ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನೈರ್ಮಲ್ಯ ಸಮಸ್ಯೆ; ಡೆಂಗೆ ಭೀತಿ

Last Updated 6 ಆಗಸ್ಟ್ 2012, 9:15 IST
ಅಕ್ಷರ ಗಾತ್ರ

ಕಾರವಾರ:  ನಗರಕ್ಕೆ ಡೆಂಗೆ ಜ್ವರ ಕಾಲಿಟ್ಟಿದೆ. ಜ್ವರ ಬಂದು ಸರ್ಕಾರಿ ಆಸ್ಪತ್ರೆಗೆ ದಾಖಲಾದವರ ಪೈಕಿ ಇಬ್ಬರ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು ಡೆಂಗೆ ಇರುವುದು ಖಚಿತವಾಗಿದ್ದು ನಗರವಾಸಿಗಳು ಆತಂಕಗೊಂಡಿದ್ದಾರೆ.

ನಗರದ ನೈರ್ಮಲ್ಯದ ವಿಷಯದಲ್ಲಿ ನಗರಸಭೆ ವಹಿಸಿರುವ ನಿರ್ಲಕ್ಷ್ಯದಿಂದಾಗಿ ಮಳೆ ನೀರು ಅಲ್ಲಿಲ್ಲಿ ಸಂಗ್ರಹವಾಗಿ ಅದರಲ್ಲಿ ಲಾರ್ವಾಗಳು ಉತ್ಪತ್ತಿಯಾಗಿ ಡೆಂಗೆಯಂತಹ ಮಾಹಾಮಾರಿ ರೋಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರದಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಗಟಾರು ನಿರ್ಮಾಣಮಾಡಿರುವುದರಿಂದ ಮಳೆ ನೀರು ಹರಿದು ಹೋಗದೆ. ಒಂದೇ ಕಡೆ ಸಂಗ್ರಹವಾಗಿರುತ್ತದೆ. ಆಶ್ಚರ್ಯವೆಂದರೆ ನಗರ ಅಭಿವೃದ್ಧಿ ಹೊಂದುತ್ತಿದ್ದರೂ ಕೆಲವು ಕಡೆ ಗಟಾರು ಇಲ್ಲ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲಿ ಸಂಗ್ರವಾಗಿ ಬಿಸಿಲು ಬಿದ್ದಾಗ ಅಲ್ಲೇ ಒಣಗುತ್ತದೆ.

ನಗರದ ಬೈತಖೋಲ, ಸುಂಕೇರಿ, ನಂದನಗದ್ದಾ, ಕೊಡಿಬಾಗ ಸೇರಿದಂತೆ ಇನ್ನಿತರ ಜನವಸತಿ ಪ್ರದೇಶದಲ್ಲಿ ಮಳೆ ನೀರಿನೊಂದಿಗೆ ಹೊಲಸು ನೀರು ಸೇರಿ ಒಂದೇ ಜಾಗದಲ್ಲಿ ಸಂಗ್ರಹವಾಗಿ ಕೊಳಚೆ ನಿರ್ಮಾಣವಾಗಿ ಹುಳು-ಹುಪ್ಪಡಿಗಳ ಉತ್ಪತ್ತಿಯ ತಾಣವಾಗಿವೆ. ಈ ನೀರು ಹರಿದು ಗಟಾರು ಸೇರಲು ದಾರಿ ಇಲ್ಲದಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಾಗಿದೆ.

ಎಡಿಬಿ ಯೋಜನೆಯಡಿ ಕುಡ್ಸೆಂಪ್ ನಗರದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಗಳು ಕಳಪೆ ಆಗಿದ್ದು ಮ್ಯಾನ್‌ಹೊಲ್‌ಗಳಿಂದ ಹೊಲಸು ನೀರು ನಿರಂತರವಾಗಿ ಸೋರಿಕೆಯಾಗುತ್ತಿರುತ್ತದೆ. ನಗರದ ಪೊಲೀಸ್ ಅತಿಥಿಗೃಹ, ಜಿಲ್ಲಾ ಪಂಚಾಯಿತಿ ಕಟ್ಟಡದ ಎದುರಿರುವ ಗಟಾರಿನಲ್ಲಿ ಸೋರಿಕೆ ಆಗಿರುವ ಒಳಚರಂಡಿ ನೀರು ಹರಿಯುತ್ತಿದ್ದು ಇಡೀ ಪ್ರದೇಶವೆಲ್ಲ ದುರ್ನಾತವೆದ್ದಿದೆ.

ಈ ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳ ಕಾಟ ವಿಪರೀತವಾಗಿದ್ದು ಸುಖ ನಿದ್ದೆಗೂ ಭಂಗ ತರುತ್ತಿವೆ. ಹೀಗೆ ನಗರದಾದ್ಯಂತ ಮಳೆ ಹರಿದು ಹೋಗಲು ದಾರಿ ಇಲ್ಲದೆ ಕೊಳೆಚೆಗಳು ನಿರ್ಮಾಣವಾಗಿ ರೋಗರುಜೀನುಗಳು ಹರಡಲು ಕಾರಣವಾಗಿದೆ.

`ಮುಖ್ಯ ರಸ್ತೆಗೆ ಹೊಂದಿಕೊಂಡು ಗಟಾರುಗಳಿವೆ ಆದರೆ ಅಲ್ಲಿ ನೀರು ಬಂದು ಸೇರಲು ದಾರಿ ಇಲ್ಲದೇ ಇರುವುದರಿಂದ ನೀರು ಅಲ್ಲೇ ನಿಂತು ಕೊಳಚೆ ನಿರ್ಮಾಣವಾಗುತ್ತಿದೆ. ಡೆಂಗೆ ಬಂದಿರುವ ಸುದ್ದಿ ಹರಡಿದ ನಂತರ ನಗರಸಭೆಯವರು ಬಂದ ಪಾಗಿಂಗ್ ಮಾಡಿ ಹೋಗಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಶಾಶ್ವತವಾದ ಪರಿಹಾರ ಕೈಗೊಳ್ಳಬೇಕು~ಎನ್ನುತ್ತಾರೆ ಬೈತಖೋಲ ನಿವಾಸಿ ವಿನಾಯಕ ಹರಿಕಂತ್ರ.

`ಮಳೆ ನೀರಿನೊಂದಿಗೆ ಕೊಳಚೆ ನೀರು ಸಂಗ್ರಹ ವಾಗುವುದರಿಂದ ಸೊಳ್ಳೆಗಳು ಸೃಷ್ಟಿಯಾಗುತ್ತದೆ. ಇವು ಮನುಷ್ಯ ಮೇಲೆ ದಾಳಿ ಮಾಡುವುದರಿಂದ ಮೊದಲು ಜ್ವರ, ಅಲರ್ಜಿಯಂತಹ ಸಮಸ್ಯೆ ಕಾಣಿಸಿ ಕೊಳ್ಳಬಹುದು. ಹೀಗಾದಾಗ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದು ಕೊಳ್ಳಬೇಕು. ಇಲ್ಲದಿದ್ದರೆ ಮಲೇರಿಯಾ, ಡೆಂಗೆ ಯಂತಹ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ~ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಕದಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT