ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿಪೂರ್ಣ ನಾದಾಲೋಕ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾದಾಲೋಕ
ಪ್ರ. ಸಂ: ಡಾ. ಎಂ. ಮೋಹನ್ ಆಳ್ವ:ಪು: 496; ಬೆ: ರೂ. 650
ಪ್ರ: ಸಿರಿವರ ಪ್ರಕಾಶನ, ನಂ. 37/ಬಿ, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು-21.

ಸಾಹಿತ್ಯ, ಸಿನಿಮಾ, ಸಂಘಟನೆ, ನಾಟಕ, ಅಧ್ಯಾಪನ- ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾ. ದಾಮೋದರ ಶೆಟ್ಟಿ, ಸಹೃದಯರ ನಡುವೆ `ನಾದಾ~ ಎಂದೇ ಹೆಸರಾದವರು. ಅವರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ಗೆಳೆಯರು ಅಭಿಮಾನಪೂರ್ವಕವಾಗಿ ಅರ್ಪಿಸಿರುವ ಅಭಿನಂದನಾ ಕೃತಿ- `ನಾದಾಲೋಕ~.
ಈಚಿನ ದಿನಗಳಲ್ಲಿ ರೂಪುಗೊಳ್ಳುತ್ತಿರುವ ಅಭಿನಂದನಾ ಗ್ರಂಥಗಳು ತಮ್ಮ `ಭಾರ~ದ ಕಾರಣದಿಂದಾಗಿ ಗಮನ ಸೆಳೆಯುತ್ತವೆ. `ನಾದಾಲೋಕ~ ಕೂಡ ತೂಕವಾಗಿಯೇ ಇದೆ, ಗುಣಮಟ್ಟದ ಕಾರಣದಿಂದಾಗಿ.

ಈ ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಮೊದಲನೇ ಭಾಗದಲ್ಲಿ ಕುಟುಂಬವರ್ಗದವರು ಕಂಡ `ನಾದಾ~ ಚಿತ್ರಣವಿದೆ. ನಾಡಿನ ಸಾಂಸ್ಕೃತಿಕ ಲೋಕದ ಕಣ್ಣಲ್ಲಿನ `ನಾದಾ~ ಎರಡನೇ ಭಾಗ. ನಂತರದ ಭಾಗ ಅವರ ಕೃತಿಗಳ ಅವಲೋಕನಕ್ಕೆ ಮೀಸಲು.

ಅರವತ್ತು ವರ್ಷಗಳ ಕರಾವಳಿ ಸಾಂಸ್ಕೃತಿಕ ಜಗತ್ತಿನ ಅವಲೋಕನ ಕೃತಿಯ ನಾಲ್ಕನೇ ಭಾಗವಾಗಿದೆ. ನಾಲ್ಕೂ ನಿಟ್ಟಿನಲ್ಲಿ, ನಾಡಿನ ಅನೇಕ ಸೂಕ್ಷ್ಮ ಮನಸ್ಸುಗಳು ನಾದಾ ಮೂಲಕ ಇಲ್ಲಿ ಸಂಧಿಸಿವೆ. ಹಳಬರೊಂದಿಗೆ ಹೊಸ ತಲೆಮಾರಿನ ಬರಹಗಾರರೂ ಇರುವುದು ಕೃತಿಯ ಅರ್ಥವಂತಿಕೆಯನ್ನು ಹೆಚ್ಚಿಸಿದೆ.

ನಾದಾ ಅವರ ಕಾವ್ಯದ ಬಗ್ಗೆ ಸುಬ್ರಾಯ ಚೊಕ್ಕಾಡಿ, ಕಥನ ಸಾಹಿತ್ಯದ ಬಗ್ಗೆ ಸಿ.ಎನ್. ರಾಮಚಂದ್ರನ್, ರಂಗಭೂಮಿ ಚಟುವಟಿಕೆಗಳ ಬಗ್ಗೆ ಕಾಸರಗೋಡು ಚಿನ್ನ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ.
 

ಬಿಡಿಕೃತಿಗಳ ಬಗೆಗಿನ ವಿಮರ್ಶೆಗಳೂ, ನಾದಾ ಅವರ ಸಂದರ್ಶನಗಳೂ ಕೃತಿಯಲ್ಲಿ ಒಟ್ಟಾಗಿವೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಳೆದ ಆರು ದಶಕಗಳಲ್ಲಿ ಕರಾವಳಿಯ ನಡಿಗೆಯ ವಿಶ್ಲೇಷಣೆ, ವ್ಯಕ್ತಿಯ ಬೆಳವಣಿಗೆಯೊಂದಿಗೆ, ಆ ವ್ಯಕ್ತಿ ಬಾಳಿ ಬದುಕಿದ ಪರಿಸರದ ಚಿತ್ರಗಳನ್ನೂ ದಾಖಲಿಸುವ ಅಪರೂಪದ -ಔಚಿತ್ಯಪೂರ್ಣವಾದ- ಕ್ರಮವಾಗಿದೆ.

ಕಾಸರಗೋಡು ತಾಲ್ಲೂಕಿನ ಕುಂಬಳೆಯ ನಾಯ್ಕಾಪು ನಾದಾ ಅವರ ಹುಟ್ಟೂರು. ಅಲ್ಲಿಂದ ಕಾಸರಗೋಡಿಗೆ, ನಂತರ ಮಂಗಳೂರಿಗೆ- ಹೀಗೆ ಸಾಗುವ ಅವರ ಪಯಣ, ಇಡೀ ಕರಾವಳಿಯನ್ನೇ ತನ್ನ ಕಾರ್ಯಕ್ಷೇತ್ರ ಆಗಿಸಿಕೊಂಡಿದ್ದು ಈಗ ಇತಿಹಾಸ. ಇದೀಗ, ಅರವತ್ತರ ವಯಸ್ಸಿನಲ್ಲಿ ಅವರ ವಿಳಾಸ ಬೆಂಗಳೂರಿನದು. ವಿಶ್ರಾಂತಿ ಬಯಸಿ, ವಿರಮಿಸಲಿಕ್ಕೆ ಸಾಧ್ಯವಾಗದಷ್ಟು ಹೊಸ ಕನಸುಗಳನ್ನು ಕಟ್ಟಿಕೊಂಡು ಅವರು ರಾಜಧಾನಿಗೆ ಬಂದಿದ್ದಾರೆ.

`ಕೆಲವರು ಕುಟುಂಬಕ್ಕಾಗಿ ಬದುಕುತ್ತಾರೆ. ಕೆಲವರು ಸಮಾಜಕ್ಕಾಗಿ ಬದುಕುವ ಮುಖವಾಡ ಹಾಕಿ ಸಂಪಾದನೆ ಮಾಡುತ್ತಾರೆ. ಅದು ತಪ್ಪುದಾರಿಯ ಸಂಪಾದನೆಯಾಗಿರುತ್ತದೆ. ಆದರೆ ಇವರು ಯಾವತ್ತೂ ತಪ್ಪುದಾರಿಯ ಸಂಪಾದನೆ ಮಾಡಿಲ್ಲ. ಬದಲಿಗೆ ತಮ್ಮ ಸಂಬಳದ ಒಂದಂಶವನ್ನು ಸಮಾಜಕ್ಕೆ ಮುಡಿಪಿಟ್ಟಿದ್ದಾರೆ. ಸಮಾಜಕ್ಕಾಗಿ ಬದುಕುವಾಗ ಮನೆಗೆ ನಷ್ಟವಾಗುತ್ತದೆ.

ಆದರೆ ಇವರು ಸಮಾಜಕ್ಕಾಗಿ ಬದುಕಿದರೂ ನಮ್ಮ ಮನೆಗೆ ನಷ್ಟವಾಗಲಿಲ್ಲ. ಮಕ್ಕಳಿಬ್ಬರೂ ಒಳ್ಳೆಯ ಬಾಳನ್ನು ಸಾಗಿಸುತ್ತಿದ್ದಾರೆ. ನಮ್ಮ ಮನೆಗೆ ಒಳ್ಳೆಯದೇ ಆಗಿದೆ. ಅದೆಲ್ಲ ಇವರು ಮಾಡಿದ ಸಮಾಜ, ಕಲೆ, ಸಾಹಿತ್ಯಕ್ಕೆ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ ಎಂದೇ ಭಾವಿಸುತ್ತೇನೆ~.

ಇದು ನಾದಾ ಅವರ ಪತ್ನಿ ಎಂ.ಕೆ. ಸುಮತಿ ಅವರು ತಮ್ಮ ಸಂಗಾತಿಯ ಬಗ್ಗೆ ತಳೆದಿರುವ ನಿಲುವು. ಇದು ಅರ್ಥಪೂರ್ಣ ನಿಲುವು ಆಗಿರುವ ಜೊತೆಗೆ ವಸ್ತುನಿಷ್ಠವೂ ಹೌದು. ಇದಕ್ಕಿಂತಲೂ ಚೆನ್ನಾಗಿ ನಾದಾ ಅವರನ್ನು ಕಾಣಿಸುವುದು ಕಷ್ಟ.

`ನಾದಾಲೋಕ~ ಚೆಂದಗಾಣುವಲ್ಲಿ ಸಂಪಾದಕರಾದ ಡಾ. ಸಬಿಹಾ ಭೂಮಿಗೌಡ, ಡಾ. ಆರ್. ನರಸಿಂಹಮೂರ್ತಿ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಡಾ. ಎ.ಎಂ. ನರಹರಿ, ಡಾ. ವಿಶ್ವನಾಥ ಬದಿಕಾನ ಅವರ ಶ್ರಮ ಎದ್ದುಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT