ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯರಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲ: ಆರೋಪ

Last Updated 23 ಡಿಸೆಂಬರ್ 2013, 5:30 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ರಾಜ್ಯ ಘಟಕದ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿ ಮಾತನಾಡಿದ ಅವರು,  ರಾಜ್ಯದಲ್ಲಿ ವೈದ್ಯರ ಕೊರತೆ ನೀಗಿಸಲು ಸರ್ಕಾರ 3ವರ್ಷಗಳ ಕಡಿಮೆ ಅವಧಿಯ ವೈದ್ಯಕೀಯ ಕೋರ್ಸ್ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ನಕಲಿ ವೈದ್ಯರು ಸೃಷ್ಟಿಯಾಗುತ್ತಾರೆಯೇ ಹೊರತು, ಪೂರ್ಣ ಕಲಿಕಾ ವೈದ್ಯರು ತಯಾರಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವ ಸರ್ಕಾರದ ಕ್ರಮಕ್ಕೆ ನಮ್ಮ ಸಹಮತ ಇದೆ. ಈ ಕ್ರಮದಿಂದ ವೈದ್ಯರ ಕೊರತೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ  2 ರಿಂದ 3 ಲಕ್ಷ ನಕಲಿ ವೈದ್ಯರಿರುವ ಮಾಹಿತಿಗಳಿವೆ. ಪ್ರತಿ ಗ್ರಾಮಗಳಲ್ಲಿಯೂ ನಕಲಿ ವೈದ್ಯರಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಐಎಂಎ ಸಂಘಟನೆಯೂ ನಿರಂತರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತವಾಗಿದ್ದು, ರೋಗಿಗಳನ್ನು ಸುಲಿಗೆ ಮಾಡುವುದರ ಜತೆಗೆ, ಸಮಾಜಕ್ಕೆ ಕಂಟಕವಾಗಿದ್ದಾರೆ ಎಂದು ದೂರಿದರು. ಹಳ್ಳಿಗಳಲ್ಲಿ ವೈದ್ಯರ ಕೊರತೆ ನೀಗಿಸುವ ಸಲುವಾಗಿ ಐಎಂಎ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರಗಳ ಆಯೋಜನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಶಿವಮೊಗ್ಗ ಐಎಂಎ ಘಟಕ ‘ಗ್ರಾಮದ ಕಡೆಗೆ ವೈದ್ಯರ ನಡಿಗೆ’ ಎಂಬ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಾಣಿ ಕೋರಿ, ಕಾರ್ಯದರ್ಶಿ ಡಾ. ಎಚ್.ವಿ.ಕೊಟ್ಟೂರೇಶ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಣ್ಣ ರೆಡ್ಡಿ, ಪದಾಧಿಕಾರಿಗಳಾದ ಡಾ.ನಾಗರಾಜ್, ಡಾ.ನಾರಾಯಣ್, ಡಾ.ಹರೀಶ್, ಡಾ. ಅನುಸೂಯ ರಾಯ್ಕರ್, ಡಾ. ಉಷಾ ರಮೇಶ್, ಡಾ. ಎಲ್.ಎನ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


ಜಿಲ್ಲಾ ಕೇಂದ್ರಗಳಲ್ಲಿ ಸಲಹಾ ಕೇಂದ್ರ
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾನಸಿಕ ಆರೋಗ್ಯ ಸಲಹಾ ಹಾಗೂ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಸರ್ಕಾರ ₨1.69 ಲಕ್ಷ ಅನುದಾನ ನೀಡಲಿದೆ ಎಂದು ಮಾನಸಿಕ ಆರೋಗ್ಯ ಕಾರ್ಯಪಡೆಯ ಡಾ.ಅಶೋಕ್ ಪೈ ತಿಳಿಸಿದರು.

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾದಕ ಹಾಗೂ ಮದ್ಯ ವ್ಯಸನ ಮುಕ್ತ ಕೇಂದ್ರ ತೆರೆಯಲು ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಆದರೆ, ಈ ಪ್ರಸ್ತಾವಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದರು. ಆದರೆ, ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮದ್ಯ–ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡಲು 10 ಹಾಸಿಗೆಗಳನ್ನು ಮೀಸಲಿಟ್ಟಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT