ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಕುಡಿವ ನೀರು ದುಬಾರಿ!

Last Updated 2 ಅಕ್ಟೋಬರ್ 2011, 14:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಧ್ಯಕ್ಷರ ಹಾಗೂ ಸದಸ್ಯರ ಜಟಾಪಟಿ, ಗದ್ದಲದ ನಡುವೆ ಕುಡಿಯುವ ನೀರು ದರ ಪರಿಷ್ಕರಣೆ ಮತ್ತು `ಪೇಯ್ಡ ಪಾರ್ಕಿಂಗ್~ ವ್ಯವಸ್ಥೆ ಸೇರಿದಂತೆ ವಿವಿಧ ನಡಾವಳಿಗಳಿಗೆ ಶನಿವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಸೂಚಿಸಲಾಯಿತು.

ರಾಜ್ಯ, ನಗರ, ಪಟ್ಟಣಗಳಲ್ಲಿ ಕುಡಿವ ನೀರು ಸರಬರಾಜು ಯೋಜನೆ ಮತ್ತು ಒಳಚರಂಡಿ ಯೋಜನೆಗಳ ಆರ್ಥಿಕ ಮಾದರಿ, ದರ ಪರಿಷ್ಕರಿಸುವಂತೆ ಸರಕಾರದ ಆದೇಶದ ಹಿನ್ನಲೆಯಲ್ಲಿ ಸಭೆ ಚರ್ಚೆ ನಡೆಸಿ ಅನುಮೋದನೆ ನೀಡಿತು.

ಗೃಹ ಬಳಕೆಗೆ ಮಾಸಿಕ ರೂ. 100 ಇದ್ದ ದರ ರೂ. 120 ಗೃಹೇತರ ಬಳಕೆ 240, ವಾಣಿಜ್ಯ, ಕೈಗಾರಿಕೆಗೆ ರೂ. 480 ನಂತೆ ದರ ಪರಿಷ್ಕರಣೆಯಾಗಿದೆ. ಮೀಟರ್ ಇಲ್ಲದೆ ಇರುವುದರಿಂದ ಪ್ರತಿ ತಿಂಗಳು ಪ್ರತಿ ನಲ್ಲಿ ಸಂಪರ್ಕಕ್ಕೆ ಈ ದರ ನಿಗಪಡಿಸಲು ಸಭೆ ತೀರ್ಮಾನಿಸಿತು.

ಪೇಯ್ಡ ಪಾರ್ಕಿಂಗ್: ದ್ವಿಚಕ್ರ ವಾಹನಗಳ ಕಳವು ಪ್ರಕರಣ ಹೆಚ್ಚುತ್ತಿರುವ ಬಗ್ಗೆ ನಗರ ಠಾಣೆ ಪೊಲೀಸ್ ನಿರೀಕ್ಷಕರು ಈ ಬಗ್ಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಗರದ ಆರು ಸ್ಥಳಗಳಲ್ಲಿ ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಕೈಗೊಳ್ಳಲು ಸರ್ವ ಸದಸ್ಯರು ಒಮ್ಮತ ಸೂಚಿಸಿದರು.

ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡುವುದರಿಂದ ನಗರಸಭೆಗೂ ಆರ್ಥಿಕ ಸೌಲಭ್ಯ ದೊರೆಯಲಿದೆ. ನಗರದ ಬಿ.ಡಿ. ರಸ್ತೆಯ ಕೆನರಾ ಬ್ಯಾಂಕ್, ಎಸ್‌ಬಿಎಂ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ ಕಚೇರಿ, ನಗರಸಭೆ, ಸರ್ಕಾರಿ ಜಿಲ್ಲಾ ಆಸ್ಪತ್ರೆ ರಸ್ತೆ. ಪೈ ಮಳಿಗೆ, ವಾಸವಿ ಮಹಲ್ ರಸ್ತೆ, ಲಕ್ಷ್ಮೀಬಜಾರ್, ಅಮೋಘ ಕಾಂಪ್ಲೆಕ್ಸ್. ಸಂತೇಹೊಂಡ ರಸ್ತೆ, ಮಾರುಕಟ್ಟೆ, ಖಾಸಗಿ ಬಸ್‌ನಿಲ್ದಾಣ ರಸ್ತೆ. ಶಾಲಾ ಕಾಲೇಜುಗಳ ಸಮೀಪ ಹಾಗೂ ಆರ್‌ಟಿಓ ಕಚೇರಿ ರಸ್ತೆಯಲ್ಲಿ ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆಗೆ ಯೋಜನೆ ರೂಪಿಸಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.  

ದ್ವಿಚಕ್ರ ವಾಹನಗಳಿಗೆ ಒಂದು ಗಂಟೆಗೆ ರೂ. 2 ಹಾಗೂ ಕಾರು, ವ್ಯಾನ್ ಇತರೆ ವಾಹನಗಳಿಗೆ ರೂ.  5 ನಿಗದಿ ಮಾಡಬೇಕು ಎಂದು ಸದಸ್ಯ ಎಂ. ಮಲ್ಲಿಕಾರ್ಜುನ್ ಸಲಹೆ ನೀಡಿದರು.

ನಗರ ಸ್ವಚ್ಛತೆಗೆ ಕಾಮಗಾರಿಗೆ ಯೋಜನೆಗೆ ಸುಮಾರು ಮೂರುವರೆ ವರ್ಷ ಕಳೆದರೂ ಟೆಂಡರ್ ಕರೆಯದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗುತ್ತಿಗೆ ಪಡೆದವರು ನಗರದಲ್ಲಿ ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಸದಸ್ಯರು ದೂರವಾಣಿ ಕರೆ ಮಾಡಿದರೆ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ. ತಕ್ಷಣ ಕಸ ವಿಲೇವಾರಿಗೆ ಟೆಂಡರ್ ಕರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು.

ಹೊಳಲ್ಕೆರೆ ರಸ್ತೆ ಕನಕ ವೃತ್ತದಲ್ಲಿ ಕನಕದಾಸರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ನೆರವು ನೀಡಲು ಹಾಗೂ ಒನಕೆ ಓಬವ್ವ ಕ್ರೀಡಾಂಗಣ ಸಮೀಪದ ಅನಾಥ ಮಕ್ಕಳ ಬಾಲಮಂದಿರಕ್ಕೆ ಕುಡಿಯುವ ನೀರು ವ್ಯವಸ್ಥೆಗೆ ನಗರಸಭೆ ವತಿಯಿಂದ ಕೊಳವೆಬಾವಿ ಕೊರೆಸಲು ಮತ್ತು ಸಾರ್ವಜನಿಕ ರಸ್ತೆಗೆ 330*30 ಅಡಿ ಜಾಗ ಬಿಟ್ಟುಕೊಡುತ್ತಿರುವ ಬಾಬುಜಾನ್ ಅವರಿಗೆ ಸರ್ಕಾರ ನಿಗದಿಪಡಿಸುವ ಬೆಲೆಯಂತೆ ನಗರಸಭೆ ಹಣ ನೀಡಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.   

ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ತಾಲ್ಲೂಕಿನ ಹಿರೇಕಂದವಾಡಿ ಜಲ ಶುದ್ಧೀಕರಣ ಘಟಕಕ್ಕೆ 11ಕೆ.ವಿ. ತಡೆರಹಿತ ನಿರಂತರ ವಿದ್ಯುತ್ (ಎಕ್ಸ್‌ಪ್ರೆಸ್ ಫೀಡರ್ ಲೈನ್) ಸರಬರಾಜು ಮಾಡಲು ಬಿಆರ್‌ಜಿಎಫ್ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲು ಇ-ಟೆಂಡರ್ ಮೂಲಕ ಆಯ್ಕೆ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಎಸ್. ವಿಜಯಕುಮಾರ್ ತಿಳಿಸಿದರು.

ನಗರದಲ್ಲಿ 8 ತಿಂಗಳಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ನಗರಸಭೆ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಸದಸ್ಯ ರವಿಂಶಂಕರ್‌ಬಾಬು, ಸಭೆಯಲ್ಲಿ ನಡವಳಿಗಳ ಬಗ್ಗೆ ಚರ್ಚೆ ನಡೆದಾಗ ವಿರೋಧಿಸಿದರೂ ಸಹ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಡಾವಳಿಗಳಲ್ಲಿ ಬರೆಯಲಾಗುತ್ತಿದೆ ಎಂದು ದೂರಿದರು.

ಸಭೆ ಆರಂಭದಲ್ಲಿ ಸದಸ್ಯರಾದ ರವಿಶಂಕರ್‌ರೆಡ್ಡಿ ಹಾಗೂ ರವಿಶಂಕರ್‌ಬಾಬು ಸಭೆಯ ನಡಾವಳಿಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಆಯುಕ್ತರೊಂದಿಗೆ ವಾಗ್ವಾದಕ್ಕಿಳಿದರು.

ಸಭೆಯಲ್ಲಿ ಅನೇಕ ವಿಷಯಗಳಿಗೆ ಅಕ್ಷೇಪ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ, ಇದನ್ನು ದಾಖಲಿಸದೆ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದಾಖಲಿಸುತ್ತಾರೆ ಎಂದು ವಾದಕ್ಕೆ ಇಳಿದರು. ಈ ಬಗ್ಗೆ ಸದಸ್ಯರ ಕೂಗಾಟ, ಚೀರಾಟ ನಡೆದು ಯಾರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯಲಿಲ್ಲ. ಕೊನೆಗೆ ಆಯುಕ್ತರು, ನಡಾವಳಿ ತಿದ್ದಿಲ್ಲ, ಬದಲಾಗಿ ತಪ್ಪಾಗಿ ದಾಖಸಿಲಾಗಿದ್ದು ಸರಿಪಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.

ಸಭೆಯ ಆರಂಭದಿಂದ ಮೌನವಹಿಸಿದ್ದ ಮಹಿಳಾ ಸದಸ್ಯರು ಕೊನೆಯಲ್ಲಿ ದೂರುಗಳ ಸುರಿಮಳೆ ಹರಿಸಿದರಾದರೂ, ಯಾವುದೇ ಸಕಾರತ್ಮಕ ಪ್ರತಿಕ್ರಿಯೆ ವ್ಯಕ್ತವಾಗದೇ ಸಭೆ ಮುಕ್ತಾಯಗೊಂಡಿತು.
ನಗರಸಭೆ ಉಪಾಧ್ಯಕ್ಷ ಅಲ್ಲಭಕ್ಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT