ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಗಲಿ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ

Last Updated 25 ಡಿಸೆಂಬರ್ 2013, 5:55 IST
ಅಕ್ಷರ ಗಾತ್ರ

ಮುಳಬಾಗಲು: ತಾಲ್ಲೂಕಿನ ಗಡಿ­ಯಂಚಿನ ನಂಗಲಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಸೌಕರ್ಯ ಹಾಗೂ ವೈದ್ಯರ ಕೊರತೆಯಿಂದ ಬಳಲುತ್ತಿದ್ದು, ಸಾರ್ವ­ಜನಿಕರ ಟೀಕೆಗೆ ಗುರಿಯಾಗಿದೆ.

ಸುತ್ತಮುತ್ತಲ 37 ಗ್ರಾಮದ ರೋಗಿ­ಗಳು ಈ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. 25 ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ರಕ್ಷಣೆಗಾಗಿ 50 ವರ್ಷಗಳ ಹಿಂದೆ ಈ ಆರೋಗ್ಯ ಕೇಂದ್ರ ಸ್ಥಾಪಿಸಲಾಯಿತು. ಈ ಗ್ರಾಮ ವ್ಯಾಪ್ತಿಯಲ್ಲಿ ಬಹುತೇಕರು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರು ಇದೇ ಆಸ್ಪತ್ರೆಯನ್ನು ನಂಬಿ­ಕೊಂಡಿ­­ದ್ದಾರೆ. ಇಲ್ಲಿ ವೈದ್ಯರೊಬ್ಬರಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ರೋಗಿ­ಗಳನ್ನು ತಪಾಸಣೆ ಮಾಡುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಇಲ್ಲಿ ವೈದ್ಯರ ಅವಶ್ಯಕತೆ ಇದೆ.

ಈ ಆಸ್ಪತ್ರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು, ಆಗಾಗ ಸಂಭವಿಸುವ ಅಪಘಾತಗಳು  ಆಸ್ಪತ್ರೆ ಅವಶ್ಯಕತೆ ಹೆಚ್ಚಿ­ಸಿದೆ. ರಾತ್ರಿ ವೇಳೆ ಅಪಘಾತ ಸಂಭವಿ­ಸಿದರೆ ಸಿಬ್ಬಂದಿ ಇಲ್ಲದೇ ಗಾಯಾಳುಗಳು ತೊಂದರೆ ಅನುಭವಿಸುವಂತಾಗಿದೆ.

ಈ ಆಸ್ಪತ್ರೆಗೆ ಮುಖ್ಯವಾಗಿ ಹೆರಿಗೆ ತಜ್ಞರು, ಸ್ತ್ರೀ ರೋಗ ತಜ್ಞರ ಅವಶ್ಯಕತೆ­ಯಿದೆ. ಈ ಭಾಗದಲ್ಲಿ ತಿಂಗಳಿಗೆ ಸರಾಸರಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಜನಿ­ಸುತ್ತಿದ್ದಾರೆ. ತಿಂಗಳಿಗೆ ನೂರಕ್ಕೂ ಹೆಚ್ಚು ಗರ್ಭಿಣಿಯರು ತಪಾಸಣೆಗೆ ಹಾಗೂ ಚಿಕಿತ್ಸೆಗೆ ಬರುತ್ತಾರೆ. ತಪಾಸಣೆ, ಚಿಕಿತ್ಸೆ, ಹೆರಿಗೆ ಮಾಡಿಸಲು ಹೆರಿಗೆ ತಜ್ಞರ ಅವಶ್ಯಕತೆ ಇದೆ. ಈ ಬಗ್ಗೆ ಸಾರ್ವ­ಜನಿಕರು ಹಲವು ಬಾರಿ  ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ­ದರೂ ಹೆರಿಗೆ, ಸ್ತ್ರೀ ರೋಗ ತಜ್ಞರನ್ನು ನೇಮಿಸಿಲ್ಲ.

ಔಷಧಿಗಳ ಕೊರತೆ: ಈ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುತ್ತಿದ್ದು, ಸರ್ಕಾರ ವಾರ್ಷಿಕವಾಗಿ ಮಂಜೂರು ಮಾಡುವ ಒಂದು ಲಕ್ಷ ರೂಪಾಯಿ ಔಷಧ ಸಾಲು­ತ್ತಿಲ್ಲ. ಈ ಭಾಗದಲ್ಲಿ ಶಾಲೆ, ಕಾಲೇಜು­ಗಳಿದ್ದು, ವಿದ್ಯಾರ್ಥಿಗಳು ಗಾಯ­ಗೊಂಡರೆ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಗೆ ಬ್ಯಾಂಡೇಜ್, ಟಿಂಚರ್, ಆಯಿಂಟ್ ಮೆಂಟ್ ಸರಬರಾಜು ಕಡಿಮೆಯಿದ್ದು, ತುರ್ತಾಗಿ ಪ್ರಾಥಮಿಕ ಚಿಕಿತ್ಸೆಯೂ ಸಿಗುತ್ತಿಲ್ಲ. ಶೌಚಾಲಯ ಸಮರ್ಪಕವಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‌ಡಿಎ ಮತ್ತು ಎಲ್ಎಚ್‌ವಿ, ಡಿ ಗ್ರೂಪ್ ಹುದ್ದೆಗಳು ಖಾಲಿ ಇವೆ.

ವೈದ್ಯರಿಗೆ ಹಾಗೂ ಇತರೆ ಸಿಬ್ಬಂದಿಗೆ ವಸತಿ ಗೃಹಗಳು ಇಲ್ಲ. ಆದ್ದರಿಂದ ಮುಳ­ಬಾಗಲಿನಿಂದ ನಿತ್ಯ ಓಡಾಡ­ಬೇಕಾ­ಗಿದೆ. ಸರ್ಕಾರ ಗಡಿಭಾಗದ ಪ್ರದೇಶಗಳ ಅಭಿವೃದ್ಧಿಗೆ ಪ್ರಾಧಿಕಾರವನ್ನೇ ರಚಿಸಿದೆ. ಗಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂಬ ಆಶಯ ಹೊಂದಿದೆ. ಆದರೆ ಅದು ಕಾರ್ಯರೂಪಕ್ಕೆ ಬರು­ತ್ತಿಲ್ಲ. ಗಡಿಭಾಗದಲ್ಲಿರುವ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕ ಜಿ.ಮಂಜುನಾಥ್ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಾರ್ವ­ಜನಿಕರು ಒತ್ತಾಯಿಸಿದ್ದಾರೆ.

ಹೆರಿಗೆ ತಜ್ಞರನ್ನು ನೇಮಿಸಬೇಕು
ನಂಗಲಿ ಆಸ್ಪತ್ರೆಗೆ ಸ್ತ್ರೀ ರೋಗ ತಜ್ಞರು, ಹೆರಿಗೆ ತಜ್ಞರ ಅವಶ್ಯಕತೆ ಇದೆ. ಈ ಬಗ್ಗೆ ಹಲವು ಬಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಸ್ತ್ರೀರೋಗ ತಜ್ಞರು ಮತ್ತು ಹೆರಿಗೆ ತಜ್ಞರನ್ನು ನೇಮಿಸಬೇಕು.
-ಸವಿತಾ ಅಮರೇಂದ್ರ ಕುಮಾರ್‌, ನಂಗಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT