ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾವಂತದ ಸರದಾರರೇ, ಒಮ್ಮೆ ನಿಲ್ಲಲಾರಿರಾ?

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜನ ನಿರಂತರವಾಗಿ ತಮ್ಮ ಬದುಕಿನ ಬೆನ್ನಟ್ಟಿ ಹೋಗುತ್ತಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅವರನ್ನು ಕಂಡಾಗ ಎಲ್ಲರೂ ಅನಗತ್ಯವಾದ ಧಾವಂತದಲ್ಲಿ ಇದ್ದಾರೇನೋ ಎನಿಸುತ್ತದೆ. ಯಾವೊಂದು ಕೆಲಸಕ್ಕೂ ಅವರಿಗೆ ಸಮಯವೇ ಇರುವುದಿಲ್ಲ. ಕೆಲವರಷ್ಟೇ ಕ್ಷಣಕಾಲ ನಿಂತು ಯೋಚಿಸಿ, ನಾವು ಯಾಕಿಷ್ಟು ಧಾವಂತದಲ್ಲಿ ಇದ್ದೇವೆ ಎಂದು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.

ಇದನ್ನೆಲ್ಲಾ ನೋಡಿದಾಗ ಮನುಷ್ಯರು ಜೀವನದುದ್ದಕ್ಕೂ ಯಾವುದಾದರೊಂದು ರೇಸ್‌ನಲ್ಲಿ ಪಾಲ್ಗೊಳ್ಳುತ್ತಲೇ ಇರುವರೇನೋ ಎನಿಸದಿರದು. ಬಹಳಷ್ಟು ಕೆಲಸಗಳನ್ನು ಮಾಡಬೇಕು ಎಂದುಕೊಳ್ಳುತ್ತಾ ಒಂದೇ ಸಮಯಕ್ಕೆ ಎಲ್ಲವನ್ನೂ ಮಾಡಲು ಹೊರಡುತ್ತಾರೆ. ನನ್ನ ಜೀವನ ಸಹ ಇದಕ್ಕೆ ಹೊರತಾಗೇನೂ ಇಲ್ಲ.

ಸದಾ ಉನ್ನತ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ಹಲವು ಕಾರ್ಯಗಳನ್ನು ಒಟ್ಟೊಟ್ಟಿಗೆ ಮಾಡುವುದರಲ್ಲೇ ನಮ್ಮ ಸಾಮರ್ಥ್ಯ ಅಡಗಿದೆ ಎಂದು ಮಕ್ಕಳಿರುವಾಗಲೇ ನಮಗೆ ಕಲಿಸಲಾಗಿರುತ್ತದೆ. ಯಾವಾಗ ನಮ್ಮ ಕಾರ್ಯವನ್ನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇವೋ ಆಗ ಅದು ನಿಜವಾದ ಸಮರ್ಥ ಕಾರ್ಯವೇ ಅಲ್ಲವೇ ಎಂಬುದು ನಮಗೆ ಮನದಟ್ಟಾಗುತ್ತಾ ಹೋಗುತ್ತದೆ. ಇಂದಿನ ಆಡಳಿತ ನಿರ್ವಹಣೆಯ ಬಹು ಪ್ರಿಯ ಪರಿಭಾಷೆಯೆಂದರೆ `ಬಹುವಿಧ ಕಾರ್ಯ~ ನಿರ್ವಹಣೆ. ಇಂತಹ ಕಾರ್ಯಗಳಲ್ಲಿ ತೊಡಗದವರನ್ನು ಅಸಮರ್ಥರು ಮತ್ತು ಇಂದಿನ ಪ್ರಪಂಚಕ್ಕೆ ಅಗತ್ಯವಾದ ಕೌಶಲ ಇಲ್ಲದವರು ಎಂದೇ ಪರಿಗಣಿಸಲಾಗುತ್ತಿದೆ.

ಒಂದು ಬಾರಿಗೆ ಒಂದು ಕಾರ್ಯವನ್ನಷ್ಟೇ ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ನಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಬೇಕು ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ತಮ್ಮ ಸುತ್ತಮುತ್ತಲಿನ ಜನ ಸಹ ಎಲ್ಲ ಶಕ್ತಿಯನ್ನೂ ತಾವು ಮಾಡುವ ಕಾರ್ಯದಲ್ಲಿ ತೊಡಗಿಸಬೇಕು ಎಂದು ಅವರು ನಿರೀಕ್ಷಿಸುತ್ತಿದ್ದರು.

ಹೀಗೆ ಗಮನ ಕೇಂದ್ರೀಕರಿಸಿ ಮಾಡಿದ ಕಾರ್ಯದಿಂದ ದೊರೆತ ಯಶಸ್ಸು ಕೇವಲ ಗುರಿ ಸಾಧನೆಯಷ್ಟೇ ಅಲ್ಲ, ಅದೊಂದು ಸಾಧನೆಯ ಮಾರ್ಗ ಎಂದು ಭಾವಿಸಿದ್ದರು. ಹೀಗಾಗಿ ಅವರಿಗೆ ಗುಣಮಟ್ಟ ಎಂಬುದು ಕೇವಲ ತಲುಪಬೇಕಾದ ಗುರಿಯಷ್ಟೇ ಆಗಿರದೆ, ವ್ಯಕ್ತಿಯೊಬ್ಬನ ಆಂತರಿಕ ದಿವ್ಯತ್ವವನ್ನು ರುಜುವಾತುಪಡಿಸುವ ನಿರಂತರ ಪ್ರಕ್ರಿಯೆಯಾಗಿತ್ತು.

ವಿವೇಕಾನಂದರ ಪ್ರಸಿದ್ಧ ನುಡಿಗಟ್ಟೆಂದರೆ `ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಿ, ಅದನ್ನೇ ನಿಮ್ಮ ಬದುಕಾಗಿಸಿಕೊಳ್ಳಿ, ಅದನ್ನೇ ಯೋಚಿಸಿ, ಅದರ ಬಗ್ಗೆಯೇ ಕನಸು ಕಾಣಿ, ಅದರೊಟ್ಟಿಗೇ ಬದುಕಿ. ನಿಮ್ಮ ಮೆದುಳು, ಸ್ನಾಯುಗಳು, ನರನಾಡಿ ಸೇರಿದಂತೆ ನಿಮ್ಮ ದೇಹದ ಎಲ್ಲ ಭಾಗಗಳೂ ಆ ಯೋಜನೆಯಿಂದಲೇ ತುಂಬಿ ಹೋಗಲಿ. ಇತರ ಎಲ್ಲ ಯೋಜನೆಗಳನ್ನೂ ಬದಿಗೆ ಸರಿಸಿ. ಇದೇ ಯಶಸ್ಸಿನ ಮಾರ್ಗ...~ ಇದು ಪ್ರಜ್ಞಾಪೂರ್ವಕವಾಗಿ ನಮಗೆ ನಾವೇ ಕಲಿಸಿಕೊಳ್ಳಬೇಕಾದ ಪಾಠ.

ಸಾಮರ್ಥ್ಯದ ಹೆಸರಿನಲ್ಲಿ ನಾವು ಮಾಡುತ್ತಿರುವುದು ಎಷ್ಟು ಪರಿಣಾಮಕಾರಿ ಎಂಬ ಯೋಚನೆಯನ್ನೇ ಮಾಡದಿರುವುದರಿಂದ ನಮ್ಮ ಶಕ್ತಿ ಇಂದು ವಿವಿಧ ದಿಕ್ಕುಗಳಲ್ಲಿ ಹರಿದು ಹಂಚಿಹೋಗುತ್ತಿದೆ. ಒಂದು ಬಾರಿಗೆ ಒಂದೇ ಯೋಜನೆಯತ್ತ ಸಂಪೂರ್ಣ ಗಮನ ಕೇಂದ್ರೀಕರಿಸುವುದನ್ನು ನಾಯಕತ್ವದ ಪ್ರಪಂಚ ಸಹ ಈಗ ಗುರುತಿಸಲಾರಂಭಿಸಿದೆ. ಕೈಗೆತ್ತಿಕೊಂಡ ಕಾರ್ಯಾಚರಣೆಗೆ ಪೂರ್ಣ ಗಮನ ಮತ್ತು ಶಕ್ತಿಯನ್ನು ವಿನಿಯೋಗಿಸುವವರೇ ಉತ್ತಮ ನಾಯಕರು ಎಂಬ ತೀರ್ಮಾನಕ್ಕೆ ತಜ್ಞರು ಬರುತ್ತಿದ್ದಾರೆ.

ಅಂತಹ ನಾಯಕರು ಹಳೆಯ ಜವಾಬ್ದಾರಿಗಳಿಂದ ಕುಗ್ಗಿ ಹೋಗುವುದಿಲ್ಲ ಅಥವಾ ಭವಿಷ್ಯದ ಅನಿಶ್ಚಿತತೆಯಿಂದ ನರಳುವುದೂ ಇಲ್ಲ. ವರ್ತಮಾನದ ಸಂಗತಿಗಳೊಂದಿಗೆ ಬದುಕುತ್ತಾ ಕಾರ್ಯಾಚರಣೆಗೆ ಇಳಿಯುವುದರಿಂದ ತಮ್ಮ ಪ್ರತಿ ಕ್ಷಣ ಮತ್ತು ಶ್ರಮವನ್ನು ಅದರಲ್ಲಿ ವಿನಿಯೋಗಿಸಲು ಸಾಧ್ಯವಾಗುತ್ತದೆ. ಇದು ಅವರ ಯಶಸ್ಸಿಗೆ ನೆರವಾಗುತ್ತದೆ.

ಕೊನೆಗೆ, ವಿಭಿನ್ನ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಸಾಮರ್ಥ್ಯ ವರ್ಧಿಸಿಕೊಳ್ಳುವವರು ಸಹ ಈ ನಾಯಕರೇ ಆಗಿರುತ್ತಾರೆ. ಆಗಲೂ ಅವರು ಒಂದು ಬಾರಿಗೆ ಒಂದೇ ಕೆಲಸದಲ್ಲಿ ತಲ್ಲೆನರಾಗುತ್ತಾರೆ. ಅವರ ಈ ನಡವಳಿಕೆಯೇ, ಒಂದೇ ಸಲಕ್ಕೆ ಹಲವು ಕಾರ್ಯಗಳನ್ನು ನಿಭಾಯಿಸಬೇಕು ಎಂದು ನಂಬಿಕೊಂಡಿರುವ ಬಹುವಿಧ ಕಾರ್ಯ ನಿರ್ವಾಹಕರಿಂದ ಅವರನ್ನು ಭಿನ್ನವಾಗಿಸುತ್ತದೆ.

ನಾವು ಮಾಡುವ ಕಾರ್ಯದಲ್ಲಿ ಸಂಪೂರ್ಣ ಲಕ್ಷ್ಯ ನೆಡುವುದು ಯಶಸ್ವಿ ಕಾರ್ಯನಿರ್ವಹಣೆಗೆ ನೆರವಾಗುವುದಷ್ಟೇ ಅಲ್ಲದೆ ಆಧ್ಯಾತ್ಮಿಕವಾಗಿಯೂ ನಮ್ಮನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ. ಈ ಮೂಲಕ, ಅಸ್ತಿತ್ವದ ಸಮನ್ವಯವನ್ನು ಅನುಭವಿಸುವುದಕ್ಕೆ ವೇದಿಕೆ ಒದಗಿಸಿಕೊಡುತ್ತದೆ. ಇಂತಹ ಸಮನ್ವಯದಿಂದಲೇ, `ನಮ್ಮ ಕಾರ್ಯಕ್ಕೆ ಅತಿಯಾದ ಫಲಾಫಲ ನಿರೀಕ್ಷೆ ಸಲ್ಲದು~ ಎಂಬ ಭಗವದ್ಗೀತೆಯ ಪ್ರಮುಖ ಸಂದೇಶವನ್ನು ನಾವು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT