ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಕಸ: ರೇಖಾಚಿತ್ರ ಸ್ಪರ್ಧೆಗೂ ವಸ್ತು

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಕಸ,ಕಸ, ಕಸ... ಈಗ ಎಲ್ಲೆಲ್ಲೂ ಇದರದ್ದೇ ಚರ್ಚೆ. ನಗರದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಈ ಕಸದ ಸ್ವರೂಪವನ್ನು ರೇಖೆಗಳಲ್ಲಿ ಮೂಡಿಸಿದರೆ ಹೇಗೆ ಎಂಬ ಕಲ್ಪನೆಯೊಂದಿಗೆ ಇತ್ತೀಚೆಗಷ್ಟೆ ಕಾರ್ಟೂನ್ ಸ್ಪರ್ಧೆಯನ್ನು ನಗರದ ಕಾಲೇಜು ವಿದ್ಯಾರ್ಥಿಗಳಿಗೆಂದೇ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಯನ್ನು ಹೊರತರಲೆಂದು ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್‌ಡ್ ಸಿನಿಮಾಟಿಕ್ಸ್, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ ಜೊತೆಗೂಡಿ ಅಂತರ ಕಾಲೇಜು ಕಾರ್ಟೂನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಸುಮಾರು 84 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು ಅಂತಿಮ ಹಂತ ತಲುಪಿದ್ದರು. ಕೊನೆಯ ಹಂತವಾಗಿ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಮೊದಲು `ನೀರಿನ ಕೊರತೆ' ಎಂಬ ವಿಷಯದಲ್ಲಿ ಸ್ಪರ್ಧೆ ನಡೆದು, ನಂತರ `ನಗರದಲ್ಲಿ ಕಸದ ತೀವ್ರ ಸಮಸ್ಯೆ' ಎಂಬ ವಿಷಯದಲ್ಲಿ ರೇಖಾಚಿತ್ರ ಸ್ಪರ್ಧೆಯನ್ನು ಆಯ್ಕೆಯಾದ 30 ವಿದ್ಯಾರ್ಥಿಗಳ ಮುಂದಿಡಲಾಗಿತ್ತು. ಕೇವಲ 45 ನಿಮಿಷಗಳಲ್ಲಿ ರೇಖಾಚಿತ್ರವನ್ನು ರಚಿಸುವುದೇ ಸ್ಪರ್ಧೆಯಲ್ಲಿನ ಸವಾಲಾಗಿತ್ತು.

ನಮ್ಮ ನಗರದಲ್ಲಿನ ಮಾಲಿನ್ಯ, ಕಸ ವಿಲೇವಾರಿಯ ಬೃಹತ್ ಸಮಸ್ಯೆ, ಪ್ರಯೋಜನವಿಲ್ಲದ ಸರ್ಕಾರದ ನೀತಿ ನಿಯಮ, ಸಮಸ್ಯೆಗಳತ್ತ ಬೆನ್ನುಮಾಡಿ ನಿಂತಿರುವ ಜನರು, ಯಾವುದನ್ನೂ ಲೆಕ್ಕಿಸದೆ ತಮ್ಮಷ್ಟಕ್ಕೆ ತಾವೇ ಇರುವ ಜನಪ್ರತಿನಿಧಿಗಳು, ಇಂತಹ ನಿರ್ಲಕ್ಷ್ಯ ಧೋರಣೆಯನ್ನೇ ಅನುಸರಿಸುತ್ತಿರುವ ಶಾಲಾ ಮಕ್ಕಳು, ಭವಿಷ್ಯದಲ್ಲಿನ ನಮ್ಮ ನಗರದ ಚಿತ್ರಣ ಹೀಗೆ ಎಲ್ಲವೂ ವಿದ್ಯಾರ್ಥಿಗಳು ಪ್ರದರ್ಶನಕ್ಕಿಟ್ಟಿರುವ ರೇಖಾಚಿತ್ರಗಳಲ್ಲಿ ಬಿಂಬಿತವಾಗಿದ್ದವು.

`ನಮ್ಮ ಭೂಮಿಯನ್ನು ರಕ್ಷಿಸಿ' ಎಂಬ ಹಾಗೂ ರೇಖಾಚಿತ್ರಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಪ್ರತಿ ವಿದ್ಯಾರ್ಥಿಯೂ ತನ್ನದೇ ದೃಷ್ಟಿಕೋನದಲ್ಲಿ, ತನ್ನದೇ ಕ್ರಿಯಾಶೀಲತೆಯನ್ನು ಒರೆಗೆಹಚ್ಚಿ ಕಸದ ಹಲವು ಆಯಾಮಗಳನ್ನು ತೆರೆದಿಟ್ಟಿದ್ದರು. ಬಿಎಂಐಟಿ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಪೈ ಮೊದಲನೆ ಸ್ಥಾನ ಪಡೆದುಕೊಂಡರೆ, ಕಲಾಮಂದಿರ್ ಕಾಲೇಜಿನ ಪ್ರಜೀವ್ ಹಾಗೂ ಸಿಎಂಆರ್ ಕಾಲೇಜಿನ ನಿಧಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರು.

ವಿದ್ಯಾರ್ಥಿಗಳ ಈ ಕಾರ್ಟೂನ್ ಪ್ರದರ್ಶನ ಇಂದಿನಿಂದ ಆರಂಭಗೊಂಡಿದ್ದು, ಸಮಾರಂಭವನ್ನು ನೈಸ್ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ರವಿ ಶಂಕರ್, `ನೃತರುತ್ಯ'ದ ಉಪ ನಿರ್ದೇಶಕಿ ಮಾಧುರಿ ಉಪಾಧ್ಯ, ಮ್ಯಾಕ್‌ನ ಉಪಾಧ್ಯಕ್ಷ ಶಾಜನ್ ಸ್ಯಾಮ್ಯುಯೆಲ್ ಉದ್ಘಾಟಿಸಿದರು. “ವಿದ್ಯಾರ್ಥಿಗಳ ಈ ಶ್ರಮವನ್ನು ಮೆಚ್ಚಲೇಬೇಕು. ಇದೇ ರೀತಿ ಸ್ಪರ್ಧೆಗಳನ್ನು ಮುಂದೆಯೂ ಆಯೋಜಿಸುತ್ತಿರುತ್ತೇವೆ. ಇದು 77ನೇ ಪ್ರದರ್ಶನ.

ರೇಖಾಚಿತ್ರ ಒಂದು ರೀತಿ `ನ್ಯೂ ಏಜ್ ಮೀಡಿಯಾ'. ಆದ್ದರಿಂದ ಇಂದಿನ ಯುವಪೀಳಿಗೆ ಅದನ್ನು ಹೆಚ್ಚು ಇಷ್ಟಪಡುತ್ತಾರೆ. ಕಾರ್ಟೂನ್ ಪ್ಯಾಶನ್ ಇದ್ದಂತೆ. ಅದನ್ನು  ವೃತ್ತಿ ಅಥವಾ ಪ್ರವೃತ್ತಿಯಾಗಿಸಿಕೊಂಡರೆ ಖಂಡಿತ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಒಳ್ಳೆಯ ವೇದಿಕೆಯಾಗುತ್ತದೆ” ಎಂದು ರೇಖಾಚಿತ್ರಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು ರವಿಶಂಕರ್.

`ನೃತ್ಯದಂತೆ ಕಾರ್ಟೂನ್ ಕೂಡ ಪ್ಯಾಷನ್, ಕಲೆ. ನಾನೂ ಫೈನ್ ಆರ್ಟ್‌ನಲ್ಲಿ ಪದವಿ ಪಡೆದವಳು. ಯಾವುದೇ ಕಲೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಬೇಕಾದಲ್ಲಿ ನಮ್ಮ ಕ್ರಿಯಾಶೀಲತೆ ತುಂಬಾ ಮುಖ್ಯ. ನೃತ್ಯಕ್ಕೂ ಕಲೆಗೂ ಹಲವು ಸಾಮ್ಯತೆಯಿದೆ' ಎಂದು ರೇಖಾಚಿತ್ರ, ನೃತ್ಯ ಎರಡೂ ಕಲೆಯನ್ನು ಸಂಯೋಜಿಸಿಕೊಂಡು ಮಾತನಾಡಿದರು ಮಾಧುರಿ ಉಪಾಧ್ಯ. ಈ ಮೂವತ್ತು ವಿದ್ಯಾರ್ಥಿಗಳ ರೇಖಾಚಿತ್ರ ಪ್ರದರ್ಶನವು ಇದೇ ಡಿಸೆಂಬರ್ 20ರವರೆಗೂ ಮುಂದುವರೆಯಲಿದೆ. ಸ್ಥಳ: ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನ್ ಅಸೋಸಿಯೇಷನ್, ಮಿಡ್‌ಫೋರ್ಡ್ ಗಾರ್ಡನ್, ಎಂ. ಜಿ. ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT