ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧ ಕಡೆ ಪ್ರತಿಭಟನೆ

Last Updated 9 ಫೆಬ್ರುವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನಗರದ ವಿವಿಧ ಕಡೆಗಳಲ್ಲಿ ಗುರುವಾರ ಪ್ರತಿಭಟನೆಗಳು ನಡೆಯಿತು.

ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷವು ಮೂವರು ಮಾಜಿ ಸಚಿವರು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ಅಣಕು ಶವದ ಮೆರವಣಿಗೆ ನಡೆಸಿತು.
`ರಾಜ್ಯದ ಸದನ ಇಡೀ ದೇಶಕ್ಕೇ ಮಾದರಿಯಾಗಿದ್ದಂಥದು. ನಿಜಲಿಂಗಪ್ಪ, ಚೆನ್ನಬಸಪ್ಪ ಹಾಗೂ ಸಿದ್ಧವೀರಪ್ಪರಂತಹ ಮಹನೀಯರು ಸದನದ ಘನತೆ, ಗೌರವಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು.

ಆದರೆ ಕಳೆದ ಆರೇಳು ವರ್ಷಗಳಿಂದ ಸದನದ ಘನತೆಯನ್ನು ಹಾಳು ಮಾಡುವ ಘಟನೆಗಳು ನಡೆಯುತ್ತಾ ಬಂದಿವೆ. ಈ ಪ್ರಕರಣದ ಮೂಲಕ ರಾಜ್ಯದ ಸದನವನ್ನು ಮರಣಾವಸ್ಥೆಗೆ ತರಲಾಗಿದೆ. ಮೂವರು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು~ ಎಂದು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಇಂದಿರಾ ನಗರದ ಮೆಟ್ರೊ ನಿಲ್ದಾಣದ ಬಳಿ ಮಾಜಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮಾಜಿ ಸಚಿವರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.

`ಮಾಜಿ ಸಚಿವರು ಎಂಬ ಕಾರಣಕ್ಕೆ ಅವರಿಗೆ ಪ್ರತ್ಯೇಕ ಕಾನೂನಿಲ್ಲ. ಸದನದಲ್ಲಿ ಇಂತಹ ಹೀನ ಕಾರ್ಯ ನಡೆಸಿದ ಮಾಜಿ ಸಚಿವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಮೂವರೂ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಕೆಪಿಸಿಸಿ ಸದಸ್ಯ ಪಿ.ರಮೇಶ್ ಒತ್ತಾಯಿಸಿದರು.
ಬೆಂಗಳೂರು ಸೆಂಟ್ರಲ್ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಮಾಜಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ, ಅವರ ಭಾವಚಿತ್ರಗಳ ಬ್ಯಾನರ್‌ಗಳನ್ನು ಸುಟ್ಟರು.

`ಪ್ರಕರಣ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನವನ್ನು ಹರಾಜು ಹಾಕಿದೆ. ಇಂತಹ ಪ್ರಕರಣಗಳು ಮರುಕಳಿಸದಿರಲು ಸದನಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನೇ ನಿಷೇಧಿಸಬೇಕು. ಮೂವರು ಮಾಜಿ ಸಚಿವರ ಶಾಸಕ ಸ್ಥಾನವನ್ನು ಸ್ಪೀಕರ್ ರದ್ದುಗೊಳಿಸಬೇಕು~ ಎಂದು ಬೆಂಗಳೂರು ಸೆಂಟ್ರಲ್ ಯೂತ್ ಕಾಂಗ್ರೆಸ್‌ನ ಅಧ್ಯಕ್ಷ ಕೇಶೀ ಪ್ರಭಾಕರ ರೆಡ್ಡಿ ಒತ್ತಾಯಿಸಿದರು.

ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಾಜಿ ಸಚಿವರ ಶಾಸಕ ಸ್ಥಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮಾಜಿ ಸಚಿವರ ಪ್ರತಿಕೃತಿ ದಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT