತತ ಮಳೆಯಾದ ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ ಬಳಿಯ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಸ್ತೆಯ ಹೊಸಮಠ ಮುಳುಗು ಸೇತುವೆ ಮತ್ತು ಕುಮಾರಧಾರಾ ಸೇತುವೆ ಸೋಮವಾರ ಕೆಲಕಾಲ ಮುಳುಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಯಾತ್ರಾರ್ಥಿಗಳಿಗೆ ಸಮಸ್ಯೆಯಾಯಿತು.

ಬೈಂದೂರು: ಕುಂದಾಪುರ ತಾಲ್ಲೂಕಿನ ಉಪ್ಪುಂದದ ಮಡಿಕಲ್ಲು, ತಾರಾಪತಿಯಲ್ಲಿ ಸಮುದ್ರ ಕೊರೆತದಿಂದ ತಡೆಗೋಡೆಯಾಗಿ ಹಾಕಿದ್ದ ಕಲ್ಲುಗಳು ಒಂದೊಂದಾಗಿ ಸಮುದ್ರ ಪಾಲಾಗಿವೆ.

ಚಿಕ್ಕಮಗಳೂರು: ಜಿಲ್ಲೆಯ ಬಯಲು ಪ್ರದೇಶಗಳಾದ ಕಡೂರು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಸಾಧಾರಣ ಹಾಗೂ ಉಳಿದ ಮಲೆನಾಡು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಒಟ್ಟು 16 ಸೆ.ಮೀ. ಮಳೆಬಿದ್ದಿದೆ.
ಸಂಸೆಯಲ್ಲಿ ಸೋಮಾವತಿ ನದಿ ಪ್ರವಾಹದಿಂದಾಗಿ ಸಂಸೆ- ಕುದುರೆಮುಖ ರಸ್ತೆಗೆ ಬಾಳಗಲ್ ಬಳಿ ಹಾನಿ ಉಂಟಾಗಿದೆ. ಕಳಸ-ಕಳಕೋಡು ರಸ್ತೆ, ನೆಲ್ಲಿಬೀಡು ಬಳಿ ಕುದುರೆಮುಖ ರಸ್ತೆಗೂ ಭದ್ರೆಯ ನೀರು ಹತ್ತಿ ಸಂಚಾರ ಅಸಾಧ್ಯವಾಗಿದೆ.

20 ಗ್ರಾಮಗಳಲ್ಲಿ ನಾಲ್ಕು ದಿನದಿಂದ ವಿದ್ಯುತ್ ಇಲ್ಲ
ಖಾನಾಪುರ : ಕೆಲವು ದಿನಗಳಿಂದ ತಾಲ್ಲೂಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಬೀಳುತ್ತಿರುವ ನಿರಂತರ ಮಳೆಯಿಂದಾಗಿ 20 ಗ್ರಾಮಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ.ಮಳೆಯಿಂದ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಗ್ರಾಮಗಳಿಗೆ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸರಬರಾಜು ಇಲ್ಲದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ.

ಹೆಮ್ಮಡಗಾ, ಶಿರೋಲಿ, ನೇರಸಾ, ಡೊಂಗರಗಾವ, ಅಬನಾಳಿ ಸೇರಿದಂತೆ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಶಿರೋಲಿ ಹಾಗೂ ನೇರಸಾ ಗ್ರಾಮ ಪಂಚಾಯತಿ ವ್ಯಾಪ್ತಿಯ 20 ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಆದರೆ ಸೋಮವಾರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಖಾನಾಪುರ ಹಾಗೂ ಅಸೋಗಾ ಸೇತುವೆಗಳ ಮೇಲೆ ನೀರಿನ ರಭಸ ಸ್ವಲ್ಪ ಕುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT