ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್-ನಿರಂತರ ಕಾರ್ಯಾಚರಣೆ ಬೇಕಿದೆ

Last Updated 2 ಜನವರಿ 2012, 7:30 IST
ಅಕ್ಷರ ಗಾತ್ರ

ಮಂಗಳೂರು: ಸಂಪೂರ್ಣವಾಗಿ ತರಬೇತಿ ಪೂರೈಸಿರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಶಿಕ್ಷಾರೂಪದಲ್ಲಿ ವರ್ಗಾವಣೆಗೊಂಡಿರುವವರು, ಮನೆಯವರ ಒತ್ತಡದ ನಡುವೆ ಕೆಲಸ ಮಾಡುತ್ತಿರುವವರು ಹಲವು ಮಂದಿ, ಕೆಲವು ದಿನಗಳ ಮಟ್ಟಿಗೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವವರು...

ಹೀಗೆ ಸಾಗುತ್ತದೆ ಪಶ್ಚಿಮ ಘಟ್ಟ ತಪ್ಪಲಿನ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಸ್ಥಿತಿ. ಸದಾಶಿವ ಗೌಡ ನಾಪತ್ತೆಯಾಗಿ 9 ದಿನ ಕಳೆದ ಬಳಿಕ ಶವ ಪತ್ತೆ ಹಚ್ಚಿದ ಇಡೀ ಪೊಲೀಸ್ ವ್ಯವಸ್ಥೆಯ ಕಾರ್ಯಾಚರಣೆ ಬಗ್ಗೆ ಕರಾವಳಿ ಭಾಗದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ಕಬ್ಬಿನಾಲೆಯಿಂದ ಎಂಟೂವರೆ ಕಿ.ಮೀ. ದೂರದಲ್ಲಿದ್ದ ಶವ ಪತ್ತೆ ಹಚ್ಚಲು ಪೊಲೀಸರು ಒಂಬತ್ತು ದಿನ ತೆಗೆದುಕೊಂಡಿದ್ದನ್ನು ಇಲ್ಲಿ ನೆನಪಿಸಬಹುದು.

`ನಕ್ಸಲ್ ನಿಗ್ರಹಕ್ಕೆ ಅತ್ಯಾಧುನಿಕ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ, ಸಿಬ್ಬಂದಿ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ನಿರಂತರವಾಗಿ ಹೇಳಿಕೆ ನೀಡುತ್ತಲೇ ಇದೆ. ಆದರೆ ಎಎನ್‌ಎಫ್ ನೈಜ ಸ್ಥಿತಿ ಮಾತ್ರ ಬೇರೆಯದೇ ಆಗಿದೆ. `ನಕ್ಸಲ್ ಚಟುವಟಿಕೆ ತೀವ್ರವಾದಾಗ ಮಾತ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ. ಯೋಜಿತ ಕಾರ್ಯಾಚರಣೆ ನಡೆಯುತ್ತಿಲ್ಲ~ ಎಂಬುದು ಎಎನ್‌ಎಫ್ ಸಿಬ್ಬಂದಿಯ ಬೇಸರದ ನುಡಿ.

9 ಶಿಬಿರ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಂಬತ್ತು ಕಡೆ ನಕ್ಸಲ್ ನಿಗ್ರಹ ಪಡೆಯ ಶಿಬಿರಗಳು ಇವೆ. ಜಡ್ಡಿನಗದ್ದೆ, ಕಾರ್ಕಳ, ಹೆಬ್ರಿ, ಶಂಕರನಾರಾಯಣ, ಮಾಸ್ತಿಕಟ್ಟೆ, ಆಗುಂಬೆ, ದೇವಳಕೊಪ್ಪ, ಕಿಗ್ಗ ಹಾಗೂ ಕೆರೆಕಟ್ಟೆಯಲ್ಲಿ ಎಎನ್‌ಎಫ್ ಶಿಬಿರಗಳು ಇವೆ. ಒಂದೊಂದು ಶಿಬಿರದಲ್ಲಿ 25-30 ಸಿಬ್ಬಂದಿ ಇರುತ್ತಾರೆ.  ಈ ಹಿಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವಿಶೇಷ ಆಸಕ್ತಿಯಿಂದ ಹೆಬ್ರಿ ಹಾಗೂ ಶಂಕರನಾರಾಯಣದಲ್ಲಿ ಎಎನ್‌ಎಸ್ ಶಿಬಿರ ರಚಿಸಲಾಗಿದೆ. 

ದ.ಕ.ದಲ್ಲಿ ಶಿಬಿರವೇ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಪೀಡಿತ 11 ಗ್ರಾಮಗಳಿವೆ. ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು, ನಾರಾವಿ, ನಾವುರ, ಪಿಲ್ಯ, ಸುಲ್ಕೇರಿ, ಶಿರ್ಲಾಲು, ಸವಣಾಲು, ನಡ, ಮಲವಂತಿಗೆ, ಮಿತ್ತಬಾಗಿಲು, ಲಾಯಿಲ ಗ್ರಾಮಗಳು ನಕ್ಸಲ್‌ಪೀಡಿತ ಪ್ರದೇಶಗಳು ಎಂದು ಘೋಷಣೆಯಾಗಿವೆ.
 
ಆದರೆ ನಕ್ಸಲ್ ನಿಗ್ರಹ ಪಡೆಯ ಶಿಬಿರವೇ ಇಲ್ಲ. ಜಿಲ್ಲೆಯಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸಲು ಕಾರ್ಕಳದಿಂದಲೇ ಎಎನ್‌ಎಫ್ ಸಿಬ್ಬಂದಿ ಇಲ್ಲಿಗೆ ಬರಬೇಕು. ಎರಡು ವರ್ಷ ಹಿಂದಿನವರೆಗೂ ವೇಣೂರಿನಲ್ಲಿ ಎಎನ್‌ಎಸ್ ದಳ ಇತ್ತು. ಈ ದಳದಲ್ಲಿ ಅಧಿಕಾರಿ ಸೇರಿ 16 ಸಿಬ್ಬಂದಿ ಇದ್ದರು. ನಕ್ಸಲ್ ಚಟುವಟಿಕೆಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಈ ದಳವನ್ನು ವಿಸರ್ಜಿಸಿ ಬೇರೆ ಕಡೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

 ಎಎನ್‌ಎಫ್ ಸಿಬ್ಬಂದಿ ಬಳಿ ಇರುವುದು ಇನ್‌ಸ್ಾ, ಎ.ಕೆ. 47 ಹಾಗೂ ಎಸ್‌ಎಲ್‌ಆರ್ ಗನ್‌ಗಳು. ಹೆಚ್ಚಿನ ಸಿಬ್ಬಂದಿ ಬಳಿ ಇರುವುದು ಎಸ್‌ಎಲ್‌ಆರ್ ಗನ್‌ಗಳು. ಅವು ಸಹ ಹಳೆಯ ಮಾದರಿಯವು. ಶೋಧ ಕಾರ್ಯಾಚರಣೆ ಸಂದರ್ಭ ಕಾಡಿನಲ್ಲಿ ದಿನಗಟ್ಟಲೆ ಹೊತ್ತು ಸಾಗುವುದು ಕಷ್ಟದ ಕೆಲಸ. ಹೆಚ್ಚಾಗಿ ಎ.ಕೆ. 47 ಗನ್ ಪೊಲೀಸ್ ಅಧಿಕಾರಿಗಳ ಬಳಿಯೇ ಇರುತ್ತದೆ. ಅವರು ಜಾಸ್ತಿ ಕಾರ್ಯಾಚರಣೆಗೆ ಬರುವುದೂ ಇಲ್ಲ.

ಎಎನ್‌ಎಫ್‌ನಲ್ಲಿ ಹೆಚ್ಚು ಇರುವವರು ಕೆಎಸ್‌ಆರ್‌ಪಿಯಿಂದ ಎರವಲು ಸೇವೆಗೆ ಬಂದವರು ಮತ್ತು ಬೇರೆ ಬೇರೆ ಠಾಣೆಗಳಿಂದ ತಾತ್ಕಾಲಿಕವಾಗಿ ನಿಯೋಜನೆಗೊಂಡವರು ಇದ್ದಾರೆ. ಜತೆಗೆ ಎಸ್‌ಟಿಎಫ್‌ನಲ್ಲಿದ್ದ ಸಿಬ್ಬಂದಿಯೂ ಇದ್ದಾರೆ. ಅವರ ಸಂಖ್ಯೆ ಸ್ವಲ್ಪ ಕಡಿಮೆ ಇದೆ ಎಂದು ಎಎನ್‌ಎಫ್ ಮೂಲಗಳು ತಿಳಿಸಿವೆ.

ಮನೆಯವರ ಒತ್ತಡ: ಗುರಿ ತಪ್ಪಿದ ಗುಂಡಿನಿಂದ ಆಗುಂಬೆಯಲ್ಲಿ ಎಎಸ್‌ಐ ವೆಂಕಟೇಶ್ ಮರಣ, ಬೆಳ್ತಂಗಡಿ ಸಮೀಪದ ನಾವೂರದಲ್ಲಿ ಮಹಾದೇವ ಎಸ್.ಮಾನೆ ಸಾವು, ಕಾರ್ಕಳ ಸಮೀಪದ ಅಂಡಾರಿನಲ್ಲಿ ಇನ್ಸ್‌ಪೆಕ್ಟರ್ ಗುಂಡೇಟು-ಸಿಬ್ಬಂದಿ ಪಾರು...ಇಂಥ `ಗುರಿತಪ್ಪಿದ~ ಘಟನೆಗಳಿಂದ ಎಎನ್‌ಎಫ್‌ನಲ್ಲಿ ಸೇವೆ ಸಲ್ಲಿಸುವ ಕೆಲವು ಸಿಬ್ಬಂದಿಯ ಮೇಲೆ ಉದ್ಯೋಗ ತ್ಯಜಿಸುವಂತೆ ಅಥವಾ ಬದಲಾಯಿಸುವಂತೆ ಮನೆಯವರ ಒತ್ತಡವೂ ಇತ್ತೀಚೆಗೆ ಜಾಸ್ತಿ ಆಗಿದೆ ಎಂದು ಮೂಲಗಳು ತಿಳಿಸಿವೆ.

`ನಿವೃತ್ತಿ ಅಂಚಿನಲ್ಲಿದ್ದು ಹೃದಯಬೇನೆಯಿಂದ ಬಳಲುತ್ತಿರುವ ನಮ್ಮಂಥವರನ್ನು ಎಎನ್‌ಎಫ್‌ಗೆ ನಿಯೋಜಿಸಿದರೆ ಆಸಕ್ತಿಯಿಂದ ಕೆಲಸ ಮಾಡುವುದು ಹೇಗೆ? ಸ್ವಲ್ಪ ದೂರ ಸಾಗುವಾಗಲೇ ಏದುಸಿರು ಆರಂಭವಾಗುತ್ತದೆ. ಕೆಲಸ ಮಾಡಲು ಉಮೇದು ಉಂಟು. ಆದರೆ ದೇಹ ಸಹಕರಿಸುವುದಿಲ್ಲ~ ಎನ್ನುವುದು ಹಿರಿಯ ಸಿಬ್ಬಂದಿಯೊಬ್ಬರ ನೋವಿನ ನುಡಿ.    

`ಕಾಡಿನಲ್ಲಿ ಕಾರ್ಯಾಚರಣೆ ನಡೆಸುವ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆ ಪಡಿಪಾಟಲು ಪಡಬೇಕಿದೆ. ಜೀವ ಪಣಕ್ಕಿಟ್ಟು ಹೋರಾಟ ಮಾಡುವ ಅವರಿಗೆ ಇತರ ಪೊಲೀಸರಿಗಿಂತ ಹೆಚ್ಚು ವೇತನ ಸಿಗುವುದಿಲ್ಲ. ಅನ್ನ ನೀರು ಬಿಟ್ಟು ದಿನಗಟ್ಟಳೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಇಷ್ಟರ ನಡುವೆಯೂ ಇಲ್ಲಿಯ ಒತ್ತಡ ಅಭ್ಯಾಸವಾಗಿದೆ. ಬಿಟ್ಟು ಹೋಗಲು ಮನಸ್ಸು ಒಪ್ಪುವುದಿಲ್ಲ.
 
ಎಸ್‌ಟಿಎಫ್ ಸಿಬ್ಬಂದಿಗೆ ವೇತನ ನೀಡಿದಂತೆ ಎಎನ್‌ಎಫ್ ಸಿಬ್ಬಂದಿಗೂ ವೇತನ ನೀಡಬೇಕು ಎಂಬ ಕೂಗು ಆರಂಭದಿಂದಲೂ . ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ. ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಕೆಯಾಗುತ್ತಲೇ ಇದೆ~ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

`ಅಧಿಕಾರಿಗಳ ಅವಕೃಪೆಗೆ ಒಳಗಾದವರನ್ನು ಎಎನ್‌ಎಫ್‌ಗೆ ನೇಮಿಸುವ ಪ್ರವೃತ್ತಿಯೂ ಜಾಸ್ತಿ ಆಗಿದೆ. ಜತೆಗೆ ಉದ್ಯೋಗಕ್ಕೆ ಸೇರಿದ ಕೂಡಲೇ ಯಾವುದೇ ಅನುಭವ ಇಲ್ಲದವರನ್ನು ನೇಮಕ ಮಾಡಲಾಗುತ್ತದೆ. ಅವರಿಗೆ ಆಸಕ್ತಿಯೂ ಇರುವುದಿಲ್ಲ. ಸಿಬ್ಬಂದಿಗೆ ತರಬೇತಿಯ ಕೊರತೆಯೂ ಇದೆ. ಅಧಿಕಾರಿಗಳ ಮರ್ಜಿಗೆ ತಕ್ಕಂತೆ ನೇಮಕ ನಡೆಯುತ್ತದೆ~ ಎಂಬುದು ಮತ್ತೊಬ್ಬ ಸಿಬ್ಬಂದಿಯ ಬೇಸರದ ನುಡಿ. 
 

ಎಎನ್‌ಎಫ್ ಸಿಬ್ಬಂದಿ ನೋವು: `ಪೊಲೀಸ್ ಸಿಬ್ಬಂದಿ ಮಧ್ಯೆ ಸಮನ್ವಯ ಕೊರತೆ~

ನಕ್ಸಲ್ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯ ನಡುವೆ ಸಮನ್ವಯ ಕೊರತೆ ಇದೆ ಎಂಬ ಆರೋಪ ವ್ಯಕ್ತವಾಗಿದೆ. ವಿಶೇಷ ಘಟನೆ ಸಂಭವಿಸಿದ ಸಂದರ್ಭ ಕಾಡಿನಲ್ಲಿ ಕಾರ್ಯಾಚರಣೆ ನಡೆಸುವುದು ಎಎನ್‌ಎಫ್ ಸಿಬ್ಬಂದಿ. ಅದರ ಲಾಭ ಪಡೆದುಕೊಳ್ಳುವುದು ಸ್ಥಳೀಯ ಪೊಲೀಸರು ಎಂಬ ದೂರು ಇದೆ. 

 ಮಲೆಕುಡಿಯ ಸದಾಶಿವ ಗೌಡ ಹತ್ಯೆ ನಡೆದ ಸಂದರ್ಭದಲ್ಲಿ ಹೆಬ್ರಿಯಿಂದ 30 ಕಿ.ಮೀ. ದೂರದ ದುರ್ಗಮ ಕಾಡಿನಲ್ಲಿ ರಾತ್ರಿಯಿಡೀ ಶವ ಕಾದಿದ್ದು ಎಎನ್‌ಎಫ್‌ನ 60 ಸಿಬ್ಬಂದಿ. ಆದರೆ ಅದನ್ನು ಯಾರೂ ಗುರುತಿಸಿಲ್ಲ ಎಂದು ಎಎನ್‌ಎಫ್ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು. ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಲೇ ಎನ್ನುವುದು ಸಿಬ್ಬಂದಿ ನೋವು.
 

ತೀವ್ರ ಅಸಮಾಧಾನ: `ಕಮಾಂಡೊ ಮಾದರಿ ತರಬೇತಿ ಅಗತ್ಯ~

`ಎಎನ್‌ಎಫ್ ಸಿಬ್ಬಂದಿಗೆ ಕಮಾಂಡೊ ಮಾದರಿಯ ತರಬೇತಿ ಅಗತ್ಯ. ಕಾಡಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರನ್ನಷ್ಟೇ ಇಲ್ಲಿಗೆ ನೇಮಿಸಬೇಕು. ಶೋಧ ಕಾರ್ಯಾಚರಣೆಯೂ ನಿರಂತರ ನಡೆಯಬೇಕು. ನಕ್ಸಲರು ಬಂದ ಕೂಡಲೇ ಶೋಧ ಕಾರ್ಯಾಚರಣೆ ನಡೆಸಿ, ನಂತರ ಕೈ ಬಿಡುವುದರಿಂದ ಸ್ಥಳೀಯ ಜನರಿಗೆ ಪೊಲೀಸ್ ವ್ಯವಸ್ಥೆಯ ಬಗೆಗೇ ನಂಬಿಕೆ ಹೋಗಿದೆ.

ಸಿಬ್ಬಂದಿಗೆ ಸ್ಫೂರ್ತಿ ತುಂಬುವ ಅಧಿಕಾರಿಗಳನ್ನೇ ನೇಮಕ ಮಾಡಬೇಕು~ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಪ್ರಜಾವಾಣಿಗೆ ಶನಿವಾರ ತಿಳಿಸಿದರು. `ಎಎನ್‌ಎಫ್‌ನಲ್ಲಿದ್ದ ಮಧುಕರ ಶೆಟ್ಟಿ, ಅಶೋಕನ್ ಅವರಂತಹ ಅಧಿಕಾರಿಗಳು ಇದ್ದರೆ ಸಿಬ್ಬಂದಿಗೂ ಕೆಲಸದಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ~ ಎಂದು ಅವರು ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT