ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದೀಶನ ಪ್ರಶ್ನೆಗೆ ಯಾರಲ್ಲಿದೆ ಉತ್ತರ?

ಕೆಎಂಎಫ್ ಹಾಲಾಹಲ ಭಾಗ - 9
Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸರ್ಕಾರ ಡಾಕ್ಟ್ರು, ಇಂಜಿನಿಯರುಗಳ್ನೆಲ್ಲ ಸೃಷ್ಟಿ ಮಾಡ್‌ಬಹ್ದು. ಆದ್ರೆ ಅವ್ರೆಲ್ಲ ತಿನ್ನೋ ಅನ್ನಾನ, ಕುಡಿಯೋ ಹಾಲನ್ನ ಸೃಷ್ಟಿ ಮಾಡ್ತಾ ಇರೋನು ರೈತ ತಾನೇ. ಅವ್ನ್ ಹೊಟ್ಟೆ ಮೇಲೇ ಹೊಡ್ದ್‌ಬುಟ್ರೆ ನಾಳೆ ಇವ್ರೆಲ್ಲ ಏನ್ ತಿಂತಾರೆ, ಹೆಂಗ್ ಬದುಕ್ತಾರೆ ಹೇಳಿ?'

-ಬೆಂಗಳೂರಿನ ಮಾಲೊಂದರಲ್ಲಿ ಭದ್ರತಾ ಸೇವಕನಾಗಿರುವ ಮಂಡ್ಯ ಜಿಲ್ಲೆಯ ನಂದೀಶ ನಿರ್ಭಾವುಕನಾಗಿ ಈ ಪ್ರಶ್ನೆ ಕೇಳಿದ್ದ. ಹಾಗೇ ಸುಮ್ಮನೆ ಮಾತಿಗೆಳೆದು `ಏನಪ್ಪಾ ಹಳ್ಳಿ ಬಿಟ್ ಬಂದು ಈ ಬಾಗಿಲು ಕಾಯೋ ಕೆಲ್ಸಕ್ಕೆ ಸೇರ‌್ಕೊಳ್ಳೋ ಗತಿ ನಿಂಗ್ಯಾಕ್ ಬಂತು' ಎಂದು ಕೇಳಿದ ಕೂಡಲೇ ಅವನು ಈ ಮರುಪ್ರಶ್ನೆ ಹಾಕಿದ್ದ. ಆದರೆ ಅದು ಅಂತಿಂಥಾ ಪ್ರಶ್ನೆಯಲ್ಲ, ದೇಶದ ಭವಿಷ್ಯ ನೆನೆದವರ ಎದೆ ಝಲ್ಲೆನ್ನಿಸುವ ಮಿಲಿಯನ್ ಡಾಲರ್ ಪ್ರಶ್ನೆ ಎನ್ನುವ ಅರಿವು ಅವನಿಗಿರಲಿಲ್ಲ.

40 ಸಾವಿರ ಕೊಟ್ಟು ಪಕ್ಕದೂರಿನ ಸಂತೆಯಿಂದ ಕೊಂಡು ತಂದಿದ್ದ ಅವನ ಹಸು ಯಾವುದೋ ರೋಗ ಬಂದು ಇದ್ದಕ್ಕಿದ್ದಂತೆ ಸಾವಿಗೀಡಾಗಿತ್ತು. ಅದರ  ಹಾಲನ್ನು ಡೇರಿಗೆ ಹಾಕಿ, ಜೊತೆಗೊಂದಿಷ್ಟು ಕೂಲಿ ನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಅವನ ಕುಟುಂಬಕ್ಕೆ, ನಿರ್ದಿಷ್ಟ ಆದಾಯ ತಂದುಕೊಡುತ್ತಿದ್ದ ಹಸುವಿನ ಸಾವನ್ನು ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲ. ಮಳೆಯಿಲ್ಲದ ಊರಲ್ಲಿ ಸರಿಯಾಗಿ ಕೂಲಿಯೂ ಸಿಗದೆ ಒಂದು ವರ್ಷದ ಹಿಂದೆ ನಂದೀಶ ಬೆಂಗಳೂರಿನ ಬಸ್ಸು ಹತ್ತಿದ್ದ.

ಇದು ಯಾವುದೋ ಒಬ್ಬ ನಂದೀಶನ ಕಟ್ಟು ಕತೆಯಲ್ಲ. ನಮ್ಮ ರಾಜಧಾನಿಯ ಬೀದಿ ಬೀದಿಗಳಲ್ಲಿ ರಾಜ್ಯದ ಹಲವು ಹಳ್ಳಿಗಳಿಂದ ಬಂದು ದೊಡ್ಡ ದೊಡ್ಡ ಕಟ್ಟಡಗಳ ಬಾಗಿಲು ಕಾಯುತ್ತಿರುವ, ದಿನಗೂಲಿಗಳಾಗಿ, ಹೋಟೆಲ್ ಮಾಣಿಗಳಾಗಿ, ಹೆಚ್ಚೆಂದರೆ ಬಾಡಿಗೆ ಆಟೊ ಓಡಿಸುತ್ತಾ, ಸೂಪರ್‌ಮಾರ್ಕೆಟ್‌ಗಳಲ್ಲಿ ಸೇಲ್ಸ್‌ಮನ್‌ಗಳಾಗಿ ಧಾವಂತದ ಬದುಕಿನಲ್ಲಿ ಕಳೆದುಹೋಗುತ್ತಿರುವ ಸಾವಿರಾರು ಯುವಕರ ಕತೆ.

ನಗರಗಳ ದಟ್ಟಣೆಯನ್ನು ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಸರ್ಕಾರ, ಇವರೆಲ್ಲ ಯಾಕೆ ಊರು ತೊರೆದು ಇಲ್ಲಿಗೆ ವಲಸೆ ಬರುತ್ತಿದ್ದಾರೆ ಎಂದು  ಒಮ್ಮೆಯಾದರೂ ಚಿಂತಿಸಿದ್ದರೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ ಇವರೆಲ್ಲ ಇತ್ತ ಬರುತ್ತಿರಲೇ ಇಲ್ಲವೇನೋ?
ಕೃಷಿಯನ್ನು ನಂಬಿ ಬದುಕುವ ಕಾಲ ಎಂದೋ ಮುಗಿದುಹೋಗಿದೆ. ಆದರೂ ಹಳ್ಳಿಗರು ಇನ್ನೂ ಜೀವ ಹಿಡಿದಿಟ್ಟುಕೊಂಡಿದ್ದಾರೆ ಎಂದರೆ ಅದು ಹೈನೋದ್ಯಮದಿಂದ ಮಾತ್ರ.

ಅದೂ ಕೈಕೊಟ್ಟರೆ ಮುಂದಿನ ಸ್ಥಿತಿಯನ್ನು ಊಹಿಸಲೂ ಅಸಾಧ್ಯ. ಇದೆಲ್ಲ ಗೊತ್ತಿದ್ದರೂ ಸರ್ಕಾರ ಅಥವಾ ಹೈನುಗಾರಿಕೆಯಿಂದಲೇ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಕೆಎಂಎಫ್ ಏನು ಮಾಡುತ್ತಿದೆ? ವರ್ಷಂಪ್ರತಿ ಸಾವಿರಾರು ಮಿಶ್ರತಳಿ ಹಸುಗಳು ಸಾವಿಗೀಡಾಗುತ್ತಿವೆ. ಯಾರಾದರೂ ಅವುಗಳ ಲೆಕ್ಕ ಇಡುತ್ತಿದ್ದಾರೆಯೇ? ಹತ್ತಾರು ಲೀಟರ್ ಹಾಲು ಕರೆಯುವ ಹಸುಗಳು ಇದ್ದಕ್ಕಿದ್ದಂತೆ ಯಾಕೆ ಹಾಗೆ ಸಾಯುತ್ತಿವೆ ಎಂಬ ತನಿಖಾ ವರದಿಯೇನಾದರೂ ಕೆಎಂಎಫ್ ಬಳಿ ಇದೆಯೇ? ಇದನ್ನೆಲ್ಲ ಗಟ್ಟಿಸಿ ಕೇಳುವವರು ತಾನೇ ಯಾರು? ಮುಗ್ಧ ರೈತ, ಮೂಕ ಹಸು ಹೇಗಿದ್ದರೂ ಕೇಳುವುದಿಲ್ಲ.

ಮನೆಯಲ್ಲಿ ಮೈ ತೊಳೆಯಲು ಸೋಪಿಗೆ ಬರವಿದ್ದರೂ, ದಿನಬೆಳಗಾದರೆ ಒಂದಿಲ್ಲೊಂದು ಕಾಯಿಲೆಯಿಂದ ನರಳುವ ಹಸುಗಳಿಗೆ ಬೇಕಾದ ಬಹುತೇಕ ಔಷಧಿಗಳನ್ನು ರೈತನೇ ಖರೀದಿಸಬೇಕು. ವಿದೇಶಿ ಗಂಡು ಮತ್ತು ದೇಸಿ ಹೆಣ್ಣು ತಳಿಗಳ ಕೃತಕ ಗರ್ಭಧಾರಣೆಯಿಂದ ಜನಿಸಿದ ಮಿಶ್ರತಳಿ ಹಸುಗಳ ಸಂತಾನಾಭಿವೃದ್ಧಿಯನ್ನು ಅದೇ ಪ್ರಮಾಣದಲ್ಲಿ ಮುಂದುವರಿಸಿದ್ದರೆ ಹೆಚ್ಚಿನ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಂತರದ ಸಾಲಿನಲ್ಲಿ ಮಿಶ್ರತಳಿಗಳ ನಡುವೆ ಸಂತಾನ ಸೃಷ್ಟಿ ಆರಂಭವಾಗಿದ್ದರಿಂದ ಹುಟ್ಟುವ ಕರುಗಳು ನಿಶ್ಶಕ್ತವಾಗುತ್ತಿವೆ.

ವಿದೇಶಿ ತಳಿಗಳ ಸ್ವಭಾವವನ್ನೇ ಹೆಚ್ಚಾಗಿ ಮೈಗೂಡಿಸಿಕೊಂಡಿರುವ ಹಸುಗಳಿಗೆ ಇಲ್ಲಿನ ಹವಾಮಾನ ಒಗ್ಗುತ್ತಿಲ್ಲ. ಅವುಗಳ ಆರೈಕೆಯ ಜ್ಞಾನ ಬಹುತೇಕ ರೈತರಿಗೆ ಇಲ್ಲ. ಅಜ್ಜನ ಕಾಲದಿಂದಲೂ ತಮ್ಮ ಒರಟುತನಕ್ಕೆ ತಕ್ಕಂತೆ ಬೆಳೆದುಬಂದಿದ್ದ ನಾಟಿ ಹಸುಗಳನ್ನು ಸಾಕುವುದಷ್ಟೇ ಗೊತ್ತಿರುವ ರೈತರಿಗೆ, ಈಗಿನ ಹಸುಗಳ ಸೂಕ್ಷ್ಮ ಪ್ರಕೃತಿಯ ಅರಿವಿಲ್ಲ.

ಒಂದೆರಡು ಕರು ಹಾಕುವಷ್ಟರಲ್ಲೇ ಹಸುಗಳು ನಿತ್ರಾಣವಾಗುತ್ತವೆ. ಲೀಟರ್‌ಗಟ್ಟಲೆ ಹಾಲು ಕರೆದೂ ಕರೆದೂ ಅವುಗಳ ಶಕ್ತಿಯೆಲ್ಲ ಸೋರಿಹೋಗಿರುತ್ತದೆ. ಸೊಳ್ಳೆ ಕಚ್ಚಿದರೆ ಜ್ವರ, ನೊಣ ಸೋಕಿದರೆ ಭೇದಿ ಎಂಬಂತಹ ಸೂಕ್ಷ್ಮ ಸ್ಥಿತಿಯನ್ನು ತಲುಪಿರುತ್ತವೆ. ಅವುಗಳಿಗೆ ಪುಷ್ಟಿ ಬರಬೇಕಾದರೆ ತಿಂಗಳಿಗೆ ಕನಿಷ್ಠ ಎರಡು ಕೆ.ಜಿ.ಯಷ್ಟಾದರೂ ಖನಿಜಾಂಶ ಪುಡಿಯನ್ನು ಹಾಕಬೇಕು. 10 ರೈತರಲ್ಲಿ ಒಬ್ಬರಾದರೂ ಇದನ್ನು ಸರಿಯಾಗಿ ಕೊಟ್ಟರೆ ಹೆಚ್ಚು.

ಗುಂಡಿ ಬಿದ್ದು ಗಬ್ಬೆದ್ದಿರುವ ಕೊಟ್ಟಿಗೆ, ಮಗ್ಗುಲಲ್ಲೇ ಹುಲುಸಾಗಿ ಬೆಳೆದ ಗರಿಕೆಯ ಒಳಗೆ ಸೇರಿಕೊಂಡ ಉಣ್ಣೆಗಳ ಕಾಟವನ್ನು ತಡೆದುಕೊಳ್ಳುವ ಶಕ್ತಿಯನ್ನೂ ಕ್ರಮೇಣ ಹಸುಗಳು ಕಳೆದುಕೊಳ್ಳುತ್ತಿವೆ. ಕಡೆಕಡೆಗೆ ಬಡಕಲಾಗುತ್ತಾ ಬಂದು ಬಂಜೆತನ, ಗರ್ಭಕೋಶದ ಸಮಸ್ಯೆ, ಕೆಚ್ಚಲು ಬಾವು, ಚಪ್ಪೆ ಕಾಯಿಲೆ, ಗಂಟಲು ಬೇನೆ, ಕಾಲು ಬಾಯಿ ಜ್ವರದಂತಹ ಸಮಸ್ಯೆಗಳಿಂದ ನರಳತೊಡಗುತ್ತವೆ.

ಈ ರೋಗಗಳ ತಡೆಗೆ ವರ್ಷಕ್ಕೆ ಐದಾರು ಬಾರಿ ಅವುಗಳಿಗೆ ಲಸಿಕೆ ಹಾಕಿಸಲೇಬೇಕು. ಲಸಿಕೆಗಳ ತಾತ್ಕಾಲಿಕ ಅಡ್ಡ ಪರಿಣಾಮಗಳಿಗೆ ಹೆದರುವ ಹಲವು ರೈತರು `ಗರ್ಭ ಕಟ್ಟುವುದಿಲ್ಲ, ಹಾಲಿನ ಪ್ರಮಾಣ ಕಡಿವೆುಯಾಗಿಬಿಡುತ್ತದೆ' ಎಂಬ ಭೀತಿಯಿಂದ ಎಷ್ಟೋ ಬಾರಿ ಲಸಿಕೆಯನ್ನೇ ಹಾಕಿಸುವುದಿಲ್ಲ. ಕೊನೆಗೆ ಹಸು ಕಾಯಿಲೆಯಿಂದ ಸತ್ತುಹೋದಾಗ ಮಾತ್ರ ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ.

ಹಸುಗಳಿಗೆ ಬರುವುದು ಬಹುತೇಕ ಅಂಟುಜಾಡ್ಯ. ಆದ್ದರಿಂದ ಸತ್ತಾಗ ಅವುಗಳನ್ನು ಊರ ಹೊರಗೆ ಆಳವಾದ ಗುಂಡಿ ತೆಗೆದು ಸುಣ್ಣ ಹಾಕಿ ಹೂಳಬೇಕು.  ಸಾಮಾನ್ಯವಾಗಿ 400- 500 ಕೆ.ಜಿ ತೂಗುವ ಹಸುವಿನ ಶವವನ್ನು ಗಾಡಿಯಲ್ಲಿ ಹೊತ್ತುಕೊಂಡು ಹೋಗಿ ಊರಾಚೆ ಎಸೆದು ಬರುತ್ತಾರೆ. ಊರಿನ ಇತರ ಕೊಟ್ಟಿಗೆಗಳೂ ರೋಗದ ಗೂಡುಗಳಾಗಲು ತಾವೇ ಅವಕಾಶ ಮಾಡಿಕೊಡುತ್ತಾರೆ. ಇನ್ನು ಹಸು ಕೊಳ್ಳುವ ಅಥವಾ ಮಾರುವ ಕಾರ್ಯಕ್ಕಂತೂ ಯಾವ ಅಡೆತಡೆಯೂ ಇಲ್ಲ.

ಪಶು ವೈದ್ಯರ ಸಲಹೆ ಕೇಳುವ ತಾಳ್ಮೆ ರೈತನಿಗಿಲ್ಲ, ಸೂಕ್ತ ತರಬೇತಿಗಳ ಮೂಲಕ ರೈತನ ಅರಿವಿನ ಜ್ಞಾನ ವಿಸ್ತರಿಸುವ ವ್ಯವಧಾನ ಕೆಎಂಎಫ್‌ಗಾಗಲಿ, ಸರ್ಕಾರಕ್ಕಾಗಲಿ ಇಲ್ಲ. ಸೀದಾ ಸಂತೆಗೆ ಹೋಗಿ ಕಿಸೆಯಲ್ಲಿರುವ ಹಣಕ್ಕೆ ತಕ್ಕ ಹಸುಗಳನ್ನು ಹೊಡೆದುಕೊಂಡು ಬರುವ ರೈತರಿಗೆ, ಅನುಭವಿಸಿದ ಮೇಲಷ್ಟೇ ಅವುಗಳ ನಿಜ ಸ್ಥಿತಿ ಅರಿವಾಗುತ್ತದೆ. ಇಂಥ ಕಾರಣಕ್ಕೇ ಹಸು ಸತ್ತಿದೆ ಎಂದು ದೃಢಪಡಿಸುವ ಪ್ರಯೋಗಾಲಯಗಳೂ ನಮ್ಮಲ್ಲಿಲ್ಲ. ಸಾವಿರಾರು ರೂಪಾಯಿ ಕೊಟ್ಟು ತಂದ ಹಸುಗಳು ಕೇವಲ 500 ರೂಪಾಯಿಗೆ ಕಟುಕರ ಕೈ ಸೇರಿದ ಉದಾಹರಣೆಗಳು ಬೇಕಾದಷ್ಟಿವೆ.

`ಹೈನೋದ್ಯಮ ಎಷ್ಟೆಲ್ಲ ಮುಂದುವರಿದಿದ್ದರೂ ಕರುಗಳಿಗೆ ಜೀವಿತಾವಧಿ ಲಸಿಕೆ ನೀಡುವ ಪದ್ಧತಿಯೇ ನಮ್ಮಲ್ಲಿಲ್ಲ. ಇದೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಲಾಬಿ. ಇಂತಹ ಲಸಿಕೆ ಹಾಕಿಸಿದರೆ ಮುಂದೆ ಅವುಗಳಿಗೆ ಹೆಚ್ಚು ಕಾಯಿಲೆ ಬರುವುದಿಲ್ಲ. ಆಗ ಈ ಕಂಪೆನಿಗಳ ಔಷಧಿ ಕೊಳ್ಳುವವರಾರು? ಹೀಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇರುವ ಜೀವಿತಾವಧಿ ಲಸಿಕೆ ಇಲ್ಲಿಗೆ ಬಾರದಂತೆ ಅವು ನೋಡಿಕೊಳ್ಳುತ್ತಿವೆ' ಎನ್ನುತ್ತಾರೆ ಪಶು ವೈದ್ಯರೊಬ್ಬರು.

`ಹೈಟೆಕ್ ವಾಹನ ನೈಸ್‌ರೋಡ್‌ಗೆ ಸರಿ. ಹಾಗೆಂದು ಗುಂಡಿ ಬಿದ್ದ ಜಾಗದಲ್ಲಿ ಅದನ್ನು ಓಡಿಸಿದರೆ ಏನಾಗುತ್ತದೆ ಹೇಳಿ? ಹಾಗೇ ಹೈಬ್ರಿಡ್ ತಳಿಗಳ ನಿರ್ವಹಣೆಯ ಅರಿವಿಲ್ಲದ ನಮ್ಮ ರೈತರು ಅವುಗಳನ್ನು ಇಟ್ಟುಕೊಂಡು ಪಾಡುಪಡುತ್ತಿದ್ದಾರೆ' ಎಂದು ಅವರು ಮಾರ್ಮಿಕವಾಗಿ ಹೇಳುತ್ತಾರೆ.
`ಕೆಎಂಎಫ್‌ಗೆ ಹಾಲು ಹಾಕುತ್ತಿರುವ 22 ಲಕ್ಷ ರೈತರಲ್ಲಿ ಬರೀ 10 ಲಕ್ಷ ಮಂದಿಯನ್ನು ತೆಗೆದುಕೊಂಡು, ಅವರಲ್ಲಿ ತಲಾ ಒಂದೊಂದು ಹಸು ಇದೆ ಎಂದು ಲೆಕ್ಕ ಹಾಕಿಕೊಂಡರೂ ಅವುಗಳ ಮೌಲ್ಯ 5,000 ಕೋಟಿ ರೂಪಾಯಿ. ಕೇವಲ 100 ಕೋಟಿ ರೂಪಾಯಿ ಬಂಡವಾಳ ಹೂಡುವ ವಿದೇಶಿ ಕಂಪನಿ 5 ಎಕರೆ ಕೇಳಿದರೂ 25 ಎಕರೆ ಜಾಗ ಕೊಡುವ ಧಾರಾಳತನವನ್ನು ಸರ್ಕಾರ ತೋರುತ್ತದೆ. ಹಸುಗಳ ಮೇಲೆ ಇಷ್ಟೆಲ್ಲ ಬಂಡವಾಳ ಹೂಡಿರುವ ರೈತರಿಗೆ ಒಳ್ಳೆಯದು ಮಾಡಲು ಮಾತ್ರ ಮೀನಮೇಷ ಎಣಿಸುತ್ತದೆ ಯಾಕೆ' ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ.

`ಒಂದೋ ಕೃಷಿಯನ್ನು ಮರೆತು ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ನಡೆಸಬೇಕು, ಇಲ್ಲವೇ ಮನೆಮಟ್ಟಿಗೆ ಒಂದೆರಡು ಹಸುಗಳನ್ನು ಸಾಕಿಕೊಳ್ಳಬೇಕು. ಅದು ಬಿಟ್ಟು ಕೃಷಿಯ ಜೊತೆಜೊತೆಗೇ ಹೈನುಗಾರಿಕೆ ನಡೆಸುವವರ ಪಾಡಂತೂ ಯಾರಿಗೂ ಬೇಡ' ಎನ್ನುವ ಬೆಳಗಾವಿಯ ಹೊಳಿಹೊಸೂರಿನ ರೈತ ಮುಖಂಡ ಬಾಬು ಬಸವಂತಪ್ಪ ಕಟ್ಟಿ ಅವರ ಮಾತು ಇದಕ್ಕೆ ಪುಷ್ಟಿ ಕೊಡುತ್ತದೆ.

ಅತ್ತ ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೂ, ಇತ್ತ ಮನಸ್ಸು ಮಾಡಿದರೆ ಸಹಕಾರಿ ಚಳವಳಿಯನ್ನೂ ಮೇಲೆತ್ತಲು ಸರ್ಕಾರಕ್ಕೆ ಸಾಧ್ಯ ಎಂಬುದಕ್ಕೆ ಹಿಂದಿನ ಸರ್ಕಾರ ಆರಂಭಿಸಿದ ಪ್ರೋತ್ಸಾಹಧನವೇ ಸಾಕ್ಷಿ. ಖರೀದಿ ದರದ ಜೊತೆಗೆ ಲೀಟರ್ ಹಾಲಿಗೆ ಸರ್ಕಾರ ಕೊಡುವ ಎರಡು ರೂಪಾಯಿ ಪ್ರೋತ್ಸಾಹಧನ, ಮುಳುಗುತ್ತಿರುವ ರೈತನಿಗೆ ಹುಲ್ಲುಕಡ್ಡಿಯ ಆಸರೆಯಂತಾಗಿದೆ. ಖಾಸಗಿ ಡೇರಿಗಳಿಗೆ ಕಡಿವಾಣ ಹಾಕಲೂ ಇದು ಬ್ರಹ್ಮಾಸ್ತ್ರ. ಇತರೆಲ್ಲ ಸರ್ಕಾರಿ ಯೋಜನೆಗಳಂತೆ ಮಧ್ಯದಲ್ಲೇ ಸೋರಿಹೋಗದೆ, ನೇರವಾಗಿ ರೈತರಿಗೇ ತಲುಪುವ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಒಕ್ಕೊರಲ ಬೇಡಿಕೆಯನ್ನು ಹಲವು ರೈತ ಮುಖಂಡರು ಇಡುತ್ತಾರೆ.

`ಎಲ್ಲದಕ್ಕೂ ಕೆಎಂಎಫ್ ಮತ್ತು ಸರ್ಕಾರವನ್ನೇ ಹೊಣೆ ಮಾಡುವ ರೈತರು, ಇಂತಹ ಬೇಡಿಕೆಗಳ ಪಟ್ಟಿ ಇಡುವ ಮುನ್ನ ಒಮ್ಮೆಯಾದರೂ ಹಾಲು ಉತ್ಪಾದಕ ಸೊಸೈಟಿಗಳಿಗೆ ತಾವು ಆರಿಸಿ ಕಳುಹಿಸುವ ಪ್ರತಿನಿಧಿಗಳ ಯೋಗ್ಯತೆ ಅಳೆಯಬೇಕು. ಈ ಸೊಸೈಟಿಗಳಿಗೆ ನಡೆಯುವ ಚುನಾವಣೆ ಆಮಿಷ, ಹಣದ ಲೆಕ್ಕಾಚಾರ, ಮತಗಳನ್ನು ಕೊಳ್ಳುವ ವಿಷಯದಲ್ಲಿ ಯಾವ ಸ್ಥಳೀಯ ಸಂಸ್ಥೆ ಚುನಾವಣೆಗೂ ಕಮ್ಮಿ ಇಲ್ಲದಂತಾಗಿದೆ. ಇದು ಹೀಗೇ ಮುಂದುವರಿದರೆ ಮುಂದೆ ಮಣ್ಣಿನ ಮಕ್ಕಳು ಹೊಟ್ಟೆಗೆ ಮಣ್ಣನ್ನೇ ತಿನ್ನಬೇಕಾದ ಸ್ಥಿತಿ ಬರುತ್ತದೆ. ಸರ್ಕಾರಕ್ಕೆ ತಮ್ಮ ಕೂಗು ಮುಟ್ಟಿಸಬೇಕಾದ ರೈತ ಪ್ರತಿನಿಧಿಗಳನ್ನು ಆರಿಸುವ ಸಂಘದ ಚುನಾವಣೆಯನ್ನೇ ಇಂತಹ ಹೀನಾಯ ಸ್ಥಿತಿಗೆ ತಂದಿಟ್ಟರೆ, ಮುಂದೆ ತಮ್ಮ ಗತಿಯೇನು ಎಂಬ ಪರಿಜ್ಞಾನ ರೈತರಿಗೆ ಬೇಡವೇ?' ಎಂದು ಆಕ್ರೋಶದಿಂದ ಕೇಳುತ್ತಾರೆ ಪ್ರಗತಿಪರ ರೈತರೊಬ್ಬರು.

ಇಂತಹ ಪ್ರಶ್ನೆಗಳಿಗೆ ಹಳ್ಳಿಗರು ಉತ್ತರ ಕಂಡುಕೊಳ್ಳದ ಹೊರತು, ತಮ್ಮೂರಿನ ನಂದೀಶನಂತಹವರು ಒಡ್ಡುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವುದು ಅವರಿಗೆ ಸಾಧ್ಯವಾಗುವುದೇ ಇಲ್ಲವೇನೋ?

ಮುಂದುವರಿಯುವುದು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT