ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ವರ್ಗಾವಣೆ ಯೋಜನೆ `ಫಲ' ನೀಡುವುದೆ?

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

`ಆಧಾರ್' ಕಾರ್ಡ್‌ಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬರುವ ಜನವರಿ ಒಂದರಿಂದ ಅನುಷ್ಠಾನಗೊಳ್ಳಲಿದೆ.

ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿರುವ ಯೋಜನೆಯ ಹಿಂದೆ ರಾಜಕೀಯ ವಾಸನೆಯೂ ಹರಡಿದೆ. ಅದಕ್ಕೆ ಕಾರಣವೂ ಇದೆ. ಏಕೆಂದರೆ ಲೋಕಸಭಾ ಚುನಾವಣೆಗಳಿಗೆ ಇನ್ನೂ 18 ತಿಂಗಳ ಮಾತ್ರ ಬಾಕಿ ಉಳಿದಿವೆ. ಈ ನಡುವೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ.    

ಯೋಜನೆ ಅನುಷ್ಠಾನಗೊಳ್ಳುವ ಮೊದಲೇ ವಿರೋಧ ಪಕ್ಷಗಳ ಅಪಸ್ವರಗಳೂ ಕೇಳಿಬಂದಿವೆ. ವಿವಿಧ ಯೋಜನೆಗಳ ಹಣ ಅನರ್ಹರ ಪಾಲಾಗದೆ ನೇರವಾಗಿ ಫಲಾನುಭವಿಗಳ ಕೈಗೆ ಸೇರುವಂತೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉತ್ತಮ ಉದ್ದೇಶ ಯೋಜನೆ ಹಿಂದಿದ್ದರೂ ವಿರೋಧ ಪಕ್ಷಗಳು ಇದರ ಹಿಂದೆ `ರಾಜಕೀಯ ಲಾಭದ ಉದ್ದೇಶ' ಗುರುತಿಸಿವೆ. 

ದೇಶದ 16 ರಾಜ್ಯಗಳ 51 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆ ಸಹಜವಾಗಿ ಎಲ್ಲರ ಗಮನ ಸೆಳೆದಿದೆ. ಸದ್ಯ ಪಿಂಚಣಿ, ವಿದ್ಯಾರ್ಥಿ ವೇತನ, ಆರೋಗ್ಯ ಸೇವೆ, `ನರೇಗಾ' ಹಾಗೂ ಇನ್ನಿತರ ಯೋಜನೆಗಳ ಫಲಾನುಭವಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ. ಎಲ್ಲವೂ ಎಣಿಕೆಯಂತೆ ನಡೆದಲ್ಲಿ 2013ರ ಅಂತ್ಯದ ವೇಳೆಗೆ ಎಲ್ಲ ರಾಜ್ಯಗಳಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 

ಕೇಂದ್ರದ ಕೆಲವು ಸಚಿವರು ಈಗಾಗಲೇ ಈ ಯೋಜನೆಯನ್ನು `ಆದ್ಯ ಪ್ರವರ್ತಕ ಮತ್ತು ಕ್ರಾಂತಿಕಾರಕ ಸುಧಾರಣೆಯ ಹೆಜ್ಜೆ' ಎಂದು ಬಣ್ಣಿಸಿದ್ದಾರೆ. ಸಾರ್ವಜನಿಕ ಜೀವನ ಮತ್ತು ಆಡಳಿತದ ಹಂತದಲ್ಲಿ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿರುವ ಈ ಯೋಜನೆ ಇಡೀ ದೇಶದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೊಗಳಲು ಶುರುವಿಟ್ಟುಕೊಂಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಇದನ್ನೇ ಮುಂದಿಟ್ಟುಕೊಂಡು ಮತಗಳನ್ನು ಸೆಳೆಯಲು `ಆಪ್ ಕಾ ಪೈಸಾ, ಆಪ್ ಕೆ ಹಾತ್' (`ನಿಮ್ಮ ಹಣ ನಿಮ್ಮ ಕೈಯಲ್ಲಿ') ಎಂಬ ಆಕರ್ಷಕ ಮತ್ತು ಪ್ರಾಸಬದ್ಧವಾದ ಘೋಷಣೆಯನ್ನೂ ಯೋಜನೆಗೆ ಹೆಣೆದಿದ್ದಾರೆ. 

ಕಾಮನ್‌ವೆಲ್ತ್, 2ಜಿ ತರಂಗಾಂತರ ಹಂಚಿಕೆಯಂತಹ ಭ್ರಷ್ಟಾಚಾರ ಹಗರಣ, ಮಂದಗತಿಯ ಆರ್ಥಿಕ ಬೆಳವಣಿಗೆ, ಪಕ್ಷಾವಲಂಬಿ ರಾಜಕೀಯದಿಂದ ಕಂಗೆಟ್ಟಿರುವ ಕೇಂದ್ರ ಯುಪಿಎ ಸರ್ಕಾರಕ್ಕೆ ಈ ಹೊಸ ಯೋಜನೆ ಮುಂಬರುವ ಚುನಾವಣೆಯಲ್ಲಿ ನೆರವಾಗಬಲ್ಲದು, ತನ್ನ ರಾಜಕೀಯ ಭವಿಷ್ಯವನ್ನು ಬದಲಿಸಬಲ್ಲದು ಎಂಬ ವಿಶ್ವಾಸವಿದೆ. ವಿದೇಶಗಳಲ್ಲಿ ಇದೇ ರೀತಿಯ ಯೋಜನೆಗಳು ಮಾಡಿದ `ಮ್ಯಾಜಿಕ್' ಭಾರತದಲ್ಲೂ ನಡೆಯಬಲ್ಲದೇ ಎಂಬುದನ್ನು ನಿರ್ಧರಿಸುವವರು ಸಾಮಾನ್ಯ ಮತದಾರರು! ಅದಕ್ಕಾಗಿ ಇನ್ನೂ 18 ತಿಂಗಳು ಕಾಯಬೇಕು.

ಲ್ಯಾಟಿನ್ ಅಮೆರಿಕ, ಬ್ರೆಜಿಲ್‌ನಂತಹ ದೇಶಗಳು ಸೇರಿದಂತೆ ವಿಶ್ವದ 30 ರಾಷ್ಟ್ರಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ಭರ್ಜರಿ ಯಶಸ್ಸು ಗಳಿಸಿವೆ.

ಆರೋಗ್ಯ ಸೇವೆ, ವಿದ್ಯಾರ್ಥಿ ವೇತನಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡುತ್ತಿದ್ದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿವೆ. ಹಣ ಸೋರಿಕೆ, ಭ್ರಷ್ಟಾಚಾರ ತಡೆಗಟ್ಟಲು ಯಶಸ್ವಿಯಾಗಿವೆ. ಗುಳೆ ಬಂದ ಕಾರ್ಮಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆಯಲ್ಲದೇ ಯೋಜನೆಯ ಉಸ್ತುವಾರಿಯೂ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸರಳವಾಗಿ ನಡೆಯುತ್ತಿದೆ.

ಆದರೆ, ನಗದು ವರ್ಗಾವಣೆ, ಸಾರ್ವಜನಿಕ ಸೇವೆಗಳಿಗೆ ಎಂದೂ ಪರ್ಯಾಯವಾಗಬಾರದು.  ಲ್ಯಾಟಿನ್ ಅಮೆರಿಕ, ಬ್ರೆಜಿಲ್‌ನಂಥ ರಾಷ್ಟ್ರಗಳಲ್ಲಿ, ಅಲ್ಲಿನ ಸರ್ಕಾರಗಳೇ ಉತ್ತಮ ವೈದ್ಯಕೀಯ ಮತ್ತು ಗುಣಮಟ್ಟದ ಶೈಕ್ಷಣಿಕ ಸೇವೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ತಮ್ಮ ಖಾತೆಗೆ ಜಮಾ ಆಗುವ ಹಣವನ್ನು ಅಲ್ಲಿಯ ಬಡವರು ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಬಳಸುವುದಿಲ್ಲ ಎನ್ನುವುದು ಅರ್ಥಿಕ ತಜ್ಞ ಜೀನ್ ಡ್ರೀಜ್   ಅಭಿಪ್ರಾಯ.

ವಿಶ್ವಬ್ಯಾಂಕ್ ಕೂಡಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಯೋಜನೆ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದೆ. ಉತ್ತಮ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಶಿಕ್ಷಣ ಇದ್ದಾಗ ಮಾತ್ರ ಈ ಯೋಜನೆ ಫಲಪ್ರದವಾಗಬಹುದು ಎಂಬುದು ವಿಶ್ವಬ್ಯಾಂಕ್ ಅಭಿಪ್ರಾಯ.

ವಿಷಾದದ ಸಂಗತಿ ಎಂದರೆ, ಈ ಯಾವುದನ್ನೂ  ಭಾರತಕ್ಕೆ ಅನ್ವಯಿಸಲಾಗದು. ಭಾರತದಲ್ಲಿ ಸಾರ್ವಜನಿಕ ಸೇವೆ ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಅಗುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರ, ಹಣ ಸೋರಿಕೆಯಿಂದ ಅವು ಇನ್ನೂ ಮುಕ್ತವಾಗಿಲ್ಲ. ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸರ್ಕಾರಿ ಯೋಜನೆಗಳು ಹಸಿರು ಹುಲ್ಲುಗಾವಲಾಗಿವೆ.

ಅಕ್ರಮಗಳನ್ನು ತಡೆಯಲು ಸರ್ಕಾರ ಇಂದಿಗೂ ಯೋಜನೆ ಅನುಷ್ಠಾನದಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸುತ್ತದೆ. ಕಿಂಚಿತ್ತೂ ಅತ್ತ ಉತ್ಸಾಹ ತೋರದಿರುವುದರಿಂದಲೇ ಇಂಥ ಯೋಜನೆಗಳು ಫಲಾನುಭವಿಗಳನ್ನು ತಲುಪದೆ ವಿಫಲವಾಗುತ್ತವೆ. ಹಣ ಅನರ್ಹರ ಕೈಸೇರಿ ಪೋಲಾಗುತ್ತದೆ.

ಭಾರತದಲ್ಲಿ ಇಂದು ಮಧ್ಯಮ ವರ್ಗದ ಕುಟುಂಬಗಳು ಕೂಡ ಸರ್ಕಾರಿ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ವಿಮುಖವಾಗಿವೆ. ಸರ್ಕಾರಿ ಆಸ್ಪತ್ರೆ, ಬಸ್‌ಗಳು, ವಿದ್ಯುತ್ ಸರಬರಾಜು ಇತ್ಯಾದಿ ಕೇವಲ ಬಡವರಿಗಷ್ಟೇ ಮೀಸಲಾಗಿವೆ. ಅದು ಅವರಿಗೆ ಅನಿವಾರ್ಯವೂ ಕೂಡ. ಶ್ರೀಮಂತರು ಮತ್ತುಅ ಮಧ್ಯಮ ವರ್ಗದವರು ಖಾಸಗಿ ಶಾಲೆ, ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಅವರು ಸರ್ಕಾರಿ ಆಸ್ಪತ್ರೆ, ಶಾಲೆಗಳತ್ತ ತಲೆಹಾಕುವುದಿಲ್ಲ.

ಈ ಯೋಜನೆಗೆ ಸಂಬಂಧಿಸಿದಂತೆ ಒಂದು ಸಮಾಧಾನಕರ ಅಂಶವೆಂದರೆ ಸರ್ಕಾರ ಪಿಂಚಣಿ ಮತ್ತು ವಿದ್ಯಾರ್ಥಿ ವೇತನಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿರುವುದು. ಆಹಾರ ಮತ್ತು ರಸಗೊಬ್ಬರಗಳಿಗೆ ಹಣ ನೀಡುವಾಗ ನಿಜವಾದ ಸಮಸ್ಯೆ ಎದುರಾಗುತ್ತದೆ.

ಇದನ್ನು ಮನಗಂಡು ಸದ್ಯಕ್ಕೆ ಉದ್ದೇಶಿತ ಯೋಜನೆಯಿಂದ ಆಹಾರ ಮತ್ತು ರಸಗೊಬ್ಬರ ಸಹಾಯಧನಗಳನ್ನು ಹೊರಗಿಡಲಾಗಿದೆ. ಇದನ್ನು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಕೂಡಾ ಒಪ್ಪಿಕೊಂಡಿದ್ದಾರೆ. `ಈ ಎರಡು ಕ್ಷೇತ್ರಗಳು ಒಂದಕ್ಕಿಂತ ಒಂದು ಜಟಿಲವಾಗಿದ್ದು ನಂತರದಲ್ಲಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಯೋಜನೆಯ ವ್ಯಾಪ್ತಿಗೆ ಸೇರಿಸಲಾಗುತ್ತದೆ' ಎಂದು ಹೇಳಿದ್ದಾರೆ.  

ಈ ಯೋಜನೆ ಇನ್ನೂ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಮೊದಲನೆಯದಾಗಿ ಈ ಯೋಜನೆ `ಆಧಾರ್' ಕಾರ್ಡ್ ಆಧಾರಿತವಾಗಿದ್ದು ಇದುವರೆಗೂ ಕೇವಲ 2.10 ಕೋಟಿ ಜನರು ಮಾತ್ರ ಬಯೋಮೆಟ್ರಿಕ್ (ಬೆರಳಚ್ಚು) ಹೆಸರು ನೋಂದಾಯಿಸಿದ್ದಾರೆ. ಈ ಕಾರ್ಡ್‌ಗಳ ವಿತರಣೆ ಇನ್ನೂ ಪೂರ್ಣಗೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶ್ರಮಜೀವಿ ಕೂಲಿಕಾರ್ಮಿಕರ ಬೆರಳಚ್ಚು ಬದಲಾವಣೆಯಾಗುತ್ತವೆ ಎಂಬ ಆತಂಕವೂ ವ್ಯಕ್ತವಾಗಿದೆ. ಸರ್ಕಾರ ನೀಡುವ ಹಣ ಅನ್ಯ ಕಾರ್ಯಗಳಿಗೆ ಬಳಕೆಯಾಗುವ ಅಥವಾ ದುರುಪಯೋಗವಾಗುವ ಸಾಧ್ಯತೆ ಇರುವ ಕಾರಣ ಬಡವರು ಹಣಕ್ಕೆ ಬದಲಾಗಿ ಆಹಾರಧಾನ್ಯವನ್ನು ಬಯಸುತ್ತಾರೆ ಎನ್ನುವುದು ಇತ್ತೀಚೆಗೆ ಕೈಗೊಂಡ ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಯೋಜನೆಯೂ ಇತರ ಎಲ್ಲ ಸರ್ಕಾರಿ ಯೋಜನೆಗಳ ಸಾಲಿಗೆ `ಹತ್ತರ ಜತೆ ಮತ್ತೊಂದು' ಎನ್ನುವಂತೆ ಸೇರ್ಪಡೆಯಾಗುವುದನ್ನು ತಪ್ಪಿಸಲು ಗಮನ ಹರಿಸಬೇಕು ಎಂದು ಆರ್ಥಿಕ ವಿಶ್ಲೇಷಣಾಕಾರ ಪ್ರತಾಪ್ ಭಾನು ಮೆಹ್ತಾ ಸಲಹೆ ನೀಡಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಪಾವತಿ ಮಾಡುವ ವ್ಯವಸ್ಥೆ ಉತ್ತಮ ಆಡಳಿತಕ್ಕೆ ಯಾವತ್ತೂ ಪರ್ಯಾಯವೆನಿಸುವುದಿಲ್ಲ. ಸಮರ್ಥ ಆಡಳಿತ ಮತ್ತು ಸಮರ್ಪಕ ನಿರ್ವಹಣೆಯಿಂದ ಮಾತ್ರ ಯೋಜನೆ ಯಶಸ್ಸು ಕಾಣಲು ಸಾಧ್ಯ. ಬಹುಶಃ ಉತ್ತಮ ಆಡಳಿತ ಎನ್ನುವುದು ಭಾರತದಲ್ಲಿ ವಿರೋಧಾಭಾಸದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT