ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ಬಜೆಟ್ ಮಂಡನೆ ಗದ್ದಲ

Last Updated 14 ಜೂನ್ 2011, 6:25 IST
ಅಕ್ಷರ ಗಾತ್ರ

ಗದಗ: ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ, ನಗರಸಭೆಯ 2011-12ನೇ ಸಾಲಿನ ಆಯವ್ಯಯ ಪತ್ರ ಸೋಮವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಮಂಡನೆಯಾಯಿತು. ಅಧ್ಯಕ್ಷರು ಬಜೆಟ್ ಪಾಸ್  ಮಾಡಿದರು. ವಿರೋಧ ಪಕ್ಷದ ಸದಸ್ಯರು ಒಪ್ಪಿಗೆ ಸೂಚಿಸಲು ನಿರಾಕರಿಸಿದರು.

ಈ ಸಾಲಿನ ಬಜೆಟ್‌ಗೆ ಅನುಮೋದನೆ ನೀಡುವಂತೆ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಅವರು ಸಭೆಯ ಸದಸ್ಯರನ್ನು ಕೋರಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಪ್ರಸ್ತಾವಿತ ಬಜೆಟ್‌ನಲ್ಲಿನ ಕೆಲವು ಅಂಕಿ-ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದನ್ನು ಸರಿಪಡಿಸಿ ಹೊಸ ಬಜೆಟ್ ಮಂಡಿಸಬೇಕು. ಹೀಗಾಗಿ ಈ ಬಾರಿ ಲೇಖಾನುದಾನಕ್ಕೆ ಮಾತ್ರ ಸಮ್ಮತಿಸುತ್ತೇವೆ~ ಎಂದರು.

ಇದಕ್ಕೆ ಒಪ್ಪದ ಅಧ್ಯಕ್ಷರು, ಈಗಾಗಲೇ ಒಂದು ಬಾರಿ ಲೇಖಾನುದಾನ ನೀಡಿದ್ದೀರಿ. ಮತ್ತೊಂದು ಬಾರಿ ಅದಕ್ಕೆ ಅವಕಾಶವಿಲ್ಲ. ಇದರಿಂದ ನಗರದ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತದೆ. ಹೀಗಾಗಿ ತಮ್ಮ ಸಲಹೆ-ಸೂಚನೆಗಳನ್ನೂ ಒಳಗೊಂಡು ಈ ಬಜೆಟ್‌ಗೆ ಅನುಮೋದನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಆಡಳಿತ ಪಕ್ಷದವರು ಏನಂತಾರೆ?

ನಗರಸಭೆ ಆಡಳಿತ ಪಕ್ಷದ ಪ್ರಕಾರ ಈ ಬಜೆಟ್‌ಗೆ ಅನುಮೋದನೆ ಸಿಕ್ಕಿದೆ. ಎಲ್ಲ ಸದಸ್ಯರ ಸಲಹೆ-ಸೂಚನೆಗಳನ್ನೂ ಒಳಗೊಂಡು ಬಜೆಟ್ ಮಂಡಿಸಲಾಗಿದೆ. ಅದನ್ನು ಅನುಮೋದಿಸುವುದು ಎಲ್ಲರ ಕರ್ತವ್ಯ. ಕಳೆದ ಮಾರ್ಚ್ 31ರಂದು ಬಜೆಟ್‌ಗೆ ಅನುಮತಿ ನೀಡದೇ ಕೇವಲ ಲೇಖಾನುದಾನ ನೀಡಿದ್ದರು.

ಈಗ ಮತ್ತೆ ಲೇಖಾನುದಾನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಬಜೆಟ್ ಮಂಡನೆ ಅನಿವಾರ್ಯವಾಯಿತು ಎಂದು ಆಡಳಿತ ಪಕ್ಷದ ಸದಸ್ಯರಾದ ಎಲ್.ಡಿ. ಚಂದಾವರಿ ಹಾಗೂ ಇತರರು ತಿಳಿಸಿದರು.

ವಿರೋಧಪಕ್ಷದ ವಿರೋಧ
ವಿರೋಧ ಪಕ್ಷದ ಸದಸ್ಯರ ಪ್ರಕಾರ ಬಹುಮತ ಪಡೆಯದೇ ಅನುಮೋದಿಸಲಾದ ಈ ಬಜೆಟ್ ಕಾನೂನುಬಾಹಿರ. ಕೆಲವು ವಿಚಾರಕ್ಕೆ ಸಂಬಂಧಿಸಿ ಬಜೆಟ್ ಅಸ್ಪಷ್ಟವಾಗಿದೆ. 6 ತಿಂಗಳ ಹಿಂದಿನ ಅಂಕಿ-ಅಂಶ ಇಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ. ಆದಾಗ್ಯೂ ಬಜೆಟ್ ಅನುಮೋದನೆಯಾಗಿದೆ ಎಂದಿದ್ದಾರೆ. ಈ ಕುರಿತು ಸದ್ಯದಲ್ಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಎಂ,ಎಂ. ಹಿರೇಮಠ, ಸದಾನಂದ ಪಿಳ್ಳಿ ಹಾಗೂ ಇತರ ಸದಸ್ಯರು ಹೇಳಿದರು.

ಬಜೆಟ್ ಅನುಮೋದನೆ ಗದ್ದಲಕ್ಕೆ ಮುನ್ನ ಸಭೆಯಲ್ಲಿ ಒಂದಿಷ್ಟು ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ಬಜೆಟ್‌ನಲ್ಲಿ ಶುದ್ಧನೀರು ಘಟಕ ಸ್ಥಾಪನೆಗೆ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದರೆ ಅದಕ್ಕೂ ಮೊದಲು ಹೊಳೆಯ ನೀರನ್ನು ಜನರಿಗೆ ಸಮರ್ಪಕವಾಗಿ ವಿತರಿಸಿ. 4 ದಿನಗಳಿಗೊಮ್ಮೆ ನೀರು ನೀಡಿ ಎಂದು ವಿರೋಧ ಪಕ್ಷದ ಸದಸ್ಯರಾದ ನಾಗರಾಜ ಗಣಾಚಾರಿ, ಪರಶುರಾಮ ಹೆಬಸೂರ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಳಗುಂದ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು. ನೀರಿನ ಸಮಸ್ಯೆ ಕುರಿತು ವಂದನಾ ವರ್ಣೇಕರ ಹಾಗೂ ಮಳೆಕೊಯ್ಲು ಕುರಿತು ಬಿ.ಬಿ. ಅಸೂಟಿ ಹಾಗೂ ನಗರಸಭೆ ಪ್ರೌಢಶಾಲೆ ಸಮಸ್ಯೆ ಕುರಿತು ಲಕ್ಷ್ಮಿದೇವಿ ಕಟ್ಟಿಮನಿ ಸಭೆಯ ಗಮನ ಸೆಳೆದರು.
 
ನಗರದ ವಿವಿಧ ರಸ್ತೆಗಳ ಕಳಪೆ ಕಾಮಗಾರಿ ಸಂಬಂಧ ಇಬ್ಬರು ಜಿಇಇ ಗಳನ್ನು ಅಮಾನತುಗೊಳಿಸುವಂತೆ ಚಂದಾವರಿ ಪ್ರಸ್ತಾಪಿಸಿದರು. ಒಳಚರಂಡಿ, ರಸ್ತೆ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಿತು.

ಅಧಿಕಾರಿಗಳ ವಿರುದ್ಧ ಕಿಡಿ
`ನಗರಸಭೆಯ ಬಹುತೇಕ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಸದಸ್ಯರ ಮಾತಿಗೆ ಕಿಮ್ಮತ್ತಿನ ಬೆಲೆ ಇಲ್ಲ. ಕಚೇರಿಗೆ ಹೋದರೆ ಸಿಪಾಯಿಗಳಿಂದ ಹಾರಿಕೆಯ ಉತ್ತರವಷ್ಟೇ ಸಿಗುತ್ತಿದೆ~ ಎಂದು ವಿಜಯಲಕ್ಷ್ಮಿ ವೇದಿಕೆಯತ್ತ ಧಾವಿಸಿ ಆರೋಪಿಸಿದರು. ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಪಕ್ಷಬೇಧ ಮರೆತು ಧ್ವನಿಗೂಡಿಸಿದರು. 

ಸಭೆಯಲ್ಲಿ ಉಪಾಧ್ಯಕ್ಷೆ ಖಮರಸುಲ್ತಾನ ನಮಾಜಿ. ಪೌ ರಾಯುಕ್ತ ಎಸ್. ಶೇಖರಪ್ಪ ಹಾಗೂ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT