ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಅಭಿವೃದ್ಧಿಗೆ ರೂ400 ಕೋಟಿ ಅನುದಾನ

Last Updated 10 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ದಾವಣಗೆರೆ: ನಗರಪಾಲಿಕೆಗೆ ಬಿಜೆಪಿ ಆಡಳಿತದ ಅವಧಿಯಲ್ಲಿ ಈವರೆಗೆ ರೂ400 ಕೋಟಿಗೂ ಅಧಿಕ ಅನುದಾನ ದೊರೆತಿದ್ದು, ಇದರಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮೇಯರ್ ಸುಧಾ ಜಯರುದ್ರೇಶ್ ತಿಳಿಸಿದರು.

ಹಿಂದಿನ ಸರ್ಕಾರಗಳಿದ್ದಾಗ ನಗರಕ್ಕೆ ಈ ಪ್ರಮಾಣದ ಅನುದಾನ ದೊರೆತಿರಲಿಲ್ಲ. ಹಿಂದಿಗೂ ಇಂದಿಗೂ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ಗುರುತಿಸಿದೇ, ನಮ್ಮ ಆಡಳಿತದ ವಿರುದ್ಧ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,007.70 ಕಿ.ಮೀ. ರಸ್ತೆ ಇದ್ದು, ಐದು ವರ್ಷಗಳ ಅವಧಿಯಲ್ಲಿ ಒಟ್ಟು 676.78 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ, ಉಳಿದ ರಸ್ತೆ ಅಭಿವೃದ್ಧಿಗೊಳಿಸಲಾಗುವುದು.

ರೂ72 ಕೋಟಿ ವೆಚ್ಚದಲ್ಲಿ 82 ಕಿ.ಮೀ. ನೀರು ಸರಬರಾಜು ಪೈಪ್‌ಲೈನ್ ಅಳವಡಿಸಲಾಗಿದೆ. ಮೊದಲನೇ ಹಂತದಲ್ಲಿ 88 ಉದ್ಯಾನಗಳ ಅಭಿವೃದ್ಧಿಗೆ ರೂ11 ಕೋಟಿ, 2ನೇ ಹಂತದಲ್ಲಿ 27 ಉದ್ಯಾನಗಳಿಗೆ ರೂ4.25 ಕೋಟಿ ವೆಚ್ಚ ಮಾಡಲಾಗಿದೆ. ಉದ್ಯಾನಗಳಿಗೆ ತಡೆಗೋಡೆ ಹಾಗೂ ವಾಕಿಂಗ್‌ಪಾತ್ ನಿರ್ಮಿಸಲಾಗಿದೆ. ಅಕ್ರಮ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಉದ್ಯಾನಗಳಿಗೆ ತಡೆಗೋಡೆ ಕಟ್ಟಿಸಿದ್ದು, ದೊಡ್ಡ ಸಾಧನೆ ಎಂದು ಹೇಳಿದರು.

ನಗರದಲ್ಲಿ 21 ಓವರ್‌ಹೆಡ್ ಟ್ಯಾಂಕ್‌ಗಳಿದ್ದವು. ಜನಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ 12 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 3 ನಿರ್ಮಾಣದ ಹಂತದಲ್ಲಿದ್ದರೆ, ಉಳಿದವು ಪೂರ್ಣಗೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಮುಖ್ಯಮಂತ್ರಿ ವಿಶೇಷ ಅನುದಾನ ರೂ200 ಕೋಟಿ ದೊರೆತಿದೆ.

ಇದರಲ್ಲಿ ಸಂಚಾರ ನಿಯಂತ್ರಣಕ್ಕೆ ರೂ5 ಕೋಟಿ, ಲೋಕೋಪಯೋಗಿ ಇಲಾಖೆಗೆ ರೂ10 ಕೋಟಿ, ಎಕ್ಸ್‌ಪ್ರೆಸ್ ಫೀಡರ್ ಲೈನ್‌ಗಾಗಿ ರೂ12 ಕೋಟಿ, ಟಿ.ವಿ. ಸ್ಟೇಷನ್ ಕೆರೆ ಅಭಿವೃದ್ಧಿಗೆ ರೂ3.18 ಕೋಟಿ, ವಲಯ ಕಚೇರಿ ಹಾಗೂ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ರೂ3 ಕೋಟಿ ಹಾಗೂ ಖಬರಸ್ತಾನಕ್ಕಾಗಿ ರೂ1.25 ಕೋಟಿ ತೆಗೆದಿರಿಸಲಾಗಿದೆ.

ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಯೋಜನೆಯ ಅಡಿ, ನೀರು ಸರಬರಾಜು ಕಾಮಗಾರಿಗೆ ರೂ26 ಕೋಟಿ,  ಒಳಚರಂಡಿ  ಕಾಮಗಾರಿಗೆ ರೂ 38 ವೆಚ್ಚ ಮಾಡಲಾಗಿದೆ. ನೀರು  ಸರಬರಾಜಿಗೆ  ಸಂಬಂಧಿಸಿದಂತೆ,  1 ಸಾವಿರ ಎಚ್‌ಪಿ ಸಾಮರ್ಥ್ಯದ 2 ಮೋಟಾರ್‌ಗಳನ್ನು ಅಳವಡಿಸ ಲಾಗುವುದು. ರಾಜನಹಳ್ಳಿ-ಬಾತಿ ಮೂಲಕ ಕುಂದವಾಡ ಕೆರೆಗೆ ನೀರು ತುಂಬಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಣ್ಣ, ಮಧ್ಯಮ ನಗರಗಳ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಯ (ಯುಐಡಿಎಸ್‌ಎಸ್‌ಎಂಟಿ) ಅಡಿಯಲ್ಲಿ ಶಿವನಗರದಲ್ಲಿ ಕೊಳಚೆ ನೀರು ಸಂಸ್ಕರಣೆ ಘಟಕ ನಿರ್ಮಾಣ ಕಾರ್ಯವನ್ನು ರೂ9 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕಚೇರಿ ಕಟ್ಟಡಕ್ಕಾಗಿ ರೂ2 ಕೋಟಿ ಬಳಸಲಾಗಿದ್ದು, ಕಾಮಗಾರಿ ಮುಗಿದಿದೆ. ಅರಣ್ಯ ಇಲಾಖೆಗೆ ಹಸಿರೀಕರಣಕ್ಕಾಗಿ ರೂ65 ಲಕ್ಷ ಮೂರು ಹಂತಗಳಲ್ಲಿ ಕೊಡಲಾಗುವುದು. 1 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ಹೇಳಿದರು.

ಶೇ 22.75 ಅನುದಾನದಲ್ಲಿ 3,500 ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ, 1,200 ಮಂದಿಗೆ ಹೊಲಿಗೆ ಯಂತ್ರಗಳು ಹಾಗೂ 150 ಬಡವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಿಸಲಾಗಿದೆ ಎಂದು ತಿಳಿಸಿದರು.
ಯುಐಡಿಎಸ್‌ಎಸ್‌ಎಂಟಿ ಅಡಿಯಲ್ಲಿ ರೂ88 ಬಂದಿದ್ದು, ರೂ65 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. ಎಸ್‌ಎಫ್‌ಸಿ ಯೋಜನೆಯಲ್ಲಿ ರೂ60 ಕೋಟಿ, 13ನೇ ಹಣಕಾಸು ಯೋಜನೆಯಲ್ಲಿ ರೂ14 ಕೋಟಿ, ಎಡಿಬಿ ವತಿಯಿಂದ ರೂ64 ಕೋಟಿ ಅನುದಾನ ದೊರೆತಿದೆ ಎಂದು ಮಾಹಿತಿ ನೀಡಿದರು.

ಪಾಲಿಕೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಹೈಕೋರ್ಟ್‌ನಲ್ಲಿ ಶ್ರಮಿಸಿದೆವು. ಇದರಿಂದ, ಪಾಲಿಕೆಯಲ್ಲಿ ನೌಕರರ ಕೊರತೆ ನೀಗಿಸಲು ನೆರವಾಯಿತು ಎಂದು ಹೇಳಿದರು.
ಉಪ ಮೇಯರ್ ಮಹೇಶ್ ರಾಯಚೂರು, ಸದಸ್ಯರಾದ ಬಿ. ಲೋಕೇಶ್, ಎಚ್.ಎನ್. ಗುರುನಾಥ್, ಉಮಾ ಪ್ರಕಾಶ್, ಎಲ್.ಡಿ. ಗೋಣೆಪ್ಪ, ಚಂದ್ರಣ್ಣ, ಕಾಂತರಾಜ್, ಎಂ.ಎನ್. ಚಂದ್ರಶೇಖರ್, ಎಚ್.ಎಂ. ರುದ್ರಮುನಿಸ್ವಾಮಿ, ಜಿ. ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT