ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 8, 9ರಂದು ಅಹೋರಾತ್ರಿ ಧರಣಿ

ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಆಗ್ರಹ
Last Updated 4 ಸೆಪ್ಟೆಂಬರ್ 2013, 9:50 IST
ಅಕ್ಷರ ಗಾತ್ರ

ಕಾರವಾರ: `ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ವಾಸ್ತವವಾಗಿ ರೈತರ ಪರವಾಗಿಲ್ಲ. ಈ ಕಾಯ್ದೆಯನ್ನು ರೈತಪರವಾಗಿ ತಿದ್ದುಪಡಿ ಮಾಡಲು ಆಗ್ರಹಿಸಿ ನವೆಂಬರ್ 8 ಮತ್ತು 9ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅನ್ನಭಾಗ್ಯ, ಹಾಲು ಉತ್ಪಾದಕರಿಗೆ 4 ರೂಪಾಯಿ ಸಹಾಯಧನ ಯೋಜನೆಗಳನ್ನು ಜಾರಿಗೆ ತಂದು ರೈತರಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದ್ದರು. ಆದರೆ, ರೈತರ ಭೂಸ್ವಾಧೀನ ವಿಚಾರದಲ್ಲಿ ಆ ನಿರೀಕ್ಷೆಗಳು ಸುಳ್ಳಾಗುತ್ತಿವೆ' ಎಂದು ದೂರಿದರು.

`ಅರಣ್ಯ ಭೂಮಿಯನ್ನು 30-40 ವರ್ಷಗಳಿಂದ ಒತ್ತುವರಿಗೆ ಮಾಡಿಕೊಂಡಿರುವ ರೈತರ ಪರವಾಗಿ ಸರ್ಕಾರ ದೃಢವಾದ ಕ್ರಮ ಕೈಗೊಳ್ಳಬೇಕು. ಎಡಪಕ್ಷಗಳ ಒತ್ತಾಯದಿಂದ ಯುಪಿಎ ಸರ್ಕಾರ ಅರಣ್ಯ ಹಕ್ಕು ಕಾಯ್ಕೆ ಜಾರಿಗೆ ತಂದಿತು. ಆದರೆ, ಈ ಕಾಯ್ದೆ ಎಲ್ಲ ಆದಿವಾಸಿಗಳಿಗೆ ಭೂಮಿ ಮಂಜೂರು ಮಾಡುವಲ್ಲಿ ವಿಫಲವಾಗಿದೆ.

ಅರಣ್ಯ ಭೂಮಿ ಸಕ್ರಮವಾಗಲು ಮೂರು ತಲೆಮಾರಿನ ದಾಖಲಾತಿಯನ್ನು ಕೇಳಿದೆ. ಇದರಿಂದ ಈ ಕಾಯ್ದೆಯಿಂದ ಶೇ 98ಕ್ಕಿಂತ ಹೆಚ್ಚಿನ ಜನರಿಗೆ ಲಾಭ ಇಲ್ಲದಂತಾಗಿದೆ. ಈ ಕಾಯ್ದೆಯನ್ನು ಆದಿವಾಸಿಗಳ ಹಾಗೂ ರೈತಪರ ತಿದ್ದುಪಡಿ ತರಲು ಮುಖ್ಯಮಂತ್ರಿ ಕೇಂದ್ರದ ಮೇಲೆ ಒತ್ತಡ ತರಬೇಕು' ಎಂದು ಒತ್ತಾಯಿಸಿದರು.

`ಭೂಸ್ವಾಧೀನ ಕಾಯ್ದೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಜಾಸ್ತಿ ಸಿಗುತ್ತದೆ ಎಂದು ಮಾಧ್ಯಮಗಳಲ್ಲಿ ವಿಜೃಂಭಿಸುವ ಕೆಲಸ ಆಗಿದೆ. ಆದರೆ, ನಿಜವಾಗಿ ಈ ಕಾಯ್ದೆ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿದೆ ಎಂದು ಆರೋಪಿಸಿದ ಅವರು, ನವೆಂಬರ್ 8, 9ರಂದು ಹಮ್ಮಿಕೊಂಡಿರುವ ಪಕ್ಷಾತೀತ ಹೋರಾಟಕ್ಕೆ ಅರಣ್ಯ ಒತ್ತುವರಿ ಮಾಡಿಕೊಂಡಿರುವವರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಬೇಕು' ಎಂದು ಕೋರಿದರು.

ಸಂಘದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ,  ವಿಷ್ಣು ಶಂಕರ ನಾಯ್ಕ, ಗೌರೀಶ್ ನಾಯ್ಕ, ಶಾಮನಾಥ್ ನಾಯ್ಕ, ತಿಮ್ಮಪ್ಪಗೌಡ, ರಾಜೇಶ್ ಗೌಡ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT