ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂ.1-ಶಾಂತಿರೋಡ್

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲೋ, ನಿಮ್ಮ ಶಾಂತಿರಸ್ತೆಗೆ ಬರಲು ದಾರಿ ತಿಳಿಯುತ್ತಿಲ್ಲ. ಲ್ಯಾಂಡ್ ಮಾರ್ಕ್ ಏನಾದರೂ ಇದೆಯೇ?
ಸ್ವತಃ ನಂ.1, ಶಾಂತಿರೋಡ್ ಒಂದು ಲ್ಯಾಂಡ್ ಮಾರ್ಕ್ ಆಗಿದೆ. ಯಾರನ್ನಾದರೂ ಸರಿಯಾಗಿ ವಿಚಾರಿಸಿ! ಎಂಬ ಉತ್ತರ ಬಂದಿತ್ತು ಅತ್ತಲಿಂದ.

ನಂ.1, ಶಾಂತಿರೋಡ್ ಎಂಬುದು ಬೆಂಗಳೂರಿನ ಶಾಂತಿನಗರದ ಶಾಂತಿರಸ್ತೆಯಲ್ಲಿನ ಮನೆ ನಂಬರ್ ಒಂದು. ಮೇಲಿನ ಎರಡು ಸಾಲಿನ ಸಂಭಾಷಣೆಯು ಅದನ್ನು ಸ್ಥಾಪಿಸಿದ ಗೆಳೆಯ ಕಲಾವಿದ ಸುರೇಶ್ ಜಯರಾಂ ಅವರ ಆಶಯ, ಉದ್ದೇಶ, ಸಾಧನೆ ಮತ್ತು ಸಾರ್ಥಕತೆಯನ್ನು ಒಟ್ಟಿಗೆ ಹಿಡಿದಿರಿಸುತ್ತದೆ. ಈ ದೃಶ್ಯಕಲಾ ಮನೆಯ ವಿಶೇಷವೆಂದರೆ ಈಗ ಅದಕ್ಕೆ ಹತ್ತು ವರ್ಷ ತುಂಬಿದ್ದಲ್ಲ. ದಶಕದ ಹಿಂದೆ ಅದು ಔಪಚಾರಿಕವಾಗಿ ನಾಮಕರಣಗೊಂಡು, ಸ್ಥಾಪನೆಗೊಳ್ಳುವ ಮೊದಲೇ ಆ ಮನೆಗೆ ಪರ್ಯಾಯ ಕಲಾತಾಣವಾಗುವ ಎಲ್ಲ ಗುಣಲಕ್ಷಣವಿತ್ತು, ಕನ್ನಡದ ಸಾಹಿತಿಗಳಿಗೆ ಬೆಂಗಳೂರಿನ ‘ವಿದ್ಯಾರ್ಥಿ ಭವನ’ವಿದ್ದಂತೆ, ಕೋಲ್ಕತ್ತದವರಿಗೆ ‘ಕಾಫಿ ಹೌಸ್’ ಇದ್ದಂತೆ.

ಜನಸಾಮಾನ್ಯನಿಗೂ ಅರ್ಥವಾಗುವ ಭಾಷೆಯಲ್ಲಿ ಸರಳೀಕರಿಸಿ ಹೇಳುವುದಾದರೆ ಇದೊಂದು ವಿಶೇಷ ದೃಶ್ಯಕಲಾ ಗ್ಯಾಲರಿ. ಜೊತೆಗೆ ಕಲಾವಿಮರ್ಶಕ, ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ ಸುರೇಶ್ ಜಯರಾಂ ಅವರ ವಾಸದ ಮನೆ. ಪರಿಷತ್ತನ್ನು ತೊರೆದುದಕ್ಕೂ ನಂ.1, ಶಾಂತಿರಸ್ತೆಯನ್ನು ಸ್ಥಾಪಿಸುವುದಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಈ ತಾಣಕ್ಕೆ ಈಗಾಗಲೇ ಅಂತರರಾಷ್ಟ್ರೀಯ ಇಂಗ್ಲಿಷ್ ಪ್ರವಾಸಕಥನ ಪುಸ್ತಕವೊಂದರಲ್ಲಿ ಒಂದು ಅಧ್ಯಾಯ ಮುಡಿಪಾಗಿಡಲಾಗಿದೆ.

ಈಗಲೂ ಆಧುನಿಕ ಕಲೆಯ ರಾಷ್ಟ್ರೀಯ ಗ್ಯಾಲರಿ (ಎನ್.ಜಿ.ಎಂ.ಎ), ವೆಂಕಟಪ್ಪ ಗ್ಯಾಲರಿಗಳಂತಹ ಸಂಸ್ಥೆಗಳು ಕಲ್ಪಿಸಿಕೊಳ್ಳಲೂ ಆಗದಂತೆ, ಭಾರತೀಯ ಕಲೆಯ ಅಂತರರಾಷ್ಟ್ರೀಯ ವಿದ್ವಾಂಸರು ಶಾಂತಿರಸ್ತೆಗೆ ಹಾಗೆ ಬಂದು ಹೀಗೆ ಹೋಗುವುದಿದೆ. ನಡುವೆ ಸಮಕಾಲೀನ ಕಲೆಯನ್ನು ಕುರಿತ ವಿದ್ವತ್ಪೂರ್ಣ ಸಂವಾದಗಳನ್ನು ಇಲ್ಲಿ ನಡೆಸಿಕೊಟ್ಟಿದ್ದಾರೆ.

ಹಿರಿಯ ಕಲಾವಿದರು ಕಂಡುಕೇಳರಿಯದ ಭಾರತದ ಅಕ್ಕಪಕ್ಕದ ದೇಶಗಳಿಗೆ ಯುವ, ಉದಯೋನ್ಮುಖ ಕಲಾವಿದರು ಶಾಂತಿರಸ್ತೆಯ ದೆಸೆಯಿಂದ ಹೋಗಿಬಂದದ್ದಿದೆ. ಶ್ರಿಲಂಕಾ, ಪಾಕಿಸ್ತಾನ, ಬಾಂಗ್ಲಾದೇಶಗಳ ಕಲಾವಿದರು ಇಲ್ಲಿಗೆ ಮತ್ತೆ ಮತ್ತೆ ಬಂದು, ಇಲ್ಲಿನ ಕಲಾವಿದರೊಂದಿಗೆ ಸಂಯುಕ್ತ-ಕಲಾಕೃತಿಗಳನ್ನು ರಚಿಸಿ, ಒಡನಾಡಿ, ಪ್ರದರ್ಶಿಸಿ ಹೋದದ್ದಿದೆ.

ಸಾಧಾರಣವಾಗಿ ರೂಢಿಗತ ಗ್ಯಾಲರಿಗಳನ್ನು ಗಮನಿಸಿಯೂ ಇರದ ಸಿನಿಮಾ ನಿರ್ದೇಶಕರು, ಸಾಂಸ್ಕೃತಿಕ ವಿಶ್ಲೇಷಕರು, ಎಲ್ಲಿಂದಲೋ ಎಲ್ಲಿಗೋ ಹೋಗುವಾಗ ಗುಟ್ಟಾಗಿ ಒಂದೆರೆಡು ದಿನ ವಿಶ್ರಮಿಸಿ ಹೋಗಬಯಸುವ ವಿ.ಐ.ಪಿಗಳೂ ಇವರೆಲ್ಲರಿಗೂ ದಶಕದಿಂದಲೂ ಬೆಂಗಳೂರಿನಲ್ಲಿ ‘ನಂ1, ಶಾಂತಿರಸ್ತೆ’ ಒಂದು ಪರಿಚಿತ ಹಾಗೂ ಆತ್ಮೀಯ ತಾಣ.

ಇಂತಹ ಕಲಾತ್ಮಕ ತಂಗುದಾಣವೂ ಆದ ಇಲ್ಲಿಂದ, ಜನಸಂಪರ್ಕದ ಒತ್ತಡ ಹೆಚ್ಚಾದಾಗ ಇದರ ಕರ್ತೃ ಸುರೇಶ್ ನೆಲೆ ಕಂಡುಕೊಳ್ಳುವುದು ಪಾಂಡಿಚೆರಿಯ ಆರೋವಿಲ್ಲಿಯಲ್ಲಿ ಅಥವಾ ತಿರುನೆಲ್ವಿಯಲ್ಲಿ! ಆದ್ದರಿಂದ ಅರವಿಂದರು, ರಮಣಶ್ರೀಯವರು ಶೋಧಿಸುತ್ತಿದ್ದ ಯಾವುದೋ ಅಮೂರ್ತ ತುಡಿತದ ಒಂದಂಶವಂತೂ ಶಾಂತಿರಸ್ತೆಯಲ್ಲಿ ಕಾಲಿಡುತ್ತಲೇ ಅನುಭವಕ್ಕೆ ಬರುವ ಸತ್ಯದಲ್ಲಿ ಯಾವ ಅಧ್ಯಾತ್ಮದ ಭ್ರಮೆಯೂ ಇಲ್ಲ, ಸೃಜನಶೀಲತೆಯಿದೆಯಷ್ಟೇ.

                                                                           * * *
ಶಾಂತಿರಸ್ತೆ ಮನೆಯೂ ಹೌದು, ಗ್ಯಾಲರಿಯೂ ಹೌದು, ಹೊರನಾಡಿನ- ದೇಶಗಳ ಕಲಾವಿದರಿಗೆ ವಸತಿಯೂ ಹೌದು ಮತ್ತು ಒಂದು ಅನೌಪಚಾರಿಕ ಕಲಾವಸ್ತು ಸಂಗ್ರಹಾಲಯವೂ ಹೌದು. ಅನೌಪಚಾರಿಕತೆಯೇ ಇದರ ಔಪಚಾರಿಕ ಗುಣವೂ ಹೌದು, ಒಮ್ಮೊಮ್ಮೆ ಇದರ ಸಂಸ್ಥಾಪಕನಿಗೆ ಇರಿಸುಮುರಿಸು ಎನಿಸುವಷ್ಟು! ಐದು ವರ್ಷಕ್ಕೊಮ್ಮೆ ಜರ್ಮನಿಯ ಕಾಸೆಲ್ಲಿನಲ್ಲಿ ನಡೆವ ಡಾಕ್ಯುಮೆಂಟದಂತಹ ಅತ್ಯುತ್ಕೃಷ್ಟ ಕಲಾಪ್ರದರ್ಶನದ ಕ್ಯುರೇಟರ್ ಭಾರತದಲ್ಲಿನ ಕಲಾವಿದರ ಆಯ್ಕೆಗಾಗಿ ಎಲ್ಲರ ಸಂದರ್ಶನಗಳನ್ನು ಬೆಂಗಳೂರಿನ ಸ್ಥಾಪಿತ ಸರ್ಕಾರಿ ಸಂಸ್ಥೆಗಳನ್ನು ಕಡೆಗಿರಿಸಿ ಇಲ್ಲಿಯೇ ನಡೆಸಿದ್ದಿದೆ.

ಭಾರತದಾದ್ಯಂತ ಸಮಕಾಲೀನ ಕಲಾಸಮೂಹದಲ್ಲಿ ಬೆಂಗಳೂರಿನಲ್ಲಿರುವ ಒಂದು ಕ್ರಿಯಾತ್ಮಕ ತಾಣವೆಂದರೆ ಎಲ್ಲರಿಗೂ ನೆನಪಾಗುವುದು ಶಾಂತಿರಸ್ತೆಯೇ. ಇಂತಹ ತಾಣವು ಕಳೆದ ದಶಕದಿಂದ ಮಾಡಿರುವ ಮುಖ್ಯ ಸಾಧನೆ ಎಂದರೆ ಕಲಾಕೃತಿಗಳನ್ನು ಸೃಷ್ಟಿಸುವುದಕ್ಕಿಂತ ದೃಶ್ಯಕಲೆಗಾಗಿ ಒಂದು ಹೊಸ ಸಮೂಹವನ್ನೇ ಸೃಷ್ಟಿಸಿರುವುದು.

‘ನಂ.1, ಶಾಂತಿರಸ್ತೆ’ ಎಂಬುದು ಮೂಲಭೂತವಾಗಿ ಸುತ್ತಲಿನ ವರ್ಣಮಯ ಕಲಾಸಂಸ್ಥೆಗಳು ಏನೆಲ್ಲವನ್ನೂ ಮಾಡಲಾಗಲಿಲ್ಲವೋ, ಮಾಡಲೊಲ್ಲವೋ, ಅವುಗಳನ್ನು ನಿರ್ವಹಿಸುತ್ತಿರುವ ಕ್ರಿಯೆಯ ಮೊತ್ತ. ಈ ಅರ್ಥದಲ್ಲಿ ಕಲಾಶಿಕ್ಷಣ ಸಂಸ್ಥೆಗಳು, ಗ್ಯಾಲರಿಗಳು, ಸಂಗ್ರಹಾಲಯಗಳೊಂದಿಗೆ ಶಾಂತಿರಸ್ತೆಗೊಂದು ಜೈವಿಕ ಸಂಬಂಧವಿದೆ ಎಂದಂತಾಯಿತು. ಅತಿ ಕಿರಿಯ ಕಲಾವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶ ಇಲ್ಲಿದೆ.

ಔಪಚಾರಿಕ ಗ್ಯಾಲರಿಗಳಲ್ಲಿ ಇದು ಇಂದಿಗೂ ಸಾಧ್ಯವಾಗಿಲ್ಲ. ಆರ್ಥಿಕ ಲೆಕ್ಕಾಚಾರದೊಂದಿಗೆ ಇದರ ಸಂಸ್ಥಾಪಕ ಸುರೇಶ್ ಜಯರಾಂ ಹಾಗೂ ಆತನ ತಲೆಮಾರಿನ ಕಲಾವಿದರ ಅಲೆಮಾರಿತನದ ಉದಾರತೆಯ ಫಲಿತವಿದು. ಕರ್ನಾಟಕದಲ್ಲಿ ಔಪಚಾರಿಕವಾಗಿ ಕಲೆಯ ಅಭಿವ್ಯಕ್ತಿ ಸಂಸ್ಕೃತಿಯನ್ನು ನಿಯಂತ್ರಿಸುವ ತಲೆಮಾರಿಗಿಂತ ಕಿರಿಯ ವಯಸ್ಸಿನವರಿಂದ ಪೋಷಿತವಾದ ಈ ಬಳಗವು, ಆ ಹಿರಿಯ ನಿಯಂತ್ರಕರು ಹಾಕಿರುವ ಪರಿಧಿಯನ್ನು ದಾಟುವುದಕ್ಕೆ ಆರಂಭಿಕ ಹಂತವಾಗಿ ಶಾಂತಿರಸ್ತೆಯನ್ನು ಬಳಸಿಕೊಂಡದ್ದಿದೆ. 

­

ಆಫ್ರಿಕಾದ ಬುಡಕಟ್ಟಿನ ದೊರೆಯೊಬ್ಬನ ವೇಷಧಾರಿ ಕಲಾವಿದ ಬೆಂಗಳೂರಿನ ಶಾಂತಿರಸ್ತೆಯಲ್ಲಿ ನಡೆಯುತ್ತ ಬಂದು ಶಾಂತಿರಸ್ತೆಯ ಮನೆಯನ್ನು ಸೇರುವ ಪರ್ಫಾರ್ಮೆನ್ಸ್ ಕ್ರಿಯೆಯೆಂದರೇನು, ಅಡುಗೆ ಮಾಡಿ ಬಡಿಸಿ ಅದನ್ನು ತನ್ನ ದೃಶ್ಯಕಲಾಕೃತಿ ಎಂದು ಮತ್ತೊಬ್ಬ ತನ್ನನ್ನು ಅಂತರರಾಷ್ಟ್ರೀಯವಾಗಿ ಸ್ಥಾಪಿಸಿಕೊಳ್ಳುವುದೆಂದರೇನು (ಕಲಾವಿದ ಉಮೇಶ್ ಮದ್ದನಹಳ್ಳಿ), ಅತಿ ಸಾಮಾನ್ಯ  ಕರಕುಶಲ ಕಲೆಯಾದ ‘ಆರಿಗಾಮಿ’ಗೂ (ಕಾಗದ ಮಡಿಸಿ ಆಕೃತಿ ಮಾಡುವುದು) ಇಲ್ಲಿ ಕಲಾಸ್ಥಾನಮಾನ ದೊರೆಯುವುದೆಂದರೇನು (ಕಲಾವಿದೆ ಉಷಾ), ಗ್ಯಾಲರಿಗಳಲ್ಲಿ ಅಡುಗೆ- ಕಾವಲು- ನಿರ್ವಹಣೆಯ ಕೆಲಸ ಮಾಡುವ ಸಹಾಯಕರು ಸ್ವತಃ ಕಲಾವಿದರಾಗಿ ಗಂಭೀರವಾಗಿ ರೂಪುಗೊಂಡು ‘ಸೋಲ್ಡ್ ಔಟ್' ಪ್ರದರ್ಶನ ಮಾಡುವುದೆಂದರೇನು (ಮೋಹನ, ಕಾಪ್ ಶಿವು, ಪ್ರಭಾಕರ್), ದೈನಂದಿನ ಜೀವನದಲ್ಲಿ ಗಾಂಧಿ ಮತ್ತು ಎಂ.ಜಿ.ಆರ್ ವೇಷಧಾರಿಗಳಾಗಿರುವವರು (ನಿಜ ಜೀವನದಲ್ಲಿ) ಕಲಾಕೃತಿ ಚೌಕಟ್ಟುಗಳಾಗಿ ಪ್ರದರ್ಶಿತರಾಗುವುದೆಂದರೇನು, ಶಾಂತಿರಸ್ತೆಯಲ್ಲಿ ವಾಸಮಾಡುತ್ತಲೇ ಪೊಲೀಸ್ ವೃತ್ತಿಯ ಶಿವು ಛಾಯಾಗ್ರಾಹಕರಾಗಿ ರೂಪುಗೊಂಡಿರುವುದೆಂದರೇನು... ಇವೆಲ್ಲಕ್ಕೆ ಕಾರಣ ಶಾಂತಿರಸ್ತೆ ಒಂದು ಚೌಕಟ್ಟಿನ ಬಂಧಕ್ಕೆ ಸಿಲುಕಿಕೊಳ್ಳಲು ಮೊದಲಿನಿಂದಲೂ ನಿರಾಕರಿಸುತ್ತ ಬಂದಿರುವುದೇ ಆಗಿದೆ.

ಕರ್ನಾಟಕದ ಕಲಾಶಾಲೆಗಳ ಚಿಲ್ಟಾರಿಪಿಲ್ಟಾರಿಗಳೆಲ್ಲರಿಗೂ ಅಂತರರಾಷ್ಟ್ರೀಯ ಕಲಾವಿದರ ಜೊತೆ ವಸ್ತುಶಃ ಕಲಾಭಿವ್ಯಕ್ತಿಯಲ್ಲಿ ತೊಡಗಿಕೊಂಡು, ಕೌಟುಂಬಿಕ ಸಂಬಂಧಗಳನ್ನು ಇಲ್ಲಿ ಕುದುರಿಸಿಕೊಳ್ಳುವುದೆಂದರೇನು (ಇದಕ್ಕೆ ಹತ್ತು ಹಲವು ಉದಾಹರಣೆಗಳಿವೆ)... ಇವೆಲ್ಲವೂ ಶಾಂತಿರಸ್ತೆ ಕಲಾವಸತಿಯಲ್ಲಿ ಮಾತ್ರ ಸಾಧ್ಯವೋ ಎಂದು ನೋಡಿದರೆ ಅದು ಹಾಗಲ್ಲ. ಇಲ್ಲಿಯವರೆಗೂ ಇದ್ದ ಕಲಾಶಾಲೆಗಳಲ್ಲಿ ಮಾಧ್ಯಮ-ನಿರ್ದಿಷ್ಟವಾಗಿಯೇ ಕಲೆಯನ್ನು ಕಲಿಸುತ್ತಿರುವುದರಿಂದ ಅಲ್ಲಿಂದ ಸ್ನಾತಕ ಪದವಿ ಪಡೆದು ಬಂದವರು ಶಿಲ್ಪಿ, ಚಿತ್ರಕಾರ ಅಥವಾ ಪ್ರಿಂಟ್ ಮೇಕರ್ ಎನಿಸಿಕೊಂಡು ಹೊರಬರುತ್ತಿದ್ದಾರೆಯೇ ಹೊರತು ಕಲಾವಿದರೆನಿಸಿಕೊಂಡಲ್ಲ.

ಲಲಿತಕಲಾ ಅಕಾಡೆಮಿಯಂತೂ ಸಮಕಾಲೀನ ವೇಷಧಾರಿಯಾದ ಆದಿಮಾನವನಂತಾಗಿಬಿಟ್ಟಿದೆ. ಯಾರಾದರೂ ಪ್ರಜ್ಞಾವಂತರು ಅದನ್ನು ಎಷ್ಟು ದೂರ ಕೈಹಿಡಿದು ನಡೆಸುತ್ತಾರೋ ಅಷ್ಟರಮಟ್ಟಿಗೆ ಮಾತ್ರ ಅದರ ಜೀವ. ಶಾಂತಿರಸ್ತೆಯು ಇಂತಹ ಶೈಕ್ಷಣಿಕ ಅಪೂರ್ಣತೆ, ಅಕಾಡೆಮಿಯ ನಿರ್ಭಾವುಕತೆಗಳೆಂಬ ಕೊರತೆಗಳನ್ನು ನೀಗಿಸುವ, ಕರ್ನಾಟಕದ ದೃಶ್ಯಸಮುದಾಯದ ಊನಗಳನ್ನೆಲ್ಲ ತುಂಬಿಕೊಡುವ ದೃಶ್ಯಸಾಂಸ್ಕೃತಿಕ ಔಷಧಾಲಯವಾಗಿಬಿಟ್ಟಿದೆ.

                                                                   ***
ಸುಮಾರು ಎರಡು ದಶಕಗಳ ಕಾಲ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಇತಿಹಾಸ ಬೋಧಿಸಿದ ಸುರೇಶ್ ಅದನ್ನು ತ್ಯಜಿಸಿ ‘ನಂ1, ಶಾಂತಿರಸ್ತೆ’ ಆರಂಭಿಸಿದ್ದು ಆಗಿನ ಸಮಕಾಲೀನ ದೃಶ್ಯಕಲೆಯಲ್ಲಿನ ಜೀರ್ಣೋದ್ಧಾರಕ್ಕಾಗಿಯೇ. ಮನೆಯ ಮೇಲೊಂದು ಸೂರಿಗೆ ಬದಲಾಗಿ ಒಂದು ರೂಪಕದ ಊರನ್ನೇ ಈತ ನಿರ್ಮಿಸಿದಾಗ ಯುರೋಪು, ಅಮೇರಿಕ, ಆಸ್ಟ್ರೇಲಿಯ ಮುಂತಾದ ಖಂಡಗಳಿಂದ ಕಲಾವಿದರು ಬಂದು, ಹಲವು ತಿಂಗಳುಗಳ ಕಾಲ ನೆಲೆಸಿ, ಇಲ್ಲಿನ ಕಲಾವಿದರ ಜೊತೆ ಒಡನಾಡಿ, ಕಲೆ ಸೃಷ್ಟಿಸಿ, ಪ್ರದರ್ಶಿಸಿದ್ದಾರೆ. ಹೀಗೆ ಈ ನಾಲ್ಕೂ ಕ್ರಿಯೆಗಳನ್ನು ಒಂದೆಡೆ ಪೂರೈಸಲು ಬೆಂಗಳೂರಿನಲ್ಲಿ ನಿಶ್ಚಿತ ತಾಣ ಎಂಬುದು ಇರಲೇ ಇಲ್ಲ. ಕೇವಲ ಪುಸ್ತಕಗಳು, ಕ್ಯಾಟಲಾಗುಗಳಲ್ಲಿ ಕಾಣಸಿಗುತ್ತಿದ್ದ ಪರದೇಶಿ ಕಲಾಭ್ಯಾಸ ಮತ್ತು ದೃಶ್ಯಭಾಷೆಯ ಪರಿಚಯವು ಬೆಂಗಳೂರು ಕಲಾವಿದರಿಗೆ ನೇರವಾಗಿ ಆಗುವಂತಾಗಿದ್ದಕ್ಕೆ ಮೂಲಕಾರಣಗಳಲ್ಲಿ ಶಾಂತಿರಸ್ತೆಯ ಸಿಂಹಪಾಲೂ ಇದೆ.

ಮನೆಯ ಮೇಲೆ ಸೂರಿನ ಬದಲು ಊರನ್ನೇ ನಿರ್ಮಿಸಿದ ಸುರೇಶ್ ಪರಿಸರ ಪ್ರೇಮಿ. ಮೊದಲ ಅಂತಸ್ತಿನಲ್ಲಿ ಸ್ಟುಡಿಯೊಗಳನ್ನು ನಿರ್ಮಿಸುವಾಗ ಪಕ್ಕದಿಂದ ಹರಡಿಕೊಂಡಿದ್ದ ಗೇರುಬೀಜದ ಮರದ ಹಂದರವನ್ನೂ ಹಾಗೆಯೇ ಉಳಿಸಿಕೊಂಡರು (ಆ ವಿನ್ಯಾಸಕ್ಕೇ ರಾಷ್ಟ್ರಪ್ರಶಸ್ತಿ ದಕ್ಕಿಸಿಕೊಂಡ ವಾಸ್ತುನಿರ್ಮಿತಿ ಇದು. ವಾಸ್ತುಶಿಲ್ಪಿ ಮೀತಾ ಜೈನ್). ಮನೆ- ಸ್ಟುಡಿಯೊಗಳು- ಅಡುಗೆಮನೆ- ಗ್ಯಾಲರಿಗಳು ಪರಸ್ಪರ ಬೆರೆತು, ಎಲ್ಲೆಲ್ಲಿನ ಕಲಾವಿದರು ಒಂದೆಡೆ ಒಮ್ಮೆಲೆ ಸೇರಿದ ಸಂದರ್ಭಗಳಲ್ಲಿ ಎಷ್ಟೋ ದಿನ ಸುರೇಶ್ ಪಕ್ಕದ ಮನೆಯಲ್ಲಿ ನಿದ್ರಿಸಿದ್ದಿದೆ! ಬಯಲು-ಆಲಯಗಳು ಒಂದುಗೂಡಿದ ರೂಪಕವಿದು.    

ಶಾಂತಿರಸ್ತೆ ಹುಟ್ಟಿಕೊಂಡ ಕಾಲಕ್ಕೆ ತತ್ಸಮನಾಗಿ ಅಭಿವೃದ್ಧಿ ಹೆಸರಿನಲ್ಲಿ ವಿಶಾಲ ಬೆಂಗಳೂರು ಮೂಡತೊಡಗಿದ್ದ ಕಾಲವದು. ಆರ್ಥಿಕ ಲಾಭ ತರಲಾರದ್ದು ವೃತ್ತಿಯೇ ಅಲ್ಲ ಎಂಬ ಫರ್ಮಾನು ಹೊರಡಿಸುವ ಅಂತರರಾಷ್ಟ್ರೀಯ ಉದ್ಯಮಿಗಳು ಈ ಶಾಂತಿರಸ್ತೆಯ ಪರಿಕಲ್ಪನೆಯನ್ನು ಹೇಗೆ ಅರ್ಥೈಸುತ್ತಾರೋ ಎಂಬುದು ಎಂದಿಗೂ ಒಂದು ಕುತೂಹಲದ ಅಂಶವೇ ಸರಿ. ಹೆಗ್ಗೋಡಿನ ನೀನಾಸಂ ಸಂಸ್ಥೆಯ ಬಗ್ಗೆ ಬರೆಯುತ್ತ ಯು.ಆರ್. ಅನಂತಮೂರ್ತಿಯವರು, ತನ್ನ ಇತಿಮಿತಿಯನ್ನು ಮೀರಿಬೆಳೆವ ಸಂಸ್ಥೆಗಳು ತಮ್ಮತನವನ್ನು ಕಳೆದುಕೊಂಡುಬಿಡುತ್ತವೆ ಎಂಬರ್ಥದಲ್ಲಿ ವ್ಯಾಟಿಕನ್ನಿನ ಗ್ರಂಥಾಲಯದ ಉದಾಹರಣೆ ನೀಡುತ್ತಾರೆ. ಪ್ರಸಿದ್ಧ ಕಲಾವಿದ ಮಿಕೆಲೆಂಜೆಲೋ ವಿನ್ಯಾಸ ಮಾಡಿದ್ದರಿಂದಲೇ ಅದನ್ನು ಇನ್ನೆಂದಿಗೂ ಗ್ರಂಥಾಲಯವನ್ನಾಗಿ ಬಳಸಲು ಸಾಧ್ಯವೇ ಇಲ್ಲ. ಅದು ಇಂದು ಮಿಕಲೆಂಜೆಲೊವಿನ ವಿನ್ಯಾಸದ ಸಂಗ್ರಹಾಲಯವಾಗಿಬಿಟ್ಟಿದೆ. ಶಾಂತಿರಸ್ತೆಗೆ ಇದಮಿತ್ತಂ ಎಂಬಂತೆ ನಿರ್ದಿಷ್ಟ ಚೌಕಟ್ಟನ್ನೇನಾದರೂ ಕೊಟ್ಟುಬಿಟ್ಟಲ್ಲಿ, ಅದು ಯಾವ ಸಾಂಸ್ಥೀಕರಣವನ್ನು ಒಡೆಯುತ್ತಾ ಬಂದಿದೆಯೋ ಅದೇ ತಾನಾಗಿಬಿಡುತ್ತದೆ.

ಸ್ವತಃ ಬೆಂಗಳೂರೇ ಶಾಂತಿರಸ್ತೆಯ ಹೊರಗಿನ ಕಲಾವಿದರಿಗೆ ವಸ್ತುವಿಷಯವಾಗಿಬಿಟ್ಟಿದ್ದೂ ಒಂದು ವಿಶೇಷ. ಮತ್ತದು ಶಾಂತಿರಸ್ತೆಯ ಕೊಡುಗೆ ಕೂಡ. ಈ ನಿಟ್ಟಿನಲ್ಲಿ ಅದೇ ಕಾಲಕ್ಕೆ ನೆಲೆನಿಂತಿದ್ದ ‘ಬಾರ್ ವನ್’ (ಬೆಂಗಳೂರು ಆರ್ಟ್ ರೆಸಿಡೆನ್ಸಿ), ನಂತರ ಹುಟ್ಟಿಕೊಂಡ ಜಾಗವೆಂಬ ತಾಣಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡಿವೆ. ಕಲೆ ಎಂದರೆ ಪರಿಚಿತ ಚೌಕಟ್ಟಿನೊಳಗಿನ ಪರಿಚಿತ ದೃಶ್ಯ ಎಂಬ ಗ್ಯಾಲರಿ-ಪ್ರಣೀತ ಅರ್ಥೈಸುವಿಕೆಯನ್ನು ಒಡೆದು, ಸಮುದಾಯವೊಂದರ ಸೃಜನಾತ್ಮಕ ತೊಡಗಿಸಿಕೊಳ್ಳುವಿಕೆ ಎಂದು ಸಾಧಿಸಿದ್ದು ಶಾಂತಿರಸ್ತೆಯ ಸಾಧನೆಯೂ ಹೌದು. ಹಾಗೆಂದು ಇದು ಬಹಳ ಬುದ್ಧಿವಂತ, ವ್ಯವಸ್ಥಿತ ಸಂಘಟನೆ ಎಂದೇನೂ ಅಲ್ಲ. ಶಾಂತಿರಸ್ತೆಯ ಈ ಚೌಕಟ್ಟುರಹಿತ ಗುಣವನ್ನು ತೀವ್ರವಾಗಿ ಟೀಕಿಸಿದವರು ಸ್ವತಃ ಸುರೇಶರ ಗುರುಗಳಾದ ಮತ್ತೊಬ್ಬ ಕಲಾ ಇತಿಹಾಸಕಾರ ಬರೋಡದ ಶಿವ್ ಜೀ ಫಣಿಕ್ಕರ್ ಅವರು!

ಬೆಂಗಳೂರಿನ ಈ ಎಲ್ಲ ಕಲಾ-ರೆಸಿಡೆನ್ಸಿಗಳನ್ನು ‘ಕಲಾವಿದರೇ ಹುಟ್ಟುಹಾಕಿದ ಅನುಕೂಲಸಿಂಧು ವ್ಯವಸ್ಥೆಯಷ್ಟೇ, ಕಲಾಚಳವಳಿಗಳಲ್ಲ’ ಎಂದು ಕಮ್ಮಟವೊಂದರಲ್ಲಿ ಬೀಡುಬೀಸಾಗಿ ಹೇಳಿಕೆ ನೀಡಿಬಿಟ್ಟಿದ್ದರು ಫಣಿಕ್ಕರ್. 1980ರ ದಶಕದ ಕೇರಳದ ಐತಿಹಾಸಿಕವಾಗಿ ಪ್ರಮುಖವಾದ ರಾ್ಯಾಡಿಕಲ್ ಕಲಾಗುಂಪಿನೊಂದಿಗೆ ಅನವಶ್ಯಕ ಹೋಲಿಕೆ ಮಾಡುತ್ತಿದ್ದರವರು ಎನಿಸುತ್ತದೆ. ಮತ್ತು ಅವರಿಗೆ ತಿಳಿಯದಂತೆಯೇ ‘ನಂ1, ಶಾಂತಿರಸ್ತೆ’ಯನ್ನು ಸೇರಿಕೊಂಡಂತೆ ಇತರೆ ಬೆಂಗಳೂರಿನ ಪರ್ಯಾಯ ದೃಶ್ಯಕಲಾ ಗ್ಯಾಲರಿ -ರೆಸಿಡೆನ್ಸಿಗಳ ಅನನ್ಯ ಶಕ್ತಿಯನ್ನೂ ಫಣಿಕ್ಕರ್ ಅವರೇ ಸೂಚಿಸಿಬಿಟ್ಟಿದ್ದರು: ಅದರ ಪ್ರಕಾರ ಶಾಂತಿರಸ್ತೆ ಕಲಾತ್ಮಕತೆಯಲ್ಲಿ ಕ್ರಾಂತಿಕಾರಕವಾದುದೇನನ್ನೂ (ಅವನ್‌ಗಾರ್ಡ್) ಮಾಡಿಲ್ಲ ಎಂದಾಗ ಅದು ಮಧ್ಯಮ ಮಾರ್ಗವನ್ನು ಅಳವಡಿಸಿಕೊಂಡಿದೆ ಎಂದು ಒಪ್ಪಿಕೊಂಡಂತಾಯಿತು. ಗಾಂಧಿವಾದ ಹಾಗೂ ಬೌದ್ಧ ಧರ್ಮದ ನಡವಳಿಕೆಗೆ, ಬೆಂಗಳೂರಿನ ‘ಸ್ವಲ್ಪ ಅಡ್ಜಸ್ಟ್ ಮಾಡಿ’ ಭಾವದೊಂದಿಗೆ, ಕ್ಲೀಷೆಗಳನ್ನು ದಾಟಿ, ಇಲ್ಲದ ಸಮಸ್ಯೆಗೆ ಕ್ರಾಂತಿಕಾರಕ ಪ್ರತಿಕ್ರಿಯೆ ತೋರದ ಪ್ರಜ್ಞೆಯ ಹರಿಕಾರನಾಗಿ ಶಾಂತಿರಸ್ತೆ ಬದುಕುಳಿದಿದೆ ಎಂದು ಫಣಿಕ್ಕರ್ ತಮ್ಮ ಭಾವುಕ ಪ್ರತಿಕ್ರಿಯೆಯ ಮೂಲಕ ಒಪ್ಪಿಕೊಂಡಂತೆಯೂ ಆಯಿತು!    
                                                             ***
ನಮ್ಮ ಹಿರಿಯ ತಲೆಮಾರಿನ ಕಲಾವಿದರು, ಅಂದರೆ ಯಾರೆಲ್ಲ ಪೀತ-ಗ್ಯಾಲರಿ ಸಂಪ್ರದಾಯವನ್ನು ರೂಪಿಸಿ, ಅದರ ಮೂಲಕ ತಮ್ಮದೇ ಸೃಷ್ಟಿಕ್ರಿಯೆಯನ್ನು ಶೈಲೀಕರಣದ ಬಂಧನಕ್ಕೊಳಪಡಿಸಿ ಬಿಟ್ಟಿದ್ದರೋ, ನಿರ್ದಿಷ್ಟ ಶೈಲಿಗಳಿಲ್ಲದೆ ಕಲಾವಿದರಾಗಲು ಸಾಧ್ಯವಿಲ್ಲ ಎಂಬ ಅಸಮಕಾಲೀನ ನಿಯಮಾವಳಿಗಳನ್ನು ರೂಪಿಸಿಬಿಟ್ಟಿದ್ದರೋ, ಯಾರೆಲ್ಲ ಕಿರಿಯ ಕಲಾವಿದರಿಗೆ ಸುಲಭವಾಗಿ ಬೆಳೆಯಲು ಅನುವು ಮಾಡಿಕೊಡುತ್ತಿರಲಿಲ್ಲವೋ ಅಂತಹವರು ಇಂದಿಗೂ ಇನ್ನೂ ಕಂಡುಕೇಳರಿಯದ ದೇಶ ಮತ್ತು ಪ್ರಜ್ಞೆಯ ಪರಿಧಿಗೆ ಕಿರಿಯ ಕಲಾವಿದರೆಲ್ಲ ‘ಶಾಂತಿರಸ್ತೆ’ಯನ್ನು ಹಾಯ್ದು ಸಲೀಸಾಗಿ ಹೋಗಿಬರುವಂತಾದುದನ್ನು ಮೂಕಪ್ರೇಕ್ಷಕರಾಗಿ ವೀಕ್ಷಿಸುವಂತಾಗಿದೆ. ಇದೊಂದು ತೆರನಾದ ದೃಶ್ಯಾತ್ಮಕ ನ್ಯಾಯ, ಪೊಯೆಟಿಕ್ ಜಸ್ಟೀಸ್ ಇದ್ದಂತೆ. ಶಾಂತಿರಸ್ತೆಯನ್ನು ತಮಾಷೆಗಾಗಿ ‘ಅಂತರರಾಷ್ಟ್ರೀಯ ವಲಸೆಗೆ ಕಾಯ್ದು ಕುಳಿತ ಕಿರಿಯ, ಅನಾಮಿಕ ಕಲಾವಿದರ ನಿರಾಶ್ರಿತ ತಾಣ’ ಎಂದೂ ಕರೆಯಲಾಗುತ್ತದೆ.

ಸ್ವಾತಂತ್ರೋತ್ತರ ಕರ್ನಾಟಕದ ದೃಶ್ಯಕಲಾ ಇತಿಹಾಸದ ಆರಂಭಿಕ ಹಂತದಲ್ಲಿ ಕಲೆಯ ಅಭಿವ್ಯಕ್ತಿಗೆ ಅವಶ್ಯಕ ಹಾಗೂ ಅನಿವಾರ್ಯ ಆವರಣಗಳಾದ ಪ್ರದರ್ಶನ, ವಿಮರ್ಶೆ, ವ್ಯಾಪಾರ ಇವೆಲ್ಲವೂ ಪರಸ್ಥಳಗಳಲ್ಲಾಗುತ್ತಿದ್ದವು. ಕ್ರಮೇಣ ಮೈಸೂರು ದಸರಾ ಪ್ರದರ್ಶನ, ಅಕಾಡೆಮಿ ಮತ್ತು ಗ್ಯಾಲರಿ ಸಂಸ್ಕೃತಿಯು ಆರಂಭಗೊಂಡಾಗ ಕೃತಿಗಳು ಚಿತ್ರಗಳಾಗಿ ಉಳಿದುಕೊಂಡವು. ವಿಮರ್ಶಾತ್ಮಕವಾಗಿ ಒಂದು ಕಲಾಸಾಮೂಹಿಕ ಪ್ರಜ್ಞೆಯನ್ನು ಪ್ರವೇಶಿಸಲಿಲ್ಲ ಮತ್ತು ಹುಟ್ಟುಹಾಕಲಿಲ್ಲ. ಆದ್ದರಿಂದಲೇ ಈಗ ನಲವತ್ತರ ವಯೋಮಾನದ ಕರ್ನಾಟಕದ ಕಲಾವಿದರಿಗೆ ಪೂರ್ವಸೂರಿಗಳೆಂಬ ವರವಾಗಲಿ, ಪಿತೃಪೀಡೆಯಾಗಲಿ ಇಲ್ಲ.

ಹಳೆಯ ಚಿತ್ರಕಾರರಿದ್ದಾರೆ, ಅವರ ಚಿತ್ರಗಳ ಪ್ರತಿಕೃತಿಗಳಿದ್ದಾವೆ ಅಷ್ಟೇ. ಇದಕ್ಕೆ ಕಾರಣ ಚಿತ್ರಿತ ದೃಶ್ಯ ತನ್ನನ್ನು ವಿಮರ್ಶೆ ಗೊಡ್ಡಿಕೊಂಡಾಗಲೇ ಕಲಾಕೃತಿಯಾಗುವುದು ಎಂಬ ನಂಬಿಕೆ ಇತ್ತೀಚಿನದು. ಗ್ಯಾಲರಿಯ ಹೊರಗೆ ಕಲಾಶಿಕ್ಷಣ ಸಂಸ್ಥೆಯ ಸ್ವಲ್ಪ ಹತ್ತಿರದಲ್ಲಿ ಈ ನಂಬಿಕೆ ಹುಟ್ಟಿಕೊಂಡಿದ್ದು. ರೂಢಿಗತ ಅರ್ಥದ ಕಲಾಕೃತಿಗಳನ್ನು ರಚಿಸದೆಯೂ ಕಲಾವಿದ ಮತ್ತು ಅವನ/ಅವಳ ಕಲಾತ್ಮಕ ಕೊಡುಗೆಯ ಸೃಷ್ಟಿ ಸಾಧ್ಯವೆ? ಎಂಬ ಅರ್ಥಪೂರ್ಣ ಆಧುನಿಕೋತ್ತರ ಪ್ರಶ್ನೆಯನ್ನು ಈ ಸಂಸ್ಥೆಗಳ ಇತಿಮಿತಿಯ ಹೊರಗೆ, ಕಳೆದ ಎರಡು ದಶಕಗಳಿಂದ ಇಲ್ಲಿ ಬಂದು ನೆಲೆಸಿದ ಯುವ ಕಲಾವಿದರು ಹುಟ್ಟಿಹಾಕಿದರು. ಇಂತಹವೆಲ್ಲ ಸಾಧ್ಯವೆಂದು ಶಾಂತಿರಸ್ತೆಯಂತಲ್ಲಿ ಕಲಾವಿದರೇ ಹುಟ್ಟುಹಾಕಿದ ಕಲಾ-ರೆಸಿಡೆನ್ಸಿಗಳು ಸಾಧಿಸಿ ತೋರಿಸಿದವು. ಕಲೆಯ ಲಾಭವು ಕೇವಲ ಹಣದ ರೂಪದಲ್ಲಿ ಮಾತ್ರ ಎಂಬ ಗ್ಯಾಲರಿ-ಸಂರಚಿತ ನಂಬಿಕೆಯ ಬೆನ್ನೆಲುಬನ್ನು ಸ್ವಲ್ಪ ಅಲುಗಿಸಿ ಬಿಟ್ಟದ್ದು ಶಾಂತಿರಸ್ತೆಯ ದೃಶ್ಯ-ಆಧ್ಯಾತ್ಮಿಕ ಸಾಧನೆ.

ಮೂಲಭೂತವಾಗಿ ‘ನಂ.1, ಶಾಂತಿರಸ್ತೆ’ಯಲ್ಲಿ ಕಾಲಕಾಲಕ್ಕೆ ಸೂಕ್ತವಾದ ನಿರ್ಧಾರಗಳೊಂದಿಗೆ ಕಲೆಯನ್ನು ಕುರಿತ ಭೌಗೋಳಿಕವಾಗಿ ಚಾಲ್ತಿಯಲ್ಲಿರುವ ಎಲ್ಲ ಪ್ರಕಾರದ ಪ್ರಯೋಗಗಳಿಗೆ ತೆರೆದ ಮನಸ್ಸಿದೆ. ಅಂತಹವುಗಳನ್ನೆಲ್ಲ ಪೂರೈಸಲು ಸಣ್ಣಪುಟ್ಟ ಆರ್ಥಿಕ ಸಹಾಯ ಪಡೆದುಕೊಳ್ಳುವ ಚಿಕ್ಕವಯಸ್ಸಿನ ದೊಡ್ಡ ಸಂಖ್ಯೆಯ ಕಲಾವಿದರ ಅನೌಪಚಾರಿಕ ಗುಂಪಿದೆ. ಹಳ್ಳಿಗಳಲ್ಲಿ ಹಿಂದೆಲ್ಲ ಇರುತ್ತಿದ್ದ ಬಾರ್ಟರ್ ವ್ಯವಸ್ಥೆಯಂತೆ, ಹಣಕಾಸಿನ ಮಧ್ಯವರ್ತಿತನವಿಲ್ಲದ ವ್ಯವಹಾರವಿದು: ಹೇಳಹೆಸರಿಲ್ಲದ ಕಲಾವಿದರಿಗೆ ಇಲ್ಲಿ ಪ್ರದರ್ಶನಾವಕಾಶ, ಬದಲಿಗೆ ಅವರಿಂದ ಶಾಂತಿರಸ್ತೆಯಲ್ಲಿ ಶ್ರಮದಾನ. ಗ್ರಾಮೀಣ ಪ್ರತಿಭೆಗಳಿಗೊಂದಷ್ಟು ಅವಕಾಶದೊಂದಿಗೆ, ಜಗತ್ತಿನ ಕಲಾ ಇತಿಹಾಸವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್‌ಗಳ ಮೂಲಕ ಗ್ರಾಮೀಣ ಕಲಾಶಾಲೆಗಳಲ್ಲಿ ರಸಗ್ರಹಣ ಶಿಬಿರಗಳನ್ನು ಕನ್ನಡದಲ್ಲಿ ಶಾಂತಿರಸ್ತೆ ಹಮ್ಮಿಕೊಂಡಿದ್ದಿದೆ. ಈ ಅರ್ಥದಲ್ಲಿ ಶಾಂತಿರಸ್ತೆಯ ಆತ್ಮವು ಶಾಂತಿನಗರದಲ್ಲಿಲ್ಲದೆ ಹಳ್ಳಿಯಿಂದ ದಿಲ್ಲಿಯವರೆಗೂ ಹರಡುತ್ತಿರುವ ರಸ್ತೆಯಾಗಿದೆ.
                                                                           ***
‘ನಂ.1, ಶಾಂತಿರಸ್ತೆ’ ಗ್ಯಾಲರಿ, ಸಂಗ್ರಹಾಲಯ, ಕಲಾಶಿಕ್ಷಣ ಸಂಸ್ಥೆ, ಕಲಾ-ರೆಸಿಡೆನ್ಸಿ ಇವೆಲ್ಲವುಗಳ ಮೊತ್ತವಲ್ಲ. ಆ ಎಲ್ಲ ಸ್ಥಾಪಿತ ಸಂಸ್ಥೆಗಳೊಳಗೆ ಅಡಕಗೊಂಡಿರಬಹುದಾದ ಸಮಕಾಲೀನ ಅಂಶಗಳ ಸಂರಚನೆ. ಈ ಸಂರಚನೆಯು ಸಂಗತವೋ ಅಸಂಗತವೋ ಎಂಬುದನ್ನು ಸಮಯಪರೀಕ್ಷೆಯೇ ನಿರ್ಧರಿಸಬೇಕು. ಇಷ್ಟೇ ಆಳವಾಗಿ ಇಷ್ಟೇ ದೀರ್ಘವಾಗಿ ಬಾಳಲಿ ಎಂಬ ಮ್ಯಾನಿಫೆಸ್ಟೊ ಇಲ್ಲದಿರುವುದೇ ಶಾಂತಿರಸ್ತೆಗೆ ಒಂದು ವರವಾಗಿದೆ. ಆದರೆ ಮಾರ್ಕ್ಸ್ ವಾದದಂತೆ ಕೇಳಿಸಿಬಿಡುವುದರಿಂದಲೇ ಮ್ಯಾನಿಫೆಸ್ಟೋ ಎಂಬುದು ಇರಲೇಬೇಕು ಎನ್ನುವ ಫಣಿಕ್ಕರ್ ಅಂತಹವರಿಗೆ ಸಾಧ್ಯತೆಯೇ ಸೀಮಿತತೆಯಾಗಿ ಕಂಡುಬರುವ ಅಪಾಯವೂ ಇರುತ್ತದೆ.

ಕಲಾವಿದೆ ಎನ್. ಪುಷ್ಪಮಾಲಾ ತಮ್ಮ ‘ಸೋಂಬೇರಿ ಕಟ್ಟೆ’ ಅಡಿಯಲ್ಲಿ ಶಾಂತಿರಸ್ತೆಯಲ್ಲಿ ಸುಮಾರು ಎರಡು ವರ್ಷ ಕಾಲ ಸಮಕಾಲೀನ ವಸಾಹತೋತ್ತರ ಚಿಂತನೆಯ ಸರಣಿಯಲ್ಲಿ ಅನೇಕ ದೃಶ್ಯಜ್ಞರ ಸಂವಾದಗಳನ್ನು ಏರ್ಪಡಿಸಿದ್ದರು. ಇತ್ತೀಚೆಗೆ ಎನ್.ಜಿ.ಎಂ.ಎಯವರು (ರಾಷ್ಟ್ರೀಯ ಸಂಗ್ರಹಾಲಯ) ಆ ಸಂವಾದ ಸರಣಿಯನ್ನು ತಮ್ಮಲ್ಲಿಯೇ ಮುಫತ್ತಾಗಿ ನಡೆಸಿಕೊಡುವಂತೆ ಶಾಂತಿರಸ್ತೆಯ ಸ್ಥಾಪಕ ಸುರೇಶ್ ಜಯರಾಮರನ್ನು ಕೇಳಿಕೊಂಡರಂತೆ. ‘ಇದರಿಂದ ಶಾಂತಿರಸ್ತೆಗೆ ಹೆಸರು ಬರುತ್ತದೆ’ ಎಂಬುದೇ ಅವರು ಶಾಂತಿರಸ್ತೆಗೆ ಕೊಡಮಾಡಲು ತಯಾರಿದ್ದ ಶುಲ್ಕ. ಅದಕ್ಕೆ ಸುರೇಶರ ಪ್ರತಿಕ್ರಿಯೆ ಶಾಂತಿರಸ್ತೆಯೆಂಬ ಪರಿಕಲ್ಪನೆಯನ್ನು ಧೀಮಂತವಾಗಿ ಹಿಡಿದಿರಿಸುತ್ತದೆ– ‘ಬೇಕಿದ್ದರೆ ಎನ್.ಜಿ.ಎಂ.ಎ ಕಾರ್ಯಕ್ರಮಗಳನ್ನು ನಮ್ಮಲ್ಲಿ ಅಂದರೆ ಶಾಂತಿರಸ್ತೆಯಲ್ಲಿ ಏರ್ಪಡಿಸಿ. ನಿಮಗೆ ಅದರಿಂದ ಹೆಚ್ಚು ಜನಪ್ರಿಯತೆ ಹಾಗೂ ಮೌಲ್ಯ ದೊರಕಬಹುದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT