ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷತ್ರಗಳ ಊರು

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಕಥೆ

ಗುಣವಂತ ಫೋನ್ ಮಾಡಿದಾಗ ನೀವು ಅತ್ತಿದ್ದೇಕೆ, ಹೆಡ್‌ಮಾಸ್ಟರ್? ಗಂಟಲು ಗದ್ಗದಗೊಂಡು ಬಿಕ್ಕಿದ್ದೇಕೆ ಹೆಡ್‌ಮಾಸ್ಟರ್? ಯಾವ ಮುರಳಿಯ ಕರೆ ಕೇಳಿ ನೀವು ಎದ್ದುಹೋದದ್ದು?- ನೀವು ಬರೆಯುತ್ತಿದ್ದ ಬಾಳಪುಟಗಳನ್ನಷ್ಟಕ್ಕೇ ಬಿಟ್ಟು ಹೋದದ್ದು? ಯಾವ ತಾರಗೆಯೊಳಗೆ ಬೆರೆತುಹೋದದ್ದು?

ಅರೇ, ನಾನು ಯಾರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ? ನೀವು ಸತ್ತು ಒಂದೂವರೆ ವರ್ಷವಾಗಲಿಕ್ಕೆ ಬಂತು. ಒಂದು ಸಣ್ಣ ನಗೆಯ ಬೆಳಕು ಮುಖದೊಳಗೆ ತುಂಬಿಕೊಂಡು ಗೋಡೆ ಹತ್ತಿ ಗಾಜಿನೊಳಗೆ ಕುಳಿತುಬಿಟ್ಟಿದ್ದೀರಿ. ಮಹಾ ಅವಸರದ ಮನುಷ್ಯ, ಹಿರೇಗುತ್ತಿಯಲ್ಲಿದ್ದಾಗ ಎಷ್ಟೋ ಸಲ `ಒಮ್ಮೆ ಗೋಕರ್ಣಕ್ಕೆ ಹೋಗಿ ಬಂದುಬಿಡುತ್ತೇನೆ~ ಎಂದು ಥಟ್ಟನೆ ಹೊರಟುಬಿಡುತ್ತಿದ್ದೀರಿ. ಅಷ್ಟೇ ಸಲೀಸಾಗಿ ಆವತ್ತು ಹೊರಟಿರಲ್ಲ - ಮತ್ತೆ ಬರುವುದಿಲ್ಲ ಎಂದು ತಿಳಿದಿತ್ತೇ? ಹೇಳಿ ಸರ್, ನಿಮಗೆಲ್ಲವೂ ಸಾಕೆನಿಸಿತ್ತೇ?
*****
ಅಪ್ಪ ಸತ್ತ ಗಾಯವಿನ್ನೂ ಮನಸಿನಲ್ಲಿ ಹಸಿಯಾಗಿದೆ. ಅವರು ಗಣಿತದ ಮಾಸ್ತರು. ಹಳ್ಳಿಯ ಶಾಲೆಗೆ ಅವರೇ ಹೆಡ್‌ಮಾಸ್ತರು. ನನಗೆ ಅನೇಕ ಸಲ ಫಜೀತಿ. ಶಾಲೆಯಲ್ಲಿ `ಸರ್~ ಎಂದೇ ಕರೆಯಬೇಕೆಂದು ಅವರ ಕಟ್ಟಳೆ. ಮನೆಯಲ್ಲಿ `ಸರ್~ ಅಪ್ಪನಾಗುವರು, ಆಗ ಅವರ ಮೈಮೇಲೆ ಕೂರುವೆ. ಬಗಲಲ್ಲಿ ಎತ್ತಿಹಿಡಿದು ಆಕಾಶ ತೋರುವರು.

ಕೈಹಿಡಿದು ಸಂಜೆ ಗದ್ದೆ ಹಾದಿಯಲ್ಲಿ ಹಾಲು ತರಲು ಕರೆದೊಯ್ಯುವರು. ಅಪ್ಪನೊಡನೆ ಸಲಿಗೆ, ಅಷ್ಟೇ ಭಯ. ಶಾಲೆಯಲ್ಲಿ ಕರೆದಂತೆ ಮನೆಯಲ್ಲೂ `ಸರ್~ ಎಂದು ಕರೆಯುವುದೊಂದು ಕುಶಾಲು. `ಹೆಡ್‌ಮಾಸ್ಟರ್, ಅಮ್ಮ ಊಟಕ್ಕೆ ಕರೆಯುತ್ತಿದ್ದಾಳೆ~ ಎಂಬುದೊಂದು ಕುಶಾಲು. ಇದೇ ಇನ್ನಷ್ಟು ಹೊತ್ತು ಮುಂದುವರಿದರೆ `ಮಂಗಚೇಷ್ಟೆಗೊಂದು ಮಿತಿಯೇ ಇಲ್ಲ~ ಎಂದು ರೇಗುವರು. ಆಗ ಅಪ್ಪ ಹೆಡ್‌ಮಾಸ್ಟರಾಗಿಬಿಟ್ಟರೋ!

ಆ ಹೆಡ್‌ಮಾಸ್ಟರು ಈಗ ಆಸ್ಪತ್ರೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಮಕ್ಕಳನ್ನು ಆಡಿಸಿ ಬೆಳೆಸಿದ ಅಪ್ಪ ತಾನೇ ಈಗ ಮಗುವೆಂಬಂತೆ ಪಕ್ಕದಲ್ಲಿ ಕುಳಿತ ನನ್ನ ಕೈಹಿಡಿದು ಮಲಗಿದ್ದಾರೆ. ಬಿಳಿವಸ್ತ್ರ ತೊಟ್ಟ ದಾದಿಯರು ಬೇರೆಯದೇ ಲೋಕದಿಂದ ಬಂದಂತೆ ತೋರುವರು. ಸಿರಿಂಜು, ಔಷಧ ಹಿಡಿದು ಅವರು ಇನ್ನೊಂದೇ ಲೋಕಕ್ಕೆ ಸದ್ದಿಲ್ಲದೆ ಸಾಗುತ್ತಿರುವರು. ಅಪ್ಪನ ಕೈಹಿಡಿದು ಕುಳಿತವನಿಗೂ ಮಂಪರು...

ಅಷ್ಟರಲ್ಲಿ ದಡದಡ ಪಕ್ಕದ ಮಂಚದಲ್ಲಿ ಒಂದು ಪುಟ್ಟ ಸಂಸಾರ ನೆಲೆಗೊಂಡಿತು. ಆರೇಳು ತಿಂಗಳ ಮಗು, ಕಣ್ಣೀರಿಡುತ್ತಿರುವ ತಾಯಿ, ಸಂತೈಸುತ್ತಿರುವ ತರುಣ. ಸ್ವಲ್ಪ ಹೊತ್ತು ಕಳೆದ ಮೇಲೆ ತಿಳಿಯಿತು: ಆ ಮಗುವಿನ ಹೃದಯದಲ್ಲೊಂದು ಸಣ್ಣ ರಂಧ್ರ ಇದೆ. ಆರು ತಿಂಗಳ ಮಗುವಿಗೆ ಇಂಥ ಸಮಸ್ಯೆಯೆ! ಅಪ್ಪ ಎದ್ದು ಕೂತರು. ನಿಧಾನವಾಗಿ ಅವರೆಡೆ ನಡೆದರು.

`ನೋಡಮ್ಮೋ, ಇದು ತುಂಬ ಒಳ್ಳೆಯ ಆಸ್ಪತ್ರೆ, ಡಾಕ್ಟರು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಧೈರ್ಯವಾಗಿರಿ~ ಎಂದರು. ತರುಣನ ಬೆನ್ನು ತಟ್ಟುತ್ತ `ಎಲ್ಲ ಒಳ್ಳೆಯದಾಗುತ್ತದೆ~ ಎಂದರು. ಏದುಬ್ಬಸದಿಂದ ಆಯಾಸಗೊಳ್ಳುತ್ತ ನನ್ನ ಕೈಹಿಡಿದು ಮಂಚಕ್ಕೆ ವಾಪಸಾದರು.

`ಕುಡಿಯಲು ಏನಾದರೂ ತರಲೆ?~ ಎಂದೆ. ಹ್ಞೂಂ ಎಂದರು. ಹಾಲುತರಲು ಹೊರಟೆ. ಥಳಥಳಿಸುವ ಅಮೃತಶಿಲೆಯ ಕಟ್ಟಡದ ತುಂಬ ರೋಗಿಗಳು. ಇಷ್ಟೊಂದು ಜನ ಅವ್ಯಾವ್ಯಾವ ಕಾಯಿಲೆಯಿಂದ ಬಳಲುತ್ತಿರುವರೋ! ಸುಕ್ಕುಗಟ್ಟಿದ ಅಜ್ಜಿಯ ಮುಖದ ನೆರಿಗೆಗಳು, ಆ ಯುವತಿಯ ಸುಟ್ಟುಹೋದ ಕೈ, ಇಲ್ಲೊಬ್ಬನ ವಿಕಾರಗೊಂಡ ಮುಖ, ಅಲ್ಲೊಬ್ಬ ತಡೆಯಲಾಗದ ವೇದನೆಯಿಂದ ಕೂಗುತ್ತಿದ್ದಾನೆ, ಬಿಳಿಕೋಟು ತೊಟ್ಟು, ಸ್ಟೆತೋಸ್ಕೋಪ್ ಧರಿಸಿ ಡಾಕ್ಟರುಗಳು `ನಾವಿದ್ದೇವೆ, ಹೆದರದಿರಿ~ ಎಂಬಂತೆ ಸಾಗುತ್ತಿರುವರೆ? ಹಾಗಾದರೆ ಅವರ ಮುಖದಲ್ಲೇನು ಚಿಂತೆಯ ಗೆರೆ? ಸ್ಕ್ಯಾನಿಂಗ್, ಬ್ಲಡ್‌ರಿಪೋರ್ಟ್, ಎಕ್ಸ್‌ರೇ, ವೀಲ್‌ಚೇರ್, ಹವೆಗೆಲ್ಲ ಔಷಧ ಬಳಿದಂತಿದೆ. ಐ.ಸಿ.ಯು. ಇನ್ನೊಂದೇ ತಲ್ಲಣದ ಲೋಕ. ಪ್ರಪಂಚದಲ್ಲಿ ಇಷ್ಟೊಂದು ಕಷ್ಟ ತುಂಬಿದೆಯೆ? ಇವನ್ನೆಲ್ಲ ತಿಳಿಯದೆ ಇಷ್ಟೊಂದು ಆಯಸ್ಸು ಕಳೆದುಹೋಯಿತೆ? ವೈಭವವನ್ನು ಬಿಂಕದಿಂದ ತೋರುವ ಈ ಕಟ್ಟಡಕ್ಕೂ, ಕಟ್ಟಡದೊಳಗಿರುವ ಜೀವಗಳ ವೇದನೆಗೂ ಅರ್ಥಾರ್ಥ ಸಂಬಂಧ ತಿಳಿಯದೆ ತಲೆಚಿಟ್ಟು ಹಿಡಿದುಹೋಯಿತು. ಇಂಥದೊಂದು ಕ್ಷಣದಲ್ಲೇ ಸಿದ್ಧಾರ್ಥ ಮನೆಬಿಟ್ಟು ನಡೆದನೆ?

ಅಪ್ಪ ಹಾಲು ಕುಡಿದವರು ಕೊಂಚ ಗೆಲುವಾದರು. `ಸ್ವಲ್ಪ ತಿರುಗಾಡೋಣವೇನು?~ ಎಂದರು. `ಓಹೋ, ನೀವು ತಿರುಗಾಡಿದರೆ ಒಳ್ಳೆಯದು ಎಂದೇ ಡಾಕ್ಟರು ಹೇಳಿದ್ದಾರೆ ತಾನೆ?~ ಎಂದೆ. ಹೊರಬಂದವರು ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತಿ ಮೇಲು ಮಹಡಿಗೆ ಹೋದೆವು. `ಈಗ ನನಗೆ ಉಬ್ಬಸ ಬರಲಿಲ್ಲ ನೋಡು~ ಎಂದು ಖುಷಿಪಟ್ಟರು. ಆ ಮಹಡಿಯ ಒಂದು ಭಾಗ ಮುಕ್ತ ಛಾವಣಿ. ಬಾಗಿಲ ಬಳಿ ಇದ್ದ ಕೆಲಸಗಾರ ಎಂದಿನಂತೆ ಅಪ್ಪನನ್ನು ನೋಡಿ `ನಮಸ್ಕಾರ ಅಜ್ಜ~ ಎಂದ. `ನಮಸ್ತೆ~ ಎಂದರು. ಹೊರ ಹೋಗಿ ಸ್ವಲ್ಪ ಹೊತ್ತು ಕುಳಿತುಕೊಂಡೆವು. ತಂಗಾಳಿ ಬೀಸುತ್ತಿತ್ತು.
 
`ಹಾ~ ಎಂದೆವು. ಇಡೀ ದಿನ ಮಂಗಳೂರಿನ ಸೆಕೆಗೆ ಬೆವರುತ್ತ, ಮೈಯೊರೆಸಿಕೊಳ್ಳುತ್ತ ಸಾಕು ಸಾಕಾಗಿತ್ತು. ಅಪ್ಪ ಮಂತ್ರ ಹೇಳಿಕೊಳ್ಳತೊಡಗಿದರು. ಅವರ ಸಾಯಂಸಂಧ್ಯೆಯ ಜಪದ ಹೊತ್ತು. ಈ ಹೊತ್ತಿಗೆ ಈ ಟೆರೇಸಿನ ಮೇಲೆ ಕೆಲ ಹೊತ್ತು ಕುಳಿತುಕೊಳ್ಳಲು ಡಾಕ್ಟರು ನಮಗೆ ವಿಶೇಷ ಅನುಮತಿ ನೀಡಿದ್ದರು. ಅಪ್ಪನ ಮನವಿಯ ಪ್ರಭಾವ! ಮಂಗಳೂರಿಗೆ ಬಂದು ಇಪ್ಪತ್ತು ದಿನಗಳಾದವು. ಗೋಕರ್ಣದಲ್ಲಿ ಡಾಕ್ಟರು ಅಪ್ಪನ ಪರೀಕ್ಷೆ ಮಾಡಿ ಒಮ್ಮೆ ಮಂಗಳೂರಿಗೋ, ಮಣಿಪಾಲಕ್ಕೋ ಕರೆದುಕೊಂಡು ಹೋಗಿ ವಿವರವಾದ ಪರೀಕ್ಷೆ ಮಾಡಿಸಿ ಎಂದರು.

ತನ್ನಷ್ಟಕ್ಕೆ ತಾನು ಹಕ್ಕಿಯಂತೆ ಹಾರಾಡಿಕೊಂಡಿದ್ದ ಅಪ್ಪ ಹಠಾತ್ತಾಗಿ ಏದುಬ್ಬಸ ಬರುತ್ತಿದೆ ಎಂದರು. ಕಡೆಯಲ್ಲಿ ಪತ್ತೆಯಾದದ್ದು ಅಪ್ಪನನ್ನು ಕರೆದೊಯ್ಯಲೆಂದೇ ಬಂದ ವಿಚಿತ್ರರೋಗ. ಅದು ಇನ್ನು ಕೆಲವೇ ದಿನಗಳಲ್ಲಿ, ವಾರಗಳಲ್ಲಿ ಅಪ್ಪನನ್ನು ಕರೆದೊಯ್ಯಲಿತ್ತು. (`ಅದೃಷ್ಟವಿದ್ದರೆ ಇನ್ನೂ ಕೆಲವು ತಿಂಗಳು ಇದ್ದಾರು~) ನ್ಯಾಯಾಧೀಶರ ತೀರ್ಪಿನಂತೆ ಡಾಕ್ಟರು ಈ ವಾಸ್ತವದ ಸ್ವರೂಪ ತೋರಿದಾಗ ಒಮ್ಮೆ ಕಾಲಬುಡದಿಂದ ನಡುಕ ಶುರುವಾಯಿತು. ತನ್ನ ಕಾಯಿಲೆಯ ಭಯಾನಕ ಸ್ವರೂಪದ ಅರಿವಿಲ್ಲದ ಅಪ್ಪ ಎಂದಿನಂತಿದ್ದಾರೆ. ಕೆಲವೇ ದಿನಗಳಲ್ಲಿ ಮನೆಗೆ ವಾಪಸಾಗುವೆನೆಂದುಕೊಂಡಿದ್ದಾರೆ.

ಅಥವಾ ಅಪ್ಪ ಹಾಗೆ ನಟಿಸುತ್ತಿದ್ದಾರೋ? ಕಳೆದ ಅನೇಕ ದಿನಗಳಲ್ಲಿ ನಡೆದ ಪರೀಕ್ಷೆಗಳು ಎಂಥವು ಎಂಬುದೆಲ್ಲ ಅವರಿಗೆ ಗೊತ್ತು. ಆದರೆ ಅದೇಕೋ ಯಾವ ಪರೀಕ್ಷೆ ಕುರಿತೂ ನಮ್ಮನ್ನ ಕೇಳಲಿಲ್ಲ. ಒಮ್ಮೆ ಮಾತ್ರ ಕೂರಿಸಿಕೊಂಡು ಬುದ್ಧಿ ಹೇಳಿದರು: `ನೋಡು, ನನಗೆ ಎಂಬತ್ತು ವರ್ಷವಾಯಿತು, ಈಗ ಇವೆಲ್ಲ ಪರೀಕ್ಷೆಗಳು! ಏನಾದರೂ ಅರ್ಥವಿದೆಯೆ? ಇಂದಲ್ಲ, ನಾಳೆ ಹೋಗಲೇಬೇಕು.

ಈಗಲೇ ಹೊರಡಲು ಏನು ತೊಂದರೆ? ನಾವೆಲ್ಲ ತುಂಬ ವರ್ಷ ಬದುಕಿಬಿಟ್ಟೆವು. ನನಗೆ ಗೊತ್ತಿರುವಂತೆ ನಾನು ಯಾವ ಕೆಲಸವನ್ನೂ ಬಾಕಿ ಉಳಿಸಿಲ್ಲ~. ಅದೇನು ತೋಚಿತೋ, ತಕ್ಷಣ ಹೇಳಿದೆ: `ಒಂದು ಕೆಲಸ ಬಾಕಿ ಉಳಿಸಿದ್ದೀರಿ~, `ಏನದು?~, `ಅಪ್ಪ, ನಿಮ್ಮಲ್ಲಿ ಎಂತೆಂಥ ನೆನಪುಗಳಿವೆ! ಅವನ್ನೆಲ್ಲ ನನಗಾಗಿ, ನಮ್ಮ ಮುಂದಿನವರಿಗಾಗಿ ನೀವು ಬರೆಯಬೇಕಲ್ಲವೆ? ಅವೆಲ್ಲ ಸುಮ್ಮನೆ ಹೋಗಿಬಿಡಬೇಕೆ?~. ಅಷ್ಟು ಹೊತ್ತು ಶೂನ್ಯದಲ್ಲಿದ್ದ ದೃಷ್ಟಿ ನನ್ನತ್ತ ಇಳಿಯಿತು. ಏನೋ ಯೋಚಿಸುವಂತೆ ತೋರಿತು. ಸುಮ್ಮನಾಗಿಬಿಟ್ಟರು.

ಇದಾದ ಮೇಲೆ ಅಪ್ಪನ ವರ್ತನೆ ಹೆಚ್ಚು ನಿಗೂಢವಾಗತೊಡಗಿತು. ತನ್ನ ಆರೋಗ್ಯದ ಸ್ಥಿತಿ ಕುರಿತು ಯಾವತ್ತೂ ಏನೂ ಪ್ರಶ್ನಿಸಲಿಲ್ಲ. ಅದೊಂದು ಕಟು ನಿರ್ಧಾರವನ್ನೇ ಮಾಡಿಬಿಟ್ಟರೆಂದು ತೋರುತ್ತದೆ. ಹೇಳಿದ ಎಲ್ಲ ಪರೀಕ್ಷೆಗಳಿಗೂ, ಶುಶ್ರೂಷೆಗೂ ಮೈಯೊಡ್ಡಿದರು. ಬಂದವರು, ಆಪ್ತೇಷ್ಟರು `ಏನೂ ಚಿಂತಿಸಬೇಡಿ~ ಎಂದರೆ, `ಚಿಂತಿಸುವುದನ್ನು ಮಕ್ಕಳಿಗೆ ಬಿಟ್ಟುಬಿಟ್ಟಿದ್ದೇನೆ~ ಎಂದು ಸಣ್ಣಗೆ ನಗುವರು.
 
ಆಗಾಗ ಏದುಸಿರು ಬಾಧಿಸುವುದು. ಕೆಲವು ದಿನ ಮಾತ್ರ ಭ್ರಮಾತ್ಮಕ ಸ್ಥಿತಿಯಲ್ಲಿದ್ದರು, ಔಷಧಗಳ ಪರಿಣಾಮವಿರಬಹುದು. `ಈಶ್ವರ ಬಿಳಿ ಹೂವು ಹಿಡಿದು ಕರೆಯುತ್ತಿದ್ದಾನೆ, ನಾನಿನ್ನು ಹೊರಡುವೆ~ ಎನ್ನತೊಡಗಿದರು. ಆಫೀಸಿನಿಂದ ಬಂದವನು ತಕ್ಷಣ ಮಾತಾಡಿಸದಿದ್ದರೆ ನೋಯುವರು. ಗುಣವಂತನ ದೂರವಾಣಿ ಕರೆ ಬಂದಾಗ ಬಿಕ್ಕಿ ಬಿಕ್ಕಿ ಅತ್ತರು. ಅಪ್ಪ ಅತ್ತಿದ್ದನ್ನೇ ನೋಡಿರದ ನನಗೆ ಅವರ ಮನಸಿನಲ್ಲಿ ಗುಣವಂತ ಪಡೆದ ಜಾಗ ಕಂಡು ಬೆರಗಾಯಿತು. ಪರಿಶುದ್ಧ ಅಂತಃಕರಣದ ಅದಾವ ಭಾವ ತಂತುವಿಗೆ ಅವರ ಮನ ಮಿಡಿಯಿತೋ!

ಗುಣವಂತ ಅಪ್ಪನ ಬಂಟ. ಅಪ್ಪ ಏನು ಹೇಳಿದರೂ ಸಹಾಯಕ್ಕೆ ಸಿದ್ಧ. ಮನೆ ಮಗನಂತಾಗಿಬಿಟ್ಟಿದ್ದ. ಅವನಿಗೆ ಅವರು ಇಂಗ್ಲಿಷ್ ಹೇಳಿಕೊಟ್ಟರು. ಮುಂದೆ ಓದು ಎಂದು ಹುರಿದುಂಬಿಸಿದರು. ಔಷಧ ತರುವುದಿದ್ದರೆ ಗುಣವಂತ, ಹಿತ್ತಿಲ ಕೆಲಸಕ್ಕೆ ಸಣ್ಣಪುಟ್ಟ ಸಹಾಯಗಳಿಗೆ ಗುಣವಂತ, ಸಾಮಾನು ತರುವುದಿದ್ದರೆ ಗುಣವಂತ, ನಗೆಹನಿ ಹೇಳಲು ಗುಣವಂತ. ಮಕ್ಕಳು ಬೆಳೆದು ದೂರದ ಊರುಗಳನ್ನು ಸೇರಿದ ಮೇಲೆ ಅಪ್ಪನ ಪ್ರೀತಿಯ ದೊಡ್ಡ ಭಾಗವನ್ನೇ ಗುಣವಂತ ಗೆದ್ದುಬಿಟ್ಟಿದ್ದ. ಮೃದುಸ್ವಭಾವದವನು. ಅವನು `ಸರ್~ ಎಂದು ಫೋನ್‌ನಲ್ಲಿ ಕರೆದಾಗ ಅಪ್ಪನ ಭಾವಸಮುದ್ರದಲ್ಲೊಂದು ಚಂಡಮಾರುತವೇ ಹಾದು ಹೋದಂತಾಯಿತು.

ಕೆಲವು ಗಂಟೆಗಳ ಬಳಿಕ `ನನಗೆ ಪೆನ್ನು, ಪೇಪರು ಕೊಡು. ನನ್ನ ನೆನಪುಗಳನ್ನು ಬರೆಯುವೆ~ ಎಂದರು.

                                                *****
ಈಗ, ಈ ಎಂಬತ್ತರಲ್ಲಿ ನನ್ನ ಮಕ್ಕಳು ಜೀವನದ ಅನುಭವಗಳನ್ನು ನಾನು ಬರೆಯಬೇಕು ಎಂದು ಬಯಸುತ್ತಿದ್ದಾರೆ. ಇದನ್ನು ಈಡೇರಿಸದಿದ್ದರೆ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ.

ಮೊದಲೇ ಹೇಳಿಬಿಡುತ್ತೇನೆ, ಇದು `ಆತ್ಮಕಥೆ~ ಎಂಬ ಪ್ರಕಾರಕ್ಕೆ ನ್ಯಾಯವಾಗಿ ಸಲ್ಲುವಂಥದು. ಇದು ಆತ್ಮದ ಕಥೆ. ಆದರೆ ಜೀವನದ ಎಲ್ಲ ಘಟನೆಗಳನ್ನು ಇರುವುದು ಇದ್ದಂತೆ, ಯಾರಿಗೆ ನೋವಾದರೆ ನನಗೇನಂತೆ- ಎಂದು ಬರೆಯುವವನಲ್ಲ ನಾನು, ಕ್ಷಮೆಯಿರಲಿ, ನನ್ನದು ವೃತ್ತಪತ್ರಿಕೆಯ ವರದಿಯಲ್ಲ. ಬದಲಾಗಿ ಈ ದೇಹ ಧರಿಸಿ ಬಂದ ಜೀವದ ಬಾಳಿನ ಪಯಣದ ಸಾರವನ್ನು ಹೇಳಬಹುದಷ್ಟೆ. ಹಾಗೆ ಹೇಳುವಾಗ ಕೆಲವು ವಿವರಗಳು ಬರಬಹುದು. ಯಾರನ್ನೂ ನೋಯಿಸಬಾರದು ಎಂಬುದನ್ನು ಬಾಳಿನುದ್ದಕ್ಕೂ ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದೇನೆ. ಈಗಲೂ ಅದೇ ನನ್ನ ತತ್ವ.

ಗೋಕರ್ಣದ ಒಂದು ವೈದಿಕ ಕುಟುಂಬದಲ್ಲಿ ನಾನು ಹುಟ್ಟಿದೆ. ಆರಕ್ಕೇರದ, ಮೂರಕ್ಕಿಳಿಯದ ತಕ್ಕಮಟ್ಟಿನ ಅನುಕೂಲ ನಮ್ಮ ಕುಟುಂಬದ್ದು. ನಾವು ದೇವರ ನಡುವೆ ಇದ್ದೆವು ಎನ್ನಬೇಕೋ, ದೇವರುಗಳೇ ನಮ್ಮ ನಡುವೆ ಇದ್ದರು ಎನ್ನಬೇಕೋ - ಹೇಳಲಾಗದು. ಅಂಥ ಊರು ಗೋಕರ್ಣ. ಈ ಊರಿನ ಬೇಲೆಯಲ್ಲಿ ಗೆಳೆಯರೊಡನೆ ಆಟವಾಡುತ್ತ, ಕೋಟಿತೀರ್ಥದಲ್ಲಿ ಈಸಾಡುತ್ತ ನನ್ನ ಬಾಲ್ಯ ಕಳೆಯಿತು. ಉಮಾಮಹೇಶ್ವರ ಗುಡ್ಡ ಹತ್ತಿ ಗೆಳೆಯರು ಒಂದು ರಾತ್ರಿ ದೇವಸ್ಥಾನದಲ್ಲೇ ಉಳಿದುಕೊಂಡಿದ್ದೆವು. ಆ ರಾತ್ರಿ ಆ ಗುಡ್ಡದ ಎತ್ತರದಿಂದ ಕೆಳಗೆ ನೋಡಿದರೆ ಒಂದೆಡೆ ಸಮುದ್ರದ ಸದ್ದು, ಹಾಡು ಹೇಳುತ್ತ ಸಮುದ್ರ ಇಡೀ ಊರನ್ನು ಪೊರೆಯುತ್ತಿದೆ ಎಂಬ ಭಾಸವಾಯಿತು.

ವೇದಮಂತ್ರಗಳ ಘೋಷಕ್ಕೂ, ಆರ್ಣವದ ಘೋಷಕ್ಕೂ ಒಂದು ಸಂಬಂಧವಿದೆ ಎಂದು ಥಟ್ಟನೆ ಹೊಳೆದುಬಿಟ್ಟಿತು. ಇಷ್ಟೆಲ್ಲ ಅರ್ಥ ಆಗಲೇ ಆಯಿತು ಎಂದು ನಾನು ಹೇಳಲಾರೆ. ಆ ಅನುಭವಕ್ಕೆ ಇಂದು ಮಾತು ಕೊಡುವಾಗ ನನ್ನ ಮನಸಿನಲ್ಲಿ ಅಂದು ಹುಟ್ಟಿದ ಸ್ಪಂದನಗಳು ಆ ಬಗೆಯವು ಎಂದು ತಿಳಿಯುತ್ತಿದೆ. ಆಕಾಶದಲ್ಲಿ ನಕ್ಷತ್ರಗಳು ಹೊಳೆಯುತ್ತಿದ್ದವು. ಗುಡ್ಡದ ಒಂದು ಪಾರ್ಶ್ವದಿಂದ ಮಹಾಬಲೇಶ್ವರ ದೇವಸ್ಥಾನದ ಶಿಖರವಿದು ಇರಬೇಕು ಎಂದೂ ಅಂದಾಜು ಮಾಡಿದೆ. ವಿದ್ಯುದ್ದೀಪಗಳ ಹೆಸರನ್ನೂ ನಾವು ಕೇಳಿರದ ಕಾಲ ಅದು.

ಕಾರುಗತ್ತಲೆಯಲ್ಲಿ ಇಡೀ ಊರು ನಿದ್ದೆ ಹೋದಂತಿತ್ತು. ಗಾಳಿಯೂ ಮೃದುವಾಗಿ ಸುಳಿಯುತ್ತಿತ್ತು. ಕೆಲವು ಮನೆಗಳಲ್ಲಿ ಮಾತ್ರ ಸಣ್ಣ ಕಂದೀಲು ದೀಪದ ಬೆಳಕು ಕಂಡೂ ಕಾಣದಂತೆ ಹೊಳೆದು ನನ್ನ ಕೆಳಗೂ ಒಂದು ಆಕಾಶವಿದೆ, ಅಲ್ಲೂ ನಕ್ಷತ್ರಗಳಿವೆ ಅನ್ನಿಸಿಬಿಟ್ಟಿತು. ಆಗಸದ ಮೂಲೆಯಲ್ಲಿ ಬಿದಿಗೆ ಚಂದ್ರನ ಮುಗುಳುನಗೆಯಂತೂ - ಈಶ್ವರ ಈ ಗಿರಿಯಲ್ಲೇ ಇದ್ದಾನೆ ಎಂಬ ಭಾವನೆ ಹುಟ್ಟಿಸಿಬಿಟ್ಟಿತು. ಆಗ ನನ್ನ ವಯಸ್ಸೆಷ್ಟು ಇದ್ದೀತು? ಹತ್ತೋ, ಹದಿನೈದೋ! ಮಾತಾಡುತ್ತಲೇ ಚಂದ್ರು, ಗೋಪಿ, ವೇದೇಶ್ವರ, ಶಂಕರ ನಿದ್ದೆ ಹೋಗಿಬಿಟ್ಟಿದ್ದರು. ನಾನು ಇತ್ತ ಚಾಪೆ ತಂದುಕೊಂಡು ಕೆಲ ಹೊತ್ತು ಕುಳಿತೆ.
 
ಅದು ಧ್ಯಾನವೆಂದು ಹೇಳಲಾರೆ, ಅಲ್ಲವೆಂದೂ ಹೇಳಲಾರೆ. ದೇವರು ಎಲ್ಲೆಲ್ಲೂ ಹರಡಿಕೊಂಡಿದ್ದಾನೆ ಎನ್ನಿಸಿತು. ಕಾರ್ತೀಕ ಹುಣ್ಣಿಮೆಯಂದು ಮಹಾಬಲೇಶ್ವರ ದೇವಸ್ಥಾನದ ಶಿಖರದ ತುಂಬ ಹಣತೆ ದೀಪ ಉರಿಸುವುದನ್ನು ಕಂಡು ಬೆರಗಾದವನು ನಾನು. ಈ ಬಯಲಿನಲ್ಲಿ ಪ್ರಾಕಾರ ಕಾಣದ ಇನ್ನೊಂದೇ ಮಂದಿರವಿದೆ, ಇಲ್ಲೂ ದೀಪಗಳು ಉರಿಯುತ್ತಿವೆ, ಇಲ್ಲಿ ಎಂದೆಂದೂ ಕಾರ್ತೀಕವೇ ಅನ್ನಿಸಿಬಿಟ್ಟಿತು. ಮೊಣಕಾಲೂರಿ ಆ ದೇವರಿಗೆ ಪಾರ್ಥಿಸಿದೆ:

ಎಲ್ಲೆಲ್ಲೂ ಇರುವ ದೇವನೇ, ತಂದೆಯೇ, ಶಿವನೇ
ನಮ್ಮನ್ನು ಹರಸು;
ನಕ್ಷತ್ರಗಳು ನಮ್ಮ ಹತ್ತಿರವೆ ಇರಲಿ
ನೀ ಕಾಣದಾವಾಗಲೂ;
ಬಾನು ಸಲುಹುತ್ತಿರಲಿ ಬುವಿಯ ಬಾಳನ್ನು
ನೀ ನಿದ್ದೆ ಹೋದಾಗಲೂ~

ಪ್ರಾರ್ಥನೆಯ ತೀರ ವಿವರಗಳು ನನ್ನ ನೆನಪಿನಲ್ಲಿ ಉಳಿದಿಲ್ಲ. ಹೀಗೇನೋ ಹೇಳಿಕೊಳ್ಳುತ್ತ ಅಲ್ಲೇ ನಿದ್ದೆ ಹೋಗಿಬಿಟ್ಟೆ. ಬೆಳಿಗ್ಗೆ ದೇವರಿಗೆ ನಮಸ್ಕಾರ ಮಾಡಿ, ಹೂವು ಪತ್ರೆ ಪ್ರಸಾದ ತೆಗೆದುಕೊಂಡು ಮನೆಗೆ ಹೋದೆವು.

ಈಗ ಹೇಳಿದಷ್ಟು ಮಾತ್ರ ನೆನಪಿನಲ್ಲಿ ಉಳಿದಿದೆ. ಬಾಳಿನ ಅನೇಕ ಸಂದರ್ಭಗಳಲ್ಲಿ ಈ ಅನುಭವ ಆಗಾಗ ಸುಳಿದು ಹೋಗಿದೆ. ಹಿರೇಗುತ್ತಿಯಲ್ಲಿ ಮುಂದೆ ಬಂದು ನೆಲೆಸಿದಾಗಲೂ ಸುಮಾರಷ್ಟು ಸಲ ಗದ್ದೆ ಹಾದಿಯಲ್ಲಿ ನಡೆಯುತ್ತ ಬಾನಬಯಲು ನೋಡಿ ಪುಳಕಗೊಂಡಿದ್ದೇನೆ. ಇದೇ ನಕ್ಷತ್ರಗಳನ್ನೇ ಅಲ್ಲವೆ ಅಂದು ಉಮಾಮಹೇಶ್ವರದಲ್ಲಿ ನೋಡಿದ್ದು ಎಂದು ಸಂಭ್ರಮಿಸಿದ್ದೇನೆ. ಯಾರದಾದರೂ ಮಾತು, ನಡತೆ ನೋಯಿಸಿದಾಗ-ಸುಮ್ಮನೇ ಹೊರಕ್ಕೆ ಬಂದು, ಇಲ್ಲಾ, ಮೆತ್ತಿ ಹತ್ತಿ - ಆಗಸದತ್ತ ನೋಡುವೆ:

ನೀಲಿ ಬಾನು-
ನಕ್ಷತ್ರಗಳು-
ಚಂದ್ರ-
ಅವನೊಳಗೆ ಕಂಡೂ ಕಾಣದಂತಿರುವ ಮೊಲದ ಆಕಾರ-
ಇವೆಲ್ಲ ಅವೆಷ್ಟು ಯುಗಗಳಿಂದ ಹೀಗೆ ಭೂಮಿಯ ಬಾಳಿಗೆ ಬೆಳಕು ಸುರಿಯುತ್ತಿವೆಯೋ ಎಂದು ಯೋಚಿಸುತ್ತ ಮನಸು ಎತ್ತರವಾಗಲು ವಿಸ್ತಾರವಾಗಲು ತೊಡಗುವುದು. ಮಳೆಗಾಲದಲ್ಲಿ ಕಪ್ಪು ಮೋಡಗಳಿಂದ ಆವರಿಸುವ ಮುಗಿಲ ಭಾವಗರ್ಭದ ನೋಟ, ಬೆಳದಿಂಗಳ ಸೊಬಗು, ಅಮಾವಾಸ್ಯೆಯ ನಿಗೂಢ ಕತ್ತಲು ಎಲ್ಲವೂ ಇಹದ ಬಾಳಿಗೆ ಸಗ್ಗದ ಸೊಬಗನ್ನು ನಿತ್ಯ, ನಿತ್ಯ ತಂದು ಸುರಿಯುತ್ತಿವೆ...

                                       *****
ಇಷ್ಟು ಬರೆದು ನನಗೆ ಓದಲು ಕೊಟ್ಟು ನನ್ನ ಮುಖವನ್ನೇ ನೋಡುತ್ತ ಕುಳಿತರು. `ಹೇಗಿದೆ?~ ಎಂದರು. `ತುಂಬ ಚೆನ್ನಾಗಿದೆ ಅಪ್ಪ, ಇದನ್ನೆಲ್ಲ ನೀವು ನಮಗೆ ಹೇಳಿರಲೇ ಇಲ್ಲವಲ್ಲ~ ಎಂದೆ. `ಸಮಯ ಬಂದಿರಲಿಲ್ಲ~ ಎಂದರು. ನನ್ನ ಮಾತುಗಳಿಂದ ಉತ್ತೇಜಿತರಾದರೆಂದು ಊಹಿಸುವೆ, ನಿಯಮಿತವಾಗಿ ಬರೆಯತೊಡಗಿದರು. ಆರಿಹೋಗುವ ದೀಪ ಬೆಳಕು ಹರಡಿಕೊಳ್ಳತೊಡಗಿತ್ತು.

ಆ ರಾತ್ರಿ ನಕ್ಷತ್ರಗಳು ಅಪ್ಪನಿಗೆ ಅದೇನು ಹೇಳಿಕೊಟ್ಟವೋ? ಚಿಕ್ಕಂದಿನಿಂದಲೂ ಅಪ್ಪ ಚಿಮಣಿರಾಮನ ಹಿಂದೆ ತಿರುಗುತ್ತಿದ್ದರಂತೆ. ಪನ್ನಿತಾತಿ `ನೀನು ದೊಡ್ಡವನಾದ ಮೇಲೆ ಯಾವ ಕೆಲಸ ಮಾಡುವೆ?~ ಎಂದರೆ, `ಚಿಮಣಿರಾಮನ ಕೆಲಸ~ ಎನ್ನುತ್ತಿದ್ದನಂತೆ. ದಿನವೂ ಒಂದು ಚಿಕ್ಕ ಏಣಿ ಹೆಗಲ ಮೇಲೆ ಇಟ್ಟುಕೊಂಡು ಕೈಯಲ್ಲಿ ಚಿಮಣಿ ಎಣ್ಣೆ ಡಬ್ಬ ಹಿಡಿದು, ಬಟ್ಟೆ ಚೂರು ಇಟ್ಟುಕೊಂಡು ಎಲ್ಲ ದೀಪದ ಕಂಬಗಳ ಹತ್ತಿರ ಹೋಗಿ ದೀಪಕ್ಕೆ ಎಣ್ಣೆಹಾಕಿ ಬುರುಡೆಯ ಮಸಿ ತೆಗೆಯುವುದು, ದೀಪ ಹಚ್ಚುವುದು, ಮುಂದಿನ ಕಂಬಕ್ಕೆ ಹೋಗುವುದು. ಮನೆ ಎದುರಿನ ದೀಪದ ಕಂಬಕ್ಕೆ ಅವನು ಬಂದಾಗ ಅಪ್ಪ ಅವನ ಹಿಂದೆ ಹೊರಡುತ್ತಿದ್ದರಂತೆ. ದಿನವೂ ಕಾಳೆರಾಮನ ಜೊತೆ - ಐದಾರು ಕಂಬಗಳ ಕೆಲಸ ಆಗುವವರೆಗೂ ಇರುತ್ತಿದ್ದರಂತೆ.

ಈಗ ಅನಿಸುತ್ತಿದೆ, ಅಪ್ಪ ಬದುಕಿನುದ್ದಕ್ಕೂ ದೀಪ ಹಚ್ಚುವ ಕೆಲಸ ಮಾಡುತ್ತ ಬಂದಿದ್ದಾರೆ. ಅವರ ಪ್ರೀತಿಯ ಮಂಕುತಿಮ್ಮನ ಕಗ್ಗದಲ್ಲಿ ಒಂದು ಪದ್ಯವಿದೆ. ಅದರ ಅರ್ಥ ಹೀಗೆ. `ಕಾರಿರುಳಲ್ಲಿ ಆಗಸದಲ್ಲಿ ತಾರೆ ನೂರಿದ್ದೇನು? ದಾರಿಗನ ಕಣ್ಗೆ ಮನೆ ಬೆಳಕು ಬೇಕು. ದೂರದ ದೈವವಂತಿರಲಿ, ಬಡಜೀವ ಮಾನುಷ ಸಖನ ಕೋರುವುದು~. ಅಪ್ಪನ ಮಾಸ್ತರಿಕೆಯದು ದೊಡ್ಡ ಕ್ಷೇತ್ರ. ತನ್ನವರೆಲ್ಲರೊಡನೆ ಸಖ್ಯದಲ್ಲಿ ಅವರಿಗೆ ಸುಖ. ಅವರ ಸುಖದಲ್ಲಿ ಹರ್ಷಪಟ್ಟಂತೆ ದುಃಖದಲ್ಲೂ ಅಪ್ಪನ ಜೀವ ಮಿಡಿಯುವುದು.

ಮಂಕುತಿಮ್ಮ ಹೇಳಿದಂತೆ ಮನೆ ಬೆಳಕು ಆಗುವುದರಲ್ಲಿ ಅವರ ಮಾಸ್ತರಿಕೆಯ ಸಂತಸವಿತ್ತು. ದೂರದ ನಕ್ಷತ್ರಗಳನ್ನು ಎದೆಯಲ್ಲಿ ತುಂಬಿಕೊಳ್ಳುವುದನ್ನಂತೂ ಚಿಕ್ಕಂದಿನಲ್ಲೇ ಕಲಿತುಬಿಟ್ಟಿದ್ದರು.

ಒಮ್ಮೆ ಹೇಳಿದ್ದೆ: `ಅಪ್ಪ,ನೀವು ಬಸ್ಸಲ್ಲಿ ಕೂತರೂ ಅದೂ ಒಂದು ಕ್ಲಾಸ್ ರೂಮ್‌ನಂತೇ ಕಾಣುತ್ತದೆ~. ಮೂರು ದಶಕದ ಮಾಸ್ತರಿಕೆಯಲ್ಲಿ ಅಷ್ಟು ವಿದ್ಯಾರ್ಥಿಗಳು. ಕಂಡಕ್ಟರ್, ಡ್ರೈವರ್ ಅಲ್ಲದೇ ಎಷ್ಟೋ ಸಹಪ್ರಯಾಣಿಕರೂ ಅಪ್ಪನಲ್ಲಿ ಕಲಿತವರೇ!

                                                         *****
ಅಪ್ಪ ಟೆರೇಸಿನ ಮೇಲೆ ನಿಧಾನವಾಗಿ ಓಡಾಡುತ್ತಲೇ ಮಂತ್ರ ಹೇಳಿ ಮುಗಿಸಿದರು. `ಚಿದಂಬರ, ಸಮಯ ಎಷ್ಟಾಯಿತು?~ ಎಂದರು. ಹೇಳಿದೆ. ನಕ್ಕು `ಸಮಯ ಎಷ್ಟಾದರೇನು, ನಾವೀಗ ಕಾಲಾತೀತರು~ ಎಂದರು. `ಹ್ಞೂಂ, ದೇಶಕಾಲಾತೀತರು, ಜೀವನ್ಮುಕ್ತರು~ ಎಂದು ನಾನೂ ನಕ್ಕೆ. ಇನ್ನೇನು, ನಾವು ಇಳಿಯಬೇಕು ಎನ್ನುವಷ್ಟರಲ್ಲಿ ವಿದ್ಯುದ್ದೀಪಗಳು ಆರಿಹೋದವು, ಕತ್ತಲು ಆವರಿಸಿತು.
 
ಇಷ್ಟು ಹೊತ್ತೂ ಮರಗಳ ಹಿಂದೆ, ಮರೆಗಳ ಹಿಂದೆ ಅಡಗಿಕೊಂಡಿದ್ದ ಕತ್ತಲು, ಬೆಳಕು ಬಿಟ್ಟು ಹೋದ ಎಡೆಗಳನ್ನೆಲ್ಲಾ ತನ್ನದು ಮಾಡಿಕೊಂಡುಬಿಟ್ಟಿತು. ಆಸ್ಪತ್ರೆಯಲ್ಲಿ ಏನೋ ಸಮಸ್ಯೆ ಇದ್ದುದರಿಂದ ತಡೆರಹಿತ ವಿದ್ಯುತ್ ವ್ಯವಸ್ಥೆಗೆ ಭಂಗ ಉಂಟಾಗುವುದೆಂದು ಮೊದಲೇ ಹೇಳಿದ್ದರು. ರವಿವಾರ ಬೇರೆ. ಮರೆತಿದ್ದೆ. ಇನ್ನೇನು ಮಾಡುವುದು? ವಿದ್ಯುತ್ತು ಬರುವವರೆಗೂ ಇಲ್ಲಿಯೇ ಕಾಯೋಣವೆಂದುಕೊಂಡೆವು. ಹೇಗಿದ್ದರೂ ನಾವು ದೇಶಕಾಲಾತೀತರು, ಜೀವನ್ಮುಕ್ತರು!

ವಿದ್ಯುದ್ದೀಪಗಳ ಬೆಳಕು ಮರೆಯಾಗಿ ಆಗಸ ತನ್ನದೇ ಕಾಂತಿಯಿಂದ ಹೊಳೆಯತೊಡಗಿತು. ನಕ್ಷತ್ರಗಳು ಕಲಕಲ ನಕ್ಕವು. ಅರೆರೇ, ಬಿದಿಗೆಯ ಚಂದ್ರ ಬಿಂಕ ಮಾಡತೊಡಗಿದ. ಎಲ್ಲಾ ಸೇರಿ ಮಂಗಳೂರಿನ ಮನೆಗಳ ಮೇಲೆಲ್ಲಾ ಕತ್ತಲೆಯ ದಪ್ಪ ಚಾದರ ಹೊದೆಸಿದಂತೆ ಕಂಡಿತು. ಕೆಲ ಮನೆಗಳಲ್ಲಿ ನಕ್ಷತ್ರಗಳು ಹೊಕ್ಕಿಕೊಂಡಿದ್ದವೇನೋ, ಪುಟ್ಟ ಬೆಳಕು ಲಾಸ್ಯವಾಡುತ್ತಿತ್ತು. ಬಾನಿಂದ ಕೆಲವು ತಾರೆಗಳು ಅಡಗಿಕೊಂಡ ಈ ಚುಕ್ಕಿಗಳನ್ನು ಹುಡುಕತೊಡಗಿದವು. ದೂರದ ಆ ಚೂಪು ತುದಿಯ ಕಟ್ಟಡ ದೇವ ಮಂದಿರವೆ? ಬಾನತ್ತ ಇಳೆಯ ಮಕ್ಕಳ ಅಹವಾಲನ್ನೆಲ್ಲ ಎತ್ತಿ ಎತ್ತಿ ತೂರುವಂತಿತ್ತು. ಆಸ್ಪತ್ರೆಯ ಪಕ್ಕದ ಉದ್ದ ಮರದ ಮೇಲಿನಿಂದ ತಾರೆಗಳು ಕೆಳಗಿಳಿದು ಬರಬಹುದೆ?

ಒಮ್ಮೆಲೆ ಅಪ್ಪ ಮಾತಾಡತೊಡಗಿದರು: `ಚಿದಂಬರ, ಇದು ನಾನು ಅಂದು ಉಮಾಮಹೇಶ್ವರ ಗುಡ್ಡದಿಂದ ಕಂಡ ಅದೇ ರಾತ್ರೆ. ಅದೇ ಆಕಾಶ, ಅವೇ ಚುಕ್ಕಿಗಳು, ಚಂದ್ರನ ಬೆಳಕಲ್ಲಿ ಲೋಕ ತಣ್ಣಗೆ ಮಲಗಿದೆ. ಅಂದೂ ಹಾಗೇ ಕಂಡಿತ್ತು, ಇಂದೂ ಹಾಗೆಯೇ. ಇದು ಮುಂದೆಯೂ ಹಾಗೇ ಇರುವುದು.
 
ನಾವು ಇವನ್ನೆಲ್ಲ ನೋಡಲು ಮರೆತುಬಿಟ್ಟಿದ್ದೇವಲ್ಲ. ಈ ನಕ್ಷತ್ರಗಳಿಂದ ಒಂದಷ್ಟು ಬೆಳಕು, ಆ ಚಂದಿರನಿಂದ ಒಂದಿಷ್ಟು ಬೆಳಕು ಮನದೊಳಗೆ ತುಂಬಿಕೋ. ನಾನಿಲ್ಲದಾಗಲೂ ಇದನ್ನು ನೆನಪಿಟ್ಟುಕೋ, ನೀನು ಹೋದಲ್ಲಿ ಬಂದಲ್ಲಿ ಈ ಬೆಳಕನ್ನೇ ತುಂಬಿಕೊಂಡು ಹೋಗು, ಈ ಬೆಳಕನ್ನೇ ಕೊಡು~. ಶುರು ಮಾಡಿದಷ್ಟೇ ಅನಿರೀಕ್ಷಿತವಾಗಿ ಮಾತು ನಿಲ್ಲಿಸಿದರು. ಏನೂ ಹೇಳಲು ತೋಚದೆ ಹೋಗಿ ಅವರ ಕೈ ಹಿಡಿದುಕೊಂಡೆ. `ಹೊರಡೋಣವೇ?~ ಎಂದರು.

ನಿಧಾನವಾಗಿ ಕತ್ತಲಲ್ಲೇ ಮೆಟ್ಟಿಲುಗಳಿಂದಿಳಿದೆವು. ಕೋಣೆಯಲ್ಲಿ ಮೇಣದ ಬತ್ತಿ ಉರಿಯುತ್ತಿತ್ತು. ಪಕ್ಕದ ಮಂಚದ ಮಗು ಒಂದೇ ಸಮ ಅಳುತ್ತಿತ್ತು.
ತಂದೆಯವರು ಮಂಚದ ಮೇಲೆ ಕಾಲು ನೀಡಿ ಮಲಗಿದರು. ಹೊದಿಕೆ ಹೊದಿಸಿದೆ. `ಆ ಮಗು ಹೀಗೇ ಅಳುತ್ತಿರಲಿ~ ಎಂದರು. ಅಚ್ಚರಿಯಿಂದ `ಯಾಕೆ~ ಎಂದೆ. `ಅದು ಅಳುತ್ತಿರುವವರೆಗೂ ಆ ಮಗು ಬದುಕಿದೆ ಎಂಬ ಧೈರ್ಯ ನನಗೆ. ಆ ಮಗು ಬದುಕಬೇಕು~ ಎನ್ನುತ್ತ ಕಣ್ಣು ಮುಚ್ಚಿದರು. ಒಮ್ಮೆಲೆ ಎಲ್ಲ ದೀಪಗಳೂ ಹೊತ್ತಿಕೊಂಡವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT