ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ರೈತರ ಬೆಳೆ ಹಾನಿ

Last Updated 12 ಸೆಪ್ಟೆಂಬರ್ 2013, 5:22 IST
ಅಕ್ಷರ ಗಾತ್ರ

ಕಂಪ್ಲಿ: ಪಟ್ಟಣ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ಮಧ್ಯ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಬೆಳೆ ಮತ್ತು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಸಮೀಪದ ಬೆಳಗೋಡುಹಾಳು ಗ್ರಾಮದ ಲಬೇದ ಅಯ್ಯಪ್ಪ ಗಂಗಪ್ಪ ಎನ್ನುವ ರೈತರು ಬೆಳೆದ ಸುಮಾರು 4 ಎಕರೆ ಮುಂಗಾರು ಮೆಕ್ಕೆಜೋಳ ಭಾರಿ ಮಳೆ, ಬಿರುಗಾಳಿಗೆ ನೆಲಕ್ಕುರುಳಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಇನ್ನು ಹಲವೆಡೆ ಕಬ್ಬು, ಭತ್ತದ ಫಸಲಿಗೂ ಹಾನಿಯಾಗಿದೆ.

ಮಳೆ ಪರಿಣಾಮ ಪಟ್ಟಣದ 14, 15, 18 ಮತ್ತು 19 ನೇ ವಾರ್ಡ್‌ನಲ್ಲಿ 8 ಮನೆಗಳು ಭಾಗಶಃ ಹಾನಿಯಾಗಿದ್ದರೆ ಒಂದು ಗುಡಿಸಲು ಸಂಪೂರ್ಣ ಬಿದ್ದಿದೆ ಎಂದು ಉಪ ತಹಶೀಲ್ದಾರ್‌ ಕೆ. ಬಾಲಪ್ಪ ತಿಳಿಸಿದ್ದಾರೆ.

ಪಟ್ಟಣದ ತಗ್ಗು ಪ್ರದೇಶದ ಗುಡಿಸಲಿಗಳಿಗೂ ಮಳೆಯಿಂದ ತೊಂದರೆಯಾಗಿದ್ದು, ಅಲ್ಲಿನ ವಾಸಿಗಳು ಸಂಕಷ್ಟ ಅನುಭವಿಸಿದರು.
ಸಿಂಡಿಕೇಟ್ ಬ್ಯಾಂಕ್ ಬಳಿ ಮರ ಬುಡ ಸಮೇತ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಸಂಚಾರ ವ್ಯತ್ಯಯವಾಗಿತ್ತು. ನಂತರ ಪುರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೇ ರೀತಿ ಸರ್ಕಾರಿ ಅತಿಥಿ ಗೃಹ ಬಳಿ ಕೆಲ ಮರಗಳು ಉರುಳಿ ಬಿದ್ದಿವೆ.

ಮಳೆಯಿಂದ ಹಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಸಾರ್ವಜನಿಕರು ತೊಂದರೆಪಟ್ಟರು.

ಮಂಗಳವಾರ ರಾತ್ರಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ 84.6 ಮಿ.ಮೀ ಮಳೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರ  ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT