ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ನಿಗ್ರಹಕ್ಕೆ ಅಭಿವೃದ್ಧಿಯೇ ಮದ್ದು

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕ್ಸಲರೊಂದಿಗೆ ಸಂಪರ್ಕವಿದೆ ಎಂಬ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

`ವಿಠಲ್, ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತನಾಗಿದ್ದನೇ ಹೊರತು ಆತ ನಕ್ಸಲರ ಸಂಪರ್ಕ ಹೊಂದಿರಲಿಲ್ಲ. ಯಾವುದೇ ಪುರಾವೆ ಇಲ್ಲದೇ ವಿಠಲ್ ಹಾಗೂ ಆತನ ತಂದೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ಖಂಡನೀಯ. ಆತ ವಿದ್ಯಾರ್ಥಿಯಾಗಿದ್ದು ಸಹಪಾಠಿಗಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿರುತ್ತಾನೆ.
 
ಆತನ ಸಹಪಾಠಿಗಳು ಈಗ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿರಬಹುದು. ಆ ಛಾಯಾಚಿತ್ರ ನೋಡಿ ವಿಠಲ್ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆತನನ್ನು ಬಂಧಿಸಿರುವುದು ಯಾವ ನ್ಯಾಯ~ ಎಂದು ರಾಜ್ಯಸಭೆಯ ಮಾಜಿ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.

`ಹಿಂದುಳಿದ ವರ್ಗದವರ ಹಾಗೂ ಅರಣ್ಯವಾಸಿಗಳ ಹಕ್ಕುಗಳನ್ನು ಸರ್ಕಾರ ಕಿತ್ತುಕೊಳ್ಳುತ್ತಿರುವುದರಿಂದ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿವೆ. ಆದಿವಾಸಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ನಕ್ಸಲ್ ಚಟುವಟಿಕೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ~ ಎಂದು ಅವರು ಹೇಳಿದರು.

ಡಿವೈಎಫ್‌ಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ್‌ಮೂರ್ತಿ ಮಾತನಾಡಿ, `ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ಈ ಹಿಂದೆ ವಿಠಲ್‌ನ ಸಂಬಂಧಿಕರೊಬ್ಬರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಈಗ ವಿಠಲ್ ಮಲೆಕುಡಿಯನ ಮೇಲೆ ಅದೇ ರೀತಿಯ ಆರೋಪ ಮಾಡಲಾಗುತ್ತಿದೆ. ತಂದೆ ಮಗನನ್ನು ಬಂಧಿಸಿ ನಕ್ಸಲರ ಜತೆ ಜೈಲಿನಲ್ಲಿ ಇಟ್ಟಿದ್ದು ಆತನ ಜೀವನಕ್ಕೆ ಪೆಟ್ಟು ಬೀಳುವ ಆತಂಕ ಎದುರಾಗಿದೆ~ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಇದೊಂದು ಗಂಭೀರ ಪ್ರಕರಣವಾಗಿದ್ದು, ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

`ನನ್ನ ಮಗ ಯಾವುದೇ ನಕ್ಸಲರ ಜತೆ ಹೋದವನಲ್ಲ. ವಿನಾ ಕಾರಣ ಆರೋಪ ಮಾಡಿ ನನ್ನ ಗಂಡ ಹಾಗೂ ಮಗನನ್ನು ಜೈಲಿಗೆ ಕಳಿಸಲಾಗಿದೆ. ಮನೆಗೆ ಬಂದ ಪೊಲೀಸರು ನನ್ನ ಗಂಡನ ಕಾಲಿಗೆ ಹೊಡೆದು ಅವರ ಕಾಲನ್ನು ಮುರಿದಿದ್ದಾರೆ~ ಎಂದು ಪ್ರತಿಭಟನೆಯಲ್ಲಿ ಭಾಗಹಿಸಿದ್ದ ವಿಠಲ್‌ನ ತಾಯಿ ಹೊನ್ನಮ್ಮ ಸದಾನಂದಗೌಡ ಅವರ ಬಳಿ ಅಳಲು ತೋಡಿಕೊಂಡರು.

ಲೇಖಕ ಜಿ.ಕೆ.ಗೋವಿಂದ ರಾವ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT