ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಸಾಯಿಬಾಬಾ ಭಕ್ತರಲ್ಲಿ ಮಡುಗಟ್ಟಿದ ದುಃಖ

Last Updated 24 ಏಪ್ರಿಲ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಸತ್ಯ ಸಾಯಿ ಬಾಬಾ ಅವರ ನಿಧನದ ಸುದ್ದಿ ಭಾನುವಾರ ಹರಡುತ್ತಿದಂತೆ ರಾಜಧಾನಿಯಲ್ಲಿರುವ ಬಾಬಾ ಭಕ್ತರಲ್ಲಿ ದುಃಖ ಮಡುಗಟ್ಟಿತು. ಬೆಳಿಗ್ಗೆ  8 ಗಂಟೆಯ ಹೊತ್ತಿಗೆ ಬಾಬಾ ಅಸ್ತಂಗತರಾದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಬಾಬಾ ಆತ್ಮಕ್ಕೆ ಶಾಂತಿ ಕೋರಲು ಭಜನೆ ಆರಂಭಿಸಿದರು.
  ಭಕ್ತಾದಿಗಳು ಸಮೀಪದ ಸಾಯಿ ಬಾಬಾ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

 ವೈಟ್‌ಫೀಲ್ಡ್‌ನಲ್ಲಿರುವ ಬೃಂದಾವನ ಸಾಯಿ ಬಾಬಾ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಬಾ ನಿಧನಕ್ಕೆ ಕಂಬನಿ ಮಿಡಿಯಿತು. ಬೆಳಿಗ್ಗೆಯಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಭಕ್ತರು ‘ಬಾಬಾ ಮತ್ತೆ ಹುಟ್ಟಿಬರಲಿ’ ಎಂದು ಹಾರೈಸಿದರು.

ಬಾಬಾ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದ ಜರ್ಮನಿಯ ಸ್ವಾಮಿ ನಂದಾ, ‘ಬಾಬಾ ಅವರು ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಆಧ್ಯಾತ್ಮಿಕವಾಗಿ ನಮ್ಮನೆಂದೂ ಅಗಲುವುದಿಲ್ಲ. ಬಾಬಾ ತನ್ನ ಭಕ್ತರಿಗಾಗಿ ಮತ್ತೆ ಅವತರಿಸಲಿದ್ದಾರೆ’ ಎಂದು ಭಾವುಕರಾಗಿ ನುಡಿದರು.
‘ಬಾಬಾ ಬೆಂಗಳೂರಿನ ಆಶ್ರಮಕ್ಕೆ ಆಗಾಗ್ಗೆ ಬರುತ್ತಿದ್ದರು. ಬಾಬಾ ಸಾವಿನಿಂದ ಭಕ್ತ ಸಮೂಹ ಅನಾಥವಾಗಿದೆ. ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಎಲ್ಲಾ ಧರ್ಮೀಯರ  ಶ್ರೇಯೋಭಿವೃದ್ದಿಗೆ ಶ್ರಮಿಸಿದ ಬಾಬಾ ವಿಧಿವಶರಾಗಿರುವುದು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಭಕ್ತರೊಬ್ಬರು ಅಳಲು ತೋಡಿಕೊಂಡರು.

ಬಾಬಾ ಭಕ್ತರಾದ ಶ್ರೀನಿವಾಸ್, ‘ಬಾಬಾ ಇನ್ನೂ ಜೀವಂತವಗಿದ್ದಾರೆ. ಎರಡೇ ದಿನಗಳಲ್ಲಿ ಮತ್ತೆ ಹುಟ್ಟಿಬಂದು ಭಕ್ತರನ್ನು ಆಶೀರ್ವದಿಸಲಿದ್ದಾರೆ’ ಎಂದು ಹೇಳಿದರು. ಬಾಬಾ ಸಾವಿನ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವೈಟ್‌ಫೀಲ್ಡ್‌ನಲ್ಲಿರುವ ಆಶ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಭಾವಚಿತ್ರದಲ್ಲಿ ವಿಭೂತಿ!
ಬಾಬಾ ಭಕ್ತರಾದ ಚಿತ್ರ ನಿರ್ಮಾಪಕ ಸಾಯಿಪ್ರಕಾಶ್ ಮನೆಯಲ್ಲಿ ಬಾಬಾ ಅವರ ಭಾವಚಿತ್ರದಿಂದ ವಿಭೂತಿ ಉದುರುತ್ತಿತ್ತು ಎನ್ನಲಾಗಿದೆ. 

 ‘1994ರಲ್ಲಿ ನಾನು ನಿರ್ದೇಶಿಸಿ ‘ಸಾಯಿಬಾಬಾ’ ಚಿತ್ರದ ಬಿಡುಗಡೆ ವೇಳೆ ಸ್ವತಃ ಸಾಯಿಬಾಬಾ ಅವರೇ ಒಂದು  ವಿಗ್ರಹ  ನೀಡಿ ಆಶೀರ್ವದಿಸಿದ್ದರು. 15 ವರ್ಷಗಳ ಹಿಂದೆಯೇಬಾಬಾ ವಿಗ್ರಹದಿಂದ ವಿಭೂತಿ ಉದುರುತ್ತಿತ್ತುಈ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿಟ್ಟಿದೆ’ ಎಂದು ನಿರ್ದೇಶಕ ಸಾಯಿಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಬಾ ಭಾವಚಿತ್ರದಲ್ಲಿ ವರ್ಷಗಳ ಹಿಂದೆ ವಿಭೂತಿಯಿಂದ ಕೆಲ ಅಕ್ಷರಗಳು ಮೂಡಿದ್ದವು. ಆದರೆ ಆ ಅಕ್ಷರಗಳು ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ಬಾಬಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ದಿನದಿಂದ ಭಾವಚಿತ್ರದಲ್ಲಿ ವಿಭೂತಿ ಅಲ್ಪ ಪ್ರಮಾಣದಲ್ಲಿ ಉದುರುತ್ತಿತ್ತು. ಕೆಲವು ದಿನಗಳಿಂದ ಪೂರ್ಣವಾಗಿ ಭಾವಚಿತ್ರಕ್ಕೆ ವಿಭೂತಿ ಆವರಿಸಿಕೊಂಡಿತು’ ಎಂದು ತಿಳಿಸಿದರು.

ಭಾನುವಾರ ಬಾಬಾ ನಿಧನರಾಗುತ್ತಿದ್ದಂತೆಯೇ ಭಾವಚಿತ್ರದಿಂದ ವಿಭೂತಿ ಅಧಿಕ ಪ್ರಮಾಣದಲ್ಲಿ ಉದುರುತ್ತಿದ್ದು, ಇದನ್ನು ನೋಡಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT